ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಿಯುಗ ವಚನಗಳು

By Staff
|
Google Oneindia Kannada News
ಕಳಬೇಕು, ಕೊಲಬೇಕು, ಹುಸಿಯ ನುಡಿಯಲುಬೇಕು
ಅನ್ಯರಿಗೆ ಅಸಹ್ಯಪಟ್ಟರೂ ರೌಡಿಯಂತಿರಬೇಕು.
ತನ್ನ ಬಣ್ಣಿಸಬೇಕು, ಪರರ ನಿಂದಿಸಬೇಕು
ಇದೇ ಆತ್ಮತೃಪ್ತಿ, ಇದೇ ಪ್ರಜಾಹಿತ,
ಇದೇ ಕಲಿಯುಗ ಜೀವನದ ಒಳಗುಟ್ಟು
ಎಂದ ನಮ್ಮ ಕಲಿಮಹರಾಯ!(1)

ಠಾಕು-ಠೀಕು ಧಿರಿಸು, ಮೇಕಪ್ಪುಗಳಿಲ್ಲದ ಮುಖಹೊಲ್ಲ ನೋಡಲಾಗದು,
ಬೈಕು, ಕಾರುಗಳಿಲ್ಲದ ಪ್ರಯಾಣ ಬಲುಬೇಜಾರು, ಹೋಗಲಾಗದು,
ಠಣ ಠಣಾಂತ ರಿಂಗುಣಿಸುವ ಮೊಬೈಲುಗಳಿಲ್ಲದ ಕೈಯ
ನೋಡಲಾಗದು ಬಲು ಬೇಜಾರು.
ಟಿ.ವಿ., ಫ್ರಿಡ್ಜು, ವಾಷಿಂಗ್‌ಮೆಷೀನು, ಕಂಪೂಟರುಗಳಿಲ್ಲದ
ಮನೆ ಹಾಳು- ಇರಲಾರದು.
ಎಲ್ಲಾ ಸವಲತ್ತುಗಳಿದ್ದೂ ಏನೂ ಹೊಂದಿರದವ
ಈ ಕಲಿಯುಗದ ಮಹಾಪಾಪಿ ಎಂದನಾ ಕಲಿಮಹರಾಯ!(2)

ಋಣ ಸಂಬಂಧ, ಶುಭಲಗ್ನ, ರಾಶಿಕೂಟ,
ಚಂದ್ರಬಲ, ತಾರಾಬಲವೆಲ್ಲವನೂ ಬದಿಗೊತ್ತಿ
ಪ್ರೀತಿಸಿ ಮದುವೆಯಾದರೆ, ಭಿಮ್ಮನೆ ಒಪ್ಪಿಕೊಳ್ಳಿರಯ್ಯಾ.
ನಾಳಿನದಿನಕ್ಕಿಂದಿನ ದಿನ ಲೇಸೆಂದು
ಹನಿಮೂನಿಗೆ ಕಳುಹಿಸಿಕೊಡಿರಯ್ಯಾ.
ನವಮಾಸಕೆ ಮೊದಲೇ ಕಂದಮ್ಮ ಬಂದರೂ ತಟ್ಟನೆ ಅಪ್ಪಿಕೊಳ್ಳಿರಯ್ಯಾ.
ಅಡ್ಡವಿಚಾರಕಾವುದಕೂ ತಲೆಗೊಡದೆ ನಿಮ್ಮವರ ಭವಿಷ್ಯವ ರೂಪಿಸಿರಯ್ಯಾ.
ಇದೇ ಈ ಕಲಿಯುಗದ ಮಹಾತ್ಮೆ-
ಕಲಿಮಹರಾಯನ ಪೂಜಿಸುವ ಪರಿ!(3)

ಎಣ್ಣೆ ಹೊಡೆದವರ ನುಡಿಸಬಹುದು,
ಅಫೀಮು-ಗಾಂಜಾ ತಿಂದವರ ನುಡಿಸಬಹುದು
ರಾಜಕೀಯ ಖುರ್ಚಿಯ ಮೇಲೆ ಕುಳಿತವರ
ನುಡಿಸಲುಬಾರದು ನೋಡಯ್ಯಾ.
ಖುರ್ಚಿಯ ಅವಧಿ ಮುಗಿದು ಚುನಾವಣೆ ಬಂತೆಂದರೆ
ಒಡನೆ ನುಡಿವರು ’’ಪ್ರಜಾದೇವೋಭವ!’’
ಕಲಿಮಹರಾಯ.(4)

ವಿದೇಶಿ ಮದ್ಯ ಬಾಟಲುಗಳ ನಡುವೆನ್ನ
ಪಾನಮತ್ತನಾಗಿ ಮಾಡಿ ಸಲಹುತ್ತ,
ಲಲನೆಯರ ನೃತ್ಯವ ಸವಿಯುವಂತೆ ಮಾಡಯ್ಯಾ.
ಬಾರು-ಕ್ಲಬ್ಬೆಂಬ ಸ್ವರ್ಗದೊಳೆನ್ನಿಕ್ಕಿ ಸಲಹು ಕಲಿಮಹರಾಯ!(5)

ಚಾಕೂ, ಚೂರಿ, ಮಚ್ಚು, ದೊಣ್ಣೆಗಳನ್ನು ಹಿಂದಿಕ್ಕಿಕ್ಕೊಂಡು
ಒಣ ಮಾತು ಅವಾಜನ್ನು ಮುಂದಿಟ್ಟುಕೊಂಡು
ಒಣ ಸತ್ಯ-ಅಹಿಂಸೆಯೆಂದು ಮಾತು ಶುರುಮಾಡಿದರೆ
ನಮ್ಮ ಬುರುಡೆಯ ಒಡೆಯುವರಲ್ಲದೆ
ನಮ್ಮ ಬಾಳಲು ಬಿಡುವರೇ ಈ ಕಾಲದಲಿ?
ಇದಕಾಗಿ; ಮಾತೆತ್ತಿದರೆ ಮಚ್ಚು, ದೊಣ್ಣೆಗಳಿಗೆ
ಬಿಸಿರಕ್ತವ ಕುಡಿಸು ಎಂದ ನಮ್ಮ ಕಲಿಮಹರಾಯ!(6)

ನಾನು ಆರಂಭವ ಮಾಡಿದೆನಯ್ಯಾ ಹೊಟ್ಟೆಪಾಡಿಗೆಂದು,
ನಾನು ವ್ಯವಹಾರವ ಮಾಡಿದೆನಯ್ಯಾ ಅಲ್ಪ ಹಣ ಉಳಿಸಲೆಂದು,
ನಾನು ಜನಸೇವೆಯ ಮಾಡಿದೆನಯ್ಯಾ ಹೆಚ್ಚು ಹಣ ಸಂಪಾದಿಸಲೆಂದು
ಇಷ್ಟೆಲ್ಲಾ ತೆರದಿ ನಾನು ಕೈಹಾಕಿದರೂ ನಾ ಹಣದಿಂದ ವಂಚಿತನಾದೆ.
ಕಲಿಮಹರಾಯ, ನಿಮ್ಮ ಆಜ್ಞೆಯಂತೆ
ಅಡ್ಡದಾರಿಯ ಹಿಡಿದೆ ನೋಡಾ, ಹಣವೆಂಬುದು
ತುಂಬಿತುಳುಕಾಡುತಿದೆ. ಅದು ಕಪ್ಪು ಹಣವಾದರೂ
ಹಣ ಹಣವಲ್ಲವೇ? ಅದು ನಿನ್ನ ಪ್ರಸಾದವಲ್ಲವೇ? ಕಲಿಮಹರಾಯ.(7)


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X