ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲನ ಕಾಲ್ದೆಸೆಯಲ್ಲಿ ಹೀಗೆ...

By Staff
|
Google Oneindia Kannada News
ಈಗೀಗ
ಕನ್ನಡಿಯಲ್ಲಿ ನೋಡಿಕೊಳ್ಳುವದೇ ಇಲ್ಲ!
ಭಯವಾಗುತ್ತದೆ...
ನಾನು ನಾನಿಲ್ಲವಾಗುತ್ತಿದ್ದೇನೆ ದಿನೇ ದಿನೇ!
ನನ್ನದೇ ಮುಖ!
ಇದು ನಾನನಲ್ಲವೆಂದಿತು ಮನಸ್ಸು,
ಮುಷ್ಕರ ಹೂಡಿತು ಯುೌವನ.
ನಾನೇನಾ ??
ಇದು ನಾನೇ.........ಹೌದೇ ??.
ಮನ ಅಳುತ್ತದೇ ನಾನೇಕೆ ಹೀಗಾದೆ ?
ಹೇಗಿದ್ದವಳು ಹೇಗಾಗಿ ಹೋದೆ?
ಆ ಎರಡು ಜಡೆಯ ಹುಡುಗಿ ಎಲ್ಲಿ ಹೋದಳು?
ಮೊನ್ನೆ ಮೊನ್ನೆಯಷ್ಟೇ ಹಾಲುಗಲ್ಲದ ಮಗುವಿಗೆ
ತಾಯಿ ಕಾಡಿಗೆ ಹಚ್ಚಿ, ದೄಷ್ಟಿ ಬೊಟ್ಟೂ ಇಟ್ಟಿದ್ದಳಂತೆ,
ಲಂಗ ತೊಟ್ಟು ಹಾರಾಡುವ ಚಿಟ್ಟೆಗೊಂದು,
ಪೆಟ್ಟು ಹಾಕಿ ಗದರಿದ್ದಳಲ್ಲವೇ?
ಮನೆತುಂಬ ನದಿಯಂತೆ ಕಲಕಲ, ಗಿಲ ಗಿಲ!
ರೇಡಿಯೋ ಹಾಡುತ್ತಿದೆ :
ಹುಡುಗಿ ಬಲು ಜಾಣೆ !! ಒಳ್ಳೆ ಗಂಡ ಬರುತಾನೆ !

ಆಗಾಗ...
ಸಿಟ್ಟು ಬರುತ್ತದೆ ವಿನಾಕಾರಣ...
ಒಡೆದು ಹಾಕಬೇಕೆನಿಸುತ್ತದೆ ಕನ್ನಡಿಯನ್ನು.
ಒಡಹುಟ್ಟಿದವರು ಯಾಕೆ ಬದಲಾದರು ?
ಅಳಿದವರು ಆಳಿಯೇ ಹೋದರು
ಉಳಿದವರು ಮತ್ತೆ ನೆನೆಯಲಿಲ್ಲ ಕೂಡ,
ಉಂಡು ಉಗಿದವರು, ತೇಗಿ ತೂಕಡಿಸಿದವರು,
ಭಲೆ ಭಲೇ ಎಂದವರು ಎಲ್ಲಾ -
ತೋರುತ್ತಾರೆ ಭಾಗಾದಿಗಳಾಗಿ,
ನವಿಲುತೀರ್ಥದಲ್ಲಿನ ಘಟಪ್ರಭೆಯನ್ನು -
ಕಣ್ತುಂಬ ನೋಡಲೂ ಇಲ್ಲ...
ಬೊಗಸೆಯಲ್ಲಿ ತುಂಬಿಕೊಳ್ಳಲೂ ಇಲ್ಲ...
ಒಮ್ಮೆಯೂ...!

ಗತಿಸಿಯೇ ಹೋಯಿತು ಎಲ್ಲ ಸದ್ದಿಲ್ಲದೇ
ಒಡೆದ ಗಾಜಿನ ಚೂರುಗಳೆಲ್ಲ ನಗುತ್ತವೆ.
ಸುಕ್ಕಿನ ಗೆರೆಗಳು ದಟ್ಟವಾದುವೇ?
ಕಣ್ಣಿನ ಸುತ್ತ ಕಪ್ಪು - ಇದ್ದೀತು!
ಬದುಕಿನ ದಣಿವು ಮೈಚಾಚುತ್ತದೆ,
ಅಗೋ...ಅಲ್ಲಿ...
ಬೆಳ್ಳಿಕೂದಲು...ನಗಬೇಡ ಗೆಳತಿ ಈಗ
ಚರ್ಮವೆಲ್ಲ ಬಾವಲಿಯಾಗಿ ನೇತು ಬೀಳುವ ಭೀತಿ.
ಒಂದು ದಿನವೂ ನೆಕ್‌ಲೇಸ ಹಾಕಬೇಕೆನಿಸಲಿಲ್ಲ ಈ ಕೊರಳಿಗೆ.
ಹೀಗೇ ಪಿರಮಿಡ್ಡುಗಳ ಮಮ್ಮಿಗಳಾದ ರೀತಿ,

ಆಗುವದೆಲ್ಲ ಆಗಲಿ ಧೃತಿಗೆಡಬೇಡ,
ಜೀವನ ಕ್ರಮವೇ ಹೀಗೆ ನಿಷ್ಠುರ...
ಋತುಗಳ ಕ್ರಮವೇ ಸುಂದರ,
ಮಾಗಿಗೆ ಎಲೆಗಳೆಲ್ಲ ಉದುರಿ ಬೆತ್ತಲಾದ ಮರಗಳೆಲ್ಲ
ಚೈತ್ರಕ್ಕೆಷ್ಟು ಹಸಿರು ತೊಟ್ಟು ನಲಿಯುತ್ತವೆ.
ಎಸೊಂದು ಬಣ್ಣಗಳು ಅಬ್ಬಾ...
ಬದುಕಿನದೂ ಒಂದು ಬಣ್ಣ, ಮುಕ್ಕಣ್ಣ ಬಯಸಿದ್ದೇ!
ಎಲ್ಲಕ್ಕೂ ಬಿಡಲಾಗದ ನೀತಿ ನಿಯಮಗಳು,
ಕಾಲನ ಕಾಲ್ದೆಸೆಯಲ್ಲಿ ನಾವು-ನೀವು
ಬನ್ನಿ ಇಲ್ಲಿ...
ಹೀಗೊಂದಿಷ್ಟು ಕುಳಿತು ಮಾತಾಡೋಣಾ...
ನಾಳೆಯದು ನಾಳೆಗೆ ಇರಲಿ ಬಿಡಿ,
ಇಂದಾದರೂ ಇಂದೇ...ಇನ್ನೆಂದೂ ಇಲ್ಲದಂತೆ ಬದುಕೋಣ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X