ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಲವಲವಿಕೆ ಪದ್ಯಗಳು

By Staff
|
Google Oneindia Kannada News
  • ಬೇಳೂರು ಸುದರ್ಶನ
ಪದ್ಯ-1

ದಿನಚರಿ

ಸೂಳೆಗೊಂದು ಚಪ್ಪಲಿ
ಅವಳ ಕಾಟ ತಪ್ಪಲಿ

ಮಗನಿಗೊಂದು ಮಾರುತಿ
ಮಾರಲಿ ಅವ ಕೀರುತಿ

ಮಗಳು ಡಾಕ್ಟರಾದಳು
ನನ್ನ ಹೊಟ್ಟೆ ಕೊಯ್ದಳು

ಹೆಂಡತಿಗೋ ಬರೆದಿದೇನೆ
ತೋಟ-ಗದ್ದೆ-ಮನೆಗಳು

ತಮ್ಮ ದಂಧೆ ಮಾಡಿದ
ಹಿಸೆಯ ಕೊಡಲು ಕೇಳಿದ

ಅತ್ತೆಗೊಂದು ರವಿಕೆ ಹೊಲಿಸಿ
ಪುಟಪರ್ತಿಗೆ ಕಳಿಸಿದೆ

ಮೊಮ್ಮಗನಿಗೆ ಮುತ್ತುಕೊಟ್ಟು
ಚೆಕ್ಕೂ ಕೊಟ್ಟು ಹರಸಿದೆ

ಗೆಳೆಯರೆಲ್ಲ ಕೂಡಿ ಬಂದು
ಕುಡಿದು-ಕೊಂಡು ಹೋದರು

ಗೆಳತಿಯರೋ ಪತ್ರದಲ್ಲೆ
ಬಿಚ್ಚಿ ಬೆಚ್ಚಗಾದರು

ವ್ಯವಹಾರದ ಪಾಲುದಾರ
ಸಾಲಮಾಡಿ ಓಡಿಹೋದ

...........................
...........................

ಎಷ್ಟು ಹೀಗೆ ಹೇಳಲಿ ?
ಯಾವ ರೀತಿ ಬದುಕಲಿ ?

...........................
ಮತ್ತೆ ಸೂರ್ಯ ಹುಟ್ಟಿದ
ಹಲ್ಲುಜ್ಜಲು ಹೇಳಿದ
*

ಪದ್ಯ-2

ವೀ WITHERAWAY

ಚಾ ಪ್ರಿಯಾ
ಅಶಾಂತ ಹೃದಯಾ
ಬಾಳಿಗೊದಗಿದೆಯಾ?
ಬಾ ಮನಸಿಗೆ
ಎದೆಯ ಕನಸಿಗೆ
ಮಮತೆ ತೋರುವೆಯಾ?

ಓ ದಯಾ
ಮಯಾ ದೇವಾ
ಪ್ರೀತಿ ಕೊಡಿಸುವೆಯಾ?
ಹಾ! ಗಯಾ
ಅರೆ ಆಯಾ ಮಾತು
ಭಯವಿನ್ನೂ ಇದೆಯಾ ?

ಛೇ ಜಯಾ
ಮನ್ನಿಸುವೆಯಾ
ಕಣ್ಣು ತೆರೆಯುವೆಯಾ ?
ಹೇ ಮಾಯಾ
ಜಿಂಕೆಯ ಬಿಟ್ಟು
ರಾಮಾಯಣವಿದೆಯಾ?

ನೀ ನಯಾ
ಗರಾ ನಾನಿಲ್ಲಿ
ನಿನ್ನ ಜತೆಗಾರ
ಈ ಕ್ಷಯಾ
ಸಂವತ್ಸರದಲ್ಲಿ
ಹೊಸ ಹಾಡುಗಾರ

ಧೋ ಸುರಿವೆಯಾ
ಹಾ ಹರಿವೆಯಾ
ಹೋ ಹೊರಟೆಯಾ ಯಾ
ವಾಗ ಬರುವಿಯಾ
ಆಗ ತರುವೆಯಾ
ನೆನಪಿಗೊಂದು ಹನಿಯ ?

ವೀ WITHERAWAY
ಅಧರವೇ
ಅದರದೊಂದು ಗುರುತೆ ;
so ಸೋದರಿ
ನಮ್ಮ ಮಾದರಿ
ಒಂದು ಪುಟ್ಟ ಹಣತೆ

ಚಾ ಪ್ರಿಯಾ
ವಿಮುಕ್ತ ಹೃದಯಾ
ಬಾನಿನೊಳಗಿದೆಯಾ?
ಬರಿಯ ಮನಸಿಗೆ
ಹದಿಗನಸಿಗೆ
ಸುರಿಸಬೇಡ ಮಳೆಯ

*

ಪದ್ಯ-3

ಅವಳ ನೆನಪು

ನಾನು ದಿನಾ
ಅವಳ ನೆನಪಿನಿಂದಲೇ ಕೈತೊಳೆದುಕೊಳ್ತಿದೇನೆ
ಸದಾ ಅವಳು ಹೇಳ್ತಾಳೆ :
‘ನೆನಪಿನಿಂದ ಮೈತೊಳೆದ ನನ್ನ ಪ್ರಕೃತಿಯಲ್ಲಿ
ಸ್ವಚ್ಛ ಆಹ್ಲಾದತೆ.’

ಅವಳ ನೆನಪು
ತೊಟ್ಟು
ತೊಟ್ಟು
ತೊಟ್ಟಿಕ್ಕುತ್ತದೆ.

ಈಗವಳ ನೆನಪೇ
ನನ್ನ ಮೆಚ್ಚುಗೆಯ ಗಡಿಯಾರ. ನಾನೀಗ
ಏಕಾಂಗಿ ಸಮಯ ಸವೆಸುವ
ಹೊಸ ಸರದಾರ.

ಅವಳ ನೆನಪನ್ನು ಬೋರ್ನ್‌ವಿಟಾದಂತೆ
ದಿನಾ ಕುಡಿಯುತ್ತೇನೆ.
ನಾನು ಶಕ್ತಿಶಾಲಿ.

ಕೆಲವು ಸಲ
ಅವಳ ನೆನಪಿನ ಭಯಂಕರವಾದ ಶೀತದಿಂದ
ನರಳುವೆ. ಆ ರಾತ್ರಿ
ದೀಪಗಳನ್ನು ಆರಿಸದೆ ಒಬ್ಬಂಟಿ
ಹೊರಳುವೆ.

ಮರುದಿನ
ಅವಳ ನೆನಪಿನಿಂದ ಹಲ್ಲುಜ್ಜುವೆ
ಅವೀಗ ಹೆಚ್ಚು ಸುರಕ್ಷಿತವಾಗಿವೆ.

ಅವಳ ನೆನಪು
ಆರಂಭಕ್ಕೆ ಅತ್ಯುತ್ತಮ

ಬೆಳವಣಿಗೆಗೆ ಅನುಪಮ..


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X