ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯೋಲ್ಲಂಘನ

By Staff
|
Google Oneindia Kannada News
ಇವ ಹುಟ್ಟು ಹಾರಾಟಗಾರ;
ಇವನಮ್ಮ, ಇವನಜ್ಜಿ
ಅಕ್ಕ-ತಂಗಿಯರ, ಅತ್ತೆಯಂದಿರ
ಮುದ್ದು ಹನುಮ.
ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ;
ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು,
ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ
ಒಂದೇ ಏಟಿಗೆ
ಧಡಂ ಎಂದು ಹಾರುತ್ತಾ ಕಾಲ ಹಾಕುತ್ತಿರುತ್ತಾನೆ.
ಎರಡು ಹೆಜ್ಜೆಗೊಂದು ಹಾರು;
ಬೀಳುತ್ತಲೇ ಮೇಲೇಳುತ್ತಿರುತ್ತಾನೆ.
ಬಿದ್ದೆದ್ದು ಮಣ್ಣಾದ ಮೀಸೆಯ ಸವರಿ
ತನ್ನ ಗರಿ, ರೆಕ್ಕೆ, ಪುಕ್ಕಗಳ ನೇವರಿಸಿ
ಭೋಪರಾಕಿಗೆಂಬಂತೆ
ದಾರಿ ಬಿಡಿ, ದಾರಿ ಬಿಡಿ, ಅಡ್ಡಬಾರದಿರಿ
ಎನ್ನುತ್ತ ಹಾರುತ್ತಲೇ ಬರುತ್ತಾನೆ.
***
ಕಾಣಬಹುದು ನೀವೀತನನು
ಸತ್ತ ಮೀನಿನ
ಚೆಲುವ ಮೀನ ಕಣ್ಗಳ
ಮೀನಿನ ಮಾರ್ಕೆಟ್ಟಿನ ತಿರುವು ರಸ್ತೆಯ
ಮುರುವಿನಲ್ಲಿ;
ಬೇಕಿದ್ದರೆ ಗುರುತು -
ಜಗಿಯುತ್ತ ಇರುತ್ತಾನೆ
ತನ್ನ ಹುಲ್ಗಾವಲಿನ ಹಸಿ ಹಸಿ ಗರಿಕೆಗಳನ್ನು:
ಗುಟುರು ಹಾಕಲಿಕ್ಕೆ ಬೇಡವೇ ತ್ರಾಣ?
ಇವನಿಗೆ
ಹಸಿವಾದೊಡೆ ಭಕ್ಷ್ಯಾನ್ನಗಳುಂಟು
(ಅನ್ನ ಸಾಂಬಾರು,
ತಲೆ ಮಾಂಸ: ಅವರಿವರದು)
ತೃಷೆಯಾದೊಡೆ ಕೆರೆ ಬಾವಿಗಳುಂಟು
ದಾರಿಬದಿ ಹಾದುಹೋಗುವ ಕನಕಾಂಗಿಯರ
ಥೂ ಹಲ್ಕ ನೋಟ.
ಹಾರುತ್ತ ಹಾರುತ್ತಲೇ ಇರುತ್ತಾನೆ ಇವನು
ಮೋಸ ಹೋಗದಿರಿ.
ಇಂದಿಲ್ಲಿ, ಇವನ ಹಾರಿಗೆ ಸೆಳೆದು ಹೋದ ಗಾಳಿಗಳು
ನಾಳೆ ನಿಮಗೇ ಸಿಗಬಹುದು,
ಅಲ್ಲಿ: ಅರೆ ಇದೆಲ್ಲಿ ಬಂತಪ್ಪ ಗ್ರಹಚಾರ,
ಹುಳಿಗಾಳಿ, ಕೆಸರ ಪಿಚಿಪಿಚಿ
ಎಂದು ಮೂಗು ಮುರಿಯುವರಾದರೆ -
ನೋಡಿ...ನಿಮಗೆ ನಾನು ಮೊದಲೇ ಹೇಳಿಬಿಟ್ಟಿದ್ದೇನೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X