ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಂ ಗಣಕಾಯ ನಮ ಃ

By Staff
|
Google Oneindia Kannada News
  • ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
    [email protected]
ಗಣಕ ವಚನಗಳು

ನುಡಿ ಬರಹಗಳನರಿಯೆ
ಸಿ. ಡಿ. ಪ್ಲಾಪಿಗಳನರಿಯೆ
ಕೇಡಿ ವೈರಸ್‌ಗಳನರಿಯೆ
ಸೈಬರ್‌ ಜಾಲಗಳನರಿಯೆ
ಗಣಕವೆ,
ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ
ಸಿಲಿಕಾನ್‌ ಶಿವದೇವ.

*

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿನ್ನ ಅಂತರ್ಜಾಲ
ಬ್ರಹ್ಮಾಂಡದಿಂದತ್ತತ್ತ ನಿನ್ನ ವೆಬ್‌ ತಾಣ
ಸರ್ವ ಅಂತರ್ಯಾಮಿ, ಸರ್ವ ಗೋಚರ
ಸಪ್ರತಿಮ ಗಣಕಯಂತ್ರವೆ,
ಎನ್ನ ಲ್ಯಾಪ್‌ ಟ್ಯಾಪ್‌ಗೆ ಬಂದು
ಚುಟುಕಾದೆಯಯ್ಯ ಸಿಲಿಕಾನ್‌ ಶಿವದೇವ.

*

ನುಡಿ ಲಿಪಿಸಿದರೆ ಮತ್ತಿನಂತಿಹುದಯ್ಯ
ಬರಹ ಬರೆದರೆ ಸ್ಫಟಿಕದಂತಿಹುದಯ್ಯ
ಲೇಸರ್ಮುದ್ರಿಸಿದರೆ ಮಾಣಿಕ್ಯದ ದೀಪ್ತಿಯಂತಿಹುದಯ್ಯ
ಲಘುವರ ಸೃಷ್ಟಿಸಿದರೆ ಜಗಮೆಚ್ಚಿ ಅಹುದಹುದೆನುವುದಯ್ಯ
ಗಣಕ ಯುಗದಲ್ಲಿದ್ದು ಅಂತರ್ಜಾಲವ ಭೇದಿಸದಿದ್ದರೆ
ಮೆಚ್ಚ ನಮ್ಮ ಸಿಲಿಕಾನ್‌ ಶಿವದೇವ.

*

ಶಿಕ್ಷಣ ಪಡೆಯಲೆಂದು ಬಂದು
ಗಣಕಕ್ಕೆ ಅಂಜಿದಡೆ ಎಂತಯ್ಯ
ಸೈಬರ್‌ ಲೋಕದೊಳಗಿದ್ದು
ಚಾಟ್‌ ಮಾಡದಿದ್ದರೆ ಎಂತಯ್ಯ
ಅಂತರ್‌ ಜಾಲದ ವಿಶ್ವದಲಿದ್ದು
ಮಾಹಿತಿ ಪಡೆಯದಿದ್ದರೆ ಎಂತಯ್ಯ
ಸಿಲಿಕಾನ್‌ ಶಿವದೇವ ,
ಆಧುನಿಕ ಯುಗದಲಿದ್ದ ಬಳಿಕ
ಗಣಕಾವಧಾನಿಯಾಗಿರಬೆಕಯ್ಯ.

***

ಗಣಕ ಅಣಕಗಳು

ಚಾಲಿಸು ಗಣಕವ ಚಕಚಕನೆ
ಓ, ಕನ್ನಾಡಿನ ಬಾಲಕನೆ

*

ವಿದ್ಯುನ್ಮಾನಿಯ ತನುಜಾತೆ
ಜಯ ಹೇ, ಕರ್ನಾಟಕ ಮಾತೆ

*

ಎಲ್ಲಾದರು ಇರು ಎಂತಾದರು ಇರು
ತುಸು ಹೊತ್ತಾದರೂ ಗಣಕದೆದುರು ಕುಂತಿರು

*

ಬಂದದ್ದೆಲ್ಲ ಬರಲಿ
ಗಣಕದ ದಯವೊಂದಿರಲಿ

*

ನಗೆಯು ಬರುತಿದೆ ಎನಗೆ
ಗಣಕ ನಿರಕ್ಷರಿಯ ಕಂಡು

*

ಗಣಕವ ಕಲಿತರೆ ಭಯವಿಲ್ಲ
ಜಗದಲಿ ಕಲಿಯದ ಜನರಿಲ್ಲ

*

ಕಲಿ ಕಲಿ ಕಲಿ ಕಲಿ ಗಣಕವನು
ಕಲಿತರೆ ಮೆಚ್ಚುವ ಸಿಲಿಕಾನ್‌ ಶಿವನು

***

ಗಣಕ ಗಾದೆಗಳು

ಗಣಪನ್ನ ಒಲಿಸಿಕೊಂಡ್ರು
ಗಣಕನ್ನ ಒಲಿಸಿಕೊಳ್ಳಲಾಸಲ್ಲ

*

ಗಣಕದ ಮುಂದಕೂತು
ನೊಣ ಹೊಡದ್ರ ಏನು ಬಂತು

*

ಗಣಪನ್ನ ಪೂಜಾಕ್ಕ ಕರಿಕಿ ಬೇಕು
ಗಣಕ ಕಲಿಲಾಕ ಬೆರಿಕಿ ಇರಬೇಕು

*

ಆಸತ್ತ ಬ್ಯಾಸತ್ತ ಬ್ಯಾಸಿಗಿ ಸೂಟಿಗಿ ಬಂದ್ರ
ಬೇಸಾಯ್ತು ಮಗನೇ ಬೇಗನೆ ಗಣಕಕ್ಕ ಹಚ್ಚು ಅಂದ್ರಂತ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X