ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೌರು

By Staff
|
Google Oneindia Kannada News


‘ಜಾನಪದ ಶ್ರೀ’ ಪ್ರಶಸ್ತಿ ವಿಜೇತ ಎಸ್‌.ಕೆ.ಕರೀಂಖಾನ್‌ ಸಂಪಾದನೆಯ ‘ಕನ್ನಡ ಜಾನಪದ ಗೀತೆಗಳು’ ಪುಸ್ತಕದಿಂದ ಆರಿಸಿದ ಅಪರೂಪದ ಗೀತೆ- ‘’. ಯಾವ ಹೆಣ್ಣುಮಗಳು ತಾನೆ ತೌರೆಂದರೆ ಹಿಗ್ಗಿ ಹೀರೇಕಾಯಿ ಆಗುವುದಿಲ್ಲ . ಕನ್ನಡದ ಹೆಣ್ಣುಮಗಳಂತೂ ಮಾನಸಿಕವಾಗಿ ತೌರಿನಲ್ಲೇ ಉಳಿದವಳು. ತನ್ನ , ಅಮ್ಮ , ಅಪ್ಪ ಹಾಗೂ ಕಳ್ಳುಬಳ್ಳಿಗಳ ಬಗ್ಗೆ ಹೇಳುವಾಗಲಂತೂ ಆಕೆ ಯಾವ ಕವಿಗೂ ಕಡಿಮೆಯಿಲ್ಲ . ವೃದ್ಧಿಸಲಿ, ತೌರವರ ರಸಬಳ್ಳಿ ಕರಕೀಯ ಕುಡಿಯಂಗೆ ಹಬ್ಬಲಿ ಎಂದು ಅವಳ ಮನಸ್ಸು ಶಿವನ ಕೋರುತ್ತಲೇ ಇರುತ್ತದೆ. ಹೆಣ್ಣುಮಕ್ಕಳ ಮನಸ್ಸು ತೌರಿನತ್ತ ತುಡಿಯುವ ಹಬ್ಬಗಳ ಮಾಸದ ಈಹೊತ್ತು , ಇಲ್ಲಿನ ‘’ ಗೀತೆ ಆಪ್ತವಾಗಿದೆ.
Thavaru, A Kannada Folksongಮೂಗೂತಿ ಮುಂಭಾರ ಎಣೆಗಂಟು ಹಿಂಭಾರ
ಕೆನ್ನೇಗೆ ಭಾರ ಹರಳೋಲೆ । ನನ್ನ ನಲ್ಲ ।।
ಬೆನ್ನೀಗೆ ಭಾರ ಶಿವದಾರ ।।

ನಡೆದಾರೆ ನಡು ಭಾರ ಗಟ್ಟೀಯ ನರಿ ಭಾರ
ತೌರೀನ ಹಂಬಲಿಕೆ ಬಲು ಭಾರ ।
ದೊರೆ ಮೋಜಿನಣ್ಣ ಮನೆ ತಾನು ।।

ಬಂಗಾರ ಬಳೆಯೋರು ತಿಂಗಳ ಹಾದ್ಯೋರು
ನನ್ನ ಕೊಟ್ಯಾಕೆ ಮರೆತಾರು । ಮಾವಿನ
ಹಣ್ಣು ಉಣುವಾಗ ನನೆಸ್ಯಾರು ।।

ಕೆಂದೆತ್ತು ಕೈಯಲ್ಲಿ ಕೆಂಪಂಗಿ ಮೈಯಲ್ಲಿ
ಚಿಂದರು ಬಾವಲಿ ಕಿವಿಯಲ್ಲಿ । ಇಕ್ಕೊಂಡು
ಅಣ್ಣಾ ಬಂದಾ ತಂಗೀ ಕರೆಯೋಕೆ ।।

ಮನೆಯ ಹಿಂದಲ ಮಾವು ನೆನೆತಾರೆ ಘಮ್ಮೆಂದೊ
ನೆನೆದ್ಹಂಗೆ ಬಂದ ನನ್ನ ಅಣ್ಣ । ಬಾಳೆಯ
ಗೊನೆ ಹಂಗೆ ತೋಳ ತಿರುವೂತ ।।

ಅರಕೆರೆ ಬನ್ನೂರು ಅದು ನನ್ನ ತವರೂರು
ಸರಕಾನೆ ಕೂಗಿ ಬರುತೀಯ । ಅಣ್ಣಯ್ಯ
ಸರಿಕಾಣೊ ನಿನ್ನ ದೊರೆತಾನ ।।

ಮೂರು ತಿಂಗಳಿಗೆ ಮುಖ ಬೆಳ್ಳಗಾಯಿತು
ಹುಸಿಯಿಲ್ಲದ್ದೇಳು ತಂಗ್ಯೆಮ್ಮ । ನಿನ್ಮಖ
ಹಸನಾದ ಚಿನ್ನ ಎಸೆದ್ಹಂಗೆ ।।

ತೌರೂರು ದಾರೀಲು ತೆಗಿಸಣ್ಣ ಬಾವಿಯ
ಅಕ್ಕತಂಗೀರು ತಿರುಗಾಡೋ । ಹಾದೀಲಿ
ತೆಗಿಸಣ್ಣ ಕಲ್ಯಾಣದ ಕೊಳಗಳ ।।

ತೌರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸುವೆಯಷ್ಟು ಮರಳಿಲ್ಲ । ಬಾನಲಿ
ಬಿಸಿಲಿನ ಬೇಗೆಯ ಸುಡಲಿಲ್ಲ ।।

ತೌರೂರ ಹಾದೀಲಿ ಗಿಡವೆಲ್ಲ ಮಲ್ಲಿಗೆ
ಹೂವರಳಿ ಪರಿಮಳ ಘಮ್ಮೆಂದೂ । ನಾಕೊಯ್ದು
ಗಿಡಕೊಂದು ಹೂವ ಮುಡಿದೇನು ।।

ಹೆಣ್ಣೇಗೆ ತೌರೂರು ರಸಬಾಳೆ ಹಣ್ಣಂತೆ
ಮಲೆನಾಡು ತುಡುಬೆ ಜೇನಂತೆ । ತಾಯಿಯ
ಎದೆ ಹಾಲು ರುಚಿಯ ಸವಿದಂತೆ ।।

ಪಾರಿವಾಳದ ಹಕ್ಕಿ ಏನಾಸೆಲಿದ್ದಾವೊ
ನೀರಾಸೆ ಮರದ ನೆರಳಾಸೆ । ಹೆಣ್ಣೀಗೆ
ತಾಯಾಸೆ ತೌರ ಮನೆಯಾಸೆ ।।

ಮಳೆ ಬಿಟ್ಟರೂ ಮರದ ಹನಿ ಬಿಡದು ತಾಯವ್ವ
ನೀ ಬಿಟ್ಟರೂ ನಿನ್ನ ಮನೆ ಬಿಡದು । ನನ್ನವ್ವಾ
ನಿನ್ನಾಸೆ ನನ್ನ ಬಿಡದಲ್ಲೆ ।।

ಬಾರೋ ಬಾರೋ ನನ್ನ ಬಣ್ಣದೊಲ್ಲಿಯ ತಮ್ಮ
ಬರಿಗೈಲಿ ಬರಲಾರೆ ತಡಿಯಕ್ಕ । ನಿನ್ನ
ವಾಲೇಗೆ ತರುವೇನು ಬಿಡಿಮುತ್ತ ।।

ಹೊಟ್ಟೆನೋವು ಎಂದಾಳು ಪಟ್ಟೆ ಜವಳಿ ತೆಗೆದಾಳು
ಹಟ್ಟೀಗೂ ಹೊಲಕು ಓಡ್ಯಾಡಿ । ತಂಗ್ಯಮ್ಮ
ಪುಟ್ಟ ಬಾಲಕನ ಹಡೆದಾಳು ।।

ಬಂಗಾರದ ಬಳೆ ನಾಲ್ಕು ಸಾಕು ನನ ಬಲಗೈಗೆ
ನಾಲ್ವರಹದ್ವಾಲೆ ಹೂ ಬುಗುಡಿ । ಗೆಜ್ಜೆಟೀಕೆ
ಸಾಕು ತವರವರು ಬಡವಾರು ।।

ಕಾಲುಂಗುರ ತಂಗೀಯ ಕರೆಯ ಬಂದಿದಾರೆ
ಕಾರೊಡ್ಡಿ ಹುಯ್ಯೋ ಮಳೆರಾಯ । ತಂಗೀಯ
ಇಂದಿನ ಪಯಣ ಉಳಿಯಾಲಿ ।।

ಹಟ್ಟೀಲಾರಮ್ಮೆ ಕೊಟ್ಟಿಗೇಲಿ ಮೂರೆಮ್ಮೆ
ಕೊಟ್ಟಿರೋ ಕೊಂಡಿರೋ ನನಗೊಂದ । ಅಣ್ಣಯ್ಯ
ಹುಟ್ಟಲಿಲ್ಲವೇ ನಾನು ಮನೆಯಾಗೆ ।।

ಹುಟ್ಟಿದೆ ತಂಗ್ಯಮ್ಮ ಉಟ್ಟು ಕೊಳೆ ಪಟ್ಟೀಯಾ
ಕಟ್ಕೊಳೆ ಕೊರಳ ಪದಕಾವ । ಕಿರಿತಂಗಿ
ಬಂಗಾರ ಬೇಡು ಬಳೆ ಬೇಡ ।।

ಬಂಗಾರ ಬೇಡ ಬಳೆ ಬೇಡ ಅಣ್ಣಯ್ಯ
ಕೊಡಿರೋ ನನಗೊಂದು ಎಮ್ಮೆಯ । ಅಣ್ಣಯ್ಯ
ಹೆಸರ್ಹೇಳಿ ಮೊಸರ ಕಡೆದೇನು ।।

ಖಂಡ್ಗ ಹಾಲಿನೆಮ್ಮೆ ಗುಂಗ್ರು ಗೋಡಿನೆಮ್ಮೆ
ಅಕ್ಕಯ್ಯ ಬೇಡಿ ಅಳುತಾಳೆ । ಅಣ್ಣಯ್ಯ
ದಂಡಿಯ ಹಾಕಿ ಹೊಡಕೊಡಿ ।।

ಅಳುತ್ತಿದ್ದ ತಂಗೀಗೆ ನಗುತ ಎಮ್ಮೆಯ ಕೊಟ್ಟ
ಮೇಲೊಂದು ಮಾತ ತಾನುಡಿದ । ತಂಗ್ಯಮ್ಮ
ಮಡದಿಗೊಪ್ಪಿರದೆ ಹೊಡೆದಿವ್ನಿ ।।

ನೀವೊಪ್ಪಿ ನಿಮ್ಮ ಮಡದ್ಯೊಪ್ಪಿ ಕೊಟ್ಟರೆ
ಹೆಸರ್ಹೇಳಿ ಮೊಸರ ಕಡದೇನು । ಅಣ್ಣಯ್ಯ
ನಿಮ್‌ ದೇವ್ರೆಗೊಂದೀಪ ಉರಿಸೇನು ।।

ತೊಟ್ಟಿಲ ಹೊತ್ತುಕೊಂಡು ಬಣ್ಣ ಉಟ್ಟುಕೊಂಡು
ಅಣ್ಣ ಕೊಟ್ಟೆಮ್ಮೆ ಹೊಡಕೊಂಡು । ತೌರೂರ
ತಿಟ್ಹತ್ತಿ ತಿರುಗಿ ನೊಡ್ಯಾಳು ।।

ಕರಿಯ ಸೀರೆಯನುಟ್ಟು ಕೆರೆಯ ನೀರಿಗೆ ಹೋದೆ
ಬೆಲೆಯ ಕೇಳಿದರು ಬಹುಮಂದಿ । ನಮ್ಮೂರ
ದೊರೆ ಮೋಜಿನಣ್ಣ ಉಡಿಸ್ಯಾನು ।।


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X