Get Updates
Get notified of breaking news, exclusive insights, and must-see stories!

ವಿಘ್ನೕಶ್ವರನ ಮಜಕೂರ

  • ಚಂದ್ರಗೌಡ ಕುಲಕರ್ಣಿ
    ತಾಳಿಕೋಟಿ, ವಿಜಾಪುರ ಜಿಲ್ಲೆ.
    [email protected]
ಗಜಾನನ ಗಣಪತಿ ಮಜಾ ನಿಮಗ ಹೇಳತೀನಿ
ಗಜಿಬಿಜಿ ಮಾಡಲಾರದ ಕೇಳಬೇಕ
ಗಜಿಬಿಜಿ ಮಡಲಾರದ ಕೇಳಿದರ ವಿಘ್ನೕಶ್ವರನ
ಮಜಕೂರ ನಿಮಗ ತಿಳಿತೈತಿ

ಮಣ್ಣಿನ ಮಗನಾಗಿ ಭೂಮಿತಾಯಿ ಕಂದನಾಗಿ
ಚಂದಾಗಿ ಒಂದಾಗಿ ಬೆಳೆದು ನಿಂತಾನ
ಚಂದಾಗಿ ಒಂದಾಗಿ ಬೆಳೆದು ನಿಂತು ನಾಡಿಗೆಲ್ಲ
ಕುಂದದ ಕಾಯಕ ಕಲಿಸಿ ಕೊಟ್ಟಾನ

ವೇದ ಪುರಾಣ ಓದಿದೋರಿಗಿಂತ ಯಜ್ಞಯಾಗ ಮಾಡಿದೋರ್ಗಿಂತ
ಒಕ್ಕಲು ಮಗನು ಬಹಳ ದೊಡ್ಡವನು
ಒಕ್ಕಲು ಮಗನು ದೊಡ್ಡವನೆಂದು ಸಾರುತ್ತ
ಒಕ್ಕಟ್ಟಾಗಿ ಬದುಕು ರೀತಿ ತಿಳಿಸ್ಯಾನ

ಭೂಮಿ ತಾಯಿ ಹೊಟ್ಟಿ ಸೀಳಿ ಕರಕಿಹುಲ್ಲ ಕಡ್ಯಾಕ ಮಾಡಿ
ಹದಮಾಡಿ ಬೆಳೆಯಾ ವಿದ್ಯಾ ಬೆಳಸ್ಯಾನ
ಹದಮಾಡಿ ಬೆಳೆಯಾ ವಿದ್ಯಾ ಬಳಸುತ್ತ ಕಾಳಕಡಿ
ಹಂಚಿಕೊಂಡು ಉಣ್ಣುವುದು ಕಲಿಸ್ಯಾನ ಹಣ್ಣು ಹಂಪಲ
ಹಂಚಿಕೊಂಡು ತಿನ್ನೂದು ಕಲಿಸ್ಯಾನ

ಒಕ್ಕಲುತನ ಕಲಿಯಲಾರದೆ ತಿಕ್ಕಲುತನ ಮಾಡೋವಂತ
ಪುಕ್ಕಲು ಜನರ ಯಜ್ಞಕ್ಕ ವಿಘ್ನ ಮಾಡ್ಯಾನ
ಪುಕ್ಕಲು ಜನರ ಯಜ್ಞಕ್ಕ ವಿಘ್ನವನ್ನು ಮಾಡುತ್ತ
ವಿಘ್ನೕಶ್ವರನೆಂಬ ಹೆಸರು ಪಡದು ಬಿಟ್ಟಾನ
ವಿಘ್ನಕಾರಕ ನಾಯಕನಾಗಿ ಬೆಳೆದು ನಿಂತಾನ

ಒಕ್ಕಲು ಮಕ್ಕಳ ದವಸ ಧಾನ್ಯ ತಿಂದು ಹಾಳು ಮಾಡುವಂತ
ಇಲಿರಾಯನ್ನ ವಾಹನ ಮಾಡಿಕೊಂಡಾನ
ಇಲಿರಾಯನ್ನ ವಾಹನ ಮಾಡಿಕೊಂಡ ವಿಘ್ನೕಶ್ವರ
ನಾಗರಾಜನ್ನ ಹೊಟ್ಟಿಗೆ ಬಿಗಿದು ಕೊಂಡಾನ
ವಿಷ ನಾಗರ ಹಾವನ್ನ ಹೊಟ್ಟಿಗೆ ಕಟ್ಯಾನ

ವಿಘ್ನೕಶ್ವರನ ಅವತಾರ ನೋಡಿ ಜಾಣ ಮಂದಿ ಸಂಚು ಹೂಡಿ
ಊಟ ಉಪಚಾರಕ್ಕಂತ ಕರೆದು ತಂದಾರ
ಊಟ ಉಪಚಾರಕ್ಕಂತ ಕರೆದು ತಂದು ಕಡಬು ತಿನ್ನಿಸಿ
ಮೋಸದಿಂದ ತಮ್ಮ ಕಡಿಗೆ ಒಲಿಸಿ ಕೊಂಡಾರ
ನಾಲಿಗಿ ರುಚಿಗೆ ದಾಸನ್ನಾಗಿ ಮಾಡಿ ಬಿಟ್ಟಾರ

ದಿನಕ್ಕೊಂದೊಂದ ಅಡಿಗಿ ಮಾಡಿಸಿ ಒಬ್ಬರಾದ ಮೇಲೆ ಕರೆದು
ಕರದು ಕಡಬು ಊರಣ ಹೋಳೀಗಿ ರುಚಿ ಹಚ್ಯಾರ
ಕರದ ಕಡಬು ಹೂರಣ ಹೋಳಿಗಿ ರುಚಿ ಹಚ್ಚಿದ ಜಾಣರು
ಒಕ್ಕಲು ಮಕ್ಕಳ ಸಂಗದಿಂದ ದೂರ ಮಾಡ್ಯಾರೊ
ತಿಂಗಳಗಟ್ಟಲೆ ನನೆಯಾಳಗ ಅಡಗಿಸಿ ಇಟ್ಟಾರ

ಗಣಪತಿ ನಮ್ಮ ನಾಯಕ ಮರೆತು ಬಿಟ್ಟ ತನ್ನ ಕಾಯಕ
ಎಲ್ಲಿ ಮಾಯ ಆದನಂತ ಗಾಬರಿ ಬಿದ್ದಾರ । ಜನ
ಎಲ್ಲಿ ಮಾಯಾದನಂತ ಗಾಬರಿಬಿದ್ದು । ಜೋಕುಮಾರನ್ನ
ಮನಿಮನಿ ಹುಡುಕಲಿಕ್ಕೆ ಅಟ್ಟಿ ಬಿಟ್ಟಾರ

ಸಂದಿ ಗೊಂದಿ ಒಳಗ ನಿಂತು ಪರದಾ ಹಿಂದೆ ಅಡಗಿ ಕುಂತು
ಜೋಕುಮಾರಗೂ ಚಳ್ಳೆ ಹಣ್ಣು ತಿನಿಸಿ ಬಿಟ್ಟಾನ
ಜೋಕುಮಾರಗೂ ಚಳ್ಳೆ ಹಣ್ಣು ತಿನಿಸಿ ಬಿಟ್ಟು ಗಣಪತಿಯು
ಮುಖವಾಡ ಹಾಕಿಕೊಂಡು ತಿರುಗೂದ ಕಲಿತಾನ
ಆನೆ ಮುಖ ಹಾಕಿಕೊಂಡು ತಿರಗಾಕ ಹತ್ತ್ಯಾನ

ಹುಳ್ಳ ಅಂಬಲಿ ಉಂಡ ಜೋಕ ಹುಳ್ಳುಳ್ಳಗ ಮುಖಮಾಡಿ
ಓಣಿ ಓಣಿ ಕೇರಿ ಕೇರಿ ಸುತ್ತೇ ಸುತ್ಯಾನ
ಓಣಿ ಓಣಿ ಕೇರಿ ಕೇರಿ ಸುತ್ತುತ್ತ । ಒಂದಿನ
ಗಣಪತಿ ಇರೋ ಜಾಗ ಪತ್ತೆ ಹಚ್ಚಾನ
ಮಖವಾಡ ತಗೆದಾಗ ಗಪ್ಪನ ಹಿಡದಾನ
ಮನೆಯಿಂದ ಹೊರಗ ಅವನ್ನ ಎಳೆದು ತಂದಾನ

ದರದರೆ ಎಳದು ತಂದು ದಾರಿ ಮ್ಯಾಗ ನಾಕು ಜಡದು
ಹೆಗಲ ಮ್ಯಾಲ ಹೊತ್ತು ಕೊಂಡು ತಿರಗಾಕ ಹತ್ತಾನ
ಹೆಗಲ ಮ್ಯಾಲ ಹೊತ್ತು ಕೊಂಡು ತಿರುಗುತ್ತ ಊರತುಂಬ
ಮೆರವಣಿಗೆ ಮಾಡುತ್ತ ನಡೆದುಟ್ಟಾನ
ಮದ್ದು ಗುಂಡು ಪಟಾಕಿಗೆ ಬೆಂಕಿ ಹಚ್ಯಾನ
ನಾಡ ತುಂಬ ದೊಡ್ಡ ಗದ್ದಲ ಎಬ್ಬಿಸಿ ಬಿಟ್ಟಾನ

ಗಣಪ್ಪ ಗಣಪ್ಪ ಮೋರಯ್ಯ ಪುಂಡಿ ಪಲ್ಲೆ ಸೋರಯ್ಯ
ಗಣಪತಿ ಬೊಪ್ಪ ಮೋರಯ್ಯ ಪುಂಡಿ ಪಲ್ಲೆ ಸೋರಯ್ಯ
ಹಾಡ ಹಾಡತ ಹಳ್ಳದ ದಾರಿ ಹಿಡದ ಬಿಟ್ಟಾನ
ಕೇಕೆ ಹಾಕತ ಹಳ್ಳದ ದಾರಿ ಹಿಡಿದು ಬಿಟ್ಟಾನ
ಹಳ್ಳದ ಮಡುವಿನಾಗ ಒಗದು ಬಿಟ್ಟಾನ

ಗಣಪತಿ ಪಾಪೆ ಮಳುಮುಳುಗೆದ್ದು ಐದು ಸಾರೆ ನೀರು ಕುಡಿದು
ನೀರೊಳಗ ನೀರಾಗಿ ಕರಗಿ ಬಿಟ್ಟಾನ
ಒಕ್ಕಲು ಮಗ ನೀರು ಪಾಲು ಆಗಿಬಿಟ್ಟಾನ

ನವಲಗುಂದ ತಾಲುಕನ್ಯಾಗ ಬೆಣ್ಣಿ ಹಳ್ಳದ ದಂಡಿ ಮ್ಯಾಗ
ಕಡದಳ್ಳಿ ಕಲ್ಮೇಶ ನೆಲಿಸಿ ನಿಂತಾನ ಅವನ ಕಂದ
ಚಂದ್ರಗೌಡ ಚಂದದಿಂದ ಹಾಡ ಕಟ್ಟ್ಯಾನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+