ಹದಿನೈದರ ತಥಾಗತ ಪಿಎಚ್.ಡಿ ವಿದ್ಯಾರ್ಥಿ
ಈತನ ಹೆಸರು ತಥಾಗತ ಅವತಾರ್ ತುಳಸಿ.
ಪಿಯೂಸಿ ಓದುವ ವಯಸ್ಸಿನ ಹುಡುಗ. ಹದಿನೇಳು ವರ್ಷ ಪೂರ್ತಿಯಾಗುವಷ್ಟರಲ್ಲಿ ಡಾಕ್ಟರ್ ಅನಿಸಿಕೊಳ್ಳಬೇಕೆಂಬ ಮಹಾತ್ವಾಕಾಂಕ್ಷೆ ಆತನದು. ತುಳಸೀ ಈಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)ಯಲ್ಲಿ ಪಿಎಚ್.ಡಿ ಅಧ್ಯಯನ ನಡೆಸುತ್ತಿದ್ದಾನೆ.
ಈ ವಿಶೇಷ ರೀತಿಯ ಅಧ್ಯಯನಕ್ಕಾಗಿ ವಯಸ್ಸಿಗೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಅನುಮತಿ ಪತ್ರ ಪಡೆದುಕೊಂಡು ಬಂದಿರುವ ತುಳಸಿ, ತನ್ನ 10ನೇ ವಯಸ್ಸಿನಲ್ಲಿ ಪದವಿ ಮುಗಿಸಿದ್ದಾನೆ. 12 ನೇ ವರ್ಷಕ್ಕೆ ಎಂಎಸ್ಸಿ ಮುಗಿಸಿದ ಜಗತ್ತಿನ ಅತ್ಯಂತ ಕಿರಿಯವನು ಎಂಬ ಹೆಗ್ಗಳಿಕೆ ಆತನದು.
ಐಐಎಸ್ಸಿಯಲ್ಲಿ ಅಧ್ಯಯನಕ್ಕಾಗಿ ಪ್ರವೇಶ ಗಿಟ್ಟಿಸಿಕೊಂಡ ಅತ್ಯಂತ ಕಿರಿಯ ಎಂಬ ಕೀರ್ತಿಯೂ ತಥಾಗತ ತುಳಸಿಗೆ ಸಲ್ಲುತ್ತದೆ. ಐಐಎಸ್ಸಿಯ ಬಗ್ಗೆ ಆತನಿಗೆ ತುಂಬಾ ಖುಷಿ. ‘ಇಲ್ಲಿ ಜಗತ್ತಿನ ಬುದ್ಧಿವಂತ ಅಧ್ಯಯನಕಾರರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ನನ್ನನ್ನು ಪಿಹೆಚ್.ಡಿ ವಿದ್ಯಾರ್ಥಿ ಎಂದೇ ಪರಿಗಣಿಸುತ್ತಾರೆ. ಸಣ್ಣ ಮಗು ಎಂಬ ಭಾವನೆಯಿಂದ ಅವರ್ಯಾರೂ ನನ್ನನ್ನು ಅಂಡರ್‌ಎಸ್ಟಿಮೇಟ್ ಮಾಡುತ್ತಿಲ್ಲ’ ಎನ್ನುವಾಗ ಆತನ ಕಣ್ಣುಗಳು ಫಳಫಳ.
ತುಳಸಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗ. ಬಿಹಾರ ಆತನ ತವರು. ಆರನೇ ವಯಸ್ಸಿನಲ್ಲಿದ್ದಾಗಲೇ ಅಪ್ಪ ಅಮ್ಮ ತಮ್ಮ ಮಗನಲ್ಲಿರುವ ಕಲಿಕೆಯ ವಿಶೇಷ ಆಸಕ್ತಿಯನ್ನು ಗುರುತಿಸಿದರು. ಈ ಹುಡುಗನ ಕಲಿಕೆಯ ವೇಗವನ್ನು ಕಂಡು ಬಿಹಾರದ ಮುಖ್ಯಮಂತ್ರಿ ಆತನಿಗೆ 1996ರಲ್ಲಿ ಕಂಪ್ಯೂಟರ್‌ನ್ನು ಬಹುಮಾನವಾಗಿ ಕೊಟ್ಟರು. ಈಗ ತುಳಸಿಗೆ 15ರ ವಯಸ್ಸು.
ತುಳಸಿಗೆ ಅಚ್ಚ ಗಣಿತ ಶಾಸ್ತ್ರದಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಮಾನವ ಶಾಸ್ತ್ರಕ್ಕೆ ಪೂರಕವಾಗಿ ಪ್ರಕೃತಿಯಲ್ಲಿ ಘಟಿಸುವ ಘಟನೆಗಳ ಬಗ್ಗೆ ಆತನಿಗೆ ಕುತೂಹಲ. ಐಐಎಸ್ಸಿಯಲ್ಲಿ ನಡೆಸುತ್ತಿರುವ ಅಧ್ಯಯನ ಇನ್ನೇನು ಮುಗಿಯಲಿದೆ. 17ನೇ ವಯಸ್ಸಿಗೆ ತುಳಸಿ ಪ್ರೊಫೆಸರ್ ಆಗಿ ಗುರುತಿಸಿಕೊಳ್ಳಲಿದ್ದಾನೆ. ದಾಖಲೆಗಳನ್ನು ಗಮನಿಸಿದಲ್ಲಿ, 18ನೇ ಶತಮಾನದಲ್ಲಿ ಸ್ಕಾಟ್ಲೆಂಡ್‌ನ ಕೊಲಿನ್ ಮ್ಯಾಕ್ಲಾರಿನ್ ತನ್ನ 19ನೇ ವಯಸ್ಸಿಗೇ ಪ್ರೊಫೆಸರ್ ಆಗಿದ್ದ.
ತುಳಸಿಯ ಪಿಹೆಚ್.ಡಿ ವಿಷ್ಯ- ರೂಂ ಟೆಂಪರೇಚರ್ ಸೂಪರ್ ಕಂಡಕ್ಟರ್ಸ್‌ನ ಗುರುತಿಸುವಿಕೆ. ಅತ್ಯಂತ ವೇಗವಾಗಿ ಕೆಲಸ ಮಾಡುವ ಹಾಗೂ ಅತ್ಯಂತ ಚಿಕ್ಕ ಕಂಪ್ಯೂಟರ್ ತಯಾರಿಕೆಗೆ ಅನುಕೂಲವಾಗುವ ಈ ಅಧ್ಯಯನ ಚಾಲೆಂಜಿಂಗ್ ಆಗಿದೆ ಎನ್ನುವುದು ತುಳಸಿಯ ಅಭಿಪ್ರಾಯ.
ಐಐಎಸ್ಸಿ ಯ ಭೌತಶಾಸ್ತ್ರ ವಿಭಾಗದ ಡೀನ್ ಎಸ್.ವಿ.ಸುಬ್ರಮಣಿಯಂ ಹೇಳುವ ಪ್ರಕಾರ ತುಳಸಿ ತುಂಬಾ ಒಳ್ಳೆಯ ಹುಡುಗ. ಆದರೆ ಆತನ ವೇಗದ ಕಲಿಕೆಯ ವಿಲಕ್ಷಣತೆಯ ಬಗ್ಗೆ ಸುಬ್ರಮಣಿಯಂ ನೋ ಕಾಮೆಂಟ್ಸ್ ಎನ್ನುತ್ತಾರೆ. ಆತನ ಸೀನಿಯರ್ ಸ್ಕಾಲರ್ ಎಸ್. ಹಾಸನ್- ತುಳಸಿಯ ಗ್ರಹಣ ಶಕ್ತಿ ತುಂಬಾ ವೇಗವಾಗಿದೆ. ಇತರರಿಗಿಂತ ಆತ ಭಿನ್ನ . ಅಲ್ಲದೆ ಆತ ಶ್ರಮ ಜೀವಿ ಎಂಬುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ನೀಡುತ್ತಾರೆ.
ಪ್ರಸಿದ್ಧಿಯಾಂದಿಗೇ ವಿವಾದ
ಜರ್ಮನಿಯಲ್ಲಿ 2001ರಲ್ಲಿ ನಡೆದ ನೋಬೆಲ್‌ವಿಜೇತರ ಸಮ್ಮೇಳನದಲ್ಲಿ ಭಾಗವಹಿಸಲು ತುಳಸಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ,‘ಆತನೊಬ್ಬ ಫ್ರಾಡ್. ಆತನನ್ನು ಈ ಸಮ್ಮೇಳನಕ್ಕೆ ಆಯ್ಕೆ ಮಾಡಬಾರದು’ ಎಂದು ಇತರ ವಿದ್ಯಾರ್ಥಿಗಳು ಹಾಗೂ ಕೆಲವು ಪ್ರೊಫೆಸರ್‌ಗಳು ತೆಗೆದದ್ದೂ ಉಂಟು. ಹಳೆಯ ಕಹಿನೆನಪುಗಳನ್ನು ಮರೆಯದ ತುಳಸಿ-‘ನನ್ನ ಸಾಮರ್ಥ್ಯ ಏನೆನ್ನುವುದನ್ನು ಐಐಎಸ್ಸಿಯಲ್ಲಿ ಪ್ರೂವ್ ಮಾಡಿದ್ದೇನೆ ’ಎಂದು ಎದೆ ತಟ್ಟಿ ಹೇಳುತ್ತಾನೆ.
ದಿನದ 12 ಗಂಟೆಗಳು ಅಧ್ಯಯನಕ್ಕೆ ಮೀಸಲಿಟ್ಟಿರುವ- ಮೊಬೈಲ್ ಫೋನು ಬಳಕೆ, ಇಂಟರ್‌ನೆಟ್ ಸರ್ಫಿಂಗ್, ಚೆಸ್ ಆಟ, ಸಿನೆಮಾ ವೀಕ್ಷಣೆ.. ಹೀಗೆ ಎಲ್ಲರ ಹಾಗೇನೆ ಈ ತುಳಸಿ !
ನೊಬೆಲ್ ಪ್ರೆೃಸ್‌ಗೆ ಪ್ರಯತ್ನಿಸುತ್ತಿದ್ದೀರಾ ? ಎಂದು ಕೇಳಿದರೆ, ‘ನೊಬೆಲ್ ಗಿಟ್ಟಿಸಿಕೊಳ್ಳಲು ನನಗಿಷ್ಟ . ಆದರೆ ಅದೇ ನನ್ನ ಜೀವನದ ಉದ್ದೇಶ ಅಲ್ಲ’ ಎಂದು ಆತ್ಮವಿಶ್ವಾಸದಿಂದ ನಗುತ್ತಾರೆ. ಆ ವಿಶ್ವಾಸ ಚಿರವಾಗಲಿ.
(ಏಜೆನ್ಸೀಸ್)











Click it and Unblock the Notifications