• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ತಾಪಹಾರಿ ಕತೆಗಳ ಚಿತ್ತಾಲರಿಗೆ...

By Super
|

ಚಿತ್ತು ಚಿತ್ತು ಅಕ್ಷರಗಳಲ್ಲಿಯೇ ಚಿತ್ತಾಪಹಾರಿ ಕಥೆಗಳನ್ನು ಮೊಗೆದುಕೊಟ್ಟ ಯಶವಂತ ಚಿತ್ತಾಲರಿಗೆ ನೂರೆಂಟು ನಮಸ್ಕಾರಗಳು. ಸಾವಿರ ನೆನಪುಗಳು.

ಸರ್‌,

ನಾನಿಲ್ಲಿ ಥೇಟ್‌ ಈಗಷ್ಟೇ ಪ್ರೇಮದ ಹೊಳೆಗೆ ಬಿದ್ದ ಕಾಲೇಜು ಹುಡುಗನ ಹಾಗೆ ಒಂದೊಂದೇ ಪದ ಸೇರಿಸಿಕೊಂಡು ನಿಮಗೆ ಪತ್ರ ಬರೀತಾ ಕೂತಿರುವಾಗಲೇ ದೂರದ ಮುಂಬಯಿಯಲ್ಲಿ ನೀವು ಬೆಂಗಳೂರು ಯಾತ್ರೆಗೆ ಸಿದ್ಧತೆ ನಡೆಸುತ್ತಿರಬಹುದು. ಶನಿವಾರದ ಬೆರಗಿನಲ್ಲೇ ಆರಂಭವಾಗುವ ಸಮಾರಂಭದಲ್ಲಿ ಹೇಗೆಲ್ಲ ಮಾತಾಡಿದರೆ ಚೆಂದ ಅಂದುಕೊಂಡು ಅದೇ ಚಿತ್ತು ಚಿತ್ತು ಅಕ್ಷರಗಳಲ್ಲಿ ನೋಟ್‌ ಮಾಡಿಕೊಳ್ಳುತ್ತಿರಬಹುದು. ಬೆಂಗಳೂರಿನಲ್ಲಿ ವಿಮಾನದಿಂದ ಕೆಳಗಿಳಿದದ್ದೇ ತಡ- ಗೊತ್ತೇ ಆಗದಂತೆ ಬಂದು ಕೈ ಕುಲುಕಿ ಬಿಡ್ತಾರಲ್ಲ ಮೋಹಕ ನಗುವಿನ ಜಯಂತ ಕಾಯ್ಕಿಣಿ- ಆಗ ಹ್ಯಾಗೆ ರಿಯಾಕ್ಟ್‌ ಮಾಡಬೇಕು ಅಂತ ಒಂದು ರಿಹರ್ಸಲ್‌ ಕೂಡ ಮಾಡಿ, ಲಗೇಜಿನ ಜೊತೆಗೆ ಬೆಚ್ಚನೆಯ ಶಾಲು, ಸ್ವೆಟರ್ರು ಬೇಕೋ ಬೇಡವೋ ಅಂತ ಯೋಚಿಸ್ತಾ ಇರಬಹುದು. ನೀವು ಏನೇನೋ ಯೋಚನೆಗಳಲ್ಲಿ ಮುಳುಗಿರುವಾಗಲೇ ನಾನಿಲ್ಲಿ ಪತ್ರ ಬರೀಲಿಕ್ಕೆ ಕೂತಿದ್ದೀನಿ. ಉಭಯ ಕುಶಲೋಪರಿ ಸಾಂಪ್ರತ....

ಹೌದಲ್ಲವಾ... ನಿಮಗೆ ಈಗ ಬರಾಬರ್‌ ಎಪ್ಪತ್ತೆೈದು ವರ್ಷ. 1949ರಲ್ಲಿ ನೀವು ಮೊತ್ತ ಮೊದಲಿಗೆ ಬೊಮ್ಮಿಯ ಹುಲ್ಲು ಹೊರೆ ಎಂಬ ಕತೆ ಬರೆದಿರಿ. ಅನಂತರದಲ್ಲಿ ಅಬೋಲಿನ, ಆಟ, ಬೇನ್ಯಾ ಎಂಬೆಲ್ಲಾ ಕತೆಗಳನ್ನು ಬರೆದದ್ದು ನಿಜವಾದರೂ ನೀವು ಮತ್ತು ನಿಮ್ಮ ಕತೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದದ್ದು ದೀಪಾವಳಿ ವಿಶೇಷಾಂಕಗಳಲ್ಲಿ. ಯುಗಾದಿಯ ವಿಶೇಷ ಸಂಚಿಕೆಗಳಲ್ಲಿ ಮತ್ತು ನಾಲ್ಕೈದು ವರ್ಷಗಳಿಗೆ ಒಂದರಂತೆ ಪ್ರಕಟವಾಗುತ್ತಿದ್ದ ಸಂಕಲನಗಳಲ್ಲಿ. ಸಾಹಿತ್ಯಲೋಕ ಪ್ರವೇಶಿಸಿದ ಐವತ್ತಮೂರು ವರ್ಷಗಳ ಈ ಅವಧಿಯಲ್ಲಿ ನೀವು ಬರೆದದ್ದು ಐವತ್ತೊಂದು ಕತೆ. ಇತ್ತೀಚಿನ ಎರಡು ವರ್ಷಗಳನ್ನು ಬಿಟ್ಟು ಲೆಕ್ಕ ಹಾಕಿದರೆ ಸರಿಯಾಗಿ ವರ್ಷಕ್ಕೆ ಒಂದು ಕತೆ.

ಕತೆಯಾದಳು ಹುಡುಗಿ ಎಂಬ ವಿಪರೀತ ಅನ್ನುವಷ್ಟು ಚೆಂದಕ್ಕಿರುವ ಕತೆ ಬರೆದವರು ನೀವು. ಅದರಲ್ಲಿ ಜಾನಕಿ ಎಂಬಾಕೆಯ ಕತೆ ಎಷ್ಟೊಂದು ಚೆನ್ನಾಗಿ ಅನಾವರಣಗೊಂಡಿದೆ. ಒಂದು ಯಾತನೆ, ಹಿಡಿ ಸಂತೋಷ, ಮಾತಲ್ಲಿ ವಿವರಿಸಲಾರದ ದುಃಖ ಎಲ್ಲ ಅಂದರೆ ಚಿತ್ತಾಲ ಎಂದರೆ ಸಾಕು- ಕಣ್ಣೆದುರು ಚೆಂದದ ಹುಡುಗಿಯ ರೂಪದಲ್ಲಿ ಧುತ್ತನೆ ಬಂದು ನಿಂತು ಬಿಡುತ್ತದೆ, ಈಗಲೂ !

ಉತ್ತರ ಕನ್ನಡದ ಪುಟ್ಟ ಗ್ರಾಮ ಹನೇಹಳ್ಳಿಯವರು ನೀವು. ಪಾಲಿಮರ್‌ ಟೆಕ್ನಾಲಜಿ ಓದಿ, ಮುಂಬಯಿಗೆ ಹೋದಿರಿ. ನೀವು ಬಾಳಿದ್ದು, ಬೆಳೆದದ್ದು ಎರಡೂ ಅಲ್ಲೇ. ಮುಂಬಯಿಯಲ್ಲಿ ಕೂತೇ ನೀವು ಹನೇಹಳ್ಳಿ ಎಂಬ ಪುಟಾಣಿ ಹಳ್ಳಿಗೂ ಸಮುದ್ರದಂಥ ಮುಂಬಯಿಗೂ ಕತೆಯ ಸೇತುವೆ ಕಟ್ಟಿದಿರಿ ಎಂಬುದು ನಿಜವಾದರೂ ಯಾಕೋಪ್ಪ...ನಿಮ್ಮ ಕಥನ ಭಾಷೆ ಕನ್ನಡಿಗರಿಗೆ ಪರಮಾಪ್ತ ಎನಿಸಲೇ ಇಲ್ಲ. ಅದು ಕಾರ್ನಾಡರ ಭಾಷೆಯ ಥರವೇ ಅಪರಿಚಿತ ಮತ್ತು ಆತ್ಮೀಯ ! ಚಿತ್ತಾಲರು ವಿಮರ್ಶಕರ ಪಾಲಿಗೆ ದಾರಿಯಿಲ್ಲದ ದೂರದ ಬೆಟ್ಟ . ಆದರೆ ಅದೇ ಚಿತ್ತಾಲರು ಓದುಗರ ಪಾಲಿಗೆ ಮೂರು ದಾರಿಗಳನ್ನೂ ಅಲ್ಲೆಲ್ಲ ಹೊಸ ಹೊಳಹುಗಳನ್ನೂ ಮಿಂಚಿಸುವ ಅಪರೂಪದ ಕತೆಗಾರ ಎಂಬ ಮಾತು ಕೇಳಿ ಬರೋದು ಇದಕ್ಕೇನಾ... ನಂಗೆ ಅರ್ಥವಾಗಿಲ್ಲ , ಈವತ್ತಿಗೂ !

ಒಂದು ಸಂದರ್ಭದಲ್ಲಿ ನೀವೇ ಬರೆದಿರಿ: ‘ನನ್ನ ಕಾದಂಬರಿ ಪುರುಷೋತ್ತಮ ಎರಡನೇ ಮುದ್ರಣವನ್ನು, ಶಿಕಾರಿ ಆರನೇ, ಮೂರು ದಾರಿಗಳು ನಾಲ್ಕನೇ, ಛೇದ ಮೂರನೇ ಮುದ್ರಣ ಕಾಣುತ್ತಿವೆ. ಇದು ನಿಜಕ್ಕೂ ಖುಷಿಯ ವಿಚಾರ...'

ಬೇಸರ ಮಾಡಿಕೋ ಬೇಡಿ ಸರ್‌, ನನಗನಿಸಿದ್ದು ಹೇಳ್ತೀನಿ ಕೇಳಿ- ನಿಮ ಹೆಸರನ್ನು ಮುಗಿಲೆತ್ತರಕ್ಕೆ ಏರಿಸಿದ್ದು ಶಿಕಾರಿ ಶಿಕಾರಿ ಮತ್ತು ಶಿಕಾರಿ.

ಚಿತ್ತಾಲರನ್ನು ಗುರುತಿಸಬೇಕು ಅನ್ನುವವರಿಗೆ ಶಿಕಾರಿಯೇ ತೋರುಗಂಭ. ಅದೇ ದಾರಿದೀಪ. ಅದೇ ತೋರುಬೆರಳು. ಶಿಕಾರಿಗಿಂತ ಹದಿನೈದು ವರ್ಷ ಮೊದಲೇ ಬರೆದ ಕಾದಂಬರಿಯನ್ನು ಯಾಕೋಪ್ಪ, ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಪುರುಷೋತ್ತಮದ ಮೇಲೆ ನಿಮಗೆ ದೊಡ್ಡ ಪ್ರೀತಿ ಇದ್ದಿರಬಹುದು. ಆದರೆ, ಅದು ಅತ್ಯುತ್ತಮ ಕಾದಂಬರಿ ಆಗಲಿಲ್ಲ. ಛೇದದಲ್ಲಿ ಬಳಸಿದ ಪತ್ತೇದಾರಿ ತಂತ್ರ ಶಿಕಾರಿಯಷ್ಟು ಸಲೀಸಾಗಿ ನಿಮಗೆ ಸಿದ್ಧಿಸಲಿಲ್ಲ. ಕತೆಗಳೂ ಕೂಡ ಕತೆಯಾದಳು ಹುಡುಗಿ ನಂತರದ ನಾಲ್ಕು ಮತ್ತೊಂದರ ಹಾಗೆ ಕಾಣಿಸಿದವು. ಸರ್‌, ಹೀಗೆಲ್ಲಾ ಹೇಳಿಬಿಟ್ಟೆ ಅಂತ ಸಿಟ್ಟಿಲ್ಲ ತಾನೇ ?

ಒಂದಷ್ಟು ಕತೆ, ಕಾದಂಬರಿ ಬರೆಯೋದು, ಅವುಗಳಲ್ಲಿ ಒಂದೆರಡಕ್ಕೆ ಪ್ರಶಸ್ತಿ ಬಂದರೆ ಸಾಕು, ಬೆಂಗಳೂರಲ್ಲಿ ಸ್ವಂತ ಮನೆ ಮಾಡಿಕೊಳ್ಳುವುದು- ನಮ್ಮ ಸಾಹಿತಿಗಳೆಲ್ಲರ ಏಕಮೇವಾದ್ವಿತೀಯ ಬಯಕೆ ಇದು. ಒಂದಲ್ಲ ಎರಡಲ್ಲ, ಐದು ದೊಡ್ಡ ಪ್ರಶಸ್ತಿಗಳು ಮಡಿಲಿಗೆ ಬಿದ್ದಾಗ ಕೂಡ ನೀವು ಅದ್ಯಾಕೆ ಬೆಂಗಳೂರಿಗೆ ಬಾರದೆ ಮುಂಬಯಿಯಲ್ಲೇ ಉಳಿದಿರಿ ? ಪ್ರಗತಿಶೀಲರ ಹುಸಿಮುನಿಸು, ಬಂಡಾಯದವರ ಸುಳ್ಳು ಸುಳ್ಳೇ ಕೋಪ ಎರಡನ್ನೂ ಮೀರಿ ನಿಮ್ಮ ಕತೆಗಳು ನಿಂತಿದ್ದ ಸಂದರ್ಭದಲ್ಲಿ ಕೂಡ ಅದೇಕೆ ಜನ ನನ್ನ ಕತೆಗಳನ್ನು ಓದುತ್ತಾರಾ ? ಸ್ಪಂದಿಸುತ್ತಾರಾ ? ಮೆಚ್ಚುತ್ತಾರಾ ? ಹೌದು ಅನ್ನುವುದಾದರೆ ಅದೇಕೆ ನನ್ನ ಕೃತಿಗಳ ಮೇಲೆ ದೊಡ್ಡ ವಿಮರ್ಶೆ ಬಂದಿಲ್ಲ ಎಂದೆಲ್ಲ ಪ್ರಶ್ನಿಸುತ್ತಾ ಕೂತಿರಿ ?

ನಾಡಿದ್ದು ಬರ್ತೀರಲ್ಲ ಬೆಂಗಳೂರಿಗೆ... ಆಗ ನೀವು ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೂ ಚಿಂತೆಯಿಲ್ಲ. ಆದರೆ ಸಾರ್‌, ಶನಿವಾರದ ಕಾರ್ಯಕ್ರಮದಲ್ಲಿ ಭಾಷಣ ಮಾಡೋಕೆ ನಿಲ್ತೀರಲ್ಲ ಆಗ - ಒಂದು ಕತೆ ಹೇಳುತ್ತೇನೆ. ಯಾಕೆ ಹೇಳುತ್ತೇನೋ ಗೊತ್ತಿಲ್ಲ , ನಿಮಗೆಲ್ಲ ಹೇಳಬೇಕು ಅನ್ನಿಸಿದ್ದರಿಂದಲೇ ಹೇಳುತ್ತೇನೆ, ಎನ್ನಲು ಮರೆಯಬೇಡಿ. ಮುಂಬಯಿ ಮೇಲಿನ ಪ್ರೀತಿಯಲ್ಲಿ ಬೆಂಗಳೂರ ಟ್ರಾಫಿಕ್ಕು, ಗಜಿಬಿಜಿ, ನಿಮ್ಮಷ್ಟೇ ಆಕಸ್ಮಿಕವಾಗಿ ಬಂದು ಬಿಡುವ ಸೋನೆ ಮಳೆ, ಢಿಕ್ಕಿ ಹೊಡೆದೇ ಬಿಟ್ಟಂತೆ ಹಾದು ಹೋಗುವ ಆಟೋ ರಿಕ್ಷಾಗಳ ಮೇಲೆ ಮುನಿಯಬೇಡಿ. ಮತ್ತೆ ಮತ್ತೆ ಕೇಳ್ತಿದೀನಿ. ನಾಡಿದ್ದಿನ ಭಾಷಣದಲ್ಲಿ ದಯವಿಟ್ಟು ಜಾನಕಿಯ ಕಥೆ ಹೇಳಿ. ನಿಮ್ಮ ಚಿತ್ತು ಚಿತ್ತು ಅಕ್ಷರಗಳಲ್ಲೇ ಕಥೆಯಾದಳಲ್ಲ ಹುಡುಗಿ... ಅದೇ ಜಾನಕಿಯ ಕಥೆಯನ್ನು !ತಿಳಿದವರಿಗೆ ಹೆಚ್ಚಿಗೆ ಬರೆಯಲು ಶಕ್ತನಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Open letter to Kannada novelist Yashavantha chittala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more