ನ್ಯಾಯಾಧೀಕರಣದತ್ತ ಹರಿದ ಮಹದಾಯಿ ವಿವಾದ
ಕರ್ನಾಟಕದ ರೈತ ಸಮುದಾಯ ಬಳಸಲು ಬಯಸುತ್ತಿರುವುದು ಇದಿಷ್ಟೂ ನೀರನ್ನಲ್ಲ. ಮಲಪ್ರಭೆಗೆ ಕೊರತೆಯಿರುವ 16 ಟಿಎಂಸಿ ನೀರನ್ನು ಮಾತ್ರ. ಕರ್ನಾಟಕ ಸರ್ಕಾರ ತನ್ನ ಯೋಜನೆಯಲ್ಲಿ ಕೇಳಿದ್ದು ಕುಡಿಯುವ ಸಲುವಾಗಿ 7.56 ಟಿಎಂಸಿ, ಕಾಳಿ ನದಿ ಯೋಜನೆಗಾಗಿ 5.25, 15 ಟಿಎಂಸಿ ಮಹದಾಯಿ ಪಾತ್ರದಲ್ಲಿ ಜಲವಿದ್ಯುತ್ ಯೋಜನೆಗಾಗಿ 15 ಟಿಎಂಸಿ ಸೇರಿದಂತೆ ಒಟ್ಟಾಗಿ 24 ಟಿಎಂಸಿ ನೀರನ್ನು ಬಳಸಲು ಸರ್ಕಾರ ಯೋಜನೆಯನ್ನು ರೂಪಿಸಿ ಅಷ್ಟನ್ನು ಬೇಡಿತು. ಇದುವರೆವಿಗೂ ಕರ್ನಾಟಕ ಸರ್ಕಾರ ನೀರಾವರಿಗಾಗಿ ಮಹದಾಯಿ ನೀರು ಬೇಕೆಂಬುದಾಗಿ ಎಲ್ಲಿಯೂ ಕೇಳಿರಲಿಲ್ಲ ಎನ್ನುತ್ತಾರೆ ಹೋರಾಟಗಾರರು.
ನಮ್ಮ ರಾಜ್ಯಕ್ಕೆ ಪರಿಶೀಲನೆಗೆ ಭೇಟಿ ಕೊಟ್ಟ ಅಧಿಕಾರಿಗಳ ತಂಡ, ಯಾಕಾಗಿ ನೀವು ಕಾಲುವೆ ತೋಡುತ್ತಿದ್ದೀರಿ ಎಂದಾಗ ಸರ್ಕಾರವು ಕಳಸಾ ನಾಲೆಯಿಂದ ಬರುವ ಹೆಚ್ಚುವರಿ ನೀರಿಗಾಗಿ ಎಂದಿತ್ತು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಲ್ಲೊಂದು ತಡೆಗೋಡೆಯನ್ನು ಕಟ್ಟಿತು. ಆ ಮೂಲಕ ಸಾಂಕೇತಿಕವಾಗಿ ತಾನು ನೀರನ್ನು ಅಕ್ರಮವಾಗಿ ಹರಿಸುವುದಿಲ್ಲ ಎಂಬುದನ್ನು ಸಾರಿತು.
ಇದೇ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರು ನೀರಾವರಿಗಾಗಿ ನೀರನ್ನು ಸರ್ಕಾರ ಕೇಳಿಲ್ಲದಿರುವುದನ್ನು ಗಮನಕ್ಕೆ ತಂದಾಗ ಬೇಡಿಕೆ ಇಟ್ಟಲ್ಲಿ ಪರಿಗಣಿಸಬಹುದು ಎಂದಾಗ, ಬೇಡಿಕೆಗೆ ತಿದ್ದುಪಡಿಯನ್ನು ಮಾಡಿಸಲಾಯಿತು. ನದಿನೀರು ಹಂಚಿಕೆಯಲ್ಲಿ ಆದ್ಯತೆಯ ಲೆಕ್ಕದಲ್ಲಿ ಮೊದಲಿಗೆ ಕುಡಿಯುವ ನೀರು, ನಂತರ ವ್ಯವಸಾಯ, ಮೀನುಗಾರಿಕೆ, ಜಲಸಾರಿಗೆ ಮತ್ತು ಕೈಗಾರಿಕೋದ್ಯಮ ಬರುತ್ತದೆ.

ಇದರ ಅರ್ಥ ನೀರಾವರಿಗೆ ಕೇಳಬಾರದು ಅಂತೇನಿಲ್ಲ. ಕರ್ನಾಟಕದ ಬೇಡಿಕೆಯಲ್ಲಿ ನೀರಾವರಿಯನ್ನು 2014ರ ಡಿಸೆಂಬರ್ ತಿಂಗಳಲ್ಲಿ ಸೇರಿಸಲಾಯ್ತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅದುವರೆವಿಗೆ ಆಗಿದ್ದ ಕಳಸಾ ಬಂಡೂರ ನಾಲೆಯ ಕಾಮಗಾರಿ ನಿಂತುಹೋಯಿತು.
ಮಹದಾಯಿ ನ್ಯಾಯಾಧೀಕರಣವನ್ನು 2010ರಲ್ಲಿ ಶುರುಮಾಡಿ ಅದಕ್ಕೆ ಆರು ವರ್ಷಗಳ ಕಾಲಾವಧಿಯನ್ನು ನೀಡಲಾಯಿತು. ಬಹುದಿನಗಳ ಕಾಲ ನ್ಯಾಯಾಧೀಕರಣಕ್ಕೆ ಸೂಕ್ತ ಸವಲತ್ತುಗಳನ್ನು ಒದಗಿಸದ ಕಾರಣ ವಿಚಾರಣೆಯೇ ಮಂದಗತಿಯಲ್ಲಿ ಸಾಗುತ್ತಿತ್ತು. ಇದೇ ಹೊತ್ತಿನಲ್ಲಿ ನರಗುಂದ ಭಾಗದ ರೈತರು "ರೈತ ಸೇನೆ ಕರ್ನಾಟಕ"ದ ಹೆಸರಿನ ಸಂಘಟನೆಯನ್ನು ಮಾಡಿಕೊಂಡು ಮಹದಾಯಿ ನೀರಿಗಾಗಿ ಹೋರಾಟ ಶುರುಮಾಡಿತು. ಈ ಹೋರಾಟ ಸಮಿತಿಯ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಕ್ಟೋಬರ್ 3, 2013ರಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಲಾಗಿ ನ್ಯಾಯಾಧೀಕರಣದ ಚಟುವಟಿಕೆ ಚುರುಕುಗೊಂಡಿತು. ಇದಾದ ನಂತರ ರೈತಸೇನೆ ತನ್ನ ಅರ್ಜಿಯನ್ನು ಹಿಂಪಡೆಯಿತು.












Click it and Unblock the Notifications