RCB: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡಿಕೆಶಿ - ವಿಜಯ್ ಮಲ್ಯ ಬೆಂಬಲ, ಅಚ್ಚರಿಯ ಟ್ವೀಟ್ ವೈರಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕಘಟ್ಟವನ್ನು ತಲುಪಿದೆ. 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಫೈನಲ್‌ಗೆ ತಲುಪಿದೆ. ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡವು ಕ್ವಾಲಿಫೈಯರ್ -1 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭಾರಿ ಗೆಲುವು ಸಾಧಿಸಿ ನೇರವಾಗಿ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ. ಇದೀಗ ಮತ್ತೆ ಮೇ 31ರ ಭಾನುವಾರದಂದು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ. ಆರ್‌ಸಿಬಿ ಗೆಲುವು ಸಾಧಿಸಲಿ ಎಂದು ಹಲವರು ಶುಭಕೋರಿದ್ದಾರೆ. ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಕೋರಿದ್ದಾರೆ.

ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿ.ಕೆ ಶಿವಕುಮಾರ್ ಅವರು, ಹಾಲಿ ಚಾಂಪಿಯನ್‌ಗಳಿಗೆ ಶುಭವಾಗಲಿ! ಇದು ಆರ್‌ಸಿಬಿ ಹೊಸ ಅಧ್ಯಾಯ. ಮೊದಲ ಪಂದ್ಯದಿಂದ ಫೈನಲ್‌ವರೆಗೆ, ಆರ್‌ಸಿಬಿ ತನ್ನ ದೃಢನಿಶ್ಚಯ, ಶಿಸ್ತು ಮತ್ತು ಅಸಾಧಾರಣ ತಂಡವಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ತಂಡವು ಮತ್ತೊಮ್ಮೆ ಬೆಂಗಳೂರನ್ನು ಹೆಮ್ಮೆಪಡುವಂತೆ ಮಾಡಿದೆ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಭರವಸೆ ಮತ್ತು ಆಚರಣೆಯಲ್ಲಿ ಒಂದುಗೂಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
#IPLFinal2026 ಗಾಗಿ ಶುಭ ಹಾರೈಸುತ್ತೇನೆ. ಇಂದಿನ ಪಂದ್ಯವು ನಮ್ಮ ಬೆಂಗಳೂರಿಗೆ ಮತ್ತೊಂದು ಅದ್ಭುತ ವಿಜಯದೊಂದಿಗೆ ಕೊನೆಗೊಳ್ಳಲಿ ಮತ್ತು ಕರ್ನಾಟಕದಾದ್ಯಂತ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನು ತರಲಿ. #PlayBold #NammRCB ಎಂದೂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಭಾವಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸೋಶಿಯಲ್ ಮೀಡಿಯಾ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಸಹ ಮಜವಾದ ರಿಪ್ಲೈ ಕೊಟ್ಟಿದ್ದಾರೆ. ಈ ಸಲ ಸಿಎಂ ನಿಮ್ದು.. ಈ ಸಲ ಕಪ್ ನಮ್ದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ದುರಾಸೆ ಇಲ್ಲದಿದ್ದರೆ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯಬೇಕಿತ್ತು ಎಂದೂ ಕೆಲವರು ಹೇಳಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು, ಆರ್‌ಸಿಬಿ ನಮ್ಮ ಬೆಂಗಳೂರಿನ ಹೆಮ್ಮೆ. ಫೈನಲ್‌ವರೆಗೆ ತಲುಪಲು ತಂಡ ತುಂಬಾ ಕಷ್ಟಪಟ್ಟಿದೆ. ಈಗ ಟ್ರೋಫಿ ಗೆಲ್ಲೋಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಪ್ಲೇ ಬೋಲ್ಡ್ ಎಂದು ಮತ್ತೊಮ್ಮೆ ಜೋರಾಗಿ ಘರ್ಜಿಸಿ. ನಿಮ್ಮಿಗೆ ಶುಭವಾಗಲಿ. ದೇವರು ಆಶೀರ್ವದಿಸಲಿ. ನಮ್ಮ ಬೆಂಗಳೂರಿನ ಸಿಂಹಗಳಂತೆ ಮೈದಾನದಲ್ಲಿ ಧೈರ್ಯವಾಗಿ ಆಡಿರಿ ಎಂದು ಶುಭಕೋರಿದ್ದಾರೆ.














Click it and Unblock the Notifications