ಕಳಸಾ ಬಂಡೂರಿ ಯೋಜನೆ ಹುಟ್ಟಿದ ಕಥೆ
ಎಸ್.ಎಂ ಕೃಷ್ಣ ಅವರ ಸರ್ಕಾರ ಅಧಿಕಾರಕ್ಕೆ ಬಂದು ಎಚ್.ಕೆ ಪಾಟೀಲರು ನೀರಾವರಿ ಸಚಿವರಾದ ನಂತರ ಮಹದಾಯಿ ನದಿಗೆ ತಿರುವು ಕೊಡುವುದಕ್ಕೆ ಗೋವಾ ಎತ್ತಿದ ತಕರಾರನ್ನು ಪರಿಗಣಿಸಿ, ಕಡೆಯ ಪಕ್ಷ ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವು ಊರುಗಳ ಜನರಿಗೆ ಕುಡಿಯುವ ನೀರಿಗಾದರೂ ಅನುಕೂಲವಾಗಲೆಂದು ಯೋಜನೆ ರೂಪಿಸಲಾಯಿತು.
ಕರ್ನಾಟಕವು ತನ್ನ ನೆಲದಲ್ಲಿ ಹುಟ್ಟಿ ಮಹದಾಯಿಗೆ ಸೇರುವ ಸುಮಾರು ಹದಿನೆಂಟು ತೊರೆಗಳಲ್ಲಿ ಕೆಲವುಗಳನ್ನು ಜಾಲವಾಗಿಸಿ, ಬಂಡೂರಾ ನಾಲಾ, ಸಿಂಗಾರ ನಾಲಾ ಮತ್ತು ನರ್ಸಾ ನಾಲೆಗಳಿಂದ ನೀರನ್ನು ಬಂಡೂರಾ ಸಮೀಪದ ಕಟ್ಟಲಾಗುವ ಅಣೆಕಟ್ಟೆಗೆ ಹರಿಸಿ ಅಲ್ಲಿಂದ ಮಲಪ್ರಭ ನದಿಗೆ ಸೇರಿಸುವ ಯೋಜನೆಯನ್ನೂ ರೂಪಿಸಲಾಯಿತು. ಇದಕ್ಕಾಗಿ ಬಂಡೂರಿಯಲ್ಲೊಂದು ಅಣೆಕಟ್ಟೆ ಕಟ್ಟುವುದೆಂದು ತೀರ್ಮಾನಿಸಲಾಯಿತು. ಇದರಿಂದಾಗಿ ಕಳಸಾ ನಾಲೆಯಿಂದ 3.56 ಟಿಎಂಸಿ (ಕಳಸಾದಿಂದ 2.16 ಟಿಎಂಸಿ, ಸುರ್ಲಾ ನಾಲೆಯಿಂದ 0.55 ಹಲ್ತಾರದಿಂದ 0.85 ಟಿಎಂಸಿ) ಹಾಗೂ ಬಂಡೂರಿಯಿಂದ 4 ಟಿಎಂಸಿ ನೀರನ್ನು ಪಡೆಯಲು ಯೋಜಿಸಲಾಯ್ತು. ಇದಕ್ಕಾಗೆ ಕಳಸ ಮತ್ತು ಬಂಡೂರಿ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಯ್ತು.

ಕಾಲಾಂತರದಲ್ಲಿ ಇದಕ್ಕೆ ದೊರೆತ ಹುಸಿಪ್ರಚಾರದಿಂದಾಗಿ ಮಹದಾಯಿ ಯೋಜನೆ ಎರಡೂ ರಾಜ್ಯಗಳಲ್ಲಿ ರಾಜಕೀಯ ಬಣ್ಣ ಪಡೆದುಕೊಂಡು ಇದನ್ನು ಗೋವಾ ವಿರೋಧಿಸಲು ಮುಂದಾಯಿತು. ಮಹದಾಯಿಯಲ್ಲಿರುವ 210 ಟಿಎಂಸಿ ನೀರಲ್ಲಿ ಕರ್ನಾಟಕದ ನ್ಯಾಯಯುತವಾದ ಪಾಲು 45 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ಗೋವಾ ತಕರಾರು ಎತ್ತುತ್ತಿರುವುದಕ್ಕೆ - ಈ ಯೋಜನೆಯಿಂದಾಗಿ ಗೋವಾದ ಜೈವಿಕ ವೈವಿಧ್ಯಕ್ಕೆ ಧಕ್ಕೆ ತರುವಂತೆ ಅರಣ್ಯ ನಾಶವಾಗಲಿದೆ ಎನ್ನುವುದು, ಗೋವಾದ ಸಾಂಪ್ರದಾಯಿಕ ಸಿಹಿ ನೀರು ಮೀನುಗಾರಿಕೆಗೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖವಾದ ಕಾರಣಗಳಾಗಿದ್ದವು.
ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ (ನೀರಾ) ಸಂಸ್ಥೆಯು ಅಧ್ಯಯನ ನಡೆಸಿ ಕರ್ನಾಟಕದ ಈ ಯೋಜನೆ ಪರಿಸರಕ್ಕೆ ಹಾನಿ ಮಾಡದೆಂದು ವರದಿಯನ್ನು ನೀಡಿತು. ಇದಕ್ಕೆ ಗೋವಾ ತಕರಾರು ಎತ್ತಿ ಸದರಿ ಅಧ್ಯಯನವನ್ನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಒಶನಾಲಜಿ ಸಂಸ್ಥೆಯೇ ಮಾಡಬೇಕೆಂದಿತು. ಆ ಸಂಸ್ಥೆಯೂ ಕೂಡಾ ನೀರಾ ವರದಿಯನ್ನು ಅಕ್ಷರಶಃ ಅನುಮೋದಿಸಿತು. ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಅನುಮೋದನೆಯನ್ನು ತಡಮಾಡುವ ತಂತ್ರವನ್ನು ಬಳಸಲಾಯಿತು. ಒಂದು ಹಂತದಲ್ಲಿ ಗೋವಾ ಅರಣ್ಯ ಇಲಾಖೆಯ ಅನುಮೋದನೆಯನ್ನು ಕರ್ನಾಟಕಕ್ಕೆ ತಲುಪಿಸುವುದನ್ನು ಕೂಡಾ ವಿಳಂಬಿಸುವ ಕುತಂತ್ರ ಮಾಡಿತು ಎನ್ನುತ್ತಾರೆ ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಎಚ್. ಕೆ ಪಾಟೀಲರು.
ಕರ್ನಾಟಕವು ಕೇಂದ್ರ ಸರ್ಕಾರದ ಜೊತೆ ನಿರಂತರ ಸಂವಾದ ನಡೆಸಿ ಅನುಮತಿಯನ್ನು ಪಡೆದುಕೊಂಡಿತು. ಕೇಂದ್ರದ ಅಟಲ್ ಬಿಹಾರಿ ವಾಜಪೇಯಿಯವರ ಮುಂದಾಳ್ತನದ ಸರ್ಕಾರ ಕುಡಿಯುವ ನೀರಿಗಾಗಿ ಸದ್ಯಕ್ಕೆ 7.56 ಟಿಎಂಸಿ ನೀರು ಬಳಸಿಕೊಳ್ಳುವ ಕಳಸಾ ಬಂಡೂರ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತು. ಅದರಂತೆ ಮುಂದೆ ನದಿ ನೀರು ಹಂಚಿಕೆಯಾದಾಗ ದೊರೆಯುವ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿಯನ್ನು ಕಳೆದುಕೊಂಡು ಬಾಕಿ ಹಂಚಿಕೆ ಮಾಡಬಹುದು, ಮಾನ್ಸೂನ್ ಋತುವಿನಲ್ಲಿ ಮಾತ್ರ ನೀರನ್ನು ಹರಿಸಿಕೊಳ್ಳಬಹುದೆಂಬ ಕರಾರುಗಳು ಅದರಲ್ಲಿತ್ತು.

ಆದರೆ ಗೋವಾ ರಾಜ್ಯವು ಎಲ್ಲಾ ವೈಜ್ಞಾನಿಕ ಅಧ್ಯಯನದ ವರದಿಗಳ ಮೇಲೂ ಅವಿಶ್ವಾಸ ವ್ಯಕ್ತಪಡಿಸುತ್ತಾ ಯೋಜನೆಯನ್ನು ವಿರೋಧಿಸಿತು. ಈ ವಿರೋಧದ ಕಾರಣದಿಂದಾಗಿ ತಾನೇ ನೀಡಿದ್ದ ತಾತ್ವಿಕ ಒಪ್ಪಿಗೆಯನ್ನು ನಾಲ್ಕೇ ತಿಂಗಳ ಅಂತರದಲ್ಲಿ ಭಾರತ ಸರ್ಕಾರ ವಾಪಸ್ಸು ಪಡೆದುಕೊಂಡಿತು. ಇದಾದ ನಂತರ ಗೋವಾ ನಿರಂತರವಾಗಿ ವಿರೋಧ ತೋರಿಸುತ್ತಲೇ ನದಿನೀರು ಹಂಚಿಕೆಗಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವಂತೆ ಬೇಡಿಕೆಯಿಟ್ಟಿತು.
ಇತ್ತ ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷಗಳ ಜಂಟಿ ಸರ್ಕಾರ ಕುಮಾರಸ್ವಾಮಿಯವರ ಮುಂದಾಳ್ತನದಲ್ಲಿ ಅಧಿಕಾರಕ್ಕೆ ಬಂತು. ಅಂದು ನೀರಾವರಿ ಮಂತ್ರಿಗಳಾಗಿದ್ದ ಕೆಎಸ್ ಈಶ್ವರಪ್ಪನವರು 2006ರಲ್ಲಿ ಕಣಕುಂಬಿಯಲ್ಲಿ ಕಳಸಾ ಬಂಡೂರಾ ನಾಲೆಯ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿದರು.
ಇದುವರೆವಿಗೆ ಕರ್ನಾಟಕ ಸರ್ಕಾರವೂ ಕೂಡಾ ಮಹದಾಯಿಯ ನೀರನ್ನು ಕೃಷಿಗಾಗಿ ಎಂಬುದಾಗಿ ಎಲ್ಲಿಯೂ ಕೇಳಿಲ್ಲದಿರುವುದರಿಂದ ಇದನ್ನು ಬರಿಯ ಕುಡಿಯುವ ನೀರಿನ ಯೋಜನೆಯೆಂದೇ ಪರಿಗಣಿಸುವಂತಾಯ್ತು. ಕಣಕುಂಬಿಯಲ್ಲಿನ ಶಂಕುಸ್ಥಾಪನೆಯಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತೆ ದೂರನ್ನು ಒಯ್ದಿತು. ಮೂರೂರಾಜ್ಯಗಳ ಒಪ್ಪಿಗೆಯ ನಂತರ, 2009ರಲ್ಲಿ ಮಹದಾಯಿ ನದಿನೀರು ಹಂಚಿಕೆಗಾಗಿ ನ್ಯಾಯಾಧೀಕರಣವನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತು. ಇದರಂತೆ ಭಾರತ ಸರ್ಕಾರ 2010ರಲ್ಲಿ ನ್ಯಾಯಾಧೀಕರಣದ ಸ್ಥಾಪನೆಯನ್ನೂ ಮಾಡಿತು.












Click it and Unblock the Notifications