ಬೆಂಗಳೂರಲ್ಲಿ ಖಾಲಿ ಜಾಗಗಳಲ್ಲಿ ಕಸ ಸುರಿವವರ ವಿರುದ್ಧ ಕಠಿಣ ಕ್ರಮ: ನಗರ ಪಾಲಿಕೆಯಿಂದ ಎಚ್ಚರಿಕೆ
Bengaluru: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ಕಣ್ಣಿಟ್ಟಿವೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪೂರ್ವ ನಗರ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿ ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದ ಸರ್ವೇ ನಂ.130, 131 ಹಾಗೂ 142ಕ್ಕೆ ಹೊಂದಿಕೊಂಡಿರುವ ದಕ್ಷಿಣ ಪಿನಾಕಿನಿ ನದಿಗೆ ಅಕ್ರಮವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ 6-ವಾಹನಗಳು ವಶಕ್ಕೆ
ಸಾರ್ವಜನಿಕ ದೂರಿನ ಆಧಾರದ ಮೇಲೆ ಇದೇ ಮೇ 29ರಂದು ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ ತ್ಯಾಜ್ಯ ತುಂಬಿರುವ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿರುತ್ತಾರೆ ಹಾಗೂ ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆದುಕೊಂಡಿರಲಾಗಿರುತ್ತದೆ.
ವಶಪಡಿಸಿಕೊಂಡ ವಾಹನಗಳ ಸಂಖ್ಯೆ
ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ;
* KA-07-A-398
* KA-52-B-8275
* KA-53-A-4649
* AP-39-VB-6604
* KA-18-C-6915
* KA-40-A-4837
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಬೆಂಗಳೂರು ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ನೀಡಲಾದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಅಕ್ರಮ ತ್ಯಾಜ್ಯ ವಿಲೇವಾರಿಯ ವಿರುದ್ಧ ಶೂನ್ಯ ಸಹಿಷ್ಣುತೆ
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರಾದ ಡಿ.ಎಸ್. ರಮೇಶ್ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಧಕ್ಕೆಯುಂಟುಮಾಡುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರ ಸಹಕಾರಕ್ಕೆ ಮನವಿ
ನಗರವನ್ನು ಸ್ವಚ್ಛ ಹಾಗೂ ಆರೋಗ್ಯಯುತವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ ಆಯುಕ್ತರು, ಅಕ್ರಮವಾಗಿ ತ್ಯಾಜ್ಯ ಸುರಿಯುವ ವಾಹನಗಳು ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ನಗರ ಪಾಲಿಕೆಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್ , ಆರೋಗ್ಯ ಪರಿವೀಕ್ಷಕರು ಇದ್ದರು.












Click it and Unblock the Notifications