IPL 2026 Final: 50.. 155.. ಆರ್‌ಸಿಬಿಗೆ ಮುಳುವಾದ ಮಾಜಿ ಪ್ಲೇಯರ್ ವಾಷಿಂಗ್ಟನ್ ಸುಂದರ್
RCB Vs GT: ಅಹಮದಾಬಾದ್‌ನಲ್ಲಿ ಭಾನುವಾರ (ಮೇ 31) ನಡೆಯುತ್ತಿರುವ ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ 155 ರನ್ ಕಲೆಹಾಕಿದೆ. ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಬೇಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ತಂತ್ರವು ಅದ್ಭುತವಾಗಿ ಕೆಲಸ ಮಾಡಿತು. ಆರ್‌ಸಿಬಿ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು.

ಗುಜರಾತ್ ಟೈಟಾನ್ಸ್‌ಗೆ ಆರಂಭಿಕ ಆಘಾತ
ಪಂದ್ಯದ ಪವರ್‌ಪ್ಲೇ ಅವಧಿಯಲ್ಲೇ ನಾಯಕ ಶುಭ್‌ಮನ್ ಗಿಲ್ ಹಾಗೂ ಆರಂಭಿಕ ಆಟಗಾರ ಸಾಯಿ ಸುದರ್ಶನ್ ವಿಕೆಟ್ ಒಪ್ಪಿಸಿ ಹೊರನಡೆದಿದ್ದರಿಂದ ಗುಜರಾತ್ ಟೈಟಾನ್ಸ್ ಆರಂಭಿಕ ಆಘಾತ ಅನುಭವಿಸಿತು. ಆದರೆ ಸಿಕ್ಕ ಜೀವದಾನದ ಸಂಪೂರ್ಣ ಲಾಭ ಪಡೆದ ವಾಷಿಂಗ್ಟನ್ ಸುದಂರ್ ಜವಾಬ್ದಾರಿಯುತ ಬ್ಯಾಟಿಂಗ್ ಆಡಿ ಭರ್ಜರಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಏರಿಸಲು ಪ್ರಮುಖ ಪಾತ್ರವಹಿಸಿದರು.
ಮಿಂಚಿದ ಆರ್‌ಸಿಬಿ ಮಾಜಿ ಪ್ಲೇಯರ್
ಗುಜರಾತ್ ಟೈಟಾನ್ಸ್ ಪರ ಬ್ಯಾಟ್ ಬೀಸಿದ ಆರ್‌ಸಿಬಿ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ ಅರ್ಧಶತಕ (50) ಸಿಡಿಸಿ ಮಿಂಚಿದರು. ಈ ಮೂಲಕ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರು. ಉಳಿದಂತೆ ನಾಯಕ ಶುಭ್‌ಮನ್ ಗಿಲ್ 10(8), ಸಾಯಿ ಸುದರ್ಶನ್ 12(12), ನಿಶಾಂತ್ ಸಿಂಧು 20(18), ಅರ್ಷದ್ ಖಾನ್ 15(6) ಗಳಿಸಿದರು. ಉಳಿದವರು ಒಂದಂಕಿ ದಾಟಿಲ್ಲ.
ಆರ್‌ಸಿಬಿ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿ
ರಾಯಲ್ ಚಾಲೆಂಜರ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ರಸಿಖ್ ಸಲಾಮ್ ದಾರ್ 3 ವಿಕೆಟ್ ಕಬಳಿಸಿದರು. ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಅವರು ಒಂದು ವಿಕೆಟ್ ಕಿತ್ತು ಗುಜರಾತ್ ಟೈಟಾನ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಡಿಫೆಂಡಿಂಗ್ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಇತ್ತ ಗುಜರಾತ್ ಟೈಟಾನ್ಸ್ ತಂಡವು ತನ್ನ ಇತಿಹಾಸದ ಎರಡನೇ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಸೆಣಸಾಡುತ್ತಿದೆ.












Click it and Unblock the Notifications