Bengaluru Weather: ಹವಾಮಾನ ವೈಪರೀತ್ಯ! ಸೋಮವಾರ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೇಸಿಗೆ ಬಿಸಿಲು ಅಂತ್ಯಗೊಂಡಿದ್ದು, ಪೂರ್ವ ಮುಂಗಾರು ಮಳೆಯ ಸಿಂಚನದಿಂದ ತಂಪು ವಾತಾವರಣ ಕಂಡು ಬರುತ್ತಿದೆ. ಇಂದು ಭಾನುವಾರ ನಗರದ ಹಲವೆಡೆ ಹಗುರ ಮಳೆ ಆಗಿದೆ. ಸಮುದ್ರ ಭಾಗದಲ್ಲಿ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಜೂನ್ 1ರಂದು (ಸೋಮವಾರ) ಯೆಲ್ಲೋ ಅಲರ್ಟ್ ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಇಂದು ಸಿಂಗಸಂದ್ರ 2 (10.5ಮಿಲಿ ಮೀಟರ್), ಗೊಟ್ಟಿಗೇರಿಯಲ್ಲಿ (10.5ಮಿಲಿ ಮೀಟರ್) ಹಗುರ ಮಳೆ ದಾಖಲಾಗಿದೆ. ಇನ್ನುಳಿದಂತೆ ಬಿಟಿಎಂ ಬಡಾವಣೆ, ಮಾರತ್ತಹಳ್ಳಿ, ಎಚ್‌ಎಸ್‌ಆರ್ ಬಡಾವಣೆ, ವೆಂಕಟಾಪುರ ಸೇರಿದಂತೆ ಸುಮಾರು 17 ವಾರ್ಡ್‌ಗಳಲ್ಲಿ ತುಂತುರು ಮಳೆ ದಾಖಲಾಗಿದೆ.

ಇಂದು ಬೆಂಗಳೂರಿನಲ್ಲಿ ಸಂಜೆ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದ್ದು, ಎಚ್‌ಎಎಲ್ ವಿಮಾನ ನಿಲ್ದಾಣ, ನಗರದ ಇತರ ಕಡೆಗಳಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮುಂದಿನ ಎರಡು ದಿನ ಮಂಗಳವಾರ ಜೂನ್ 2ರವರೆಗೆ ನಗರದಲ್ಲಿ ಪೂರ್ವ ಮುಂಗಾರು ಮಳೆ ಚುರುಕಾಗಲಿದೆ.
ಬೆಂಗಳೂರಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್
ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ರಾಜಧಾನಿಯಲ್ಲಿ ಜೂನ್ 1ರಂದು ಭಾರೀ ಮಳೆ ಆಗಲಿದೆ. ಕನಿಷ್ಠ 65 ಮಿಲಿ ಮೀಟರ್ ನಿಂದ ಗರಿಷ್ಠ 110 ಮಿಲಿ ಮೀಟರ್ ವರೆಗೆ ಗುಡುಗು, ಮಿಂಚು ಸಹಿತ ಮಳೆ ಆಗಲಿದ್ದು, ಹವಾಮಾನ ಇಲಾಖೆ ಒಂದು ದಿನ 'ಯೆಲ್ಲೋ ಅಲರ್ಟ್' ಘೊಷಿಸಿದೆ. ಮಾರನೇ ದಿನ ಮಂಗಳವಾರ ಮಳೆ ಪ್ರಮಾಣ ತಗ್ಗಲಿದೆ. ವಾತಾವರಣ ಸಾಮಾನ್ಯವಾಗಿರಲಿದ್ದು, ಗರಿಷ್ಠ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಸಮುದ್ರ ಮಟ್ಟದಲ್ಲಿ ಭಾರೀ ಬದಲಾವಣೆ
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ, ಅಂಡಮಾನ್, ನಿಕೋಬಾರ್ ದ್ವೀಪಗಳ ವ್ಯಾಪ್ತಿಯಲ್ಲಿ ವಾಯು ಚಂಡಮಾರುತ ಸೃಷ್ಟಿಯಾಗಿದೆ. ತಮಿಳುನಾಡು ಕರಾವಳಿ, ಒಡಿಶಾ ಕರಾವಳಿ, ಕೊಮೊರಿಯನ್ ಪ್ರದೇಶಗಳು, ಕೇರಳ ಭಾಗದ ಕರಾವಳಿಗೆ ಸಮೀಪಿಸಿದಂತೆ ಸಮುದ್ರ ಮಟ್ಟದಲ್ಲಿ ಭಾರೀ ಬದಲಾವಣೆಗಳು ಆಗಿವೆ. ವಿವಿಧ ಕಡೆಗಳಲ್ಲಿ ಪ್ರತ್ಯೇಕವಾಗಿ ಟ್ರಫ್, ವಾಯುಭಾರ ಕುಸಿತಗಳು ಸಂಭವಿಸಿವೆ. ಇದು ಮುಂಗಾರು ಮಳೆಯ ಆಗಮನಕ್ಕೆ ಪೂರಕ ವಾತಾವರಣ ನಿರ್ಮಿಸಿವೆ. ಇವುಗಳ ಕಾರಣದಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಜೂನ್ 1ರಂದು ಭಾರೀ ಮಳೆ ನಿರೀಕ್ಷೆ ಇದೆ ಎಂದು ಇಂದಿನ ಹವಾಮಾನ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.













Click it and Unblock the Notifications