ಕೇದಾರನಾಥ ಯಾತ್ರೆ ಮುಗಿಸಿ ‘ಮುಂದಿನ ನಡೆ’ ಬಗ್ಗೆ ಅಚ್ಚರಿಯ ಪೋಸ್ಟ್ ಹಂಚಿಕೊಂಡ ನಟ ಯುವ ರಾಜ್‌ಕುಮಾರ್
'ಯುವ' ಹಾಗೂ 'ಎಕ್ಕ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ದೊಡ್ಮನೆಯ ಕುಡಿ, ನಟ ಯುವ ರಾಜ್‌ಕುಮಾರ್ ಸದ್ಯ ಸಿನಿಮಾ ಬ್ಯುಸಿ ಲೈಫ್‌ನಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಇತ್ತೀಚೆಗಷ್ಟೇ ಪವಿತ್ರ ಕೇದಾರನಾಥ ಯಾತ್ರೆ ಕೈಗೊಂಡಿದ್ದ ಯುವ, ಅಲ್ಲಿ ಭಕ್ತಿಭಾವದಲ್ಲಿ ಮುಳುಗೇಳುವುದರ ಜೊತೆಗೆ ಕೇದಾರನಾಥ ಮಂದಿರದ ಮುಂದೆ ಹೆಮ್ಮೆಯಿಂದ ಕನ್ನಡದ ಬಾವುಟ ಹಾರಿಸಿ ಸುದ್ದಿಯಾಗಿದ್ದರು. ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಡೀ ಯಾತ್ರೆಯ ಅನುಭವ ಹಾಗೂ ಅಭಿಮಾನಿಗಳು ಸತತವಾಗಿ ಕೇಳುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟಿದ್ದಾರೆ.
ಪರ್ವತಗಳು ನೋವು ತಡೆದುಕೊಳ್ಳುವುದನ್ನು ಕಲಿಸುತ್ತವೆ
"ಕೇದಾರನಾಥ ಯಾತ್ರೆಯಿಂದ ನಾನು ಏನು ಕಲಿತೆ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡಾಗ ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಒಂದು ಸಾಲು ನೆನಪಿಗೆ ಬಂತು. ಅದು ನೂರಕ್ಕೆ ನೂರು ನಿಜ ಅನಿಸಿತು. ಕಡಲತೀರಗಳು ನಮಗೆ ನೋವು, ಒತ್ತಡವನ್ನು ಮರೆತು ರಿಲ್ಯಾಕ್ಸ್ ಆಗುವುದನ್ನು ಕಲಿಸಿದರೆ, ಪರ್ವತಗಳು ನಮಗೆ ಜೀವನದ ಕಷ್ಟ, ನೋವು ಮತ್ತು ಒತ್ತಡವನ್ನು ಸಹಿಸಿಕೊಂಡು ಹೇಗೆ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂಬುದನ್ನು ಕಲಿಸಿಕೊಡುತ್ತವೆ. ಈ ಇಡೀ ಪ್ರಯಾಣದಲ್ಲಿ 'ಹರ್ ಹರ್ ಮಹಾದೇವ್' ಎಂಬ ಮಂತ್ರವು ನನ್ನ ದೇಹದ ಪ್ರತಿಯೊಂದು ಅಂಗದಲ್ಲೂ, ಅಲ್ಲಿನ ಪ್ರಕೃತಿಯಲ್ಲಿ, ಪ್ರಾಣಿಗಳಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಧ್ವನಿಸುತ್ತಿತ್ತು" ಎಂದು ಯುವ ಬರೆದುಕೊಂಡಿದ್ದಾರೆ.

ದೇವರ ಸನ್ನಿಧಿಯಲ್ಲಿ ಸಮಯವೇ ಸ್ತಬ್ಧ
ಚಾರಣ ಮುಗಿಸಿ ಕೇದಾರನಾಥ ಮಂದಿರದ ಮುಂದೆ ಬಂದು ನಿಂತ ಕ್ಷಣವನ್ನು ನೆನೆದ ಯುವ, "ನಾವು ಬೇಸ್ ಕ್ಯಾಂಪ್‌ನಿಂದ ಸುದೀರ್ಘ ನಡಿಗೆ ಮುಗಿಸಿ ಮಂದಿರದ ಮುಂದೆ ಬಂದಾಗ ಒಂದು ಕ್ಷಣ ಇಡೀ ಪ್ರಪಂಚವೇ ಸ್ತಬ್ಧವಾದಂತಾಯಿತು. ಅಲ್ಲಿ ಭೂತಕಾಲವೂ ಇರಲಿಲ್ಲ, ಭವಿಷ್ಯತ್ತೂ ಇರಲಿಲ್ಲ; ಕೇವಲ ವರ್ತಮಾನ ಮಾತ್ರ ಇತ್ತು. ನಿಜವಾದ ಅರ್ಥದಲ್ಲಿ ನಾವು ದೇವರ ಸನ್ನಿಧಿಯಲ್ಲಿದ್ದೇವೆ ಎಂದು ಅರಿವಾದಾಗ, ನಮಗೆ ದೇವರಿಂದ ಏನನ್ನೂ ಕೇಳಬೇಕು ಅನಿಸುವುದಿಲ್ಲ, ಯಾವುದೇ ಆಸೆಗಳೂ ಉಳಿಯುವುದಿಲ್ಲ. ಆತನ ಇರುವಿಕೆಯ ಭರವಸೆಯೇ ಸಾಕು. ನನ್ನ ಜೀವನದಲ್ಲಿ ಇಲ್ಲಿಯವರೆಗೆ ನಡೆದ ಪ್ರತಿಯೊಂದು ಘಟನೆ, ತಪ್ಪು-ಒಪ್ಪು, ಒಳ್ಳೆಯದು-ಕೆಟ್ಟದ್ದು ಎಲ್ಲವೂ ನನ್ನನ್ನು ಈ ಜಾಗಕ್ಕೆ ತಂದು ನಿಲ್ಲಿಸಿದೆ. ನನ್ನ ಇಂದಿನ ಸ್ಥಿತಿಗೆ ಕಾರಣವಾದ ಪ್ರತಿಯೊಂದು ನಿರ್ಧಾರವನ್ನೂ ನಾನು ಹೆಮ್ಮೆಯಿಂದ ಮತ್ತೊಮ್ಮೆ ಮಾಡಲು ಸಿದ್ಧನಿದ್ದೇನೆ. ಎಲ್ಲವೂ ಆ ಶಿವನ ಇಚ್ಛೆ" ಎಂದು ಬರೆದುಕೊಂಡಿದ್ದಾರೆ.
ಮೌನದ ನಂತರ ಬರುವ ಶಬ್ದವೇ ಜೋರು
ಹಿಮಾಲಯದ ಮೌನದ ನಡುವೆ ತಮಗಾದ ಮತ್ತೊಂದು ಅದ್ಭುತ ಅನುಭವವನ್ನು ಹಂಚಿಕೊಂಡಿರುವ ಯುವ, "ಕೇದಾರನಾಥದ ಹಿಮಾಲಯ ಪರ್ವತಗಳು, ಸುತ್ತಲಿನ ಜನಸಾಗರ, ಕುದುರೆಗಳು, ಪ್ರಾರ್ಥನೆಗಳು, ದೇವಸ್ಥಾನದ ಗಂಟೆ ಜಾಗಟೆಗಳು ಹಾಗೂ ಹರಿಯುವ ನದಿಯ ಸದ್ದನ್ನು ಸೂಕ್ಷ್ಮವಾಗಿ ಆಲಿಸಿದಾಗ ನನಗೆ ಒಂದು ವಿಷಯ ಅರ್ಥವಾಯಿತು. ಅಲ್ಲಿ ಕೇಳಿಸಿದ ಎಲ್ಲ ಸದ್ದುಗಳಿಗಿಂತಲೂ, 'ಮೌನದ' ನಂತರದ ನಿಶ್ಯಬ್ದದಲ್ಲಿ ಬರುವ ಶಬ್ದವೇ ಅತ್ಯಂತ ಜೋರಾಗಿತ್ತು" ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
ಮುಂದಿನ ಸಿನಿಮಾ ಅಪ್‌ಡೇಟ್
ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಯುವ ಅವರ ಮುಂದಿನ ಮೂರನೇ ಚಿತ್ರದ ಬಗ್ಗೆ ಅಪ್‌ಡೇಟ್ ಕೇಳುತ್ತಲೇ ಇದ್ದಾರೆ. ಇದಕ್ಕೆ ತಮ್ಮ ಪೋಸ್ಟ್‌ನ ಕೊನೆಯಲ್ಲಿ ಖಡಕ್ ಆಗಿಯೇ ಉತ್ತರಿಸಿರುವ ಯುವ, "ನನ್ನ ಮುಂದಿನ ನಡೆ ಏನು? ಮುಂದಿನ ಪ್ರಾಜೆಕ್ಟ್ ಯಾವುದು? ನನ್ನ ಮುಂದಿನ ಉತ್ತರವೇನು? ಎಂದು ಕೇಳುತ್ತಿರುವ ಎಲ್ಲರೂ... ಸದ್ಯಕ್ಕೆ ಈ ಮೌನವನ್ನು ಆನಂದಿಸಿ. ಯಾಕಂದ್ರೆ, ಹರ್ ಹರ್ ಮಹಾದೇವ್" ಎಂದು ಬರೆಯುವ ಮೂಲಕ ಸದ್ಯಕ್ಕೆ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.
ಯುವ ಅವರ ಈ ಪೋಸ್ಟ್ ಇದೀಗ ದೊಡ್ಮನೆ ಅಭಿಮಾನಿಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅವರ ಆಲೋಚನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. "ಸದ್ಯಕ್ಕೆ ಮೌನವಾಗಿದ್ದರೂ, ಮುಂದಿನ ದಿನಗಳಲ್ಲಿ ಶಿವನ ಕೃಪೆಯಿಂದ ಭರ್ಜರಿ ಸಿನಿಮಾದೊಂದಿಗೇ ಯುವ ಎಂಟ್ರಿ ಕೊಡಲಿದ್ದಾರೆ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಡೀ ಯಾತ್ರೆಯ ಅನುಭವ ಹಾಗೂ ಅಭಿಮಾನಿಗಳು ಸತತವಾಗಿ ಕೇಳುತ್ತಿರುವ ಪ್ರಶ್ನೆಗೆ ಸ್ವಾರಸ್ಯಕರವಾದ ಉತ್ತರ ನೀಡಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.













Click it and Unblock the Notifications