ರೈಲು ಪ್ರಯಾಣಿಕರೇ ಗಮನಿಸಿ: ಜೂನ್ ತಿಂಗಳಲ್ಲೂ ರೈಲು ಸಂಚಾರ ವ್ಯತ್ಯಯ, ಪ್ರಯಾಣ ವಿಳಂಬ; ವೇಳಾಪಟ್ಟಿ
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ದಾವಣಗೆರೆ ನಿಲ್ದಾಣದ ಯಾರ್ಡ್‌ನಲ್ಲಿ ಪಾದಚಾರಿ ಮೇಲ್ಸೇತುವೆ (FOB) ಕಾಮಗಾರಿ ನಡೆಸಲಾಗುತ್ತದೆ. ಈ ಸಂಬಂಧ ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತದೆ. ಇದರೊಂದಿಗೆ ರೈಲುಗಳ ಮರು-ವೇಳಾಪಟ್ಟಿ ಪ್ರಟಿಸಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ. ಆದ್ದರಿಂದ ಪ್ರಯಾಣಿಕರು ಸದರಿ ಮಾಹಿತಿ ಗಮನಿಸಿ ಪ್ರಯಾಣ ಪ್ಲ್ಯಾನ್ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ನಿಯಂತ್ರಣಕ್ಕೊಳಪಟ್ಟ ರೈಲುಗಳ ಮಾಹಿತಿ
ವಾಸ್ಕೋ-ಡ-ಗಾಮಾದಿಂದ ಹೊರಡಲಿರುವ ವಾಸ್ಕೋ-ಡ-ಗಾಮಾ -ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ರೈಲು (17310) ಮೇ 31ರಿಂದ ಜೂನ್ 8ರವರೆಗೆ ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಉದಯಪುರ ಸಿಟಿಯಿಂದ ಹೊರಡುವ ಉದಯಪುರ ಸಿಟಿ-ಮೈಸೂರು ಹಮ್ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667) ಜೂನ್ 1ರಂದು ಮಾರ್ಗಮಧ್ಯೆ ಎರಡು ಗಂಟೆ (120 ನಿಮಿಷ) ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ಧಾರವಾಡದಿಂದ ಹೊರಡುವ ಧಾರವಾಡ - ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ದೈನಂದಿನ ಎಕ್ಸ್‌ಪ್ರೆಸ್ ರೈಲು (12726) ಮೇ 31ರಿಂದ ಜೂನ್ 9 ರವರೆಗೆ ಮಾರ್ಗಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಣ ಮಾಡಲಾಗುತ್ತದೆ.
ಅರಸೀಕೆರೆ ನಿಲ್ದಾಣದಿಂದ ಹೊರಡುವ ಅರಸೀಕೆರೆ - ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು (16213) ರೈಲು ಮೇ 31ರಿಂದ ಜೂನ್ 9 ರ ಅವಧಿಯಲ್ಲಿ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಕೆಎಸ್ಆರ್ ಬೆಂಗಳೂರು-ಮೈಸೂರು ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12614) ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಡಲಿದ್ದು, ಮೇ 31ರಿಂದ ಜೂನ್ 9ರವರೆಗೆ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ (ಮರು-ವೇಳಾಪಟ್ಟಿ) ಸಂಚಾರ ಆರಂಭಿಸುತ್ತದೆ.
ಹರಿಹರ- ಹೊಸಪೇಟೆ ಪ್ಯಾಸೆಂಜರ್ ರೈಲು (56529) ಮೇ 31 ಮತ್ತು ಜೂನ್ 9ರ ಅವಧಿಯ ನಡುವೆ ಹರಿಹರ, ಅಮರಾವತಿ ಕಾಲೋನಿ ಮತ್ತು ತೆಲಿಗಿ ನಿಲ್ದಾಣಗಳ ಮಾರ್ಗದ ಮೂಲಕ (ಮಾರ್ಗ ಬದಲಾವಣೆ) ಸಂಚಾರ ಮಾಡಲಿದೆ. ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ರದ್ದುಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಎರಡು ರೈಲುಗಳ ರದ್ದು ಒಂದು ತಿಂಗಳು ವಿಸ್ತರಣೆ
ಲೋಂಡಾ- ಕ್ಯಾಸಲ್ ರಾಕ್ ವಿಭಾಗದಲ್ಲಿ ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಮೀರಜ್-ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ರೈಲು (17333) ಸಂಚಾರವನ್ನು ಮೇ 31ರವರೆಗೆ ಭಾಗಶಃ ರದ್ದುಪಡಿಸಲಾಗಿತ್ತು. ಇದೀಗ ಆ ಅವಧಿಯನ್ನು ಜೂನ್ 01ರಿಂದ 30ರವರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ರೈಲು ಲೋಂಡಾ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ತಿನೈಘಾಟ್ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ರದ್ದುಗೊಂಡಿದೆ.
ಕ್ಯಾಸಲ್ ರಾಕ್-ಮೀರಜ್ ಎಕ್ಸ್‌ಪ್ರೆಸ್ ರೈಲು (17334) ಭಾಗಶಃ ರದ್ದುಪಡಿಸಿದ ಅವಧಿಯನ್ನೂ ಜೂನ್ 01ರಿಂದ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಈ ರೈಲು ಲೋಂಡಾ, ನಿಲ್ದಾಣದಿಂದಲೇ ಪ್ರಯಾಣ ಆರಂಭಿಸುತ್ತದೆ. ಹೀಗಾಗಿ ಕ್ಯಾಸಲ್ ರಾಕ್ ಮತ್ತು ತಿನೈಘಾಟ್ ನಿಲ್ದಾಣಗಳಲ್ಲಿ ನಿಲುಗಡೆ ನಿಷೇಧಗೊಂಡಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.














Click it and Unblock the Notifications