Bengaluru Metro: 3ನೇ ಮಾರ್ಗಕ್ಕೆ 12ನೇ ಮೆಟ್ರೋ ಆಗಮನ, ಹೊಸ ರೈಲುಗಳ ಸಂಚಾರ ನಿಯೋಜನೆ ವಿಳಂಬ
ಬೆಂಗಳೂರು: ಐಟಿ ಕೇಂದ್ರ, ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಮೂರನೇ ಮಾರ್ಗದಲ್ಲಿ (Metro Yellow Line) ಹೊಸ ರೈಲುಗಳ ಸಂಚಾರ ವಿಳಂಬವಾಗುತ್ತಿದೆ. ಈಗಾಗಲೇ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಸುಮಾರು 19.5 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ 8 ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಸದ್ಯ 12ನೇ ಡ್ರೈವರ್‍ಲೆಸ್ ರೈಲು ಸೆಟ್ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೊ ಡಿಪೋಗೆ ಆಗಮಿಸಿದೆ. ಅನ್‌ಲೋಡ್ ಸಹ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗೆ (BMRCL) ಒಪ್ಪಂದ ಮಾಡಿಕೊಂಡಂತೆ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ ಸರಣಿ ರೂಪದಲ್ಲಿ ಡ್ರೈವರ್‍ಲೆಸ್‌ಗಳನ್ನು ಪೂರೈಸುತ್ತಿದೆ. 9,10,11ನೇ ರೈಲುಗಳನ್ನು ಪೂರೈಸಿತ್ತು.ಇದೀಗ 12ನೇ ರೈಲು ಸೆಟ್ (6 ರೈಲುಗಳ ಒಂದು ಸೆಟ್) ಒದಗಿಸಿದೆ.

ಟಿಟಾಗರ್ ತಯಾರಿಕಾ ಘಟಕದಿಂದ ರಸ್ತೆ ಮೂಲಕ ಲಾರಿಯಲ್ಲಿ ಬೋಗಿಗಳನ್ನು ಹೊತ್ತು ತರಲಾಗಿದೆ. ಈ ರೈಲಿನ ಶಾಸನಬದ್ಧ ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿವೆ. ದಕ್ಷತೆ, ಕಾರ್ಯಕ್ಷಮತೆ, ಸಿಗ್ನಲಿಂಗ್ ಸೇರಿದಂತೆ ಹಲವು ಪರೀಕ್ಷೆಗಳು ನಡೆಯಲಿವೆ. ಬಳಿಕ ನಿಗದಿತ ದಿನಾಂಕದೊಳಗೆ ಹೊಸ ರೈಲನ್ನು ಕಾರ್ಯಾಚರಣೆಗೆ ಇಳಿಸುವ ಸಾಧ್ಯತೆ ಇದೆ. ಮಾರ್ಗದಲ್ಲಿ ಪೀಕ್ ಅವರ್‍ನಲ್ಲಿ 9 ನಿಮಿಷಕ್ಕೆ, ನಾನ್ ಪಿಕ್ ಅವರ್‍ನಲ್ಲಿ 14 ನಿಮಿಷಗಳಿಗೆ ಒಂದು ರೈಲು ಓಡಾಡುತ್ತಿವೆ. ಎಲ್ಲ 12 ರೈಲುಗಳು ಕಾರ್ಯಾಚರಣೆಗೆ ಇಳಿದರೆ ರೈಲಿನ ಆವರ್ತನ ಸಮಯ 5 ನಿಮಿಷಕ್ಕೆ ಇಳಿಕೆ ಆಗಲಿದೆ ಎಂದು ಬಿಎಂಆರ್‍ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಹೊಸ ರೈಲುಗಳ ಸಂಚಾರ ವಿಳಂಬ
ಹಾಲಿ ಎಂಟು ರೈಲುಗಳ ಸಂಚಾರ ಬೆನ್ನಲ್ಲೆ 9 ನೇ ರೈಲು ಏಪ್ರಿಲ್ ಮಧ್ಯಭಾಗಕ್ಕೆ ಆಗಮಿಸಿತ್ತು. ನಂತರ 10ನೇ ರೈಲಿನ ಆರು ಬೋಗಿಗಳ ಸೆಟ್ ಏಪ್ರಿಲ್ 27ರ ಹೊತ್ತಿಗೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದಿತ್ತು. ಮೇ 10ರ ಆಸುಪಾಸಿನಲ್ಲಿ 11ನೇ ಮೆಟ್ರೋ ರೈಲು ಆಗಮಿಸಿದ್ದನ್ನು ಬೆಂಗಳೂರು ಮೆಟ್ರೋ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದೀಗ 12ನೇ ರೈಲು ಆಗಮಿಸಿದೆ.
ಹಳದಿ ಮೆಟ್ರೋ ಮಾರ್ಗದಲ್ಲಿ ನಿತ್ಯ ಸುಮಾರು 1 ಲಕ್ಷ ಜನ ಸಂಚಾರ ಮಾಡುತ್ತಾರೆ. ಹಸಿರು ಮತ್ತು ನೇರಳೆ ಮಾರ್ಗದ ಪ್ರಯಾಣಿಕರು ಸೇರಿ ಒಟ್ಟು ಸುಮಾರು 10 ಲಕ್ಷದಷ್ಟು ಜನರು ಸಂಚಾರ ಮಾಡುತ್ತಾರೆ. ಪೀಕ್ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚು ಕಂಡು ಬರುತ್ತಿದೆ. ಹಳದಿ ಮಾರ್ಗದಲ್ಲಿ ದಿನೇ ದಿನ ಜನ ಸಂಚಾರ ಏರಿಕೆ ಆಗುತ್ತಿದೆ. 9 ಮತ್ತು 10 ನೇ ರೈಲಿನ ಪ್ರಾಯೋಗಿಕ ಸಂಚಾರ ತಪಾಸಣೆ ಪೂರ್ಣಗೊಂಡಿದೆ. 11ನೇ ರೈಲಿನ ಪರೀಕ್ಷೆಗಳು ನಡೆಯುತ್ತಿವೆ. ಮತ್ತೊಂದೆಡೆ ಹೊಸ ಹೊಸ ರೈಲುಗಳು ಆಗಮಿಸುತ್ತಿವೆ. ಹೀಗಿದ್ದರು ಸಹಿತ ಹೆಚ್ಚುವರಿ ರೈಲುಗಳನ್ನು ಹಳದಿ ಮಾರ್ಗದಲ್ಲಿ ನಿಯೋಜಿಸುತ್ತಿರುವುದು ವಿಳಂಬವಾಗಿದೆ. ಶೀಘ್ರವೇ ಹೊಸ ರೈಲುಗಳನ್ನು ಸೇವೆ ನಿಯೋಜಿಸುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
ಹೊಸ ರೈಲಿನ (12ನೇ) ಪ್ರಾಯೋಗಿಕ ಪರೀಕ್ಷೆಗಳ ಇನ್ನೊಂದು ವಾರದಲ್ಲಿ ಆರಂಭವಾಗಲಿವೆ. ಹಗಲು ಮಾರ್ಗದಲ್ಲಿ ಜನ ಸಂಚಾರ ಇರುವ ಕಾರಣದಿಂದ ಆದಷ್ಟು ರಾತ್ರಿ ವೇಳೆ ಮೆಟ್ರೋ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.














Click it and Unblock the Notifications