ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಗ್ಲ ಪ್ರೇಮಿ ರಾಜ್ಯ ಸರಕಾರಕ್ಕೆ ಕೆಲ ಪ್ರಶ್ನೆಗಳು

By * ಆನಂದ್ ಜಿ, ಅಧ್ಯಕ್ಷರು, ಬನವಾಸಿ ಬಳಗ
|
Google Oneindia Kannada News

Anand G, Banavasi Balaga
ಪ್ರಪಂಚದಲ್ಲಿ "ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ" ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯ ಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾ ನೀತಿಯನ್ನೂ, ಶಿಕ್ಷಣ ನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ?

ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ... ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಈಗಿನ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ.

ಬದಲಾಗಿ ನಮ್ಮ ರಾಜ್ಯ ಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲಿಷನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು.

English summary
Karnataka govt is killing Kannada medium schools by opening English medium schools from 6th standard. It looks like govt has no faith in it's own education system. Writes G. Anand of Banavasi Balaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X