ನೀರಿಗೆ ಕೊರತೆಯಿರುವ ಊರಲ್ಲಿ ಸೌಹಾರ್ದತೆಯ ಒರತೆ

ಗಡಿಪ್ರದೇಶದ ಊರೆಂದರೆ ಭಾಷೆಯ ಬಗ್ಗೆ ಮಾಹಿತಿ ಅನವಶ್ಯಕ. ಇಲ್ಲಿನ ಎಲ್ಲಾ ಜನಗಳಿಗೂ ಕನ್ನಡ, ತೆಲುಗು ತಿಳಿಯುತ್ತದೆ. ಇಲ್ಲಿನ ಪ್ರಮುಖ ವೃತ್ತಿ ರೇಷ್ಮೆ ನೇಯ್ಗೆ ಹಾಗೂ ಅದನ್ನು ಅವಲಂಬಿಸಿರುವ ನೇಕಾರರು. ಎರಡು ಬಣಗಳ ನೇಕಾರರನ್ನು ನೋಡಬಹುದು. ತೆಲುಗು ಮಾತಾನಾಡುವ ಪದ್ಮಸಾಲೆ(ಳೆ) ಮತ್ತು ಮರಾಠಿ ಮಾತನಾಡುವ ಸ್ವಕುಳಸಾಳೆ. ಸಾಕಷ್ಟು ಸಂಖ್ಯೆಯ ಮುಸಲ್ಮಾನರೂ ಇದ್ದಾರೆ. ಅಂದರೆ ಅವರ ಮನೆಮಾತೋ ಅಥವಾ ಧರ್ಮದಮಾತೋ ಒಟ್ಟಿನಲ್ಲಿ ಅವರು ಅವರದೇ ವಿಶಿಷ್ಟವಾದ ಉರ್ದು ಅಂದುಕೊಂಡಿರುವ ಭಾಷೆ ಮಾತಾಡ್ತಾರೆ.
ಇನ್ನೊಂದು ನಾನು ಹೆಮ್ಮೆಯಿಂದ ಹೇಳಲೇಕೊಳ್ಳಬೇಕಾದ ವಿಷಯ ಅಂದರೆ, ಇಲ್ಲಿನ ಎಲ್ಲಾ ಜನಾಂಗಳಲ್ಲಿನ ಸಾಮರಸ್ಯ. ಇದುವರೆಗೂ ನಾವು ಯಾವುದೇ ರೀತಿಯ ಘರ್ಷಣೆಯನ್ನು ಕೇಳಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಇಲ್ಲಿನ ಜನ ಪ್ರಜ್ಞಾವಂತರು. ಎಲ್ಲರೂ ಆಚರಿಸುವ ಮುಸ್ಲಿಮ್ ಧಾರ್ಮಿಕ ಆಚರಣೆ ಮೊಹರಮ್. ಇಲ್ಲಿ ಇದನ್ನು ಪೀರ್ಲು ದೇವ್ರು ಅಂತಾರೆ.
ಇನ್ನೊಂದು ಆಶ್ಚರ್ಯದ ವಿಷಯವೆಂದರೆ, ಇತ್ತೀಚಿನ ವರುಷಗಳವರೆಗೂ ಈ ಊರಿನ ಹೋಟೆಲ್ ಗಳಲ್ಲಿ ದೋಸೆ ಸಿಗ್ತಾ ಇರ್ಲಿಲ್ಲ. ಅನೇಕ ಬಾರಿ ನಮ್ಮೂರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿನ್ನುವ ಕನಸು ಕಂಡಿದ್ದು ನಿಜ. ನಮ್ಮೂರಿನಲ್ಲಿ ದೋಸೆ ತಿಂದು ಇತರ ಊರುಗಳಂತೆ ಬಿಲ್ ಕೊಡಬೇಕೆಂದು ಅಂತ ಅನೇಕಬಾರಿ ಅನಿಸಿತ್ತು. ಕಾರಣ ಇಲ್ಲಿನ ಹೋಟೆಲ್ ಗಳಿಗೆ ಹೆಸರು ಎನ್ನುವುದು ಇರ್ತಿರಲಿಲ್ಲ. ಉದಾಹರಣೆಗೆ ಕಲ್ಡಿಗಂಗಣ್ಣನ ಹೋಟೆಲ್, ಐತಾಳ್ ಹೋಟೆಲ್ ಅಥವಾ ರಾಮಣ್ಣನ ಹೋಟೇಲ್. ಯಾವುದೇ ಹೋಟೆಲ್ ನಲ್ಲೂ ನಿಮ್ಗೆ ದೋಸೆ, ಇಡ್ಲಿ ಇರ್ತಾ ಇರ್ಲಿಲ್ಲ. ಎಲ್ಲಾ ಕಡೆ ರುಚಿಯಾದ ಘಮಘಮ ಮೆಣಸಿನಕಾಯಿ ಮತ್ತು ಮಂಡಕ್ಕಿ ಸಣ್ಣಗೆ ಹಿಚ್ಚಿದ ಈರುಳ್ಳಿ. ನೀವು ಏನೇ ಆರ್ಡರ್ ಮಾಡಿದರೂ (ಈಗ್ಲೂ) ಅದರ ಜೊತೆಗೆ ಎರಡು ಮೆಣಸಿನಕಾಯಿ ಬಜ್ಜಿ ಇದ್ದೇ ಇರುತ್ತೆ.
ಚಿಕ್ಕವನಿದ್ದಾಗ ನಾನು ನನ್ನ ಊರಿನ ಬಗ್ಗೆ ಅನೇಕ ಕನಸು ಕಂಡಿದ್ದೆ. ಒಂದು, ಮೇಲೆ ಹೇಳಿದ ಹಾಗೆ ಬಿಲ್ ಕೊಡುವ ಹಾಗೂ ದೋಸೆ ಸಿಗುವ ಹೋಟೆಲ್ ಮತ್ತು ನಮ್ಮೂರಿನ ಕೂಗೋ ಬೆಟ್ಟಕ್ಕೆ ರೋಪ್ ವೇ ಹಾಕಿಸುವುದು. ನಿಜ ಹೇಳಬೇಕೆಂದರೆ ಪ್ರವಾಸಿಗರನ್ನು ಆಕರ್ಷಿಸುವ ಯಾವುದೇ ಸ್ಟಳ ಇಲ್ಲಿ ಇಲ್ಲ. ಮೂರು ಬಂಡೆ ಗುಡ್ಡಗಳಿಂದ ಆವರಿಸಿರುವ ಸಣ್ಣ ಕಣಿವೆ. ಅಲ್ಲಿ ಅಪರೂಪಕ್ಕೆ ಮಳೆಬಂದಾಗ ಸಂಗ್ರಹವಾಗುವ ನೀರಿಗೆ ಅಡ್ಡ ಹಾಕಿರುವ ಒಂದು ಒಡ್ಡು. ಸುಮಾರು ಅರವತ್ತು ಅಥವಾ ಎಪ್ಪತ್ತು ವರ್ಷಗಳ ಹಿಂದೆ ಕೂಗೋಬೆಟ್ಟದ ಕೆರೆಯಿಂದಲೇ ಊರಿಗೆ ನೀರಿನ ಸರಬರಾಜು ಆಗುತ್ತಿತ್ತು ಎಂದು ಕೇಳಿದ್ದೇವೆ. ನಾನಂತು ನೋಡಿಲ್ಲ. ನೀರಿನ ಸಂಗ್ರಹ ಕೆಲವೇ ಸಮಯದವರೆಗೆ ಮಾತ್ರ. ಆಗಲು ಸಹಾ ಬೋಟಿಂಗ್‌ಗೆ ಬೇಕಾಗುವಷ್ಟು ನೀರಿಲ್ಲ. ಆದರೂ ಅದರ ಮೇಲೆ ಊರಿನ ಅಭಿಮಾನ. ಕನಸು ಕಾಣ್ತಾಇದ್ದೆ. ಈ ಕೆರೆಗೆ ಅಂಟಿಕೊಂಡೇ ಸುಮಾರು 200/250 ಅಡಿ ಎತ್ತರಕ್ಕೆ ಕಂಡುಬರುವ ಬಂಡೆಕಲ್ಲು ರಾಶಿಗಳಲ್ಲಿ ವಿಶಾಲವಾದ ಇಳಿಜಾರು ಬಂಡೆಯ ಮೇಲೆ ಈಗಲೂ ಸಹಾ ಮಸುಕಾಗಿರುವ ಕಾಂಗ್ರೆಸ್ ಎನ್ನುವ ಅಕ್ಷರಗಳು ಕೆಳಗಿನಿಂದಲೇ ನೋಡಬಹುದು. ಇದು ಈ ಊರಿನ ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ಹೇಳುತ್ತದೆ. 77ರ ಚುನಾವಣೆಯ ನಂತರ ಎದ್ದಿದ್ದ ಜನತಾ ಅಲೆಯನ್ನು ಇಂದಿಗೂ ಕೋಟೆಯನ್ನು ತಲುಪುವ ಮೆಟ್ಟಿಲುಗಳ ಪಕ್ಕದಲ್ಲಿನ ಇಳಿಜಾರಿನ ಬೃಹತ್ ಬಂಡೆಯ ಮೇಲೆ ನೋಡಬಹುದು. (ಎಣ್ಣೆ ಮತ್ತು ರಾಗಿಯನ್ನು ಮಿಶ್ರಮಾಡಿ ಶತ್ರುಗಳ ಮೊಳಕಾಲನ್ನು ಮುರಿದು ಗೆದ್ದ ಇಳಿಜಾರು.)












Click it and Unblock the Notifications