ಮೊಳಕಾಲ್ಮೂರಲ್ಲಿ ಮಾತಾಡುವ ಕನ್ನಡ ಕೇಳಿದ್ದೀರಾ?

ನಮ್ಮೂರು ಬಳ್ಳಾರಿಗೆ ಹತ್ತಿರವಾದರು (ಸುಮಾರು 40 ಕಿ.ಮೀ) ಚಿತ್ರದುರ್ಗ ಜಿಲ್ಲೆಗೆ ಸೇರುವ ಅತ್ಯಂತ ಹಿಂದುಳಿದ, ಶಾಶ್ವತ ಬರಗಾಲ ರೂಢಿಮಾಡಿಕೊಂಡಿರುವ, ಬಡಕಲು ಬಯಲ ಸೀಮೆಯಲ್ಲಿರುವ ತಾಲೂಕ್. ಇಲ್ಲಿನ ರೈತರು ಮಳೆಯನ್ನೇ ಅವಲಂಬಿಸಿ ಬೆಳೆಯುವ ಜೋಳ, ಕಡಲೆಕಾಯಿ, ಈರುಳ್ಳಿ, ಪ್ರಮುಖ ಬೆಳೆಗಳು, ಹಾಗು ಮಳೆಗಾಲದ ಆರಂಭದಲ್ಲಿ ಅನುಸರಿಸುವ ಮಿಶ್ರಬೇಸಾಯ ಪದ್ದತಿಯಲ್ಲಿ ಬೆಳೆಯುವ ಕಡಲೆ, ಅವರೆ, ನೌಣೆ, ಹೆಸರು, ತೊಗರಿ, ಗೂರೆಳ್ಳು ಇತ್ಯಾದಿಗಳು ಸಾಮಾನ್ಯ ಪರ್ಯಾಯ ಬೆಳೆಗಳು. ಈಚೆಗೆ ಮೆಕ್ಕೆಜೋಳ ಮತ್ತು ಸೂರ್ಯಕಾಂತಿ ಹೂ ಸಹಾ ಹೆಚ್ಚಾಗಿ ಕಾಣಬಹುದು.
ಇನ್ನು ಜನಗಳ ಧಾರ್ಮಿಕ ಶ್ರದ್ಧೆ ಎಲ್ಲಾ ಕಡೆಯಹಾಗೆ. ಹಳೆಯ ನಮ್ಮ ಮನೆತನದ ವೆಂಕಟೇಶ ದೇವಸ್ಥಾನ, ಊರ ಹೊರಗಿದ್ದ ಆಂಜನೇಯನ ದೇವಸ್ಥಾನ, ರಾಯದುರ್ಗ ರಸ್ತೆಯಲ್ಲಿನ ಗಾಳಿಮಾರಮ್ಮ, ಪ್ರೌಢಶಾಲೆ ಬಳಿಯ ಹಾನ್ ಗಲ್ ರಸ್ತೆಯಲ್ಲಿನ ದುರ್ಗಮ್ಮನ ಗುಡಿ ಊರಿನ ಮಧ್ಯದಲ್ಲಿರುವ ಮಾರ್ಕಂಡೇಯ, ಈಶ್ವರ ದೇವಸ್ಥಾನ, ಹಾಗೂ ಬೆಟ್ಟದ ನೀರಿನ ಟ್ಯಾಂಕ್ ಬಳಿ ಇರುವ ಈಶ್ವರ ಗುಡಿ. ಇತ್ತೀಚೆಗೆ ಆರಂಭವಾದ, ಪಾಂಡುರಂಗ ಗುಡಿ, ಊರ ಹೊರಗೆ ಇರುವ ರಾಘವೇಂದ್ರ ಸ್ವಾಮಿಯ ಮಠ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಗಳು ಪ್ರಮುಖ ಗುಡಿಗಳು. ಹಳೇ ಮಸೀದಿ ಮತ್ತು ಹನುಮಂತನ ಗುಡಿ ಹೆಚ್ಚು ಕಡಿಮೆ ಪಕ್ಕ ಪಕ್ಕದಲ್ಲೇ ಇರುವುದು ವಿಶಿಷ್ಟ. ಈಗ ಇನ್ನೆರಡು ಹೊಸ ಮಸೀದಿಗಳಾಗಿವೆ.
ಸುಮಾರು ಒಂದುವರೆ, ಎರಡು ದಶಕಗಳಿಂದ ಮೊಳಕಾಲ್ಮೂರಿನ ರೇಷ್ಮೆ ಸೀರೆಗಳು ಒಳ್ಳೆ ವ್ಯಾಪಾರ ನಡೆಸುತ್ತಿವೆ. ತಾಲೂಕ್ ಕೇಂದ್ರವಾದರೂ ಇಲ್ಲಿ ಪೆಟ್ರೋಲ್ ಬಂಕ್ ಇಲ್ಲ. ಬಳ್ಳಾರಿ ಅಥವಾ ರಾಯದುರ್ಗಕ್ಕೆ ಹೋಗಬೇಕು. ಈಗಲೂ ಎಥೇಚ್ಚವಾಗಿ ದೊರೆಯುವ ಬಿಸಿಲಿಗೆ ಇಲ್ಲಿ ಮೋಡಗಳು ಅಡ್ಡಬರುವುದು ಬಲು ಅಪರೂಪ. ಧೂಳು, ರಣರಣ ರಾಚುವ ಬಿಸಿಲು, ರುಚಿ ಇಲ್ಲದ ಗಡಸು ನೀರು ಕುಡಿದುಕೊಂಡೇ ಮಧ್ಯಾನ್ಹ ಮೆಣಸಿನಕಾಯಿ ತಿನ್ನುವ, ತೆಲುಗು, ಮರಾಠಿ, ಉರ್ದು ಮಿಶ್ರಿತ ಕನ್ನಡ ಕೇಳಲೇಬೇಕು ನೀವೆಲ್ಲಾ.












Click it and Unblock the Notifications