ಸೋನಿಯಾ ಗಾಂಧಿಗೆ ಮೊಳಕಾಲು ಮುರಿದವರ ಪತ್ರ

ಎಲ್ಲರಿಗೂ ಹುಟ್ಟಿದ ಸ್ಥಳ ಅನ್ನೋದು ಇರುತ್ತೆ. ಅಥವಾ ಇರಲೇಬೇಕು ಭೌಗೋಳಿಕವಾಗಿ. ಕೆಲವರ ಹುಟ್ಟು ಅತ್ಯಂತ ಜನಪ್ರಿಯ ಸ್ಥಳ ವಾಗಿರಬಹುದು ಅಥವಾ ಒಬ್ಬವ್ಯಕ್ತಿಯ ಹುಟ್ಟಿನಿಂದಲೇ ಆ ಸ್ಥಳ ಪ್ರಸಿದ್ಧಿಗೆ ಬರಬಹುದು. ನನ್ನೂರಾಗಲಿ ಅಥವಾ ನಾನಾಗಲಿ ಈ ಪೈಕಿಅಲ್ಲ. ನನ್ನ ಊರಿನ ಹೆಸರನ್ನು ಕೇಳದವರೇ ಜಾಸ್ತಿ. ಹಾಗೆ ನಾನು ಸಹಾ. ಅದರೂ ಎಲ್ಲರಿಗೂ ಅವರ ಹುಟ್ಟೂರು ಎಂದರೆ ಏನೋ ಒಂಥರಾ ಮಮಕಾರ, ವಿಶೇಷ ಅಭಿಮಾನ. ಏನಾದರೊಂದು ಐತಿಹಾಸಿಕ ಘಟನೆಯಾಗಲಿ, ರಾಮಾಯಣ ಅಥವಾ ಮಹಾಭಾರತದ ಪೌರಾಣಿಕ ಪಾತ್ರಗಳಾಗಲಿ ಎಲ್ಲರ ಊರಿಗೂ ಒಂದಲ್ಲಾ ಒಂದು ರೀತಿ ಹೆಣೆದುಕೊಂಡಿರುತ್ತದೆ.
ನಿಜ ನನ್ನೂರಿಗೂ ಸಹಾ ಇತಿಹಾಸ ಇದೆ. ಪಾಳೆಗಾರರ ವಂಶ ತಮ್ಮ ಕಲ್ಲು ಬೆಟ್ಟದ ಮೇಲಿನ ಕೋಟೆಯನ್ನು ರಕ್ಷಿಸಲು ಇಳಿಜಾರು ಬಂಡೆಯ ಮೇಲೆ ಎಣ್ಣೆ ಜೊತೆಗೆ ರಾಗಿ ಬೆರೆಸಿ, ಹೋರಾಡದೇ ಶತ್ರುಗಳ ಮೊಳಕಾಲನ್ನು ಮುರಿದಕಥೆ. ಅದರಿಂದಲೇ ಬಂದ ಊರಿನ ಹೆಸರು ಮೊಳಕಾಲ್ಮೂರು. ಮೊಳಕಾಲು ಮುರಿತು ಎಂಬ ಜಾರಿಬಿದ್ದ ಶತ್ರುಗಳ ಆರ್ತನಾದದಿಂದ ನಮ್ಮೂರಿಗೆ ಹೆಸರು ಬಂತು ಎಂದು ಹೆಮ್ಮೆಯಿಂದ ಕಥೆ ಕೇಳಿದ್ದೆ.
ಇನ್ನೊಂದು ಪೌರಾಣಿಕ ಘಟನೆ. ರಾವಣ ಸೀತೆಯನ್ನು ಅಪಹರಿಸಿ ಪುಷ್ಪಕ ವಿಮಾನದಲ್ಲಿ ಆಕಾಶದಲ್ಲಿ ಹೋಗುವಾಗ ಸೀತೆ ತನ್ನ ಮುತ್ತಿನಹಾರದ ಮಣಿಗಳನ್ನು ಸುಳಿವಿಗಾಗಿ ಕೆಳಗೆ ಎಸೆದಳು. ಆ ಮುತ್ತಿನಿಂದಲೇ ಇಂದು ಗುಡ್ಡದಲ್ಲಿ ಕಾಣುವ, ಮಳೆ ಕೃಷಿ ಇಲ್ಲದೇ ಬೆಳೆಯುವ ಸೀತಾಫಲ.
ಇನ್ನು ಇಂದಿನ ದಿನಗಳಲ್ಲಿ ನಮ್ಮ ಊರಿನ ಹೆಸರು ರೇಶಿಮೆ ಸೀರೆಗಳಿಂದ ಸ್ವಲ್ಪ ಖ್ಯಾತಿಯನ್ನು ಪಡೆದಿದೆ. ಬಳ್ಳಾರಿ ಉಳ್ಳಾಗಡ್ಡೆ ಹೇಗೋ ನಮ್ಮೂರಿನಲ್ಲಿ ಬೆಳೆಯುವ ಈರುಳ್ಳಿ ಹಾಗೆ. ಆದರೆ ನನಗೆ ನನ್ನೂರು ಎಂದರೆ ನೆನಪಿಗೆ ತಕ್ಷಣ ಬರುವುದು ಖಾರದಮೆಣಸಿನಕಾಯಿ ಬೋಂಡ ಮತ್ತೆ ಖಾರಹಚ್ಚಿದ ಮಂಡಾಳು ಅಥವಾ ಮಂಡಕ್ಕಿ. ನನಗಂತೂ ಆ ಖಾರ, ಆ ರುಚಿ ಮರೆಯಲು ಸಾಧ್ಯವಿಲ್ಲ.
ಸಾವಿರಾರು ಎಕರೆಗಳ ಜೋಡಿದಾರ್ : ಇನ್ನು ನಮ್ಮ ವಂಶದ ಕಥೆ. ನಮ್ಮ ದೇವಸ್ಥಾನ ಭಕ್ತಿಗಾಗಿ ಪಡೆದ ಕಥೆ... ಭಕ್ತಿಗಾಗಿ ಪಡೆದ ಜೋಡಿಗ್ರಾಮ. ಹಾಗಾಗಿಯೇ ಅದರ ಹೆಸರು ಮಾತ್ರ ಇಂದಿಗೂ ನಮ್ಮ ಹೆಸರಿನ ಮುಂದೆ ರಾರಾಜಿಸುತ್ತಿದೆ. ಈ ಹಿನ್ನೆಲೆಯಿಂದ ನನಗೆ ಹೆಮ್ಮೆಯಾಗಲಿ ಅವಮಾನವಾಗಲಿ ಇಲ್ಲ. ಆದರೆ ಇಲ್ಲಿಯವರೆಗೆ ನಾನು ಸಾವಿರಾರು ಬಾರಿ ಅಂದುಕೊಂಡಿದ್ದೇನೆ. ನನ್ನ ವಂಶಜರು ಎಲ್ಲಾ ಬಿಟ್ಟು ಈ ಮರಳುಗಾಡಿಗೆ ಯಾಕೆ ಬಂದರು ಅಂತ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಹೌದು ಇಲ್ಲಿ ನೀರಿನ ಭಯಂಕರ ಕೊರತೆ ಇದೆ. ಹಾಗಾಗಿ ಸಾವಿರಾರು ಎಕರೆಗಳ ಮಾಲಿಕ ಜೋಡಿದಾರ್ ಆದರೂ ಬಡತನ ಬಿಟ್ಟಿರಲಿಲ್ಲ.
ಬೀಚಿ ಹೇಳುವ ಹಾಗೆ ಈ ಊರಿನಲ್ಲಿ ಇರುವುದು ಎರಡೇ ಕಾಲ. ಒಂದು ಬೇಸಿಗೆ ಇನ್ನೊಂದು ಕಡು ಬೇಸಿಗೆ. ಸಿಹಿತಿಂಡಿಗಳ ಅಂಗಡಿಗಳಲ್ಲಿ ಜೋಡಿಸಿಟ್ಟಂತೆ ವಿವಿಧ ಆಕಾರದ ಬಂಡೆಗಳು, ಅದರಿಂದ ಬರುವ ಬಿಸಿಲ ಝಳ ನಿಜಕ್ಕೂ ಅಗ್ನಿಕುಂಡ ನಮ್ಮೂರು. ಒಮ್ಮೊಮ್ಮೆ ಅನಿಸುತ್ತಿತ್ತು ಒಂದು ವೇಳೆ ಭೂಕಂಪ ಏನಾದರು ಸಂಭವಿಸಿದರೆ ಊರಿಗೆ ಊರೇ ನಿರ್ನಾಮವಾಗವ ಹೆದರಿಕೆ ಅನೇಕ ಬಾರಿ ಕಾಡಿದ್ದು ನೆನಪಿದೆ ಈಗಲೂ. ಹೆದರಿಕೆ ಹುಟ್ಟಿಸುವ ಪ್ರಪಾತದಂತಹ ನೀರಿಲ್ಲದ ಭಾವಿಗಳು. ನೀರಿಗಾಗಿ ದೂರದ ಭಾವಿಗಳಿಂದ ನೀರು ಹೊತ್ತು ಭುಜಗಳು ಜಡ್ಡುಹಿಡಿದಿತ್ತು. ಅಕ್ಕಿಯಲ್ಲಿ ಮಾತ್ರ ಅನ್ನ ಅಲ್ಲ ನೌಣಕ್ಕಿಯ ಅನ್ನ ತಿನ್ನಬೇಕಿತ್ತು.












Click it and Unblock the Notifications