ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಸಿಪ್ಪೆ ಸುಲಿಯುವ ಬಜಗೋಳಿ ವಿಠಲ

By Shami
|
Google Oneindia Kannada News

ಕಣ್ಣು ಇಲ್ಲದಿದ್ದರೆ ಏನಂತೆ ಜೀವನ ದೃಷ್ಟಿ ಕಳೆದುಕೊಳ್ಳದಿದ್ದರೆ ಸಾಕು. ಬದುಕಿನ ಬಂಡಿ ಸಾಗುವುದಕ್ಕೆ ಛಲವೊಂದೆ ಬೇಕು ಎನ್ನುವುದಕ್ಕೆ ಇಲ್ಲೊಂದಿದೆ ನಿದರ್ಶನ. ಬದುಕಿನುದ್ದಕ್ಕೂ ಎದುರಾದ ಕಷ್ಟನಷ್ಟಗಳನ್ನು ಮೆಟ್ಟಿ ನಿಲ್ಲುವ ತಾಳ್ಮೆಯನ್ನು ಪ್ರದರ್ಶಿಸಿದ್ದರಿಂದಲೇ ಸ್ವಾವಲಂಬಿ ಬದುಕು ವಿಠಲ ಆಚಾರ್ಯರಿಗೆ ದಕ್ಕಿದೆ ಮತ್ತು ಮಿಕ್ಕಿ ಉಳಿದಿದೆ!

* ನಮನ ಗಣೇಶ್, ಬಜಗೋಳಿ
* ಚಿತ್ರ : ಸುಶಾಂತ್ ಬಜಗೋಳಿ

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಅಡ್ಯಾಲು ಐದು ಸೆಂಟ್ಸ್ ನಿವಾಸಿ ವಿಠಲ ಆಚಾರ್ಯ(56) ಎಂಬ ದೃಷ್ಟಿಹೀನ ಕನ್ನಡಿಗನೇ ಈ ಕಥೆಯ ನಾಯಕ. ಮೂಲತಃ ಉಡುಪಿ ತಾಲೂಕಿನ ಶಿರ್ವ ಗ್ರಾಮದವರಾಗಿದ್ದ ಅವರಿಗೆ ಆರು ವರ್ಷದ ಬಾಲ್ಯದಲ್ಲಿಯೇ ದೇಹಕ್ಕೆ ಅಂಟಿದ ಯಾವುದೋ ಕಾಯಿಲೆಯಿಂದ ಎರಡೂ ಕಣ್ಣುಗಳ ದೃಷ್ಟಿ ಆರಿತು. ಹೆತ್ತವರು ಕಂಡ ಕಂಡ ವೈದ್ಯರ ಬಳಿ ತೆರಳಿ ಔಷಧಿ ಕೊಡಿಸಿದರೂ, ದೃಷ್ಟಿ ಮರಳಿ ಪಡೆಯುವಲ್ಲಿ ಸಾಧ್ಯವಾಗಲೇ ಇಲ್ಲವಂತೆ. ಬಳಿಕ ಶಾಲೆಯ ಮೆಟ್ಟಿಲು ಏರುವ ಭಾಗ್ಯ ಅವರಿಗೆ ಒದಗಿ ಬಾರದಿದ್ದರೂ, ಎದೆಗುಂದದೆ ಸಾಹಸದ ಬದುಕಿಗೆ ಕಾಲಿಟ್ಟರು. ಬಾಳಿನುದ್ದಕ್ಕೂ ಬಂದೆರಗಿದ ಕಷ್ಟಗಳ ಸರಮಾಲೆಗೆ ಸ್ವಲ್ಪವೂ ವಿಚಲಿತರಾಗದೆ, ಛಲ ಮತ್ತು ಆತ್ಮಸ್ಥೈರ್ಯದಿಂದ ಸ್ವಾವಲಂಬಿ ಬದುಕನ್ನು ಅವರು ತಾವೇ ಕಟ್ಟಿಕೊಂಡರು.

ವಿಠಲ ಆಚಾರ್ಯರು ಪ್ರಾರಂಭದಲ್ಲಿ ಬಾವಿಯಿಂದ ಮಣ್ಣು ಎತ್ತುವ ಕಾಯಕದಲ್ಲಿ ಕೂಲಿ ಸಹಾಯಕರಾಗಿ ದುಡಿಮೆಗೆ ಕೈಹಾಕಿದರು. ಅವಿರತ ಶ್ರಮದಿಂದ ಅನುದಿನದ ಬದುಕನ್ನು ಪಾರುಮಾಡುವ ಪ್ರಯತ್ನ ಆದು. ಕೊಂಚ ಫಲದ ನಿರೀಕ್ಷೆ ಮೂಡಿಸಿತು. ಕೂಲಿ ಕಾರ್ಮಿಕನಾಗಿ ಸಮಾಜದಲ್ಲಿ ಬೆರೆಯುವ ಅವಕಾಶ ಲಭಿಸಿತು. ನಂತರ ಬಾಳ ಸಂಗಾತಿಯಾಗಿ ಕೈಹಿಡಿದದ್ದು, ನಕ್ರೆಯ ವಸಂತಿ ಆಚಾರ್ಯರನ್ನು. ಶಿರ್ವದಲ್ಲಿದ್ದ ವಾಸ್ತವ್ಯವನ್ನು ಬದಲಾಯಿಸಿದ ಅವರು, ತನ್ನ ಪತ್ನಿ ಮಕ್ಕಳ ಸಮೇತರಾಗಿ ನಕ್ರೆಯಲ್ಲಿಯೇ ಪುಟ್ಟ ಮನೆಯೊಂದ ಕಟ್ಟಿಕೊಂಡು, ಕಳೆದ 16 ವರ್ಷದಿಂದ ಐದು ಸೆಂಟ್ಸ್ ಪ್ರಜೆಯಾಗಿದ್ದಾರೆ.

ಒಬ್ಬಂಟಿಯಾಗಿದ್ದಾಗ ಕುರುಡನೆಂಬ ಕಾರಣಕ್ಕಾಗಿ ಬದುಕು ಹೀಗೋ ಹಾಗೋ ಸಾಗಿತ್ತು ನಿಜ. ಅಂದು ಸಮಾಜದ ಅನುಕಂಪದ ಬಲ ಅವರ ಜತೆಗಿತ್ತು. ಆದರೆ ವಿವಾಹವಾದ ಬಳಿಕ ಅದೇ ಅನುಕಂಪವನ್ನು ಕಾದು ಕುಳಿತರೆ ಆದೀತೆ? ತನ್ನನ್ನು ನಂಬಿದ ಸಂಸಾರದ ಹೊಣೆಯನ್ನು ಸಮಗ್ರವಾಗಿ ನಿರ್ವಹಿಸುವ ಮುಂದಾಲೋಚನೆ ಅವರನ್ನು ಕಾಡಿತ್ತು. ಭವಿಷ್ಯದ ಚಿಂತೆಯ ಜತೆ ಹೆಜ್ಜೆ ಹಜ್ಜೆಗೂ ಸ್ವಾವಲಂಬನೆಯ ಪರಿಕಲ್ಪನೆಯ ಅಚಲ ಛಲ ಅವರ ಮನದಲ್ಲಿತ್ತು. ಅದಕ್ಕಾಗಿ ತೆಂಗಿನ ಸಿಪ್ಪೆ ಸುಲಿಯಲು ಬಳಸುವ ಸಾಧನವೊಂದನ್ನು ಖರೀದಿಸಿದ್ದಾಯಿತು. ಸತತ ಸಾಧನೆಯ ಪರಿಣಾಮ ಸಿಪ್ಪೆ ಸುಲಿಯುವ ವಿದ್ಯೆ ಅವರಿಗೆ ಸಿದ್ದಿಸಿತು.

ಈಗ ದಿನಕ್ಕೆ ಸುಮಾರು 500 ಕಾಯಿಯ ಸಿಪ್ಪೆ ಸುಲಿದು ಕನಿಷ್ಠ 100 ರೂ. ಸಂಪಾನೆಯನ್ನು ಮಾಡುವ ಶಕ್ತಿ ಅವರ ತೋಳಲ್ಲಿದೆ. ಆದರೆ ವರ್ಷದ ಪ್ರತಿ ದಿನ ಈ ಜಾಬ್ ಆರ್ಡರ್ ದೊರೆಯದ ಕಾರಣ, ವಿಠಲ ಆಚಾರ್ಯರು ಬಳಲುತ್ತಾರೆ. ಹೇಗೋ ಏನೋ ಈವರೆಗೆ ಊರವರ ಅನುಕಂಪದ ಜತೆಗೆ ಸ್ವಂತ ಶ್ರಮ ಅವರ ಸಂಸಾರಕ್ಕೆ ಒಂದೊತ್ತು ಊಟವನ್ನಾದರೂ ಬಡಿಸಿತ್ತು. ಪ್ರಸ್ತುತ ವಿಠಲ ಆಚಾರ್ಯರಿಗೆ ವಯಸ್ಸಾಗುತ್ತಿದೆ.

ಪತ್ನಿ ವಸಂತಿ ಆಚಾರ್ಯ, ಬೆಳಿಗ್ಗೆ ಗಂಡನ ಕೈಹಿಡಿದುಕೊಂಡು ಕೆಲಸದ ಜಾಗಕ್ಕೆ ಕರೆದುಕೊಂಡು ಹೋಗಬೇಕು. ಅಲ್ಲಿ ತೆಂಗಿನ ರಾಶಿಯಲ್ಲಿ ಒಂದೊಂದೆ ತೆಂಗಿನ ಕಾಯಿಯನ್ನು ಗಂಡನ ಕೈಗೆ ನೀಡಿ ಸಿಪ್ಪೆ ಸುಲಿಸಬೇಕು. ಸಂಜೆಯಾಗುತ್ತಲೇ ಮನೆಗೆ ವಾಪಸ್ಸು ಕರೆ ತರಬೇಕು. ಹೀಗೆ ಪತಿಯ ಸೇವೆಯಲ್ಲಿ ನಿತ್ಯ ಭಾಗಿಯಾಗಬೇಕು. ತೆಂಗಿನ ಇಳುವರಿ ಋತುವನ್ನು ನಂಬಿಯೇ ವರ್ಷವಿಡೀ ಅವರ ಬದುಕು ಸಾಗಬೇಕು. ಮಿಕ್ಕುಳಿದ ಸಂದರ್ಭ ವಸಂತಿ ಕೂಲಿಯನ್ನು ಅರಸಬೇಕು. ಸಣ್ಣ ಇಬ್ಬರು ಗಂಡು ಮಕ್ಕಳ ಜತೆ ಈ ಚಿಕ್ಕ ಸಂಸಾರವು ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಾ ಕಾಲ ನೂಕುತ್ತಿದೆ.

ನೀವು ಆಕಡೆ ಹೋದಾಗ ಇವರನ್ನು ಕಂಡು ಬನ್ನಿ. ಪುರುಸೊತ್ತಾದಾಗ ನಾಕು ಕಾಸನ್ನು ಅವರ ಖಾತೆಗೆ ತುಂಬುವುದಿದ್ದರೆ ಉಡುಪಿ ಜಿಲ್ಲೆಯ ಬಜಗೋಳಿ ಸಮೀಪದ ಕುಕ್ಕುಂದೂರು ಗ್ರಾಮದ ನಕ್ರೆ ಸಿಂಡಿಕೇಟ್ ಬ್ಯಾಂಕ್ ಖಾತೆ ನಂಬರ್ : 02202200019853 ನೆನಪಿಟ್ಟುಕೊಳ್ಳಿ.

ಗ್ಯಾಲರಿ : ಹೆಂಡತಿ ವಸಂತಿಯೊಡನೆ ವಿಠಲ ಆಚಾರ್ಯ, ಬಜಗೋಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X