• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದಗೆಡುತ್ತಿರುವ ಲಾಲ್ ಬಾಗನ್ನು ದಯವಿಟ್ಟು ಕಾಪಾಡಿ

|
Pathetic state of Lal Bagh, Bangalore
ತೋಟ ಶೃಂಗಾರ, ಒಳಗೆ ಗೋಣಿಸೊಪ್ಪು. ಈ ಹಳೆಯ ಗಾದೆಮಾತನ್ನು ಅವನತಿಯ ಹಾದಿ ಹಿಡಿದಿರುವ ಬೆಂಗಳೂರಿನ ತಂಪು, ಕಂಪಿನ ತಾಣ ಲಾಲ್ ಬಾಗಿಗಾಗಿಯೇ ಬರೆದಂತಿದೆ. ವೈವಿಧ್ಯಮಯ ಸಸ್ಯ ಪ್ರಭೇದವನ್ನು ಹೊಂದಿರುವ ಕೆಂಪುತೋಟ, ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ದುರ್ಗತಿಯತ್ತ ತಲುಪಿದೆ. 25 ವರ್ಷಗಳಿಂದ ಇದರ ಸೌಂದರ್ಯವನ್ನು ಕಂಡಿರುವ ಲೇಖಕರು ಅತ್ಯಂತ ಖೇದದಿಂದ ಇಂದಿನ ದುಃಸ್ಥಿತಿಯ ಬಗ್ಗೆ ಕಳಕಳಿಯಿಂದ ಬರೆದಿದ್ದಾರೆ ಮತ್ತು ಲಾಲ್ ಬಾಗನ್ನು ಮರಳಿ ಹಿಂದಿನ ವೈಭವಕ್ಕೆ ತರಲು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

* ಚಿತ್ರದುರ್ಗ ಸಂಜೀವಮೂರ್ತಿ, ಬೆಂಗಳೂರು

ಇತ್ತೀಚೆಗೆ ದಿನಪತ್ರಿಕೆಯಲ್ಲಿ ತೋಟಗಾರಿಕೆಯ ಮಾನ್ಯ ಸಚಿವರು ನಂದಿ ಬೆಟ್ಟ, ಕಬ್ಬನ್ ಪಾರ್ಕ್, ಮತ್ತು ಲಾಲ್ ಬಾಗ್ ಅಭಿವೃದ್ಧಿಗೆ ಅದೆಷ್ಟೋ ಕೋಟಿರೂ ಮಂಜೂರು ಮಾಡಿರುವದು ಓದಿ ತುಂಬಾ ಸಂತೋಷವೂ, ದುಃಖವೂ ಆಯಿತು. ಸಂತೋಷ- ಅವಶ್ಯವಾಗಿ ಅಭಿವೃದ್ಧಿ ಕಾಣಲೇಬೇಕಾದ ಪರಿಸರಗಳಿವು. ಅದರಲ್ಲೂ ಲಾಲ್ ಬಾಗ್ ಸುಂದರ ನಗರಿಯ ಹೃದಯ ಭಾಗದಲ್ಲಿದ್ದರೂ ಇಂದಿಗೂ ಅನೇಕ ಬಗೆಯ ಸಸ್ಯಶಾಮಲೆಯು ತುಂಬಿರುವದು ಬಹಳ ಹೆಚ್ಚಿನದು. ಲಾಲ್ ಬಾಗಿಗೆ ಬಂದು ಹೋಗುವವರಿಗೂ ಅನೇಕ ಆನಂದ, ನೆಮ್ಮದಿ, ಹೊಸತನ ಸಿಗುವದು ದಿಟ. ಇನ್ನು ದುಃಖವೆಂದರೆ- ಹಿಂದೆಯೂ ಅನೇಕ ಸಚಿವರುಗಳು ಅನೇಕ ಯೋಜನೆಗಳನ್ನು ರೂಪಿಸಿ, ಹುಟ್ಟುಹಾಕಿ(ಗಿಡಗಳನ್ನಲ್ಲ) ಹಣ ಮಂಜೂರು ಮಾಡಿರುವರಷ್ಟೆ. ಆದರೆ ಅದು ಸಂಪೂರ್ಣವಾಗಿ ಲಾಲ್ ಬಾಗಿಗೇ ವಿನಿಯೋಗವಾಗಿದ್ದಿದ್ದರೆ, ಇಷ್ಟು ಹೊತ್ತಿಗೆ ಲಾಲ್ ಬಾಗ್ ಸಂಪೂರ್ಣವಾಗಿ ಅಭಿವೃದ್ಧಿ ಕಂಡಿರಬೇಕಾಗಿತ್ತು!

ಈ ಲೇಖನ ಯಾವ ಪೂರ್‍ವಾಗ್ರಹವೂ ಇಲ್ಲ. ಕೇವಲ ಈಗ ಹಣ ಮಂಜೂರು ಮಾಡಿರುವವರ ಗಮನಕ್ಕೆ ಬಂದರೆ ನಾಗರಿಕರು ಕೃತಾರ್ಥರಾದಂತೆ ಎಂದು ಭಾವಿಸುತ್ತೇನೆ. ಇಲ್ಲಿ ಯಾವ ಪಂಕ್ತಿಯೂ ಕಲ್ಪಿಸಿದ್ದಲ್ಲ, ಉತ್ಪ್ರೇಕ್ಷೆಯಲ್ಲ. ನಾನೊಬ್ಬ ಸುಮಾರು 25 ವರ್ಷಗಳಿಂದ ಬೆಳಗಿನ ವಾಯು ವಿಹಾರಿ. ಈಗ ಲಾಲ್ ಬಾಗಿನಲ್ಲಿ ಕಾಣುವ ಅರಾಜಕತೆಯನ್ನು ದಕ್ಷಿಣದಿಂದ(ಅಶೋಕ ಪಿಲ್ಲರ್) ಉತ್ತರದ (ಎಮ್.ಟಿ.ಆರ್.) ಕಡೆಯವರೆಗೆ ಒಮ್ಮೆ ಕಣ್ಣು ಹಾಯಿಸಿದರೆ ಶ್ರೀಸಾಮಾನ್ಯನಿಗೆ ದೃಗ್ಗೋಚರವಾಗುತ್ತದೆ.

ದಕ್ಷಿಣದ ಗೇಟಿನಿಂದ ಒಳಹೊಕ್ಕರೆ - ಬರೀ ಕುರುಚಲು ಗಿಡಗಳು, ಎಡಪಕ್ಕಕ್ಕೆ ಕೆರೆಯ ಕಡೆ ಬಂದರೆ ಕೆರೆಯ ಮೊದಲನೇ ಭಾಗದಲ್ಲಿ 2 ತಿಂಗಳ ಹಿಂದೆ ಬರೀ ಕಮಲದ ಗಿಡಗಳಿದ್ದವು. (ಕಮಲದ ಹೂವುಗಳನ್ನು ಮಾತ್ರ ಆಗಾಗ್ಗೆ ಹರಿಗೋಲಲ್ಲಿ ಬಂದು ಕೆರೆ ಶುದ್ಧೀಕರಣ ಕಾಂಟ್ರಾಕ್ಟ್ ಹೊಂದಿರುವವರು ಖಾಲಿ ಮಾಡಿದ್ದಾರೆ.) ಈಗ ಕೊಳಚೆ, ಜೊಂಡು ಗಿಡಗಳು ಹುಲುಸಾಗಿ ಬೆಳೆದಿವೆ. ಅದು ಹೇಗೆ, ಎಲ್ಲಿಂದ ಇದ್ದಕ್ಕಿದ್ದಹಾಗೆ ಬರುತ್ತದೆಂದರೆ- ಈ ಶುದ್ಧೀಕರಣದವರು ಅಲ್ಲಲ್ಲಿ ಒಂದೊಂದು ಗಿಡಗಳನ್ನು ದೂರ ದೂರ ನೀರಿನಲ್ಲಿ(ಯಾರೂ ಇಲ್ಲದಾಗ) ಹಾಕುತ್ತಾರೆ. ಅದನ್ನೇ ಹುಲುಸಾಗಿ ಬೆಳೆದ ನಂತರ ಟೆಂಡರ್ ಹಾಕಿ (ಬಾತುಕೋಳಿ, ಮೀನುಗಳ ಜೊತೆ) ಕೆರೆ ನೀರನ್ನು ಶುದ್ಧೀಕರಿಸುತ್ತಾರೆ! ಸರ್ಕಾರಕ್ಕೆ ಕನಿಷ್ಠ ಲಾಭವಿರುವ ಈ ಟೆಂಡರ್ ದಾರರನ್ನ ತಪ್ಪಿಸಿ ಹೆಚ್ಚಿನ ಜಲಚರಗಳನ್ನು (ಆಮೆ, ಬಗೆ ಬಗೆಯ ನೀರಿನಲ್ಲಿ ಚಲಿಸುವ ಪ್ರಾಣಿಗಳನ್ನು) ಬಿಟ್ಟು ಟೂರಿಸ್ಟ್ ಗಳಿಗೆ ಸಂತೋಷ ಕೊಡಬಹುದು.

ಸಲಹೆ : ಸಣ್ಣ ಕೆರೆಯ ದಕ್ಷಿಣ ಭಾಗದಲ್ಲಿ ಅರ್ಧಚಂದ್ರಾಕಾರದಲ್ಲಿ ಬೃಹತ್ ಬಂಡೆ ಇದೆ. ಅದರ ಮೇಲ್ಭಾಗದಲ್ಲಿ ಸುಮಾರು 400 ಅಡಿ ಉದ್ದಕ್ಕೂ ಅರ್ಧಚಂದ್ರಾಕಾರದಲ್ಲಿಯೇ ಒಂದು ಕೃತಕ ಕಾಲುವೆ ನಿರ್ಮಿಸಿ ಅದಕ್ಕೆ ಸೋಲಾರ್ ಸೆಲ್ ಸಹಾಯದಿಂದ ಪಂಪ್ ಅಳವಡಿಸಿ ಕೆಳಗಿರುವ ನೀರನ್ನೇ ಪಂಪ್ ಮಾಡಿ ಬಂಡೆಯಮೇಲೆ ಬೀಳುವಂತೆ ಮಾಡಿದರೆ ಮಿನಿ ನಯಾಗರಾ ಫಾಲ್ಸ್ ಉಂಟಾಗಿ ನೋಡುವವರಿಗೆ ಒಂದು ರಮಣೀಯ ತಾಣವಾಗುವದರಲ್ಲಿ ಸಂಶಯವಿಲ್ಲ.

ದೊಡ್ಡ ಕೆರೆಏರಿ (ಕಟ್ಟಿದ 6 ತಿಂಗಳಲ್ಲೇ) ಬಿರುಕು ಬಿಟ್ಟಿದ್ದು ಅದನ್ನು ಅಲ್ಲಿಯವರ ಗಮನಕ್ಕೆ ತಂದಾಗ ಮಾರನೆಯ ದಿವಸವೇ ಮರಳನ್ನು ತುಂಬಿಸಲಾಯ್ತು. ಇದರಿಂದ ತಡೆ ಮೆಶ್ ವಾಲಿದೆ. ಕೆರೆಯ ದಡದಲ್ಲಿ ಒಳಗೆ ಸಾಕಷ್ಟು ಎತ್ತರಕ್ಕೆ ಕಾಂಗ್ರೆಸ್ ಹುಲ್ಲು(ಪಾರ್ಥೇನಿಯಂ) ಪುಷ್ಠಿಯಾಗಿ ದಡದ ಕಲ್ಲುಗಳ ಸಂದಿಯಲ್ಲಿ ಬೆಳೆದು ನಿಂತಿವೆ. ಇನ್ನು ಹಿಂದಿದ್ದ 200-250 ಬಾತುಕೋಳಿಗಳ ಸಂಖ್ಯೆ 20-25ಕ್ಕೆ ಇಳಿದಿದೆ. ಕೆರೆಯ ಮಧ್ಯೆ ಸುಂದರ ದ್ವೀಪವಿದ್ದು ಅಲ್ಲಿಗೆ ಹೋಗಲು ಕೆರೆಶುದ್ಧೀಕರಣದವರಿಗೆ ಮಾತ್ರ (ಬಾತುಕೋಳಿ ಹಿಡಿಯಲು) ಹರಿಗೋಲು ಇಡಲು ಅವಕಾಶ! ಅಲ್ಲಿರುವ ಬೃಹತ್ ಮರಗಳ ಬೇರುಗಳು ಮಣ್ಣು ಕೊರೆತದಿಂದ ಎದ್ದು ಕಾಣಿಸುತ್ತವೆ. ಯಾವಾಗ ಬೇಕಾದರೂ ನೀರಿಗೆ ಉರುಳಬಹುದು. ಆ ಮರಗಳಮೇಲೆ ಗೂಡು ಕಟ್ಟಿ ಮರಿಗಳ ಮಾಡಲು ಆಗಾಗ್ಗೆ ದೇಶ ವಿದೇಶಗಳಿಂದ ದೊಡ್ಡಗಾತ್ರದ ದೊಡ್ಡ ಕೊಕ್ಕಿನ ಹಕ್ಕಿಗಳು ಬರುತ್ತವೆ. ಅವನ್ನು ನೂರಾರು ಕಾಗೆಗಳು ಅವು ಗೂಡು ಕಟ್ಟದಂತೆ ಹಿಂಸೆ ಮಾಡುತ್ತವೆ, ಜೊತೆಗೆ ಆ ಹಕ್ಕಿಗಳು ಬೆಳಗಿನ ಹೊತ್ತು ಆಹಾರಕ್ಕಾಗಿ ಮೀನು ತಿನ್ನಲು ಬಂದಾಗ ಕೆರೆ ಶುದ್ಧೀಕರಣದ ಆಳುಗಳು ತಮಗೆಲ್ಲಿ ಮೀನುಗಳು ಕಡಿಮೆಯಾಗುತ್ತದೆಯೋ ಎಂಬ ಆತಂಕದಿಂದ ಆ ವಲಸೆ ಹಕ್ಕಿಗಳನ್ನು ಓಡಿಸುವದು ಸಾಮಾನ್ಯ ದೃಶ್ಯ.

ಸಲಹೆ : ಲಾಲ್ ಬಾಗಿನಲ್ಲಿರುವ ಮರಗಳ ಮೇಲೆ ಹಸಿರು ಬಣ್ಣ ಬಳಿದು ಕೃತಕ ಗೂಡುಗಳನ್ನು (ಮರದ ಪೆಟ್ಟಿಗೆಗೆ ತೂತು ಮಾಡಿ) ಅಲ್ಲಲ್ಲೆ ಕಟ್ಟಿದರೆ ಅಪರೂಪದ ಪಕ್ಷಿಗಳು ಬಂದು ನೆಲೆಸಿ ಪಕ್ಷಿಗಳ ಸಂಖ್ಯೆ ಹೆಚ್ಚಾಗುವದು.

ದೊಡ್ಡಕೆರೆಯ ಸೌತ್ ವೆಸ್ಟ್ ಜಾಗದಲ್ಲಿರುವ (ಶುದ್ಧೀಕರಣದ ಯಂತ್ರದ ಬಳಿ) ಬ್ರಿಡ್ಜ್ ಮೇಲೆ ನಿತ್ಯ ಸುಮಾರು 10-12 (ಮುಸ್ಲಿಮ್) ಹುಡುಗರು (ಪಕ್ಕದ ಕಾಂಪೌಂಡ್ ಹಾರಿ ಬಂದು) ಕುಳಿತು ಮೀನು ಹಿಡಿಯುವದು ಬೆಳಗ್ಗೆ ಸುಮಾರು 10ರಿಂದ 12ರವರೆಗಿನ ಸೊಬಗು.

ಸಲಹೆ : ಮಾಯವಾಗಿರುವ ಕಾಂಪೌಂಡ್ ಮುಳ್ಳುತಂತಿ ಮತ್ತೆ ಹಾಕಿ ಅದಕ್ಕೆ ಲೋ ವೋಲ್ಟೇಜ್ ವಿದ್ಯುತ್ ಹರಿಸುವದು.

ಕೆರೆಯ ಉತ್ತರದ(ನಾರ್ತ್ ವೆಸ್ಟ್) ಓವರ್ ಫ್ಲೋ ಕಟ್ಟೆಯ ಕಲ್ಲುಗಳೆಲ್ಲಾ ಸಡಿಲವಾಗಿ ಕಿತ್ತು ಹೋಗಿ ಕೆರೆಯ ನೀರಿನ ಮಟ್ಟ ಕಡಿಮೆ ಮಾಡಿವೆ. ಉಕ್ಕಿ ಹರಿದ ನೀರು ಕ್ರಂಬಿಗಲ್ ರಸ್ತೆಗೆ ಬಿಡುವ ಬದಲು ಕಾಲುವೆ ಪಕ್ಕವಿರುವ ವಿಸ್ತಾರವಾದ ಜಾಗದಲ್ಲಿ ಹಿಂಗು ಗುಂಡಿಗಳನ್ನು (ಮಳೆ ಕೊಯ್ಲು) ಮಾಡಿದರೆ ಭೂಮಿಯ ಅಂತರ್ಜಲದ ಮಟ್ಟ ಏರಲು ಸಹಾಯವಾಗುತ್ತದೆ (ನೀರು ವ್ಯರ್ಥವಾಗುವದಿಲ್ಲ). ವರ್ಷಗಳ ಹಿಂದೆ ಕೆರೆ ಒಳಗೆ ತೇಲುವ ಪಂಪ್ ಬಿಟ್ಟು ಒಂದು ಕಾರಂಜಿಯನ್ನು ಮಾಡಲಾಗಿತ್ತು. ಕ್ರಮಕ್ರಮೇಣ ಪಂಪ್ ಮಾಯವಾಗಿ ವೈರ್ ಗಳೂ ಮಾಯವಾಗಿ ಡ್ರಂಗಳು ತಳ ಸೇರಿವೆ.

ಕೆರೆ ಏರಿ ಮೆಟ್ಟಲಿನ ಮೂಲಕ ಇಳಿದರೆ ಎಡಭಾಗಕ್ಕೆ ದಿ. ಮರೀಗೌಡರ ನೆನಪಿನಲ್ಲಿ ಸುಂದರ ಗುಲಾಬಿ ಉದ್ಯಾನವನ ಇದೆ. ಆಗಸ್ಟ್ 15ರ ಹೊತ್ತಿಗೆ ಗಿಡಗಳು ಮೈದುಂಬಿ ನಂತರ ಹೂಗಳು ಯಾರ ಮುಡಿಗೋ ಸೇರಿ ಕ್ಷೀಣವಾಗುತ್ತವೆ. ಈ ತೋಟದ ನಾರ್ತ್ - ವೆಸ್ಟ್ ಮೂಲೆಯಲ್ಲಿ ಗಿಡಗಳಿಗೆ ಬಿಡುವ ನಲ್ಲಿಯಲ್ಲಿ 365 ದಿನವೂ ಬೆಳಿಗ್ಗೆ ಸುಮಾರು 5.30ರಿಂದ 9.30ರವರೆಗೆ ನಿಲ್ಲಿಸುವದಕ್ಕೆ ಹಿಡಿ ಇಲ್ಲದೆ ಒಂದುವರೆ ಇಂಚು ಗಾತ್ರದ ಪೈಪ್ ನಲ್ಲಿ (ಮಳೆ ಇರಲಿ, ಬಿಸಿಲಿರಲಿ) ರಭಸವಾಗಿ ಸೋರುವದು ಆಭಾಸ ದರ್ಶನ. ಇದೇ ನೀರು ಸಂಗ್ರಹಿಸಿದರೆ ಒಂದು ದಿವಸಕ್ಕೆ ಸುಮಾರು 100 ಮನೆಗಳಿಗಾಗುವಷ್ಟು ಸಿಗುತ್ತದೆ. ಪಕ್ಕದಲ್ಲೇ ಚಲಿಸುವ ವಾಯು ವಿಹಾರಿಗಳು ನಿಲ್ಲಿಸಲು ಹಿಡಿಯೇ ಇಲ್ಲ, ದೂರು ಕೊಡಲು ಯಾರೂ ಇರುವದಿಲ್ಲ.

ಅನೇಕ ಮಹನೀಯರು (ಭಗವದ್ಭಕ್ತರು) ಹೂವಿನ ಬೆಲೆಯ ಹೆಚ್ಚಳದ ಕಾರಣ ನಿರ್ಭಯವಾಗಿ ಪ್ಲಾಸ್ಟಿಕ್ ಚಿಲವನ್ನು ಪಾಪ ಮನೆಯಿಂದಲೇ ತಂದು ಬಿಡಿಸಿ (ಕೆಲವರಂತೂ ಮರವನ್ನೇ ಅಲ್ಲಾಡಿಸಿ) ಗೇಟ್ ಕೀಪರ್/ ಸೆಕ್ಯುರಿಟಿ ಇಲ್ಲದ್ದ ಕಾರಣ (ಇದ್ದರೂ ಏನೂ ಕೇಳುವದಿಲ್ಲ) ಮನೆಯ ದೇವರಿಗೆ ಪೂಜಿಸುವದು ದೊ(ದ)ಡ್ಡತನ.

ಸಲಹೆ : ಹಾಗೆ ಹೂವು ಕಿತ್ತವರನ್ನು ಹಿಡಿದು ಬಾಗಿಲಿನಲ್ಲಿ ಅಧಿಕಾರಿಗಳು ಬೆಳಿಗ್ಗೆಯೇ ಇದ್ದು 50/-ರೂ ದಂಡ ವಿಧಿಸಬೇಕು, ಹೂವನ್ನು ವಶಪಡಿಸಿಕೊಳ್ಳಬೇಕು.

ರಸ್ತೆಯ ಮೇಲಂತೂ ಕಥಕ್ಕಳಿ ಮಾಡಿತ್ತಾ ಓಡಾಡಬೇಕಿದೆ. ಬಿಲ್ಲು ಬರುವವರೆಗೆ ಮಾತ್ರ ತಾತ್ಕಾಲಿಕವಾಗಿ ಚೆನ್ನಾಗಿ ಇರುವಷ್ಟು ಗುಣಮಟ್ಟವಿರುತ್ತದೆ.

ಸಲಹೆ : ಹಾಗೆ ಮಾಡುವ ಕಂಟ್ರಾಕ್ಟರನ್ನು ಶಿಕ್ಷಿಸಿ, ದಂಡ ವಿಧಿಸಿ ಕಪ್ಪು ಪಟ್ಟಿಗೆ ಸೇರಿಸುವದು.

ನೆಲಗಡಿಯಾರದ ಬಳಿಯ ಪ್ರತಿಮೆಯ ದಕ್ಷಿಣದಲ್ಲಿ ಒಂದು ಕಾರಂಜಿಯೂ, ಕೊಳವೂ ಇದೆ. ದಶಕಗಳ ಹಿಂದೆ ನೀರಿನಲ್ಲಿ ಬಣ್ಣದ ದೀಪ ಬಿಟ್ಟ ಕಾರಂಜಿಯ ನೋಡಿದ ನೆನಪು. ಈಗಂತೂ ಕೊಳಚೆ ನೀರು. ಗ್ಲಾಸ್ ಹೌಸ್ ನವೀಕರಿಸಿದಾಗ ಒಬ್ಬ ಮಹನೀಯರು ಒಂದು ಬಿಳಿಯ (ಗ್ರೇ) ಗ್ರಾನೈಟ್ ಸ್ಲಾಬ್ ಮೇಲೆ ನವೀಕರಣದ ವಿವರವನ್ನೂ ಉದ್ಘಾಟಿಸಿದವರ ವಿವರವನ್ನೂ ಸುಂದರ ತೆಳು ನೀಲಿ ಅಕ್ಷರದಲ್ಲಿ (ಯೋಚಿಸದೆ) ಪೈಂಟ್ ಮಾಡಿಸಿದ್ದು, ಈಗ ಅಲ್ಲಲ್ಲಿ ಒಂದೊಂದು ಅಕ್ಷರ ಮಾತ್ರ ಓದುವ ಸ್ಥಿತಿಯಲ್ಲಿದೆ!

ಸಲಹೆ : ಅದನ್ನೇ ಕಲ್ಲಿನಲ್ಲಿ ಕೆತ್ತಿಸಿ ಪೈಂಟ್ ಮಾಡಿಸಿದ್ದಿದ್ದರೆ ಆ ಕಲ್ಲು ಅಲ್ಲಿ ಇರುವವರೆಗೂ ದರ್ಶಕರು ಓದಬಹುದಾಗಿತ್ತು.

ಗ್ಲಾಸ್ ಹೌಸ್ ನಿಂದ ಉತ್ತರದ ಬಾಗಿಲಿಗೆ(ಎಮ್.ಟಿ.ಆರ್.) ಬರುವ ದಾರಿಯ ಬಲಭಾಗದಲ್ಲಿ ಅನೇಕ ವಿಗ್ರಹಗಳಿರುವ ಜಲ ತಾಣ ಕೊಳೆ ನೀರಿನಿಂದ ಅಲಂಕರಿಸಿದೆ. ಪಶ್ಚಿಮದ್ವಾರದಿಂದಲಂತೂ ಉಗ್ರರೂ ಸಹ ನಿಶ್ಚಿಂತರಾಗಿ (ಟಿಕೆಟ್ ಇಲ್ಲದ ಸಮಯದಲ್ಲಿ) ಪ್ರವೇಶಿಸಬಹುದು.

ಮಾನ್ಯ ಓದುಗರೇ ಈ ಲೇಖನ ನಮ್ಮ ಲಾಲ್ ಬಾಗ್ ಎಂಬ ಅಭಿಮಾನದಿಂದ, ಸಂಕಟದಿಂದ ಹೊರಬಂದಿದೆ. ವಾಯು ವಿಹಾರಿಗಳಂತೂ ಅಸಹಾಯಕರಾಗಿ, ನಿರ್ಲಿಪ್ತರಾಗಿ, ರಭಸದಿಂದ ಸಂಚರಿಸುವದು ಸಾಮಾನ್ಯ ದೃಶ್ಯ. ಪ್ರತಿಯೊಬ್ಬ ದರ್ಶಕನೂ, ವಿಹಾರಿಯೂ ಕಳಕಳಿಯಿಂದ ನಮ್ಮ ಲಾಲ್ ಬಾಗ್ ಎಂಬ ಅಭಿಮಾನದಿಂದ ಕಸ, ಮಿಕ್ಕ ತಿಂಡಿ ಪದಾರ್ಥ, ಖಾಲಿ ಪ್ಲಾಸ್ಟಿಕ್ ಕವರ್ ಗಳನ್ನು ಎಲ್ಲೆಂದರಲ್ಲಿ ಎಸೆಯದೆ ತಮ್ಮ ಚೀಲದಲ್ಲೊ, ಜೇಬಿನಲ್ಲೋ ಹಾಕಿಕೊಂಡು ಹೊರಗಿನ ಕಸದ ತೊಟ್ಟಿಯಲ್ಲೋ ಅಥವಾ ಒಳಗಿರುವ ಡಸ್ಟ್ ಬಿನ್ ನಲ್ಲೋ ಹಾಕಿದರೆ ವನದೇವತೆಗೆ ಸೇವೆ ಮಾಡಿದಂತಾಗುವದು. ಬನ್ನಿ ಇನ್ನು ಮುಂದಾದರೂ ಜಲ, ವನ, ಪರಿಸರಗಳನ್ನು ನಮ್ಮ ಶಕ್ತಿ ಮೀರಿ ಸಂರಕ್ಷಿಸಲು ಪ್ರಯತ್ನಿಸೋಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more