ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!

By Staff
|
Google Oneindia Kannada News

BSY invites Karuna for Thiruvalluvar statue installation
ಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.

* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರು

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ ತೆರಳಿ ಹಲಸೂರು ಕೆರೆಯಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಿ ಬಂದಿದ್ದಾರೆ.

ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು, ಕನ್ನಡ ಪರ ಹಿತಚಿಂತಕರು, ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಮಾದ್ಯಮಗಳಲ್ಲಿ ದುಡಿಯುತ್ತಿರುವವರು, ನ್ಯಾಯವಾದಿಗಳು ಹೀಗೆ ಈ ವರ್ಗದವರ ಸರ್ಕಾರದ ಪರವಾದ 'ವೈಯುಕ್ತಿಕ' ಅಭಿಪ್ರಾಯಗಳು, ಬೆಂಬಲವನ್ನು ಪ್ರತಿಮೆ ಅನಾವರಣಕ್ಕೆ ಶೇಕಡ 95ರಷ್ಟು ಬಲ ಬಂದಿದೆ (ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ 95ರಷ್ಟು ಜನರ ಅಭಿಪ್ರಾಯ ಇದೆ ಆಗಿದೆ ಎಂಬ ಅರ್ಥದಲ್ಲಿ) ಅಂತ ನಮ್ಮ ಮಾನ್ಯ ಗೃಹಮಂತ್ರಿಗಳು ಹೇಳಿಕೆ ಇತ್ತಿದ್ದಾರೆ. ಹಾಗೆಯೆ ಕನ್ನಡ ಪರ ಸಂಘಟನೆಗಳ ಷರತ್ತುಗಳನ್ನು ಕಣ್ಣು ಬಿಟ್ಟು ಸಹ ನೋಡದೆ. ಬಹುಜನ ಬೆಂಬಲಿತ ಕನ್ನಡಪರ ಸಂಘಟನೆಗಳ ಹೇಳಿಕೆಗಳಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆಯೆ ಇಲ್ಲದಂತೆ ಮಾಡಿದ್ದಾರೆ.

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ತಪಾಸಣೆಗೆ ಚೆನ್ನೈಗೆ ಹೋಗಿದ್ದಾಗ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರನ್ನು ಬೇಟಿ ಮಾಡಬೇಕಾಗಿದ್ದ ಅಗತ್ಯವೇನಿತ್ತು ಎಂಬುದೇ ಪ್ರಶ್ನೆಯಾಗಿದೆ. ಹಾಗೆಯೆ ಇಲ್ಲಿಗೆ ವಿಶ್ರಾಂತಿಗೆ, ದೇವರ ದರ್ಶನಕ್ಕೆ, ಇನ್ಯಾವುದಕ್ಕೊ ಆಗಾಗ ಆಗಮಿಸುವ ತಮಿಳುನಾಡು ಮುಖ್ಯಮಂತ್ರಿಗಳು(ಈಗ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿಯನ್ನು ಒಳಗೊಂಡಂತೆ) ಸಮಯದಲ್ಲಿ ಈ ರೀತಿಯ ವಿನಿಮಯಗಳು ನಡೆದದ್ದು ಯಾರಾದ್ರು ನೋಡಿದ್ದೀರ?

ನಿನ್ನೆ ಯಡಿಯೂರಪ್ಪನವರು ಕರುಣಾನಿಧಿ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ "ತಿರುವಳ್ಳುವರ್ ವಿಷಯ ಹೊರತಾಗಿ ಅಲ್ಲಿ ಬೇರೆ ಯಾವ ಪ್ರಸ್ತಾಪ ಮಾಡಲಿಲ್ಲ. ಪಾಪ ಅವರು ವಿಶ್ರಾಂತಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಈ ಸಮಯದಲ್ಲಿ ಅವರೊಡನೆ ಬೇರೆ ವಿಷಯ ಚರ್ಚಿಸುವುದು ಸರಿಯೆ" ಎಂಬಂತೆ ಉತ್ತರಿಸಿದರು. ತಾನು ಚೆನ್ನೈಗೆ ಹೋಗಿರುವುದು ಆರೋಗ್ಯ ತಪಾಸಣೆಗೆ ಮಾತ್ರ, ಅಲ್ಲಿ ಕರುಣಾನಿಧಿಯನ್ನು ಭೇಟಿ ಮಾಡುವ, ರಾಜಕೀಯ ವಿಷಯ ಚರ್ಚಿಸುವ ಅಗತ್ಯವಿರಲಿಲ್ಲ ಎಂದು ನಮ್ಮ ಯಡಿಯೂರಪ್ಪನವರಿಗೆ ಅಂದು ಹೊಳೆದಿರಲಿಲ್ಲವೆ? ಮತ್ತು ಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ಇರುವ ಹಲವಾರು ವಿಷಯಗಳನ್ನು ಬದಿಗಿತ್ತು ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡಿದರು? ಈ ಪ್ರಶ್ನೆಗಳಿಗೆ ಅಂದು ಅನಾರೋಗ್ಯದಿಂದ ಬಳಲುತ್ತಿದ್ದ, ಇಂದು ಆರೋಗ್ಯವಾಗಿರುವ ಯಡಿಯೂರಪ್ಪನವರೆ ಉತ್ತರಿಸಬೇಕಿದೆ!

ತಮಿಳುನಾಡು ಕರ್ನಾಟಕಕ್ಕೆ ತೋರಿರುವ ಮತ್ತೊಂದು ದೊಡ್ಡತನ ನಿನ್ನೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದನ್ನು ಯಡಿಯೂರಪ್ಪನವರು ಕಂಡರೋ ಇಲ್ಲವೋ ಗೊತ್ತಿಲ್ಲ. ಕರುಣಾನಿಧಿಯವರನ್ನು ಅಭಿನಂದಿಸಿ ದೊಡ್ಡತನ ಮೆರೆದು ಬಂದಿದ್ದಾರೆ.

ಕರ್ನಾಟಕದಲ್ಲಿ ಈ ಕುರಿತಾಗಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ, "ಕಾವೇರಿ"ರುವಾಗ, ತಮಿಳುನಾಡಿನಲ್ಲಿನ 'ಶೇಕಡ 95 ವರ್ಗದದವರ' ಅಭಿಪ್ರಾಯ ಏನಿದೆ? ಅದು ಅಲ್ಲಿನ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆಯ? ಬೆಂಗಳೂರಿನಲ್ಲಿ ನೆಲೆಸಿರುವ ತಮಿಳರಿಗೆ ಕರ್ನಾಟಕ ಹಿತಾಸಕ್ತಿ ಕುರಿತಂತೆ ಯಾವ ಅಭಿಪ್ರಾಯಗಳಿವೆ? ಅಂತ ನಮ್ಮ ಮಾಧ್ಯಮದವರು ಯಾರೂ ಇನ್ನೂ ಮುಖಪುಟದ ಸುದ್ದಿ ಮಾಡದಿರುವುದು, ಪಂಚ್ ಲೈನ್ ಹೆಡ್ಡಿಂಗ್ ಕೊಡದಿರುವುದು ಕರ್ನಾಟಕದ ಉಳಿದ ಶೇಕಡ 5 'ಬಹುಜನರಿಗೆ' ಬೇಸರ ತಂದಿದೆ ಎಂದು ನಿಮಗನಿಸುತ್ತಿಲ್ಲವೆ?

ಕರ್ನಾಟಕದ ಈ ಶೇಕಡ 95 ಜನರ ಅಭಿಪ್ರಾಯಗಳಿಂದ ಉಳಿದ ಶೇಕಡ 5 ಬಹುಜನರು ಇನ್ಯಾವ ರೀತಿಗಳಲ್ಲಿ ನಲುಗಬೇಕಾಗಿದೆಯೋ ಕಾದು ನೋಡೋಣವೆ!

(ಕೃಪೆ-ಬ್ಲಾಗ್ : ಹಳದಿ-ಕೆಂಪಿನ ಚಿಂತನೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X