ಕರುಣಾನಿಧಿ ಭೇಟಿ ಮಾಡಿ ಅಧಿಕೃತ ಆಹ್ವಾನ
ಬೆಂಗಳೂರು, ಆ. 5 : ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ಆಮಂತ್ರಣ ನೀಡಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಪುತ್ರಿಯ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿಯನ್ನು ಮಂಗಳವಾರ ಭೇಟಿ ಮಾಡಿದ ಯಡಿಯೂರಪ್ಪ, ಸರ್ವಪಕ್ಷಗಳ ಸಭೆಯಲ್ಲಿ ಕೈಗೊಂಡ ಒಮ್ಮತದ ತೀರ್ಮಾನ ಹಾಗೂ ನಡೆದಿರುವ ಸಿದ್ಧತೆ ಕುರಿತು ಚರ್ಚಿಸಿದರು. ಆ.13 ರಂದು ಚೆನ್ನೈನಲ್ಲಿ ನಡೆಯಲಿರುವ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ನಡೆದಿರುವ ಸಿದ್ಧತೆ ಹಾಗೂ ಕಾಮಗಾರಿಗಳ ಕುರಿತೂ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಚಿವರಾದ ವಿ.ಎಸ್.ಆಚಾರ್ಯ, ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.
ತಮಿಳು ಸಂಘದ ಅಭಿನಂದನೆ
ಬೆಂಗಳೂರು ತಮಿಳು ಸಂಘ ಹಾಗೂ ಕರ್ನಾಟಕ ತಮಿಳು ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ತಮಿಳು ಸಂಘದ ಅಧ್ಯಕ್ಷ ಮೀನಾಕ್ಷಿ ಸುಂದರಂ, ತಿರುವಳ್ಳುವರ್ ಪ್ರತಿಮೆ ಅನಾವರಣ ಕುರಿತು ಹಿಂದಿನ ಯಾವ ಮುಖ್ಯಮಂತ್ರಿಯೂ ಕೈಗೊಳ್ಳದ ದಿಟ್ಟ ನಿರ್ಧಾರವನ್ನು ಯಡಿಯೂರಪ್ಪ ತೆಗೆದುಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ರಾಜ್ಯದ ಪರ ಕರ್ನಾಟಕ ತಮಿಳು ಒಕ್ಕೂಟದ ಸಂಚಾಲಕ ದಾಮೋದರನ್ ಮಾತನಾಡಿ, ಯಡಿಯೂರಪ್ಪನವರ ಜಾಣ್ಮೆಯಿಂದ ತಿರುವಳ್ಳುವರ್ ಹಾಗೂ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ವೇದಿಕೆ ಸಿದ್ಧಗೊಂಡಿದೆ. ಈ ವಿಚಾರದಲ್ಲಿ ತಮಿಳು ಸಂಘ ಸರಕಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಅಲ್ಲದೆ, ರಾಜ್ಯದ ನೆಲ, ಜಲ, ಭಾಷೆ ವಿಚಾರ ಬಂದಾಗ ತಮಿಳರು ರಾಜ್ಯದ ಪರವಾಗಿ ಇರುತ್ತೇವೆ. ಈ ನೆಲದ ಋಣ ನಮ್ಮ ಮೇಲಿದ್ದು, ಕನ್ನಡ ನಾಡಿನ ಜತೆಯಲ್ಲೇ ಇರಲಿದ್ದೇವೆ' ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications