ಥಾಣೆ ಹೆದ್ದಾರಿಯಲ್ಲಿ ಫ್ಲೆಕ್ಸ್ ಬಿದ್ದು ಬೈಕ್ ಸವಾರನಿಗೆ ಗಾಯ; ನಮ್ ಬೆಂಗಳೂರಲ್ಲಿ ಕಂಪ್ಲೀಟ್ ಬ್ಯಾನ್ ಇನ್ನೂ ಆಗಿಲ್ಲ ಎಂದ ಜನ
ಮುಂಬೈನ ಥಾಣೆಯ ಅತ್ಯಂತ ಜನನಿಬಿಡ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಟೀನ್ ಹಾತ್ ನಾಕಾ ಬಳಿಯ ಫುಟ್ ಓವರ್ ಬ್ರಿಡ್ಜ್ ಮೇಲೆ ಅಕ್ರಮವಾಗಿ ಅಳವಡಿಸಲಾಗಿದ್ದ ಬೃಹತ್ ಬರ್ತ್‌ಡೇ ಬ್ಯಾನರ್ ದಿಢೀರನೆ ಚಲಿಸುವ ವಾಹನಗಳ ಮೇಲೆ ಕುಸಿದು ಬಿದ್ದಿದೆ. ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನ ತಲೆಗೇ ಈ ಬ್ಯಾನರ್ ಅಪ್ಪಳಿಸಿದೆ. ಅದೃಷ್ಟವಶಾತ್ ಹೆಲ್ಮೆಟ್ ಧರಿಸಿದ್ದರಿಂದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಇತರೆ ವಾಹನಗಳು ಕೂಡ ಸಡನ್ ಬ್ರೇಕ್ ಹಾಕಿ ಸರಣಿ ಅಪಘಾತದ ಗಂಡಾಂತರದಿಂದ ಪಾರಾಗಿವೆ.
ಥಾಣೆಯಲ್ಲಿ ನಡೆದ ಈ ಭೀಕರ ಘಟನೆ ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ನಮ್ಮ ಬೆಂಗಳೂರಿನ ಪ್ರಮುಖ ರಸ್ತೆ ಹಾಗೂ ಫ್ಲೈಓವರ್‌ಗಳ ಮೇಲೆ ಇಂತದ್ದೇ ಬ್ಯಾನರ್, ಫ್ಲೆಕ್ಸ್‌ಗಳು ರಾಜಾರೋಷವಾಗಿ ರಾರಾಜಿಸುತ್ತಿವೆ. ಹಿಂದಿನ ಬಿಬಿಎಂಪಿ ಅವಧಿಯಲ್ಲೇ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ವಾಸ್ತವದಲ್ಲಿ ಈ ನಿಯಮಗಳು ಕೇವಲ ಕಾಗದದ ಮೇಲಷ್ಟೇ ಉಳಿದಿವೆ.

ಹುಟ್ಟುಹಬ್ಬ, ಪುಣ್ಯಸ್ಮರಣೆ, ರಾಜಕೀಯ ನಾಯಕರ ಸ್ವಾಗತ, ಹಬ್ಬ ಹರಿದಿನಗಳ ಶುಭಾಶಯಗಳ ಹೆಸರಿನಲ್ಲಿ ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಕೆ.ಆರ್. ಪುರಂ, ಯಶವಂತಪುರ, ಏರ್‌ಪೋರ್ಟ್ ರಸ್ತೆ, ಹೆಬ್ಬಾಳ ಸೇರಿದಂತೆ ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳು ಮತ್ತು ಹೆದ್ದಾರಿಗಳ ಮೇಲ್ಸೇತುವೆಗಳಿಗೆ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗುತ್ತಿದೆ.
ಜೀವಕ್ಕೆ ಕುತ್ತು ತರುವ ಹೋರ್ಡಿಂಗ್ಸ್
ಮಳೆ ಅಥವಾ ಜೋರಾದ ಗಾಳಿ ಬೀಸಿದಾಗ ಈ ಬ್ಯಾನರ್‌ಗಳು ಹರಿದು ಬೈಕ್ ಸವಾರರ ಮುಖಕ್ಕೆ ಅಥವಾ ಗಾಡಿಗೆ ಸಿಕ್ಕಿಬಿದ್ದು ಪ್ರಾಣಕ್ಕೆ ಕುತ್ತು ತಂದ ಹಲವು ಘಟನೆಗಳು ಬೆಂಗಳೂರಿನಲ್ಲಿ ಈಗಾಗಲೇ ನಡೆದಿವೆ. ಆದರೂ ಸ್ಥಳೀಯ ನಾಯಕರ ಹಾಗೂ ಪಾಲಿಕೆ ಅಧಿಕಾರಿಗಳ ಮೌನ ಸಮ್ಮತಿಯಿಂದಾಗಿ ಈ ಅಕ್ರಮ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಥಾಣೆ ಘಟನೆಯ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಬೃಹತ್ ಬ್ಯಾನರ್ ಹಾಕಲು ಅನುಮತಿ ನೀಡಿದವರು ಯಾರು? ಸುರಕ್ಷತಾ ಕ್ರಮಗಳನ್ನು ಏಕೆ ಪರಿಶೀಲಿಸಿಲ್ಲ? ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.
The shocking incident at Teen Haat Naka, Thane, where a massive birthday banner fell on a motorcyclist, is a wake-up call. We cannot risk citizens' lives for political or personal vanity. I demand immediate action against those responsible. Public safety must come first! #Thane pic.twitter.com/umx8Z0kuH6
— Rais Shaikh (@rais_shk) July 13, 2026
ಥಾಣೆಯಲ್ಲಿ ಬೈಕ್ ಸವಾರ ಬದುಕುಳಿದಿರಬಹುದು. ಆದರೆ ಬೆಂಗಳೂರಿನ ಟ್ರಾಫಿಕ್ ಹಾಗೂ ವೇಗಕ್ಕೆ ಹೆದ್ದಾರಿಯಲ್ಲಿ ಇಂತಹ ಘಟನೆ ನಡೆದರೆ ಪಾಲಿಕೆ ಹೊಣೆ ಹೊರುತ್ತದೆಯೇ?" ಎಂದು ಬೆಂಗಳೂರಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜಕೀಯ ಒತ್ತಡಗಳಿಗೆ ಮಣಿಯದೆ, ನಗರದಾದ್ಯಂತ ಇರುವ ಎಲ್ಲ ಅಕ್ರಮ ಬ್ಯಾನರ್‌ಗಳನ್ನು ಕಿತ್ತೆಸೆದು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಉದ್ಯಾನ ನಗರಿ ಬೆಂಗಳೂರು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದು ಮನವಿ ಮಾಡಿಕೊಂಡಿದ್ದಾರೆ.
ನಗರದ ಬಹುತೇಕ ವಾರ್ಡ್‌ಗಳಲ್ಲಿ ಅಕ್ರಮ ಬ್ಯಾನರ್ ಹಾಕುವವರು ಯಾರೋ ಸಾಮಾನ್ಯ ಜನರಲ್ಲ. ಸ್ಥಳೀಯ ರಾಜಕೀಯ ನಾಯಕರು ಹಾಗೂ ಅವರ ಚೇಲಾಗಳೇ ಈ ಕೃತ್ಯದ ಹಿಂದಿರುತ್ತಾರೆ. "ನಮ್ಮ ಸಾಹೇಬರ ಬರ್ತ್‌ಡೇ" ಎಂದು ಜಂಕ್ಷನ್‌ಗಳ ಕಂಬಗಳಿಗೆ, ಮೆಟ್ರೋ ಪಿಲ್ಲರ್‌ಗಳಿಗೆ ಮತ್ತು ಫುಟ್ ಓವರ್ ಬ್ರಿಡ್ಜ್‌ಗಳಿಗೆ ತಂತಿ ಕಟ್ಟಿ ಬ್ಯಾನರ್ ನೇತುಹಾಕುತ್ತಾರೆ. ಇದನ್ನು ಪ್ರಶ್ನಿಸಲು ಹೋದರೆ ಸಿಬ್ಬಂದಿಗೆ ರಾಜಕೀಯ ಒತ್ತಡದ ಬೆದರಿಕೆಯೂ ಹಾಕಲಾಗುತ್ತದೆ ಎನ್ನುವ ಆರೋಪವಿದೆ.












Click it and Unblock the Notifications