ಬಿಡದಿ ಭೂಸ್ವಾಧೀನ ಗಲಾಟೆ; ಬಂಧಿತ ರೈತರನ್ನ ತಕ್ಷಣ ಬಿಡುಗಡೆ ಮಾಡಲು ಬಿ.ವೈ.ವಿಜಯೇಂದ್ರ ಆಗ್ರಹ
ಬೆಂಗಳೂರು: ಬಿಡದಿ ಬಳಿ ಮಂಡಲಹಳ್ಳಿಯಲ್ಲಿ ಟೌನ್‌ಶಿಪ್ ಯೋಜನೆಗಾಗಿ ರೈತರ ಜಮೀನು ಸರ್ವೆ ನಡೆಸುವಾಗ ಉಂಟಾದ ಸಂಘರ್ಷವು ಸದ್ಯ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬೃಹತ್ ಸಮರಕ್ಕೆ ನಾಂದಿ ಹಾಡಿದೆ. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಬೆನ್ನಲ್ಲೇ, ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಈ ನಡೆಯನ್ನು ಸರ್ವಾಧಿಕಾರಿ ಧೋರಣೆ ಎಂದು ಕರೆದಿದ್ದಾರೆ.
ಅನ್ನದಾತನ ಒಪ್ಪಿಗೆಯಿಲ್ಲದ ಯೋಜನೆಗೆ ನಮ್ಮ ಸಮ್ಮತಿಯಿಲ್ಲ
ರೈತರ ಹಕ್ಕುಗಳ ಪರವಾಗಿ ಬ್ಯಾಟ್ ಬೀಸಿರುವ ಬಿ.ವೈ.ವಿಜಯೇಂದ್ರ, ಬಲವಂತದ ಭೂಸ್ವಾಧೀನ ನೀತಿಯನ್ನು ಖಂಡಿಸಿದ್ದಾರೆ. ಸ್ಥಳೀಯ ರೈತರ ವಿರೋಧದ ನಡುವೆಯೂ, ಅವರ ಭೂಮಿಯ ಹಕ್ಕುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಸರ್ಕಾರ ಬಲವಂತವಾಗಿ ಜಂಟಿ ಭೂಮಾಪನ (JMC Survey) ನಡೆಸುತ್ತಿರುವುದು ಅತ್ಯಂತ ಕಳವಳಕಾರಿ. ಅಭಿವೃದ್ಧಿಯ ಹೆಸರಿನಲ್ಲಿ ಅನ್ನದಾತನ ಫಲವತ್ತಾದ ಕೃಷಿ ಭೂಮಿ ಕಿತ್ತುಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಹಳ್ಳಿಗಳಿಗೆ ಭೇಟಿ ನೀಡಿದ್ದ ಬಿಜೆಪಿ ನಿಯೋಗ
ಈ ಹಿಂದೆ ಬಿಜೆಪಿ ನಿಯೋಗವು ಬಾಧಿತ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು ಎಂಬುದನ್ನು ನೆನಪಿಸಿರುವ ಅವರು, "ರೈತರ ಜೀವನೋಪಾಯಕ್ಕೆ ಕುತ್ತು ತರುವ ಹಾಗೂ ಅವರ ಹಿತಾಸಕ್ತಿಯನ್ನು ಬಲಿಗೊಡುವ ಯಾವುದೇ ಬಲವಂತದ ಯೋಜನೆಗಳಿಗೆ ನಮ್ಮ ಪಕ್ಷದ ಒಪ್ಪಿಗೆಯಿಲ್ಲ. ನಮ್ಮ ಅನ್ನದಾತರ ಮೇಲಿನ ದಬ್ಬಾಳಿಕೆಯನ್ನು ನಾವು ಎಂದಿಗೂ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೂಮಿಯ ಅಸಲಿ ಒಡೆಯರಾಗಿರುವ ರೈತರ ಧ್ವನಿಯನ್ನು ಆಲಿಸುವುದು ಮತ್ತು ಅವರ ಆತಂಕಗಳನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯವಾಗಿತ್ತು ಎಂದು ನೆನಪಿಸಿರುವ ವಿಜಯೇಂದ್ರ, ಸದ್ಯದ ಆಕ್ರೋಶದ ವಾತಾವರಣಕ್ಕೆ ಸರ್ಕಾರದ ಹಠಮಾರಿ ಧೋರಣೆಯೇ ಕಾರಣ ಎಂದಿದ್ದಾರೆ.
ಯೋಜನೆ ಕೈಬಿಡಿ
ಮಂಡಲಹಳ್ಳಿ ಸೇರಿದಂತೆ ಇಡೀ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ತಡೆಹಿಡಿಯಬೇಕು. ಘಟನೆಯ ಬಳಿಕ ಪೊಲೀಸರು ವಶಕ್ಕೆ ಪಡೆದಿರುವ, ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದ ನೊಂದ ರೈತರನ್ನು ತಕ್ಷಣವೇ ಯಾವುದೇ ಷರತ್ತಿಲ್ಲದೆ ಬಿಡುಗಡೆ ಮಾಡಬೇಕು. ಆಡಳಿತಾತ್ಮಕ ಬಲಪ್ರಯೋಗ ಬಿಟ್ಟು, ಅನ್ನದಾತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಕ್ಷಣವೇ ಮುಕ್ತ ಮಾತುಕತೆಗೆ ಮುಂದಾಗಬೇಕು. ಯಾವುದೇ ಯೋಜನೆ ತರುವ ಮುನ್ನ ರೈತರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯ ತಮ್ಮ ಭೂಮಿ ಮತ್ತು ಬದುಕಿನ ರಕ್ಷಣೆಗಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ರೈತರ ಧ್ವನಿಯನ್ನು ಆಲಿಸುವ ಬದಲು, ಪೊಲೀಸರ ಬಲಪ್ರಯೋಗ ಮತ್ತು ಅಧಿಕಾರಿಗಳ ದಬ್ಬಾಳಿಕೆಯ ಮೂಲಕ ಜೆಎಂಸಿ ಸರ್ವೇ ನಡೆಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಕಿಡಿಕಾರಿದ್ದಾರೆ.
ಅಭಿವೃದ್ಧಿ ಎಂದರೆ ರೈತರ ಬದುಕನ್ನು ಬಲಿ ಕೊಡುವುದಲ್ಲ. ಯಾವುದೇ ಯೋಜನೆಯೂ ರೈತರ ವಿಶ್ವಾಸ, ಒಪ್ಪಿಗೆ ಮತ್ತು ನ್ಯಾಯಯುತ ಪರಿಹಾರದ ಆಧಾರದ ಮೇಲೆಯೇ ಜಾರಿಯಾಗಬೇಕು. ರೈತರ ಹಕ್ಕುಗಳನ್ನು ಕಡೆಗಣಿಸುವ ಸರ್ಕಾರದ ಈ ಏಕಪಕ್ಷೀಯ ಧೋರಣೆಯನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ರೈತರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ, ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ರೈತರೊಂದಿಗೆ ಮುಕ್ತ ಸಂವಾದ ನಡೆಸಬೇಕು. ಅನ್ನದಾತರ ಹಕ್ಕು ಮತ್ತು ಬದುಕಿನ ರಕ್ಷಣೆಗೆ ನಾವು ಸದಾ ರೈತರೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಬೆಂಬಲ ಸೂಚಿಸಿದ್ದಾರೆ.ಬಿಡದಿ ಮಂಡಲಹಳ್ಳಿಯ ಜಮೀನು ವಿವಾದ ಸದ್ಯ ಕೇವಲ ರೈತರ ಪ್ರತಿಭಟನೆಯಾಗಿ ಉಳಿದಿಲ್ಲ. ಹೆಚ್‌ಡಿಕೆ ಹಾಗೂ ವಿಜಯೇಂದ್ರ ಇಬ್ಬರೂ ಜಂಟಿಯಾಗಿ ಸರ್ಕಾರದ ವಿರುದ್ಧ ಸಮರ ಸಾರಿರುವುದರಿಂದ, ಮುಂಬರುವ ದಿನಗಳಲ್ಲಿ ಬಿಡದಿ ಭೂಸ್ವಾಧೀನ ವಿಚಾರವು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕಿಡಿ ಹೊತ್ತಿಸಲಿದೆ.


Click it and Unblock the Notifications
