• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತ್ತಿಗೆ ಶ್ರೀಗಳಿಗೆ ಪೂಜೆ ಅಧಿಕಾರ ಮೊಟಕು, ಏಕೆ?

By Staff
|

ಸಾಗರೋಲ್ಲಂಘನದ ವಿವಾದದ ಹಿನ್ನೆಲೆಯಲ್ಲಿ ಉಡುಪಿ ಶ್ರೀಮಠದ ಮುನ್ನೆಲೆ, ಶ್ರೀಕೃಷ್ಣ ಪೂಜಾ ಕೈಕಂರ್ಯದ ಪಾವಿತ್ರ್ಯ, ಸ್ವಾಮೀಜಿಗಳ ಅರ್ಹತೆ ಅನರ್ಹತೆಯ ಅಂಶಗಳನ್ನು ಉದ್ಧರಿಸುತ್ತಾ, ಶ್ರೀ ಸುಗುಣೇಂದ್ರರ ಪೂಜಾ ಹಕ್ಕಿಗೆ ಸಂಚಕಾರ ಹೇಗಾಯಿತು? ಯಾಕಾಗುತ್ತದೆ? ಅವರು ಪೂಜೆಯಿಂದ ದೂರಸರಿಯಬೇಕಾಗಿರುವ ಪರಿಸ್ಥಿತಿ ಯಾಕೆ ಬರುತ್ತದೆ ಎಂದು ಶ್ರುತಪಡಿಸುವ ದ್ವೈತ ವಿದ್ವಾಂಸ ಚತುಷ್ಮತಿಗಳ ಜಂಟಿಲೇಖನ.

ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಿಗೆ, ಅವರು ವಿದೇಶಯಾನ ಮಾಡಿದ್ದರ ಹಿನ್ನೆಲೆಯಲ್ಲಿ ಶ್ರೀ ಕೃಷ್ಣಪೂಜೆ ಮಾಡದೆ ಹಿಂದೆ ಸರಿದು ಮತ್ತೊಂದು ವ್ಯವಸ್ಥೆ ಮಾಡಬೇಕೆಂದು ಇತರ ಏಳು ಉಡುಪಿ ಮಠಾಧೀಶರು ಮನವಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಶ್ರೀ ಪುತ್ತಿಗೆ ಮಠಾಧೀಶರು ನೀಡಿರುವ ಪ್ರತಿಕ್ರಿಯೆ, ಪತ್ರಿಕೆಗಳು, ಟಿವಿ, ಇಂಟರ್ನೆಟ್ ಮೂಲಕ ನಡೆದಿರುವ ಪ್ರಚಾರ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ. ಅನೇಕರು ಈ ಯುಗದಲ್ಲಿ ವಿದೇಶಯಾನದಿಂದ ಅಪಾವ್ರಿತ್ಯ ಉಂಟಾಗುವುದೆಂದು ಹೇಳುವ ಧರ್ಮಶಾಸ್ತ್ರಗಳು ಅಪ್ರಸ್ತುತವೆಂದೂ, ಧರ್ಮ ಪ್ರಸಾರಕಾರ್ಯದ ಘನೋದ್ದೇಶದಿಂದ ಮಾಡಿದ ವಿದೇಶಯಾನ ಶಾಸ್ತ್ರ ವಿರುದ್ಧವೆಂದು ವಾದಿಸುವುದು ಬಾಲಿಶವೆಂದೂ, ಹಿಂದೂ ಧರ್ಮದ ಪ್ರಸಾರಕ್ಕೆ, ಉನ್ನತಿಗೆ ಇಂತಹ ನಿಷೇಧಗಳು ಬಾಧಕವೆಂದೂ ಲೇಖನಗಳನ್ನು ಬರೆದಿದ್ದಾರೆ.

ಶ್ರೀ ಪೇಜಾವರ ಶ್ರೀಗಳು ಒಬ್ಬರು ಮಾತ್ರ ಶ್ರೀ ಪುತ್ತಿಗೆ ಶ್ರೀಗಳವರ ಬಗ್ಗೆ ಅಸಹನೆಯಿಂದ ವಿರೋಧಿಸುತ್ತಿರುವರೆಂದೂ ಕೆಲವರು ಅಪಾದಿಸಿದ್ದಾರೆ. ಕೆಲವರಂತೂ ಶ್ರೀ ಪೇಜಾವರ ಶ್ರೀಗಳವರು ತಮ್ಮ ಸಮಗ್ರಜೀವನದಲ್ಲಿ ಹಿಂದೂ ಧರ್ಮದ ನೇತಾರರಾಗಿ ಸುಮಾರು 60 ವರ್ಷಗಳ ಕಾಲ ನೀಡಿದ ಮಾರ್ಗದರ್ಶನ, ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಾಡಿದ ಅಸಾಧಾರಣ ಸೇವಾಕಾರ್ಯಗಳು, ಮಾನವೀಯತೆಯ ಮೂರ್ತಿಗಳಾಗಿ ಸಂಕಷ್ಟಕ್ಕೆ ಸಿಲುಕಿದ ಆರ್ತರ ದುಃಖಶಮನಕ್ಕಾಗಿ ಚಾಚಿದ ಸಹಾಯಹಸ್ತ ಎಲ್ಲವನ್ನು ಕಡೆಗಣಿಸಿ ಅವರೊಬ್ಬ ಖಳನಾಯಕನಂತೆ ವಾಮಾಗೋಚರವಾಗಿ ನಿಂದಿಸಿ ಪತ್ರಗಳನ್ನು ಪತ್ರಿಕೆಗಳಲ್ಲಿ ಬರೆದಿದ್ದಾರೆ. ಈ ಸಂದರ್ಭದಲ್ಲಿ ವಾಸ್ತವವನ್ನು ಸಾರ್ವಜನಿಕರ ಅವಗಾಹನೆಗೆ ತರಲು ಈ ಪ್ರಕಟಣೆ ಕೊಡಲಾಗಿದೆ.

1. ಕರ್ಮಭೂಮಿಯೆನಿಸಿದ ಭಾರವರ್ಷವನ್ನು ಬಿಟ್ಟು ಉಳಿದೆಡೆ ವೈದಿಕ ಕರ್ಮಗಳು ಪೂರ್ಣಫಲ ಕೊಡಲಾರವೆಂದು ಪುರಾಣ ಮತ್ತು ಧರ್ಮಶಾಸ್ತ್ರದ ವಚನಗಳಿವೆ.( ಗಮನಿಸಿ: ಭಾಗವತ ಸ್ಕಂಧ 5,ಅಧ್ಯಾಯ 19, ಗ 16-17 ಮತ್ತು ಸ್ಕಂಧ 11, ಆ 29 ಗ 10 ಮತ್ತು ವಿಷ್ಣು ಪುರಾಣ 2-3-5).ಅದೇನೆ ಇರಲಿ ಪ್ರಸ್ತುತ ವಿರೋಧವು ಮಠಾಧಿಪತಿಗಳಾದ ಸನ್ಯಾಸಿಗಳ ಆಚರಣೆಗೆ ಮಾತ್ರ ಸಂಬಂಧಪಟ್ಟಿದ್ದು, ಅವರು ಶಾಸ್ತ್ರದ ಕಟ್ಟುಪಾಡುಗಳನ್ನು ನಿಯಮದಿಂದ ಪಾಲಿಸಬೇಕೆಂದು ಸಮಾಜ ನಿರೀಕ್ಷಿಸುತ್ತದೆ.ಕುಟುಂಬದ ರಕ್ಷಣೆಗಾಗಿ ಶಾಸ್ತ್ರದ ಕಟ್ಟುಪಾಡುಗಳ ಆಚರಣೆಯಲ್ಲಿ ಶಿಥಿಲತೆಯನ್ನು ಸಹಿಸಬಹುದಾದರೂ, ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಸಲುವಾಗಿ ನಿರ್ಮಿಸಲಾದ ಧರ್ಮಪೀಠಗಳ ಅಧಿಪತಿಗಳು ಎಂದೂ ಪರಂಪರೆಯ ಕಟ್ಟುಪಾಡುಗಳನ್ನು ಉಲ್ಲಂಘಿಸಲಾಗದು.

2. ಧರ್ಮಶಾಸ್ತ್ರಗಳು ಮಾನವರ ಒಳಿತಿಗಾಗಿ, ವೇದೋಕ್ತ ಕರ್ಮಗಳ ಆಚರಣೆಗಾಗಿ ಅನೇಕ ಕಟ್ಟುಪಾಡುಗಳನ್ನು ವಿಧಿಸಿದ್ದರೂ ಕಾಲಪ್ರಭಾವದಿಂದ ಸಾಮಾಜಿಕ ಪರಿವರ್ತನೆಗಳಾಗಿ ಅವುಗಳನ್ನು ಎಲ್ಲರೂ ಆಚರಿಸಲು ಸಾಧ್ಯವಾಗದಿರುವುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದಲೇ ವೈದಿಕ ಕರ್ಮಾಚರಣೆಯಿದ್ದ ಕುಟುಂಬಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ವಿದೇಶಯಾನ ಮಾಡಿದ್ದರೂ ಶಕ್ಯವಿದ್ದಷ್ಟು ಧರ್ಮಾಚರಣೆ ಮಾಡಿದರೆ ಸಾಕೆಂಬ ಹೊಂದಾಣಿಕೆಯ ಸೂತ್ರವನ್ನು ಅನುಸರಿಸಲಾಗುತ್ತಿದೆ.

3. ಭಗವಂತನ ಪೂಜೆ ಮಾಡುವ ಪ್ರಕಾರಗಳು ಅನೇಕ ವಿಧ. ಅಂಗಡಿಯಿಂದ ಕೊಂಡು ತಂದ ದೇವರ ಸುಂದರ ಚಿತ್ರಗಳನ್ನು, ವಿಗ್ರಹಗಳನ್ನು ಅಲಂಕರಿಸಿ ಕೈ ಮುಗಿವುದು ಪೂಜೆಯೇ. ಶಾಲಗ್ರಾಮ ಮೊದಲಾದ ಪವಿತ್ರ ದೇವತಾ ಸಾನ್ನಿಧ್ಯದ ವಸ್ತುಗಳನ್ನು ಮಂತ್ರ-ತಂತ್ರ ಪುರಸ್ಸರವಾಗಿ ಅರ್ಚಿಸುವುದೂ ಪೂಜೆಯೇ.ಜ್ಞಾನಿವರೇಣ್ಯರಾದ ಶ್ರೀ ಮಧ್ವರು ತಂತ್ರ ಶಾಸ್ತ್ರೋಕ್ತ ಪದ್ಧತಿಯಿಂದ ವಿಶೇಷವಾಗಿ ಭಗವಂತನ ಸಾನ್ನಿಧ್ಯವನ್ನು ತಂದು ಕೃಷ್ಣಪ್ರತಿಮೆಯನ್ನು ಪ್ರತಿಷ್ಠಾಪನೆಗೈದಿದ್ದಾರೆ. ಇದರ ಅರ್ಚಕರಾದ ಪೀಠಾಧೀಶರು ಗುರುಗಳಿಂದ ರಹಸ್ಯ ಮಂತ್ರಗಳ ಉಪದೇಶ ಪಡೆದು ನಿತ್ಯ ಜೀವನದಲ್ಲಿ ನಿಷ್ಠುರತೆಯಿಂದ ನಿಯಮದ ಜೀವನವನ್ನು ತಪಸ್ಸಿನಂತೆ ನಡೆಸಿ ಪೂಜೆ ಮಾಡಬೇಕಾಗುತ್ತದೆ. ಶ್ರೀ ಮಧ್ವರು ಸ್ಥಾಪಿಸಿದ ಶ್ರೀ ಕೃಷ್ಣನಿಗೆ ಕಳೆದ ಎಂಟುನೂರು ವರ್ಷಗಳಿಂದ ಇಂತಹ ಪೂಜೆ ಸಲ್ಲುತ್ತಿದೆ.

ಭಗವಂತ ಸರ್ವತ್ರ ವ್ಯಾಪ್ತ.ಅವನಿಗೆ ದೇಶ-ವಿದೇಶಗಳಿಲ್ಲ. ಆದರೆ ಅವನನ್ನರ್ಚಿಸುವ ಅರ್ಚಕರಿಗೆ ಮಾತ್ರ ಎಲ್ಲ ನಿಯಮಗಳೂ ಅವಶ್ಯ ಪಾಲನೀಯವಾದದ್ದು. ವಿಶ್ವದ ಎಲ್ಲ ಜನತೆಯ ಕಲ್ಯಾಣವನ್ನು ಬಯಸಿ ಮಾಡುವ ಪೂಜೆಯ ವಿಧಾನದಲ್ಲಿ ಯಾವ ಶಿಥಿಲತೆಯೂ ಇರತಕ್ಕದಲ್ಲ. ಇಂತಹ ಪೂಜೆಯನ್ನು ಮಾಡುವ ಅರ್ಹತೆ ಎಲ್ಲರಿಗೂ ಇಲ್ಲ.ಅದಕ್ಕಾಗಿ ವಿಶೇಷ ತರಬೇತಿ ಅಗತ್ಯ. ಇಂತಹ ಕಠೋರ ಜೀವನವನ್ನು ಎಲ್ಲ ಕಾಲದಲ್ಲೂ ನಡೆಸಬೇಕಾದರೂ ಶ್ರೀ ಕೃಷ್ಣನ ಪೂಜೆಯ ಕಾಲದಲ್ಲಿ ಇದರ ಪರಿಪಾಲನೆಯಲ್ಲಿ ಸಡಿಲಿಕೆಗೆ ಅವಕಾಶವಿಲ್ಲ. ಆದ್ದರಿಂದಲೇ ಶ್ರೀ ಕೃಷ್ಣಪೂಜೆಗೆ ಪರ್ಯಾಯ ವ್ಯವಸ್ಥೆ ಉಡುಪಿಯಲ್ಲಿ ಮಾಡಲಾಗಿದೆ. ಇದನ್ನು ಪುತ್ತಿಗೆ ಶ್ರೀಗಳೂ ಬಲ್ಲರು. ಅವರ ಗುರುಗಳು ಅವರಿಗೆ ಕೊಟ್ಟ ಶಿಕ್ಷಣ ಇಂತಹುದೇ ಆಗಿದೆ.ಅದನ್ನು ಈಗ ಶಿಥಿಲಗೊಳಿಸುವುದು ಅವರಿಗೆ ಸಲ್ಲದು. ತಿರುಪತಿ,ಶ್ರೀ ರಂಗ, ಮೇಲುಕೋಟೆ ಮೊದಲಾದ ಸ್ಥಳಗಳಲ್ಲಿ ಇಂತಹ ನಿರ್ಬಂಧಗಳಿದ್ದು ಈಗಲೂ ಆ ನಿಯಮಗಳನ್ನು ತಪ್ಪದೆ ಪರಿಪಾಲಿಸಲಾಗುತ್ತಿದೆ. ಈ ಎಲ್ಲ ದೇವಾಲಯಗಳಲ್ಲಿ ಆಡಳಿತ ಸರ್ಕಾರದ್ದು. ಅರ್ಚನೆ ಮಾಡುವವರು ಗೃಹಸ್ಥಾಶ್ರಮಿಗಳು. ಉಡುಪಿ ಇದೆಲ್ಲಕ್ಕಿಂತ ವಿಶಿಷ್ಟವಾದದ್ದು. 800 ವರ್ಷಗಳ ಹಿಂದೆ ಶ್ರೀ ಮಧ್ವರು ಹಾಕಿಕೊಟ್ಟ ಕಟ್ಟುಪಾಡುಗಳನ್ನು ಸ್ವಲ್ಪವೂ ಬದಲಾಯಿಸದೆ ಪೀಠಾಧಿಪತ್ಯವನ್ನು ವಹಿಸಿದ ಯತಿಗಳು ಸಲ್ಲಿಸುವ ಪೂಜೆಯ ಸ್ಥಳವಿದು. ಇದರ ಉಲ್ಲಂಘನೆಯನ್ನು ಈಗ ಏಕಾಗಿ ಮಾಡಬೇಕು??

4. ಶ್ರೀ ಪುತ್ತಿಗೆ ಮಠಾಧೀಶರಿಗೆ ತಾವು ಪೂಜೆ ಮಾಡದಿದ್ದರೆ ಪೀಠಾಧಿಕಾರ ಹೋಗುವುದೆಂಬ ಭಯ ಬೇಕಾಗಿಲ್ಲ. ಅವರು ಆರಿಸಿದ ಶಿಷ್ಯನಿಂದ ಪೂಜೆ ನಡೆಸುವ ಏರ್ಪಾಡು ಮಾಡಿದರೂ ಅವರ ಪೀಠಾಧಿಕಾರ ಉಳಿಯುವಂತೆ ಕಾನೂನುಬದ್ಧವಾಗಿ ವ್ಯವಸ್ಥೆಮಾಡಲು ಇತರ ಪೀಠಾಧಿಪತಿಗಳು ಒಪ್ಪಿದ್ದಾರೆ.

5. ವಿದೇಶಕ್ಕೆ ಹೋದವರೆಲ್ಲರನ್ನೂ ಪಾಪಿಗಳೆಂದು ಶ್ರೀ ಪೇಜಾವರರು ಭಾವಿಸುತ್ತಾರೆ ಎಂಬ ವಾದ ಕೇವಲ ಕ್ಷುದ್ರ ಅಪಾದನೆಯಷ್ಟೆ.ಅನಿವಾರ್ಯದ ಕಾಲ ಗತಿಯಲ್ಲಿ ಎಲ್ಲರೂ ಸಮಾಜದ ಒಳಿತಿಗಾಗಿ, ತಮ್ಮ ಏಳ್ಗೆಗಾಗಿ ಶಕ್ಯವಿದ್ದಷ್ಟು ಧರ್ಮವನ್ನು ಆಚರಿಸಬೇಕೆಂದು ಶ್ರೀಗಳವರು ಸಾರಿ ಸಾರಿ ಹೇಳಿದ್ದಾರೆ.

6. ಎರಡು ವರ್ಷಗಳಕಾಲ ಶ್ರೀ ಕೃಷ್ಣಪೂಜೆಯನ್ನು ಪುತ್ತಿಗೆ ಶ್ರೀಗಳು ಮಾಡದಿದ್ದರೆ ಹಿಂದೂಧರ್ಮಕ್ಕೆ ಆಗುವ ಹಾನಿಯೇನು?? ಅದರ ಬದಲು ಶ್ರೀ ಕೃಷ್ಣನ ಪೂಜೆಯ ವ್ಯವಸ್ಥೆ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಅವರು ಬಯಸಿದಂತೆ ಉಡುಪಿಯಲ್ಲಿ ಸುಂದರ ವಾತಾವರಣ ನಿರ್ಮಿಸಲು, ಎಲ್ಲೆಡೆ ಧರ್ಮಪ್ರಸಾರ ಮಾಡಲು ಅವರು ಸ್ವತಂತ್ರರು. ಈ ವಿಷಯದಲ್ಲಿ ಅವರಿಗೆ ಎಲ್ಲರ ಸಹಕಾರವಿದೆ.

7. ಹಿಂದೂ ಪರಂಪರೆಯಲ್ಲಿ ಗುರುವಿನ ಸ್ಥಾನ ಗೌರವಯುತವಾದದ್ದು. ಆ ಸ್ಥಾನಕ್ಕೆ ಅಪಚಾರ-ಅಗೌರವ ಸಲ್ಲದು. ತಮ್ಮ ಸ್ವರೂಪೋದ್ದಾರಕರೆಂದು ಈಗಲೂ ಶ್ರೀ ಪುತ್ತಿಗೆ ಶ್ರೀಗಳು ಎಲ್ಲೆಡೆಯಲ್ಲಿ ಹೇಳುವ ಶ್ರೀ ವಿದ್ಯಾಮಾನ್ಯತೀರ್ಥರು-ಪುತ್ತಿಗೆ ಶ್ರೀಗಳ ವಿದ್ಯಾಗುರುಗಳು.ಈಗ ಕಣ್ಮರೆಯಾಗಿದ್ದಾರೆ. ಆದರೆ ಈ ವಿವಾದಾಸ್ಪದ ವಿಷಯದಲ್ಲಿ ಅವರ ನಿಲುವೇನಿತ್ತು? ಎನ್ನುವುದು ಶ್ರೀ ಪುತ್ತಿಗೆ ಶ್ರೀಗಳ ಸಾಕ್ಷಿಗೆ ತಿಳಿದಿದೆ. ಅವರ ಗುರುಗಳ ಸ್ಪಷ್ಟ ಮಾತಿನ ಪತ್ರಗಳು ಎಲ್ಲರ ಮುಂದಿವೆ. ಅವರ ಆದೇಶವನ್ನು, ಆಶಯವನ್ನು ಉಲ್ಲಂಘಿಸುವುದು ಶ್ರೀ ಪುತ್ತಿಗೆ ಶ್ರೀಗಳಿಗೆ ತರವೇ? ಈ ಬಗ್ಗೆ ಅವರು ಆಲೋಚಿಸಬೇಕು. ಉಡುಪಿ ಮಠಗಳ ಸಂಪ್ರದಾಯದಲ್ಲಿ ಆಶ್ರಮದಲ್ಲಿ , ಜ್ಞಾನದಲ್ಲಿ,ತಪಸ್ಸಿನಲ್ಲಿ, ಹಿರಿಯರನ್ನು ಗುರುಗಳೆಂದೇ ಪರಿಗಣಿಸಲಾಗುವುದು. ಈ ಎಲ್ಲಾ ವಿಷಯಗಳಲ್ಲೂ ಶ್ರೀ ಪೇಜಾವರರು ಶ್ರೀ ಪುತ್ತಿಗೆ ಶ್ರೀಗಳಿಗೆ ಗುರುಗಳೇ. ಅವರನ್ನು ಯೋಗ್ಯ ಕಾರಣಗಳಿಲ್ಲದೆ ಅವಮಾನಿಸುವುದು ಯುಕ್ತವೇ? ಶ್ರೀ ಪುತ್ತಿಗೆ ಶ್ರೀಗಳವರು ಚಿಂತಿಸಬೇಕು.

8. ಶ್ರೀ ಪುತ್ತಿಗೆ ಶ್ರೀಗಳವರಿಗೆ ಶ್ರೀ ಕೃಷ್ಣ ಪೂಜೆಯನ್ನು ವಿರೋಧಿಸುವವರು ಅವರ ಧರ್ಮಪ್ರಸಾರಕಾರ್ಯಗಳ ಬಗ್ಗೆ ಅವಹೇಳನಕಾರಿ ಮಾತನಾಡಿಲ್ಲವೆಂಬುದನ್ನು ಗಮನಿಸಬೇಕು. ಕೆಲವರು ಅಂತಹ ಮಾತನಾಡಿದ್ದರೆ ಅದು ಖಂಡನೀಯವೆ. ಎಲ್ಲ ಮಾಧ್ವರು ಶ್ರೀ ಪುತ್ತಿಗೆ ಶ್ರೀಗಳ ಸ್ಥಾನ ,ಅವರ ಧರ್ಮಪ್ರಸಾರದ ಬಗ್ಗೆ ಕಳಕಳಿ ಇವೆಲ್ಲವನ್ನು ಗೌರವದಿಂದ ಸ್ಮರಿಸಿ ವಿನಮ್ರತೆಯಿಂದ ಸಂಪ್ರದಾಯದ ರಕ್ಷಣೆಗಾಗಿ ಸಮಾಜದ ಏಕತೆಗಾಗಿ ಶಿಷ್ಯನನ್ನು ಸ್ವೀಕರಿಸಿ ಪೂಜೆಯ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ. ನೂತನವಾಗಿ ಸನ್ಯಾಸವನ್ನು ಸ್ವೀಕರಿಸಿದ ಯತಿಗಳು ಚಾತುರ್ಮಾಸ್ಯದ ನಂತರ ಪರ್ಯಾಯದ ಕೃಷ್ಣಪೂಜೆಯನ್ನು ನಡೆಸುವರು. ಅಲ್ಲಿಯವರೆಗೆ ಅಷ್ಟಮಠದ ಇನ್ನೊಬ್ಬ ಯತಿಗಳಿಂದ ಪೂಜೆ ಮಾಡಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ.

9. ಶ್ರೀ ಪುತ್ತಿಗೆ ಶ್ರೀಗಳು ವಿದೇಶಯಾನವನ್ನು ಹತ್ತಾರು ವರ್ಷಗಳ ಹಿಂದೆ ಕೈಗೊಂಡಿದ್ದರೂ ಆ ಬಗ್ಗೆ ಈವರೆಗೆ ಚಕಾರವೆತ್ತದೆ ಇದೀಗ ಪರ್ಯಾಯ ಪೀಠವನ್ನಲಂಕರಿಸಲು ಸಂದರ್ಭ ತೀರ ಹತ್ತಿರಬಂದಾಗ ಗೊಂದಲ ಎಬ್ಬಿಸಲಾಗುತ್ತಿದೆ ಎಂಬ ಮಾತಿದೆ. ಇದು ಪೂರ್ಣ ಅಸತ್ಯ. ಶ್ರೀ ಪುತ್ತಿಗೆ ಶ್ರೀಗಳು 1997ರಲ್ಲಿ ತಮ್ಮ ಮಠಕ್ಕೆ ಒದಗಿರುವ ಆರ್ಥಿಕ ಅಡಚಣೆಯನ್ನು ಪರಿಹರಿಸಲು ವಿದೇಶಯಾತ್ರೆ ಕೈಗೊಳ್ಳುವುದಾಗಿ ಹೇಳಿದಾಗ ಉಳಿದ ಎಲ್ಲ ಮಠಾಧಿಪತಿಗಳು ಲಿಖಿತಮೂಲಕವಾಗಿ ಹಾಗೆ ಮಾಡುವುದು ಸಂಪ್ರದಾಯದ ಉಲ್ಲಂಘನೆಯಾಗುತ್ತದೆಂದೂ, ಶ್ರೀ ಕೃಷ್ಣಪೂಜೆಗೆ ಅಡ್ಡಿಯಾಗಬಹುದೆಂದೂ ತಿಳಿಸಿದ್ದರು. ಆ ಪತ್ರಗಳೆಲ್ಲವೂ ಈಗ ಉಪಲಬ್ಧವಿವೆ. ಶ್ರೀಪುತ್ತಿಗೆ ಶ್ರೀಗಳ ವಿದ್ಯಾಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರು ತಮ್ಮ ಮಠಕ್ಕೆ ಸೇರಿದ ಆಸ್ತಿಯೊಂದನ್ನು ಮಾರಿ ಹಣದ ಸಮಸ್ಯೆ ಬಗ್ಗೆ ಹರಿಸುವುದಾಗಿಯೂ, ಕಟ್ಟುಪಾಡುಗಳನ್ನು ಮೀರಬಾರದೆಂದೂ ಕೇಳಿಕೊಂಡಿದ್ದರು. ಇದಲ್ಲದೆ ಈಗ ಒಂದು ವರ್ಷದಿಂದ ಈ ಸಮಸ್ಯೆಯ ಪರಿಹಾರಕ್ಕಾಗಿ ಅನೇಕ ಪ್ರಯತ್ನಗಳು ನಡೆದಿವೆ. ಅವು ಸಾರ್ವಜನಿಕರ ಗಮನಕ್ಕೆ ಬಂದಿಲ್ಲವಷ್ಟೆ. ಶ್ರೀ ಪೇಜಾವರ ಮಠದ ಅಂದಿನ ಕಿರಿಯ ಶ್ರೀಪಾದರಾಗಿದ್ದ ವಿಶ್ವವಿಜಯರು ಎಲ್ಲರ ಮಾತನ್ನು ದಿಕ್ಕರಿಸಿ ವಿದೇಶಕ್ಕೆ ತೆರಳಿದಾಗ ಅವರಿಗೆ ಕೃಷ್ಣಪೂಜೆಯ ಅರ್ಹತೆ ಇಲ್ಲವೆಂದು ವಾದಿಸಿದವರಲ್ಲಿ ಶ್ರೀ ಪುತ್ತಿಗೆ ಶ್ರೀಗಳು ಅಗ್ರಗಣ್ಯರಾಗಿದ್ದರು.ಅವರ ಸಹಿ ಇರುವ ಪತ್ರಗಳನ್ನು ಯಾರೂ ನೋಡಬಹುದು.

10. ವಿದೇಶದಲ್ಲಿ ಸಂನ್ಯಾಸಿಯ ಎಲ್ಲಾ ನಿಯಮಗಳನ್ನು ತಪ್ಪದೆ ಶ್ರೀ ಪುತ್ತಿಗೆ ಶ್ರೀಗಳು ಅನುಸರಿಸಿದ್ದಾರೆ. ಆದ್ದರಿಂದ ಅವರಿಗೆ ಎಲ್ಲ ವಿಧದ ಅರ್ಹತೆ ಇದೆ ಎಂಬ ವಾದ ಕೇಳಿಬರುತ್ತಿದೆ. ಆದರೆ ಉಡುಪಿಯ ಮಠಗಳಲ್ಲಿ ಪೀಠಾಧಿಪತಿಗಳ ಸ್ನಾನ ಪದ್ದತಿಯನ್ನಾರಂಭಿಸಿ, ಅವರು ಮಾಡುವ ಪೂಜಾಸ್ಥಳದ ಶುದ್ಧಿ, ಅದಕ್ಕೆ ಸಹಕರಿಸುವವರು ಅನುಸರಿಸಬೇಕಾದ ಶುದ್ಧಿಯ ನಿಯಮಗಳು, ಅವರು ಪೂಜಿಸುವ ದೇವರಿಗೆ ಸಲ್ಲಿಸುವ ನೈವೇದ್ಯವನ್ನು ಸಿದ್ಧ ಪಡಿಸುವ ಕ್ರಮ, ಅವರು ಸ್ವೀಕರಿಸಬೇಕಾದ ಆಹಾರಪದ್ಧತಿ ಇವೆಲ್ಲದರ ಬಗ್ಗೆ ನಮಗಾರಿಗೂ ಅರಿವಿಲ್ಲದ ಅನೇಕ ಸೂಕ್ಷ್ಮಗಳಿವೆ. ಇಂದೂ ಉಡುಪಿ ಮಠಗಳಲ್ಲಿ ಆ ಸೂಕ್ಷ್ಮಗಳನ್ನು ಕಟ್ಟು ನಿಟ್ಟಾಗಿ ಆಚರಿಸಲಾಗುತ್ತಿದೆ. ಇವುಗಳ ಆಚರಣೆಯಿಂದಲೇ ದೇಹ ಶುದ್ಧಿ ,ಅಂತಃಕರಣಶುದ್ಧಿ ಎಂದು ಸಂಪ್ರದಾಯದ ಶ್ರದ್ಧೆ.

ಆ ನಿಯಮಗಳನ್ನು ವಿದೇಶಗಳಲ್ಲಿ ಅನುಸರಿಸುವುದು ಅಸಾಧ್ಯವೆನ್ನುವುದು ಎಲ್ಲರಿಗೂ ಗೊತ್ತು. ಇದನ್ನರಿತ ಶ್ರೀ ಪುತ್ತಿಗೆ ಶ್ರೀಗಳು ಇದುವರೆಗೆ ತಾವು ಪೂಜಿಸಬೇಕಾದ ಮಠದ ಮುಖ್ಯದೇವರನ್ನು ವಿದೇಶಕ್ಕೆ ಎಂದೂ ತೆಗೆದು ಕೊಂಡು ಹೋಗಿಲ್ಲ. ಈ ನಿಯಮಗಳೆಲ್ಲವೂ ಕಂದಾಚಾರಗಳು.ಅವುಗಳನ್ನು ಕಿತ್ತೊಗೆಯಬೇಕೆಂದು ಅನೇಕರು ಹೇಳಬಹುದು. ಆದರೆ ಸಂಪ್ರದಾಯದ ಕಟ್ಟುಪಾಡುಗಳ ವಿಷಯದಲ್ಲಿ ಮಾತನಾಡಲು ಅವರಿಗೆ ಅಧಿಕಾರವಿಲ್ಲ. ಸಾಮಾನ್ಯರಿಗೆ ಅನುಷ್ಠಿಸಲು ಸಾಧ್ಯವಿಲ್ಲದ ಅನೇಕ ನಿಯಮಗಳನ್ನು ಜೈನ ಸಂನ್ಯಾಸಿಗಳು ಇಂದಿಗೂ ತಪ್ಪದೇ ಆಚರಿಸುತ್ತಾರೆ. ಅದರ ಬಗ್ಗೆ ಜೈನ ಸಮಾಜ ಮಾತ್ರವಲ್ಲದೆ ಎಲ್ಲರಿಗೂ ಗೌರವವಿದೆ.ಇತರರಿಗೆ ತೊಂದರೆಯುಂಟು ಮಾಡದ, ವೈಯಕ್ತಿಕವಾದ ಅಂತಹ ನಿಯಮಗಳನ್ನು ಎಲ್ಲರೂ ಗೌರವಿಸುತ್ತಾರೆ. ವೈದಿಕ ಸಂಪ್ರದಾಯದಲ್ಲಿ ಮಾತ್ರ ನಿರುಪದ್ರವಿಯಾದ ಈ ಸಂಪ್ರದಾಯಗಳ ಬಗ್ಗೆ ತಿರಸ್ಕಾರವೇಕೆ??

ಹಿಂದೂ ಧರ್ಮ ಅತ್ಯಂತ ಉದಾರ ಮನೋಭಾವವನ್ನು ಪಡೆದಿದೆ. "ಕೃಣ್ವಂತೋ ವಿಶ್ವಮಾರ್ಯಂ" - ಇಡೀ ವಿಶ್ವವೇ ಸುಸಂಸ್ಕೃತವಾಗಲೀ ಎಂಬುದು ಪ್ರಾಚೀನರ ಧ್ಯೇಯವಾಕ್ಯವೇ ನಿಜ. ಕ್ರೋಧವನ್ನು ತ್ಯಜಿಸುವುದು,ಸತ್ಯನಿಷ್ಠೆ, ಕ್ಷಮೆ, ಮೊದಲಾದ ಸದ್ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆನ್ನುವುದೇ ಧರ್ಮಶಾಸ್ತ್ರಗಳ ಆದೇಶ. ಆದರೆ ಯಾರ ಬಗ್ಗೆಯೂ ಅಗೌರವ ತೋರದೆ,ವಿಶ್ವದ ಎಲ್ಲೆಡೆ ಧರ್ಮ -ತತ್ತ್ವಜ್ಞಾನ ಪ್ರಸಾರ ಕಾರ್ಯಗಳ ಬಗ್ಗೆ ವಿಶೇಷ ಆದರ ತೋರಿಸುವುದು ಉಚಿತವೇ ಸರಿ. ವಿದೇಶಗಮನಕ್ಕೆ ಸಂಬಂಧಿಸಿದಂತೆ ಕೇವಲ ದ್ವೈತ ಪೀಠಗಳು ಮಾತ್ರವಲ್ಲದೆ ಈ ದೇಶದ ಎಲ್ಲ ಅದ್ವೈತ-ವಿಶಿಷ್ಟಾದ್ವೈತ ಸಂಪ್ರದಾಯದ ಪೀಠಗಳೂ ಒಪ್ಪಿರುವ ನಿಯಮಗಳನ್ನು ಶ್ರೀಪುತ್ತಿಗೆ ಶ್ರೀಗಳು ಗೌರವಿಸಿ ಉಡುಪಿ ಶ್ರೀ ಕೃಷ್ಣಪೂಜೆಯ ವ್ಯವಸ್ಥೆ ಮಾಡಬೇಕೆಂದು ಅಸಂಖ್ಯಾತ ಭಕ್ತರ ಪ್ರಾರ್ಥನೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more