ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿತು ಕುಮಾರವ್ಯಾಸ ಭಾರತ ಮರಾಠಿಗೆ ಅನುವಾದಿಸಿದ ಪ್ರೊಫೆಸರ್

|
Google Oneindia Kannada News

ಅವರ ಹೆಸರು ಜೆ.ಸಿ.ಕುಲಕರ್ಣಿ. ನಿವೃತ್ತ ಕೆಮಿಸ್ಟ್ರಿ ಪ್ರೊಫೆಸರ್. ಸದ್ಯಕ್ಕೆ ಪರಿಚಯಿಸುವುದಾದರೆ ತಮ್ಮ ಅನುವಾದ ಕಾವ್ಯವೊಂದರ ಬಿಡುಗಡೆ ನಿರೀಕ್ಷೆಯಲ್ಲಿರುವ ಲೇಖಕರು. ಪ್ರೊಫೆಸರ್ ಸಾಹೇಬರು ಕನ್ನಡದ ಕುಮಾರವ್ಯಾಸ ಭಾರತವನ್ನು ಮರಾಠಿಗೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲ, ಇವರು ಅನುವಾದಿಸಿದ ಕಾವ್ಯಕ್ಕೆ ಭಾರಿ ಮನ್ನಣೆ ಕೂಡ ದೊರೆತಿದೆ. ಪುಣೆ ವಾಡಿಯಾ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದ ಕುಲಕರ್ಣಿ ಅವರು ಮಹಾರಾಷ್ಟ್ರ ಟ್ಯಾಲೆಂಟ್ ಸರ್ಚ್ ಎಕ್ಸಾಂನ ಸ್ಥಾಪಕರು ಹೌದು.

Kulakarni

'ಅನುವಾದಕ್ಕೆ ನನಗೆ ಏಳು ವರ್ಷ ಬೇಕಾಯಿತು. ನಿವೃತ್ತಿಗೂ ಮುಂಚೆ ನಾನು ಆ ಭಾಷೆಯನ್ನು ಕಲಿತೆ. ಈ ಕೆಲಸಕ್ಕಾಗಿ ನನ್ನನ್ನೇ ಅರ್ಪಿಸಿಕೊಂಡೆ. ನಾನು ಅನುವಾದ ಮಾಡುವುದಕ್ಕೆ ಆರಂಭಿಸಿದ್ದು ನಿವೃತ್ತಿ ನಂತರ. ಅಂದರೆ 2009ರಲ್ಲಿ. ಈ ವರ್ಷ ನಾನು ಹಿಡಿದ ಕೆಲಸ ಪೂರ್ತಿ ಆಯಿತು' ಎನ್ನುತ್ತಾರೆ ಕುಲಕರ್ಣಿ. ಕೃತಿಗೆ 'ಕುಮಾರವ್ಯಾಸ ಮಹಾಭಾರತ' ಅಂತ ಹೆಸರಿಟ್ಟಿದ್ದು, ಪುಣೆಯ ನಿವಾರ ಹಾಲ್ ನಲ್ಲಿ ಆಗಸ್ಟ್ 21ರಂದು ಕೃತಿ ಬಿಡುಗಡೆ ಕಾರ್ಯಕ್ರಮ ಇದೆ.[ನತದೃಷ್ಟ ನಾಯಕನ ಉಭಯ ಕುಶಲೋಪರಿ]

'ಮರಾಠಿಗೆ ಅನುವಾದ ಆದ ಕನ್ನಡ ಸಾಹಿತ್ಯವನ್ನು ಓದುತ್ತಿದ್ದವನು ನಾನು. ಕನ್ನಡ ಸಾಹಿತ್ಯ ಶ್ರೀಮಂತಿಕೆಯ ಪರಿಚಯ ನನಗೆ ಆ ಮೂಲಕ ಆಯಿತು. ಕನ್ನಡದ ಕೆಲವು ಸಾಹಿತ್ಯ ಕೃತಿಗಳನ್ನಾದರೂ ನಾನು ಮರಾಠಿಗೆ ಅನುವಾದ ಮಾಡಬೇಕು ಅನ್ನಿಸಿತು. ಆ ತಕ್ಷಣವೇ ಕನ್ನಡ ಸಾಹಿತ್ಯದ ಅದ್ಭುತ ಕೃತಿಗಳನ್ನು ಹುಡುಕುವುದಕ್ಕೆ ಆರಂಭಿಸಿದೆ. ಆಗ ನನಗೆ ಸಿಕ್ಕವನು ಕುಮಾರವ್ಯಾಸ: ತನ್ನನ್ನು ತಾನು ವ್ಯಾಸರ ಮಗ ಎಂದು ಕರೆದುಕೊಂಡ ಮಹಾನ್ ಕವಿ.

'600 ವರ್ಷಗಳ ಹಿಂದೆ ಮಹಾಭಾರತವನ್ನು ತನ್ನ ಕಾವ್ಯದ ಮೂಲಕ ಮತ್ತೆ ಕಟ್ಟಿಕೊಟ್ಟಿದ್ದಾನೆ ಆತ. ಸಾಮಾನ್ಯವಾಗಿ 5-10 ವರ್ಷಗಳಲ್ಲಿ ಮರೆತು ಹೋಗುವ ಯಾವುದೋ ಕಾದಂಬರಿಯನ್ನು ಅನುವಾದಿಸುವ ಬದಲು ಕನ್ನಡ ಸಾಹಿತ್ಯದ ಮೇರು ಕಾವ್ಯವನ್ನೇ ಮರಾಠಿಗೆ ತರುವುದಕ್ಕೆ ನಿರ್ಧರಿಸಿದೆ' ಎನ್ನುತ್ತಾರೆ ಕುಲಕರ್ಣಿ.[ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ]

ಕುಲಕರ್ಣಿ ಅವರ ಬಾಲ್ಯದ ಐದಾರು ವರ್ಷ ಕಳೆದಿದ್ದು ಕನ್ನಡದ ವಾತಾವರಣದಲ್ಲೇ. ಆದರೆ ಅವರಿಗೆ ಕನ್ನಡ ಲಿಪಿ ಬರೆಯುವುದಕ್ಕೆ ಓದುವುದಕ್ಕೆ ಬರ್ತಿರಲಿಲ್ಲ. ಆದರೆ ನಿವೃತ್ತರಾಗುವ ಎರಡು ವರ್ಷಕ್ಕೆ ಮೊದಲು ಪಟ್ಟಾಗಿ ಭಾಷೆಯನ್ನು ಕಲಿತಿದ್ದಾರೆ. ಅನುವಾದ ಮಾಡುವ ಸಂದರ್ಭದಲ್ಲಿ ಒಂದೇ ಒಂದು ಪದದ ಅರ್ಥ ತಿಳಿಯದಿದ್ದರೂ ಅದನ್ನು ತಿಳಿದುಕೊಳ್ಳುವ ಸಲುವಾಗಿ 200 ಕಿ.ಮೀ. ದೂರದಲ್ಲಿರುವ, ಅವರಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿದ್ದಾರೆ.

'ನಮಗೆಲ್ಲ ಮಹಾಭಾರತ ಗೊತ್ತು. ಆದರೆ ತನ್ನ ಕಾವ್ಯದ ಮೂಲಕ ಕುಮಾರವ್ಯಾಸ ಕಟ್ಟಿಕೊಟ್ಟ ರೀತಿ ಅತ್ಯಂತ ಸೊಗಸಾಗಿದೆ. 'ವ್ಯಾಸರು ಇದನ್ನು ಕೃಷ್ಣನ ಕಥೆ ಅಂತ ಕರೆಯುತ್ತಾರೆ. ವ್ಯಾಸರು ಬರೆದ ಮಹಾಭಾರತದಲ್ಲಿ ಇಲ್ಲದ ಎಷ್ಟೋ ಸನ್ನಿವೇಶಗಳನ್ನು ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಸೇರಿಸಿದ್ದಾನೆ.ದ್ರೌಪತಿ ವಸ್ತ್ರಾಪಹರಣ ಅದಕ್ಕೆ ಉತ್ತಮ ಉದಾಹರಣೆ. ಹಾಗಂತ ಕುಮಾರವ್ಯಾಸ ಕಾವ್ಯದ ಮೂಲವನ್ನೇನೂ ಬದಲಿಸಿಲ್ಲ. ಆತನ ಕಾವ್ಯದಲ್ಲೂ ಪಾಂಡವರೇ ನಾಯಕರು, ಕೌರವರೇ ಪ್ರತಿನಾಯಕರು. ಅದರೆ ಕೃಷ್ಣನ ನಾಯಕ ಗುಣವನ್ನು ತೋರಿಸುವುದಕ್ಕೆ ಆತ ಭಗವದ್ಗೀತೆಯಿಂದ ಕೆಲ ಅಂಶಗಳನ್ನು ತೆಗೆದುಕೊಂಡಿದ್ದಾನೆ' ಎನ್ನುತ್ತಾರೆ ಕುಲಕರ್ಣಿ.[ವಿದುರನೀತಿ ಕುರಿತು ಬನ್ನಂಜೆ ಗೋವಿಂದಾಚಾರ್ಯರ ರಸವತ್ತಾದ ಪ್ರವಚನ]

'ಅನುವಾದದ ಸಂದರ್ಭದಲ್ಲಿ ಅದರ ಸಂತೋಷವನ್ನು ಮನಸಾರೆ ಅನುಭವಿಸಿದ್ದೇನೆ. ನಿವೃತ್ತನಾದ ನಂತರ ನನ್ನ ಜೀವನದ ಅತ್ಯುತ್ತಮ ಸಮಯ ಅದು. ಈ ಸಾಹಿತ್ಯ ಕೃತಿಯ ಪ್ರಕಾಶನದ ಜವಾಬ್ದಾರಿ ನಾನೇ ತೆಗೆದುಕೊಂಡಿದ್ದೀನಿ. ನನಗೆ ಸಹಾಯ ಮಾಡಿದ ಸಹೋದ್ಯೋಗಿಗಳು, ಅನುವಾದದ ವೇಳೆ ನೆರವಾದ ಎಲ್ಲರಿಗೂ ಗೌರವ ಸಲ್ಲಿಸಬೇಕು' ಎನ್ನುತ್ತಾರೆ ಕುಲಕರ್ಣಿ.

ಕನ್ನಡ ದಾಸ ಸಾಹಿತ್ಯ ಪರಂಪರೆಯ ಪುರಂದರದಾಸರು ಹಾಗೂ ಕನಕದಾಸರ ಸಾಹಿತ್ಯವನ್ನು ಮರಾಠಿಗೆ ತರಬೇಕು ಎಂಬುದು ಕುಲಕರ್ಣಿಯವರ ಹೊಸ ಕನಸು. ಅದು ಈಡೇರಲಿ ಎಂದು ಹಾರೈಸೋಣ.

English summary
Kumaravyasa Bharatha Kannada classic poetry translated to Marathi by retired Chemistry professor J.C.Kulakarni. It will be releasing on August 21st in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X