ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾವಲೋಕನ ಕುರಿತು ಗುರುರಾಜ್ ದೇಶಪಾಂಡೆ ನುಡಿ

By ಡಾ. ಗುರುರಾಜ್ ದೇಶಪಾಂಡೆ
|
Google Oneindia Kannada News

ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿಯ ವಾತಾವರಣದಲ್ಲಿ ಬೆಳೆದ ನಾನು, ಮದ್ರಾಸ್ (ಈಗಿನ ಚೆನ್ನೈ)ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಕೆನಡಾದ ನ್ಯೂ ಬ್ರನ್ಸ್‌ವಿಕ್‌ನಲ್ಲಿ ನೌಕರಿ ಮಾಡಿದ ಮೇಲೆ ಉದ್ಯಮಿಯಾಗಿ ಪರಿವರ್ತನೆಗೊಂಡವ. ನಂತರ ಅಮೆರಿಕದ ಬಾಸ್ಟನ್‌ನಲ್ಲಿ ನೆಲೆನಿಂತು ಒಬ್ಬ ಯಶಸ್ವಿ ಉದ್ಯಮಿಯಾಗಿ ಹಲವಾರು ಜಾಗತಿಕ ಮಟ್ಟದ ಕಂಪನಿಗಳನ್ನು ಹುಟ್ಟುಹಾಕಿದವ.

ಆ ಎಲ್ಲ ಹಂತದಲ್ಲೂ ತಂತ್ರಜ್ಞಾನ ಮತ್ತು ಉದ್ಯಮಶೀಲ ಮನೋಭಾವ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಬಹಳ ಹತ್ತಿರದಿಂದ ನಾನು ಆ ಎರಡೂ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳನ್ನು ಕಂಡವನು. ಅನುಭವಿಸಿ ಅರ್ಥ ಮಾಡಿಕೊಂಡವನು. ನನ್ನ ಕಣ್ಣ ಮುಂದೆಯೇ ಕಳೆದ ಆರು ದಶಕಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ನಾಟಕೀಯ ಬದಲಾವಣೆಗಳು ಆಗಿಹೋಗಿವೆ. ಆ ಪೈಕಿ ಹೆಚ್ಚಿನೆಲ್ಲಾ ಬದಲಾವಣೆಗಳಿಗೆ ತಾಂತ್ರಿಕ ಸಂಶೋಧನೆಗಳು ಮತ್ತು ಆ ಸಂಶೋಧನೆಗಳನ್ನು ಬದುಕಿಗೆ ಪೂರಕವಾಗಿ ಅವಳಡಿಸುವ ಧೈರ್ಯ ಮಾಡಿದ ಉದ್ಯಮಶೀಲರು ಕಾರಣರಾಗಿದ್ದಾರೆ. ತಂತ್ರಜ್ಞಾನ ಮತ್ತು ಉದ್ಯಮಶೀಲ ಮನೋಭಾವದ ಸಮ್ಮಿಲನದ ಮೂಲಕ ಜಗತ್ತಿನೆಲ್ಲೆಡೆ ಕೋಟ್ಯಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲಾಗಿದೆ.

ಈಗ ನಾವು ಬದುಕುತ್ತಿರುವ ಆಧುನಿಕ ತಂತ್ರಮಯ ಜಗತ್ತಿನಲ್ಲಿ ಸಂಶೋಧನೆ ಮತ್ತು ಉದ್ಯಮಶೀಲ ಮನೋಭಾವದ ಶಕ್ತಿ ದಿನದಿಂದ ದಿನಕ್ಕೆ ಇಮ್ಮಡಿಸುತ್ತಿದೆ. ಒಂದು ಕಾಲದಲ್ಲಿ ಹುಬ್ಬಳ್ಳಿಯಲ್ಲಿರುವ ನನ್ನ ತಂದೆ ಬರೆದ ಪತ್ರ, ನನ್ನ ಬಾಸ್ಟನ್ ಮನೆ ತಲುಪಬೇಕಿದ್ದರೆ ಮೂವ್ವತ್ತಕ್ಕಿಂತ ಹೆಚ್ಚು ದಿನಗಳು ಬೇಕಾಗಿರುತ್ತಿತ್ತು. ಆದರೀಗ ಮೊಮ್ಮಕ್ಕಳ ನೆರವಿನೊಂದಿಗೆ ನನ್ನ ತಂದೆ ಬರೆದ ಪತ್ರ, ಮಿಂಚಂಚೆಯಲ್ಲಿ ಕ್ಷಣಮಾತ್ರದೊಳಗೆ ನನ್ನ ಇ-ಅಂಚೆ ಪೆಟ್ಟಿಗೆಗೆ ಬಂದಿರುತ್ತದೆ. ಇದು ತಂತ್ರಜ್ಞಾನದ ವೇಗಕ್ಕೆ ಒಂದು ಉದಾಹರಣೆ ಮಾತ್ರ.

Deshavalokana - an introduction to the book by Gururaj Deshpande

ಆದರೂ, ತಂತ್ರಜ್ಞಾನ ಆಧರಿತ ಆರ್ಥಿಕ ಬೆಳವಣಿಗೆಯ ನೇರ ಫಲ ಪಡೆದವರು ಮತ್ತು ಅದರಿಂದ ವಂಚಿತರಾದವರ ನಡುವೆ ಅಗಾಧವಾದ ಆರ್ಥಿಕ ಕಂದಕ ಹಾಗೆಯೇ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಪತ್ತಿನ ಕೇಂದ್ರೀಕರಣದ ಕುರಿತು ಅಪಸ್ವರ ಹೆಚ್ಚುತ್ತಿರುವುದರ ಜೊತೆಯಲ್ಲಿಯೇ, ಸಂಪತ್ತಿನ ಹಂಚಿಕೆಯ ಕುರಿತು ಸಾಕಷ್ಟು ಚರ್ಚೆಗಳು ಕೂಡ ಪರಿಣಾಮಕಾರಿಯಾಗಿ ಆರಂಭವಾಗಿವೆ. ಆದರೂ, ಆರ್ಥಿಕ ಕಂದಕದ ಆಳ-ಅಗಲ ಮಾತ್ರ ಕಡಿಮೆಯಾಗುತ್ತಿಲ್ಲ.

ಉದ್ಯಮಶೀಲ ಮನೋಭಾವ ಮತ್ತು ಆ ಮನೋಭಾವ ಉಳ್ಳ ಉದ್ಯಮಿಗಳೇ ಹಲವು ಸಂದರ್ಭಗಳಲ್ಲಿ ಈ ಸಾಮಾಜಿಕ-ಆರ್ಥಿಕ ಸಮಸ್ಯೆ ಉಲ್ಭಣಗೊಳ್ಳಲು ಮೂಲ ಕಾರಣವಾಗುತ್ತಿದ್ದಾರೆ ಎನ್ನುವುದು ಅರ್ಧಸತ್ಯ. ಆದರೆ, ಉದ್ಯಮಶೀಲ ಮನೋಭಾವದ ಮೂಲಕವೇ, ಉದ್ಯಮಗಳನ್ನು ಸ್ಥಾಪಿಸುವ ಮೂಲಕವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎನ್ನುವುದೇ ನನ್ನ ದೃಢ ನಂಬಿಕೆ.

ಬಡತನ ಮತ್ತು ಸಾಮಾಜಿಕ-ಅರ್ಥಿಕ ಕಂದಕ ಕೇವಲ ಅಭಿವೃದ್ಧಿ ಶೀಲ ಮತ್ತು ಹಿಂದುಳಿದ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಮುಂದುವರಿದ ದೇಶಗಳ ಸಂಪದ್ಭರಿತ ವಾತಾವರಣದ ನಡುವೆಯೂ ಸೊರಗುತ್ತಿರುವ ಬಡ ಸಮುದಾಯಗಳು ಹಲವಿವೆ.

ಮೇಲಿನ ಎರಡೂ ಸಂದರ್ಭಗಳಲ್ಲೂ ಆ ಕಂದಕವನ್ನು ತುಂಬಲು ಉಳ್ಳವರು ಮತ್ತು ಇಲ್ಲದವರ ನಡುವೆ ಒಂದು ಸಾಮಾಜಿಕ-ಆರ್ಥಿಕ ಸೇತುವೆ ನಿರ್ಮಾಣ ಮಾಡಲು ಹಲವಾರು ದಶಕಗಳಿಂದ ಸೇವೆ, ಸಹಾಯ ಮತ್ತು ಆರ್ಥಿಕ ನೆರವು ನೀಡುವ ಸಿದ್ಧ ಮಾದರಿಯನ್ನೇ ನಾವು ಬಳಸಿಕೊಳ್ಳುತ್ತಿದ್ದೇವೆ. ತಾತ್ಕಾಲಿಕವಾಗಿ ಈ ಸಿದ್ಧ ಮಾದರಿ ಸಮಸ್ಯೆಗೆ ಪರಿಹಾರ ನೀಡಿದರೂ, ದೀರ್ಘಾವಧಿ ಪರಿಹಾರ ಅಥವಾ ಶಾಶ್ವತ ಪರಿಹಾರ ಮಾತ್ರ ಕನಸಾಗಿಯೇ ಉಳಿದು ಬಿಡುತ್ತದೆ. ಉಳಿದಂತೆ ಸ್ಥಳೀಯ ಸಮುದಾಯ ಆ ಸಮಸ್ಯೆಯ ಒಂದು ಭಾಗವಾಗಿ, ಪರಿಹಾರದ ಭಾಗವಾಗುವಂತೆ ಮಾಡಲು ಆ ಸಿದ್ಧ ಮಾದರಿಗಳು ವಿಫಲವಾಗುತ್ತಿವೆ.

Deshavalokana - an introduction to the book by Gururaj Deshpande

ಇಂತಹ ಸನ್ನಿವೇಶದಲ್ಲಿ ಬೇರು ಮಟ್ಟದಲ್ಲಿ ಉದ್ಯಮಶೀಲ ಮನೋಭಾವಕ್ಕೆ ಬೆಂಬಲ ನೀಡಿದರೆ, ಆ ಹಂತದಲ್ಲಿಯೇ ತೀವ್ರ ಸ್ವರೂಪದ ಬದಲಾವಣೆಗಳಾಗಿ, ಸಕಾರಾತ್ಮಕ ಪರಿಣಾಮ ಉಂಟಾಗಿ, ಸಮಾಜ-ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ. ಬೇರು ಹಾಗೂ ಸ್ಥಳೀಯ ಮಟ್ಟದಲ್ಲಿ, ಸ್ಥಳೀಯರಿಗೆ ಅವರದೇ ಆದ ಕನಸುಗಳನ್ನು ನನಸಾಗಿಸಿಕೊಳ್ಳುವಂತಹ ವಾತಾವರಣದ ಸೃಷ್ಟಿ ಮಾಡುವುದು ಉದ್ಯಮಶೀಲ ಮನೋಭಾವದ ಮೂಲ ಉದ್ದೇಶವಾಗಬೇಕು. ಬದಲಾಗಿ ಬೇರು ಮಟ್ಟದ ಸಮಸ್ಯೆಗಳಿಗೆ ಬೇರೆಲ್ಲಿಂದಲೋ ಪರಿಹಾರ ಹುಡುಕಿಕೊಂಡು ಬಂದು ಹೇರುವ ಪ್ರಯತ್ನವಾಗಕೂಡದು.

ಉನ್ನತ ತಂತ್ರಜ್ಞಾನ, ವೇಗವಾದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಉದ್ಯಮಗಳು ಮೇಲ್ಮಟ್ಟದಲ್ಲಿ ಇರಲೇಬೇಕು. ಅದರೊಂದಿಗೆಯೇ, ಸಮಾಜದ ಬೇರು ಮಟ್ಟದಲ್ಲಿ ಸಮೃದ್ಧ, ಸಂಪದ್ಭರಿತ ಭವಿಷ್ಯ ನಿರ್ಮಾಣವನ್ನು ಸಮಸ್ಯೆ ಇರುವವರೇ ಮಾಡಿಕೊಳ್ಳುವಂತಹ ವಾತಾವರಣದ ಸೃಷ್ಟಿ ಕೂಡ ಆಗಬೇಕು, ಸ್ಥಳೀಯ ಉದ್ಯಮಗಳು ಕೂಡ ವ್ಯಾಪಕವಾಗಿ ಅಭಿವೃದ್ಧಿ ಹೊಂದಬೇಕು. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ಅದೇನೆಂದರೆ ಸ್ಥಳೀಯ ಮಟ್ಟದಲ್ಲಿ ಉದ್ಯಮಶೀಲರಿಗೆ ಪ್ರೋತ್ಸಾಹ ನೀಡಬೇಕು. ಆ ಮೂಲಕ ಬೇರುಮಟ್ಟದಲ್ಲಿಯೇ ಸಾಮಾಜಿಕ-ಆರ್ಥಿಕ ಸ್ಥಿತಿ ಸದೃಢವಾಗುವಂತೆ ನೋಡಿಕೊಳ್ಳಬೇಕು. ಹಾಗಾಗಬೇಕಿದ್ದಲ್ಲಿ ಬೇರು ಮಟ್ಟದ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು. ಅಂತಹ ಮನೋಭಾವ ಹೊಂದಿದ್ದಲ್ಲಿ ಮಾತ್ರ ಅಂತಹ ನವ ಉದ್ಯಮಶೀಲರಿಗೆ ಬೆಂಬಲ ನೀಡಲು ಸಾಧ್ಯವಾಗುತ್ತದೆ.

ಉನ್ನತ ತಂತ್ರಜ್ಞಾನ ಮತ್ತು ಬೇರು ಮಟ್ಟ ಎರಡೂ ಔದ್ಯಮಿಕ ಕ್ಷೇತ್ರಗಳನ್ನು ಕಳೆದ ಮೂರು ದಶಕಗಳ ಕಾಲ ಬಹಳ ಹತ್ತಿರದಿಂದ ಕಂಡಿರುವ ನನ್ನ ಪಾಲಿಗೆ ಉದ್ಯಮಶೀಲ ಮನೋಭಾವವೇ ಉಸಿರು. ಯಾವುದೇ ಮಟ್ಟದಲ್ಲೇ ಇರಲಿ, ಉದ್ಯಮಗಳನ್ನು ಸೃಷ್ಟಿಸುವ ಮೂಲಕ ಸಾಮಾಜಿಕ-ಆರ್ಥಿಕವಾಗಿ ಸಾಕಷ್ಟು ಸಕಾರಾತ್ಮಕ ಪರಿಣಾಮ ಉಂಟುಮಾಡಲು ಸಾಧ್ಯ.

ನನ್ನ ಪ್ರಕಾರ ಉದ್ಯಮಶೀಲ ಮನೋಭಾವ ಅತ್ಯುತ್ತಮ ಬದುಕಿನ ಒಂದು ಪರಿಣಾಮಕಾರಿ ಮುಖ. ಯಾವುದೇ ಉದ್ಯಮಶೀಲ ಮನೋಭಾವ ಇರುವ ವ್ಯಕ್ತಿಯನ್ನು ಗಮನಿಸಿ. ಆತನಿಗೆ ಎರಡು ಪ್ರಮುಖ ಗುಣಗಳು ಇರುತ್ತವೆ. ಒಂದು ಮುನ್ನುಗ್ಗುವ ಛಾತಿ ಮತ್ತು ದೃಢವಾದ ಸಕಾರಾತ್ಮಕ ನಂಬಿಕೆ. ಮುಂದಿರುವ ಪ್ರತಿಯೊಂದು ಸಮಸ್ಯೆಯೂ ಅವರಿಗೆ ಒಂದು ಅವಕಾಶವಾಗಿ ಕಂಡುಬರುತ್ತದೆ. ಇಂದಿಗಿಂತ ನಾಳೆ ಅತ್ಯುತ್ತಮವಾಗಿರುತ್ತದೆ ಎನ್ನುವ ನಂಬಿಕೆ ಸದಾ ಅವರಿಗಿರುತ್ತದೆ. ಅಂತಹ ಸಕಾರಾತ್ಮಕ ಮನೋಭಾವ ಮತ್ತು ಅತ್ಯುತ್ತಮ ನಾಳೆಯ ನಂಬಿಕೆಯ ಜೀವನ ಅವರ ಪಾಲಿಗೆ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ. ಜಗತ್ತಿನೆಲ್ಲೆಡೆ ಅಂತಹ ಕೋಟ್ಯಂತರ ಉದ್ಯಮಿಗಳ ಉಗಮವಾಗಲಿ. ಅವರವರ ಸಮುದಾಯ ಎದುರಿಸುತ್ತವ ಸಮಸ್ಯೆಗಳಿಗೆ ಅವರೆಲ್ಲ ಒಟ್ಟಾಗಿ ಪರಿಹಾರ ನೀಡಲಿ. ಉತ್ತಮ ಭವಿಷ್ಯಕ್ಕೆ ಅವರೆಲ್ಲ ಕೂಡಿ ಮುನ್ನುಡಿ ಬರೆಯಲಿ ಮತ್ತು ಸಮಾನ ಸಮಾಜಕ್ಕೆ ಭದ್ರ ಬುನಾದಿ ಹಾಕಲಿ ಎನ್ನುವುದೇ ನನ್ನ ಆಶಯ.

ತಂತ್ರಜ್ಞಾನದ ಮೂಲಕ ಕಟ್ಟುವ ಬೃಹತ್ ಉದ್ಯಮವಾಗಲೀ ಅಥವಾ ಬೇರು ಮಟ್ಟದಲ್ಲಿನ ಒಂದು ಪುಟ್ಟ ಉದ್ಯಮವೇ ಆಗಲೀ, ಒಬ್ಬ ಉದ್ಯಮಿ ಎದುರಿಸಬೇಕಾದ ಸಮಸ್ಯೆಗಳು, ಪ್ರಶ್ನೆಗಳು ಮತ್ತು ಅಡೆ-ತಡೆಗಳು ಒಂದೇ ಆಗಿರುತ್ತವೆ. ಈ ಪುಸ್ತಕದ ಮುಂದಿನ 27 ಅಧ್ಯಾಯಗಳಲ್ಲಿ ಆ ಎಲ್ಲ ಪ್ರಶ್ನೆಗಳಿಗೆ ನನ್ನ ಅನುಭವದ ಆಧಾರದ ಮೇಲೆ ಪ್ರಾಮಾಣಿಕ ಉತ್ತರ ನೀಡುವ ಪ್ರಯತ್ನ ಮಾಡಲಿದ್ದೇನೆ. ಆ ಎಲ್ಲ ಅಧ್ಯಾಯಗಳನ್ನು ಓದುತ್ತಾ ಸಾಗಿದಂತೆ ನಿಮ್ಮ ಮನಸ್ಸುಗಳಲ್ಲಿ ಮತ್ತಷ್ಟು ಪ್ರಶ್ನೆಗಳು ಉದ್ಭವಿಸಬಹುದು. ಆ ಪ್ರಶ್ನೆಗಳೇ ಮತ್ತಿಷ್ಟು ಹೊಸ ಅಧ್ಯಾಯಗಳಿಗೆ, ಮತ್ತೊಂದು ಹೊಸ ಪುಸ್ತಕಕ್ಕೆ ಮುನ್ನುಡಿಯಾಗಬಹುದು ಎನ್ನುವುದು ನನ್ನ ಅನಿಸಿಕೆ. ಹಾಗಾದರೆ ನನ್ನ ಈ ಕಿರು ಪ್ರಯತ್ನ ಸಾರ್ಥಕ.

English summary
Dr. Gururaj Deshpande also known as Desh Deshpande, an Indian American venture capitalist and entrepreneur, has written a book Deshavalokana in Kannada. The book will be released in Hubballi on 7th July in Hubballi at Deshpande Foundation. An introduction by the author.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X