• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಳುವಾರು ಮಹಮ್ಮದ್ ಕುಂಞ ಅವರ 'ಓದಿರಿ' ವಿಮರ್ಶೆ

By ರಾಘವೇಂದ್ರ ಅಡಿಗ, ಬೆಂಗಳೂರು
|
Google Oneindia Kannada News

ಕನ್ನಡದ ಸೃಜನಶೀಲ ಬರಹಗಾರರಾದ ಬೊಳುವಾರು ಮಹಮದ್ ಕುಂಞ ಅವರ ಮೂರನೇ ಕಾದಂಬರಿ - "ಓದಿರಿ" ಯಲ್ಲಿ ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನೋರ್ವನ ಜೀವನದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಆ ಮೂಲಕ ಇದು ಬೇರೆಲ್ಲಾ ಕೃತಿಗಳಿಗಿಂತಭಿನ್ನವಾಗಿರುತ್ತದೆ ಹಾಗೂ ಮುಖ್ಯವಾಗುತ್ತದೆ. ಈ ಪುಸ್ತಕ ಕುರಿತ ವಿಮರ್ಶೆ ಇಲ್ಲಿದೆ

ಮತ್ತೊಮ್ಮೆ ಕೇಳಿಸಿತ್ತು! ನೇರವಾಗಿ ಆಕಾಶದಿಂದ ಭೂಮಿಗೆ ಇಳಿದು ಬಂದಂತಿದ್ದ ಆ ದ್ವನಿ.

ಸಂಶಯವೇ ಇಲ್ಲ. ಆರು ತಿಂಗಳ ಹಿಂದೆ ಇದೇ "ಹಿರಾ" ಗುಹೆಯೊಳಗಿನ ಕತ್ತಲಲ್ಲಿ ಕುಳಿತು ದ್ಯಾನಿಸುತ್ತಿದ್ದಾಗ, ಎದೆ ಝಲ್ಲೆನ್ನಿಸುವಂತೆ ಬೆಚ್ಚಿ ಬೀಳಿಸಿದ್ದ ಅದೇ ಕಂಚಿನ ಕಂಠದ ದ್ವನಿ.

"ನನಗೆ ಓದಲು ತಿಳಿಯದು."

ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಮಹಮ್ಮದರು ಗಾಬರಿಯಿಂದಲೇ ತೊದಲಿದ್ದರು. ಅದು ನಿಜವೂ ಆಗಿತ್ತು.

ಹುಟ್ಟುವ ಮೊದಲೇ ತಂದೆಯನ್ನೂ, ಎಂಟು ವರ್ಷ ತುಂಬುವ ಮೊದಲೇ ತಾಯಿಯನ್ನೂ ಕಳೆದುಕೊಂಡ ನಿರ್ಗತಿಕ ಬಾಲಕನೊಬ್ಬ, ಅನಂತರದ ಮೊದಲೆರಡು ವರ್ಷ ಬದುಕಿದ್ದು ತಾತ ಅಬ್ದುಲ್ ಮತ್ತಲೀಬರ ಆಶ್ರಯದಲ್ಲಿ. ತಾತನ ಮರಣದ ಬಳಿಕ ಸೇರಿಕೊಂಡದ್ದು ದೊಡ್ಡಪ್ಪ ಅಬೂತಾಲೀಬರ ಮನೆಗೆ.

ಹೀಗೆ, ಬಾಲ್ಯವನ್ನು ದೊಡ್ಡಪ್ಪನವರ ಆಡುಗಳನ್ನು ಮೇಯಿಸುವ ಆಳುಮಗನಾಗಿ ಮುಂದೆ ಅವರದೇ ವ್ಯಾಪಾರಿ ಮಳಿಗೆಯಲ್ಲಿ ಸಹಾಯಕನಾಗಿ ದುಡಿಯುತ್ತಾ ಯೌವ್ವನವನ್ನೆಲ್ಲಾ ಕಳೆದುಕೊಂಡಿದ್ದರೆ ಓದುವುದಾದರೂ ಹೇಗೆ? ಅಕ್ಷರವನ್ನುಳಿದು ಮಿಕ್ಕೆಲ್ಲಾ ವಿದ್ಯೆಗಳನ್ನು ಕಲಿಸಲು ಹಠ ಹಿಡಿದವನಂತಿದ್ದ ದೊಡ್ಡಪ್ಪ ಅಬೂತಾಲೀಬರು ತಮ್ಮ ಸೋದರಪುತ್ರನಿಗೆ ಹನ್ನೆರಡಾಗುತ್ತಿದ್ದಂತೆಯೇ ತಮ್ಮ ವರ್ತಕ ತಂಡದಲ್ಲಿ ಸಹಾಯಕನಂತೆ ಇರಿಸಿಕೊಂಡು ಪರದೇಶಗಳಿಗೆ ಕರೆದುಕೊಂಡು ಹೋಗಲಾರಂಭಿಸಿದ್ದರೆ ಬರಹ ಕಲಿಯುವುದಾದರೂ ಹೇಗೆ?

***
ಕನ್ನಡದ ಸೃಜನಶೀಲ ಬರಹಗಾರರಾದ ಬೊಳುವಾರು ಮಹಮದ್ ಕುಂಞ ಅವರ ಮೂರನೇ ಕಾದಂಬರಿ - "ಓದಿರಿ" ಯ ಪ್ರಥಮ ಪುಟದ ಸಾಲುಗಳಿವು. ಪ್ರವಾದಿಯ ಜೀವನ ಕುರಿತು ಐತಿಹಾಸಿಕ ಅಂಶವನ್ನೊಳಗೊಂಡ ಹಲವಾರು ಬರಹಗಳು ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದೆ.

ಆದರೆ ಇಲ್ಲಿ ಬೋಳುವಾರು ಅವರು ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನೋರ್ವನ ಜೀವನದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಆ ಮೂಲಕ ಇದು ಬೇರೆಲ್ಲಾ ಕೃತಿಗಳಿಗಿಂತಭಿನ್ನವಾಗಿರುತ್ತದೆ ಹಾಗೂ ಮುಖ್ಯವಾಗುತ್ತದೆ.

ಪ್ರವಾದಿ ಮಹಮದರ ಜೀವನ ಅರಿತವರಷ್ಟೇ ಹೊಸಬರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಈ ಕಾದಂಬರಿ ಮೂಡಿಬಂದಿದೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ತುಸು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ.

ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ 'ಓದಿರಿ' ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಎನ್ನುವುದು.

"ಅಂತರಂಗ", "ಬಹಿರಂಗ" ಮತ್ತು "ಚದುರಂಗ"ಎನ್ನುವ ಮೂರು ವಿಭಾಗಗಳಲ್ಲಿ ಕಾದಂಬರಿ ಹರಡಿಕೊಂಡಿದೆ. ಬಾಲಕ ಮುಹಮ್ಮದರಲ್ಲಿ ನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗ್ಗೆ, ಮಹಮದ ಒಳಗಿನ ಚಿಂತನೆ, ಆಲೋಚನೆಗಳಸಂಘರ್ಷವನ್ನು ಅಂತರಂಗದಲ್ಲಿ ತಿಳಿಸಿದರೆ ತಾನೇ ಅಂತಿಮ ಪ್ರವಾದಿ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಮಹಮದರ ಚಿತ್ರ, ಅದರ ನಂತರದಲ್ಲಿ ಇತರೇ ಧರ್ಮೀಯರು ಮಹಮದರನ್ನು ನೋಡುವ ರೀತಿಯ ಕುರಿತು ಬಹಿರಂಗದಲ್ಲಿ ಪ್ರಸ್ತಾಪಿಸಲಾಗಿದೆ. ಮಹಮದರು ಕಂಡುಕೊಂಡ ಸತ್ಯದ ಅನುಷ್ಠಾನಕ್ಕಾಗಿ ಅವರು ನಡೆಸುವ ಹೋರಾಟದ ಚಿತ್ರಣ ಮೂರನೇ ಹಾಗೂ ಅಂತಿಮ ಭಾಗ ಚದುರಂಗದಲ್ಲಿ ಪಡಿಮೂಡಿದೆ.

ಆದರೆ, ಕಾದಂಬರಿಯ ಅಂತಿಮ ಬಾಗದಲ್ಲಿ ಪ್ರವಾದಿಯ ಸತ್ಯವೇ ಸತ್ಯ ಎಂದು ಪ್ರತಿಪಾದಿಸುವ ಬೋಳುವಾರರ ಬರಹ ಮೊದಲೆರಡು ಭಾಗಗಳಲ್ಲಿದ್ದ ವಿಮರ್ಶಾತ್ಮಕತೆಯ ದೃಷ್ಟಿಯಿಂದ ಹೊರತಾಗಿದೆ ಎನ್ನಬಹುದು. ಆದರೆ ಇದುವರೆಗೂ ನಮಗೆ ಪರಿಚಯವಿಲ್ಲದ ಪರಿಸರದಲ್ಲಿ ನಡೆಯುವ ಕಥೆಯನ್ನು ಇಷ್ಟು ಸರಳವಾಗಿ ಹೇಳಿರುವುದು ಬೋಳುವಾರು ಅವರ ಹೆಚ್ಚುಗಾರಿಕೆಯೇ ಸರಿ.

Bolwar Mohammed Kunhi Odiri prophet Mohammad book review

ಬುದ್ಧ, ಬಸವಣ್ಣ, ಏಸು ಕ್ರಿಸ್ತ, ಅವರಂತೆಯೇ ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಹಮದರ ಕಥೆ ಮನಸ್ಸಿಗೆ ತಟ್ಟುತ್ತದೆ. ಆದರೆ, ಕಾಲ ಸರಿದಂತೆಲ್ಲಾ ಅಂದು ಅವರು ಪ್ರಾರಂಭಿಸಿದ ಧರ್ಮ ಇಂದಿಗೂ ಸರಿಯಾದ ದಾರಿಯಲ್ಲಿ ಸಾಗಿದೆಯೆ ಎಂದು ನೋಡಿದಾಗ ನಿರಾಸೆಯಾಗುವುದು ಸತ್ಯ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನುಮನುಷ್ಯ ನಿರ್ಮಿತ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ.

ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲದ ಮಹಿಮೆಯೇ ಆಗಿದೆ!

ಒಟ್ಟಾರೆಯಾಗಿ ಮುಸ್ಲಿಂ ಧರ್ಮ, ಮಹಮ್ಮದರ ಕುರಿತಂತೆ ತಿಳಿಯದಿದ್ದವರೂ ಸಹ ತಿಳಿಯಬಹುದಾದಷ್ಟು ಸರಳ ಸುಂದರವಾಗಿ ಪ್ರವಾದಿ ಮಹಮ್ಮದರ ಜೀವನವನ್ನು ಮಾನವೀಯತೆಯನೆಲೆಗಟ್ಟಿನಲ್ಲಿ ಬೋಳುವಾರು ತಮ್ಮ ಕಾದಂಬರಿ "ಓದಿರಿ" ಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಬೋಳುವಾರು ಅವರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿಕೊಳ್ಳುವಂತೆ ಯಾವುದೇ ಒಂದು ಧರ್ಮವನ್ನು ಅಥವಾ ಧರ್ಮ ಗ್ರಂಥವನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಕನಿಷ್ಟ ಒಂದು ಬಾರಿಯಾದರೂ ಓದಿಕೊಳ್ಳುವುದು ಒಳಿತು ಎಂಬುದು ನನ್ನ ನಂಬಿಕೆ. ಹೀಗೆ ಓದಿಕೊಂಡು ಅಲ್ಪ ಸ್ವಲ್ಪವಾದರೂ ಪರಸ್ಪರ ಪರಿಚಿತರಾದರೆ ನಮ್ಮೆಲ್ಲರ ಸಣ್ಣ ಪುಟ್ಟ ದೋಷಗಳು ಅಲ್ಪಸ್ವಲ್ಪವಾದರೂ ಮನ್ನಿಸಲ್ಪಡಭುದೇನೋ ಎಂಬುದು ನನ್ನ ಆಸೆ. ಮನ್ನಿಸಲ್ಪಡಲಿ.

ಆದ್ದರಿಂದ ದಯವಿಟ್ಟು ಓದಿರಿ.

English summary
Noted author and story-writer Bolwar Mohammed Kunhi 's latest novel about life of Prophet Mohammad 'Odiri'. Here is a review from Raghavendra Adiga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X