• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡತಿಯ ಇಂಗ್ಲಿಷ್‌ ಕಾದಂಬರಿ

By Staff
|

ಕಳೆದ ವರ್ಷ ಪ್ರಕಟವಾದ ಒಂದು ಇಂಗ್ಲಿಷ್‌ ಕಾದಂಬರಿಯ ಹೆಸರು -Beyond the Call of Voice. ಕಾದಂಬರಿಯಲ್ಲಿನ ನಾಯಕಿ ಮೈಸೂರಿನವಳು. ಅವಳ ಅಪ್ಪ ಅಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್‌. ಈಕೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೇ ಇಂಜಿನಿಯರಿಂಗ್‌ ಮುಗಿಸಿ, ಅಮೆರಿಕಾದಲ್ಲಿ ಮಾಸ್ಟರ್ಸ್‌ ಓದಲು ಬರುತ್ತಾಳೆ. ಅದು ಇನ್ನೂ ಇಂಟರ್ನೆಟ್‌ ಕಾಲಿಡದಿದ್ದ ಕಾಲ. ಕ್ಯಾಲಿಫೋರ್ನಿಯಾದಲ್ಲಿನ ಸ್ತ್ರೀ-ಪುರುಷ ಸಮಾನತೆ ಹಾಗೂ ಇಲ್ಲಿ ಹೊಂದಿಕೊಳ್ಳಲು ತನ್ನನ್ನು ಬಿಡದ ಭಾರತದ ಸಾಂಸ್ಕೃತಿಕ ಬಂಧಗಳನ್ನು ಗಮನಿಸಿ ವಿಷಾದ ಮತ್ತು ಸಂದೇಹದಿಂದ ಅಪ್ಪನಿಗೆ ಕಾಗದ ಬರೆಯುತ್ತಾಳೆ :

''ಅಪ್ಪ, ನೀವು ನನ್ನನ್ನು ಸಾಕಷ್ಟು ಧೈರ್ಯ ಮತ್ತು ಕೆಚ್ಚನ್ನು ಹೊಂದಿರುವ ಹಾಗೆ ಬೆಳೆಸಿದಿರಿ ಎಂದು ನನಗೆ ಗೊತ್ತು. ನೀವು ನನಗೆ ಸ್ವಾತಂತ್ರ್ಯ ಮತ್ತು ಅತ್ಯುತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಿದಿರಿ. ಆದರೆ ಇಲ್ಲಿಗೆ ಬಂದ ಮೇಲೆ, ಭಾರತ ನನ್ನನ್ನು ಎಂದಿಗೂ ಪಶ್ಚಿಮಕ್ಕೆ ಹೊಂದಿಕೊಳ್ಳಲಾಗದ ರೀತಿ ಸೀಮಿತಗೊಳಿಸಿತೇ ಎಂದು ಯೋಚಿಸಲು ಪ್ರಾರಂಭಿಸಿದ್ದೇನೆ.

ನಾನು ಇಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಡುವ ಪಶ್ಚಿಮದ ಮಹಿಳೆಯರು ಯಾವಾಗಲೂ ತಮ್ಮ ಮುಖವೆತ್ತಿಕೊಂಡು, ಆತ್ಮವಿಶ್ವಾಸದಿಂದ ನಡೆಯುತ್ತಾರೆ. ಅವರು ತಮಗಿಷ್ಟವಾದ ರೀತಿಯಲ್ಲಿ ಬಟ್ಟೆ ಧರಿಸುತ್ತಾರೆ, ತಮಗೆ ಬೇಕೆನಿಸಿದವರ ಜೊತೆ ಮಾತನಾಡುತ್ತಾರೆ. ಕುಡಿಯುವುದಕ್ಕಾಗಿ ಮತ್ತು ನೃತ್ಯ ಮಾಡುವುದಕ್ಕಾಗಿ ಹೊರಗೆ ಹೋಗುತ್ತಾರೆ ಮತ್ತು ಕೇವಲ ಖುಷಿಗಾಗಿ ಫ್ಲರ್ಟ್‌ ಮಾಡುತ್ತಾರೆ!

Beyond the Call of Voiceನಮ್ಮ ಯಾವುದೇ ಧರ್ಮಗ್ರಂಥಗಳಾಗಲಿ, ಪುರಾಣಗಳಾಗಲಿ ಹೆಣ್ಣನ್ನು ಅವಳ ಸಹಜೀವಿಯ ಜೊತೆಗೆ ಸಮಾನವೆಂದು ಇಟ್ಟಿಲ್ಲ. ಗಾಂಭೀರ್ಯ ಮತ್ತು ಸ್ತ್ರೀಸಹಜ ಗುಣಗಳನ್ನು ಹೊಂದಿರುವುದು ಶರಣಾಗತಿಯಿಂದ ಕೂಡಿರುವುದಕ್ಕೆ ಸಮಾನಾರ್ಥಕ. ಆದರೆ ಈ ಸಮಾಜಕ್ಕೆ ಹೊಂದಿಕೊಳ್ಳುವುದು ನನ್ನನ್ನು ಭ್ರಷ್ಟಗೊಳಿಸುತ್ತದೆ ಮತ್ತು ಆ ಪ್ರಕ್ರಿಯೆಯಲ್ಲಿ ನಾನು ನನ್ನ ಭಾರತೀಯ ಮೌಲ್ಯಗಳನ್ನು ಕಳೆದುಕೊಳ್ಳುವ ಭಯವಾಗುತ್ತದೆ.

ಯಾವ ಮೌಲ್ಯಗಳನ್ನು ನಾನು ಇಷ್ಟು ಉತ್ಕಟವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ? ನನಗೇ ಸರಿಯಾಗಿ ತಿಳಿದಿಲ್ಲ! ಹಿಂದೂ ಜೀವನ ಕ್ರಮವನ್ನು ನಿಜವಾಗಿ ಯಾವುದು ಸಮಗ್ರವಾಗಿಸುತ್ತದೆ? ನನ್ನನ್ನು ಒಬ್ಬ ಒಳ್ಳೆಯ ಮಾನವ ಜೀವಿಯನ್ನಾಗಿ ಯಾವುದು ಮಾಡುತ್ತದೆ? ಈ ಹುಡುಗಿಯರು ತಾವು ಮದುವೆಯೇ ಆಗದಿರಬಹುದಾದ ಗಂಡಸರ ಜೊತೆ ಹೋಗುವುದು ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆಯೆ? ಅಪ್ಪ, ಇಲ್ಲಿನ ಜೀವನದ ಒಂದು ಭಾಗವಾಗುವುದಕ್ಕೆ ನಾನು ಎಷ್ಟು ಹಂಬಲಿಸುತ್ತೇನಾದರೂ, ನಾನು ಇಲ್ಲಿನವರು ಹೇಳುವಂತೆ ಕೇವಲ 'fit in" ಆಗಲು, ನಾನು ನಾನಲ್ಲದ ಬೇರೆಯವಳಾಗಲು ಬಯಸುವುದಿಲ್ಲ. ನನ್ನನ್ನು ಭಾರತೀಯಳನ್ನಾಗಿ ಮಾಡಿರುವ ಎಲ್ಲದಕ್ಕೂ ಬೆನ್ನು ತಿರುಗಿಸದ ಹಾಗೆ ಇದ್ದು ಹೇಗೆ ಇಲ್ಲಿ ನಾನು ಜೀವನ ಮಾಡಲಿ?""

ಈ ಪತ್ರಕ್ಕೆ ಅಪ್ಪ ಬರೆಯುತ್ತಾರೆ :

''ಯೂರೋಪ್‌ ಮತ್ತು ಅಮೇರಿಕಾ ಎರಡನ್ನೂ ನಾನು ಸ್ವಲ್ಪ ನೋಡಿರುವುದರಿಂದ, ನೀನು 'ನಮ್ಮೂರಿನಲ್ಲಿ" ಇರುವ ಹಾಗೆ ಇಲ್ಲಿರಲು ಆಗುತ್ತಿಲ್ಲ ಎಂದುದನ್ನು ಕೇಳಿ ಆಶ್ಚರ್ಯವಾಗಲಿಲ್ಲ. ಸಾಂಸ್ಕೃತಿಕವಾಗಿ ಹೇಳುವುದಾದರೆ, ನೀನು ಹುಟ್ಟಿ ಬೆಳೆದ ದೇಶಕ್ಕೂ ಮತ್ತು ಈಗ ಜೀವನ ನಡೆಸುತ್ತಿರುವ ದೇಶಕ್ಕೂ ಅಗಾಧವೆನಿಸುವಷ್ಟು ವ್ಯತ್ಯಾಸಗಳಿವೆ. ನಾನು ಎಂದಿಗೂ ಭಾರತ ಗೌರವಿಸುವ ಮೌಲ್ಯಗಳು ಪಶ್ಚಿಮ ಹೊಂದಿರುವ ಮೌಲ್ಯಗಳಿಗಿಂತ ಶ್ರೇಷ್ಠ, ಅಥವ ಪಶ್ಚಿಮದ ಮೌಲ್ಯಗಳು ಭಾರತದಕ್ಕಿಂತ ಶ್ರೇಷ್ಠ ಎಂದು ಹೇಳಲು ಮುಂದಾಗುವುದಿಲ್ಲ. ಯಾವುದೇ ಒಂದು ದೇಶದ ಮೌಲ್ಯಗಳು ಶತಮಾನಗಳ ಕಾಲ ವಿಕಾಸಗೊಂಡಿರುತ್ತವೆ ಮತ್ತು ಅಲ್ಲಿನ ಜನಕ್ಕೆ ಅವನ್ನು ಪ್ರೀತಿಸಲು ಮತ್ತು ತದನಂತರದಲ್ಲಿ ತಾವು ಹೀರಿಕೊಂಡ ಆ ಮೌಲ್ಯಗಳನ್ನು ಆದರ್ಶೀಕರಿಸಲು ಕಲಿಸಲಾಗಿರುತ್ತದೆ. ನಿಧಾನವಾಗಿ ಅವರು ಪ್ರಪಂಚದ ಬೇರೆಲ್ಲ ಮೌಲ್ಯಗಳು ಅವರವುದಕ್ಕಿಂತ ಕೀಳುಮಟ್ಟದವು ಎಂದು ನಂಬಲು ಪ್ರಾರಂಭಿಸುತ್ತಾರೆ.

ನಿನಗೆ ಪರಂಪರಾಗತವಾದ ಈ ಸಾಂಸ್ಕೃತಿಕ ಮೌಲ್ಯಗಳು, ನಿನ್ನನ್ನು, ಕನಿಷ್ಟ ಸದ್ಯಕ್ಕಾದರೂ, ಅಮೇರಿಕದ ಸಮಾಜಕ್ಕೆ ಎಂದಿಗೂ ನೀನು ಹೊಂದಿಕೊಳ್ಳಲಾರೆ ಎಂದು ಭಾವಿಸುವಂತೆ ಮಾಡುತ್ತದೆ.

ನೀನು ಸುತ್ತ ನೋಡುವ ಯುವತಿಯರ ಮೇಲ್ಪದರದ ಒಳಗೂ ನೋಡಲು ಪ್ರಯತ್ನಿಸು. ಸಂತೋಷವಾಗಿ ಇರಲು ಪ್ರಯತ್ನಿಸುವುದರಲ್ಲಿ ಏನೂ ತಪ್ಪಿಲ್ಲ. ಪ್ರತಿಯೊಬ್ಬ ಮನುಷ್ಯನೂ, ಪೂರ್ವದವನಾಗಲಿ ಪಶ್ಚಿಮದವನಾಗಲಿ, ಬಹಳಷ್ಟು ಸಲ ಅಪ್ರಜ್ಞಾಪೂರ್ವಕವಾಗಿಯಾದರೂ ಸಂತೋಷವನ್ನು ಕಾಣಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸಮಯದಲ್ಲಿ ಧರ್ಮ ಪ್ರವೇಶಿಸುತ್ತದೆ. ಭಾರತದ ಧರ್ಮಸೂಕ್ತಿಗಳು -'ಚೆನ್ನಾದದ್ದು ಮತ್ತು ಒಳ್ಳೆಯದು". ಈ ಎರಡರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳುತ್ತವೆ. ಯಾವುದು ನಮ್ಮನ್ನು ಇಂದ್ರಿಯ ಸುಖಕ್ಕೆ ಎಳೆದು ಆ ಸಮಯಕ್ಕೆ ಕ್ಷಣಿಕ ಸುಖ ನೀಡಿ ಕೊನೆಯಲ್ಲಿ ಅಂತ್ಯವಿಲ್ಲದ ದುಃಖ ತರುತ್ತದೆಯೋ ಅಂತಹುದೆಲ್ಲವನ್ನೂ ವರ್ಜಿಸಬೇಕು. ಆದರೆ, ಯಾವುದು ಶಾಶ್ವತವಾದ ಸಂತೋಷವನ್ನು ಕೊಡುತ್ತದೆಯೋ ಅಂತಹುದರ ಬೆಂಬತ್ತಬೇಕು. ಅದನ್ನೇ ಅದು ಆಧ್ಯಾತ್ಮಿಕ ಸುಖ ಎಂದದ್ದು.

'ಧರ್ಮ" ಅಥವಾ 'ಆಧ್ಯಾತ್ಮ" ಎಂದು ಕರೆಸಿಕೊಂಡ ಪ್ರತಿಯೊಂದರ ಮೇಲೂ ತಕ್ಷಣವೇ ನಮ್ಮಲ್ಲಿ ಬಹಳ ಜನ ಅಲರ್ಜಿ ಬೆಳೆಸಿಕೊಂಡು ಬಿಡುತ್ತಾರೆ. ಆದ್ದರಿಂದ ಸಮಸ್ಯೆಯನ್ನು ಜಾತ್ಯತೀತ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು. ಯಾರು ಕೇವಲ ಇಂದ್ರಿಯ ಸುಖವನ್ನು ಮಾತ್ರ ಸಾಧಿಸಬೇಕಿದೆ ಎಂದು ಪರಿಗಣಿಸುತ್ತಾರೆ, ಅವರು ಅತಿ ಕೀಳು ಮಟ್ಟದ, ಮೃಗಗಳಿಗೆ ಸಮೀಪವಾದ ಜೀವನವನ್ನು ನಡೆಸುತ್ತಾರೆ. ಆದ್ದರಿಂದ ನಾವು ಯಾವುದು ಇಂದ್ರಿಯಗಳ ಆಮಿಷಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆಯೊ ಅಂತಹ ಮೇಲು ಮಟ್ಟದ ಜೀವನವನ್ನು ಅನ್ವೇಷಿಸಬೇಕು. ನಿನ್ನನ್ನು ಕ್ಲಿಷ್ಟ ಪದಗಳಲ್ಲಿ ಮುಳುಗಿಸಿ ತ್ರಾಸ ಕೊಡಬೇಕು ಅಂತಿಲ್ಲವಾದಾರೂ, ಇಂದ್ರಿಯ ಪದಾರ್ಥಗಳೊಂದಿಗೆ ಯಾವುದೇ ಸಹಚರ್ಯವಿಲ್ಲದ ಹಾಗೂ ಇಂದ್ರಿಯ ಸುಖ ಮುಗಿದ ಕ್ಷಣದಲ್ಲಿಯೇ ಅಸುಖದಲ್ಲಿ ಬೀಳಿಸದ ಸುಖದ ಸ್ಥಿತಿ ಒಂದಿದೆ. ಪೂರ್ವದ ಮತ್ತು ಪಶ್ಚಿಮದ ಧರ್ಮಗಳೆರಡೂ, ಇಂದ್ರಿಯ ಪದಾರ್ಥಗಳ ಉಪಲಬ್ಧತೆಯ ಮೇಲೆ ಅವಲಂಬಿಸಿರದ ಒಂದು ಮನಸ್ಥಿತಿ ತರುವ ಸುಖದತ್ತ ಕೈಮಾಡುತ್ತವೆ. ಆದ್ದರಿಂದ, ಅಂತಹ ಸ್ಥಿತಿಯನ್ನು ಹೊಂದಲು ನಿರಂತರ ಶ್ರಮಿಸಬೇಕು.""

*

ಈ ಕಾದಂಬರಿ ಬರೆದವರು ಅಸಿತ ಪ್ರಭುಶಂಕರ್‌. ಕನ್ನಡದ ಪ್ರಸಿದ್ದ ಸಾಹಿತಿ ಡಾ. ಪ್ರಭುಶಂಕರ ಅವರ ಮಗಳು. ಅಸಿತ ಅವರೂ ಸಹ ಮಾಸ್ಟರ್ಸ್‌ಗೆಂದು ಒಂದೂವರೆ ದಶಕದ ಹಿಂದೆ ಅಮೆರಿಕಾಗೆ ಬಂದು ತದನಂತರ ಇಲ್ಲೇ ನೆಲೆಯಾದವರು. ಈ ಮಧ್ಯೆ ಅವರು ಇಲ್ಲಿನ ಸಮಾಜ ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ, ಅನೇಕ ಅನುಭವಗಳನ್ನು, ವಿಶೇಷವಾಗಿ ಭಾರತದಿಂದ ಬಂದ ಸ್ತ್ರೀಯರು ಅನುಭವಿಸುವ ಕೆಲವು ಕೆಟ್ಟ ಅನುಭವಗಳನ್ನು, ಮೋಸಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಂಡವರು.

''ಮೈತ್ರಿ"" ಎನ್ನುವುದು 1991ರಲ್ಲಿ ಸ್ಯಾನ್‌ ಫ್ರಾನ್ಸಿಸ್ಕೊ ಬೇ ಏರಿಯಾದಲ್ಲಿ ಕೆಲವು ಭಾರತೀಯ ಮಹಿಳೆಯರಿಂದ ಪ್ರಾರಂಭಗೊಂಡ ಒಂದು ಸೇವಾ ಸಂಸ್ಥೆ. ಕೌಟುಂಬಿಕ ದೌರ್ಜನ್ಯ, ಮನಸ್ತಾಪ, ಮಾನಸಿಕ ಹಿಂಸೆ ಮುಂತಾದ ವಿಷಮ ಪರಿಸ್ಥಿತಿಗಳಿಗೆ ಈಡಾಗುವ ದಕ್ಷಿಣ ಏಷ್ಯಾದ ಮಹಿಳೆಯರಿಗೆ ಸಹಾಯ ಮಾಡುವುದು ಈ ಸಂಸ್ಥೆಯ ಉದ್ದೇಶ. ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಮತ್ತು ಉರ್ದು, ಸಿಂಹಳದಂತಹ ಭಾರತದ ನೆರೆಹೊರೆ ರಾಷ್ಟ್ರಗಳ ಭಾಷೆಗಳನ್ನು ಮಾತನಾಡುವ ಕಾರ್ಯಕರ್ತರು, ದೌರ್ಜನ್ಯ ಮತ್ತು ತೊಂದರೆಗೀಡಾದ ಹೆಂಗಸರಿಗೆ ಸಹಾಯ ಮಾಡಲು ಸದಾ ಸಿದ್ದವಾಗಿರುತ್ತಾರೆ. ಮೈತ್ರಿ ವೆಬ್‌ಸೈಟಿನಲ್ಲಿ (www.maitri.org) ಸಂಸ್ಥೆಯ ಬಗ್ಗೆ ಮತ್ತು ಅವರು ಒದಗಿಸುವ ಸೇವೆಯ ಎಲ್ಲಾ ವಿವರಗಳು ಲಭ್ಯವಿವೆ. ಅಸಿತ ಈ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡ, ಹಿಂದಿ, ಇಂಗ್ಲಿಷ್‌ ಮಾತನಾಡುವ ಸ್ತ್ರೀಯರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಮೈತ್ರಿಯ ಸಹಾಯ ಬಯಸುವ ಸ್ತ್ರೀಯರ ಸಮಸ್ಯೆಗಳು ನಾನಾ ತರಹದವು. ಭಾರತದಲ್ಲಿ ಹೇಗೆ ಮಗ ಅಥವ ಮಗಳು ಚೆನ್ನಾಗಿ ಓದಿ ಅಮೇರಿಕಕ್ಕೆ ಹೋಗಲಿ ಎಂದು ಬಯಸುತ್ತಾರೋ ಹಾಗೆಯೇ ಮಗಳು ಹೋಗಲು ಆಗದಿದ್ದ ಪಕ್ಷದಲ್ಲಿ ಅಲ್ಲಿರುವ ಹುಡುಗನನ್ನು ಮದುವೆಯಾಗಿ ಆದರೂ ಹೋಗಲಿ ಎಂದು ಬಯಸುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಇದು ಪ್ರತಿಷ್ಠೆಯೆಂಬ ಹುಚ್ಚಿನ ಪ್ರಶ್ನೆ. ಹಾಗಾಗಿ, ಹುಡುಗನ ಹಿನ್ನೆಲೆಯನ್ನು ಸರಿಯಾಗಿ ಅರಿತುಕೊಳ್ಳದೇ, ಎಷ್ಟೋ ಸಲ ಹುಡುಗನನ್ನು ಮುಖತಃ ನೋಡುವುದಕ್ಕಿಂತ ಮುಂಚೆಯೇ ಒಪ್ಪಿಗೆ ಕೊಟ್ಟು, ಮದುವೆ ಮಾಡಿ ಒಂದೆರಡು ವಾರದಲ್ಲಿಯೇ ಅಮೆರಿಕಾಗೆ ಕಳುಹಿಸಿ ಬಿಡುತ್ತಾರೆ. ಹೀಗೆ ಬರುವ ಬಹಳಷ್ಟು ಹೆಂಗಸರದು Dependent Visa ಆಗಿರುವ ಸಂಭವ ಹೆಚ್ಚು. ಅದರಿಂದಾಗಿ ಅವರು ಎಲ್ಲೂ ಹೊರಗೆ ಕೆಲಸ ಮಾಡುವ ಹಾಗಿಲ್ಲ. ಹಾಗಾಗಿ, ಸಹಜವಾಗಿಯೇ ಅವರಿಗೆ ದುಡ್ಡಿನ ಸ್ವಾವಲಂಬನೆಯಾಗಲಿ, ಮತ್ತು ಅದರಿಂದ ಬರುವ ಭದ್ರತೆ, ಸ್ವಾತಂತ್ರ್ಯವಾಗಲಿ ಇರುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಅವರ ಮೇಲೆ ಜಬರದಸ್ತಿಕೆ ತೋರಿಸುವ, ಹೀನಾಯವಾಗಿ ಕಾಣುವ, ದೌರ್ಜನ್ಯ ನಡೆಸುವ, ವರದಕ್ಷಿಣೆಗಾಗಿ ಪೀಡಿಸುವ, ಸಂಸಾರದ ಮನಸ್ಥಾಪಗಳಲ್ಲಿ ಗಂಡನ ಕಡೆಯಿಂದ ರಾಜಿಯಾಗದ ಅಹಂ, ಇನ್ನೂ ಮುಂತಾದುವುರಿಂದಾಗಿ ಕೆಲವು ಮನೆಗಳಲ್ಲಿ ಈ ಹೆಂಗಸರ ಸ್ಥಿತಿ ಚಿಂತಾಜನಕವಾಗುತ್ತಾ ಹೋಗುತ್ತದೆ. ಸರಿಯಾಗಿ ಗೊತ್ತಿಲ್ಲದ, ಸರಿಯಾಗಿ ಬಾರದ, ಬಂದರೂ ಕೆಲವು ಸಾರಿ ಅರ್ಥವಾಗಿರದ ಭಾಷೆ, ಗೊತ್ತಿರದ ಕಾನೂನು ಸೌಲಭ್ಯಗಳು, ಮದುವೆ ಒಡೆದರೆ ಮುಂದೆ ಅಮೆರಿಕಾದಲ್ಲಿ ಕಾನೂನು ಬದ್ದವಾಗಿ ಇರಲು ಸಾಧ್ಯವೇ, ಅವರು ಪಡೆದಿರುವ ಶಿಕ್ಷಣಕ್ಕೆ ಇಲ್ಲಿ ಯಾವ ತರಹದ ಕೆಲಸ ಸಿಗುತ್ತದೆ, ವಿಚ್ಛೇದನದಿಂದ ಉಂಟಾಗಬಹುದಾದ ತವರು ಮನೆಯವರ ಮರ್ಯಾದೆ ಪ್ರಶ್ನೆಯ ಭಯ ಮತ್ತು ವಾಪಸು ಹೋದರೆ ಅವರ ಆರ್ಥಿಕ ಸ್ಥಿತಿಗತಿ ಇವರನ್ನು ಪೋಷಿಸಲು ಸಾಧ್ಯವೇ, ಮಕ್ಕಳಿದ್ದಲ್ಲಿ ಅವರ ಭವಿಷ್ಯದ ಪ್ರಶ್ನೆ, ಹೀಗೆ ನಾನಾ ಕಾರಣಗಳಿಗಾಗಿ ಈ ಹೆಣ್ಣುಮಕ್ಕಳ ಸ್ಥಿತಿ ಕೆಡುತ್ತಾ, ಅವಲಂಬನೆ ಹೆಚ್ಚಾಗುತ್ತಾ ಹೋಗಬಹುದು.

ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಹೆಚ್ಚಾಗುವ ಕೌಟುಂಬಿಕ ದೌರ್ಜನ್ಯವನ್ನು ಸಹಿಸಲಾಗದ ಸ್ಥಿತಿಯಲ್ಲಿ, ಆ ದಲಿತ ಸ್ತ್ರೀಯರು ಇಚ್ಚಿಸಿದಲ್ಲಿ, ಮೈತ್ರಿ ಸಂಸ್ಥೆ ಕಾನೂನು ಮತ್ತು ಶುರುವಿನ ಜೀವನ ನಡೆಸುವುದಕ್ಕೆ ತಕ್ಕಮಟ್ಟಿನ ಸಹಾಯ ನೀಡುತ್ತದೆ. ಅಂದ ಹಾಗೆ, ಈ ಸ್ಥಿತಿ ಕೇವಲ Dependent Visa ಮೇಲೆ ಇರುವವರಿಗೆ ಮಾತ್ರವಲ್ಲ, ಕೆಲಸ ಮಾಡುತ್ತಿರುವ, ಗ್ರೀನ್‌ ಕಾರ್ಡ್‌ ಇರುವ, ಇಲ್ಲವೇ ಅಮೆರಿಕದ ನಾಗರಿಕರಾಗಿರುವ ಸ್ತ್ರ್ರೀಯರಿಗೂ ಇರಬಹುದು. ದಬ್ಬಾಳಿಕೆ, ದೌರ್ಜನ್ಯ ಕೆಲವೇ ಗುಂಪಿನ ಲಕ್ಷಣವೇನೂ ಅಲ್ಲ.

ಮೈತ್ರಿಯಲ್ಲಿ ತಾವು ನೋಡಿದ್ದನ್ನು, ಭಾರತದಲ್ಲಿ ಅಸ್ಪೃಶ್ಯತೆಯಂತಹ ಅಸಮಾನತೆಗಳನ್ನು ಚರ್ಚಿಸುತ್ತ, ಅಲ್ಲಿಗೆ ಇಲ್ಲಿಗೆ ಹೋಲಿಸುತ್ತಾ, ಒಬ್ಬ ಬಾಲ್ಯ ಸ್ನೇಹಿತ, ಸ್ಪ್ರುರದ್ರೂಪಿ ಬಿಳಿಯ ಅಮೆರಿಕನ್‌ ಬಾಯ್‌ು ಫ್ರೆಂಡ್‌, ಶ್ರೀಮಂತ ಭಾರತೀಯ ಯುವ ಉದ್ಯಮಿಯೊಂದಿಗೆ ಮದುವೆ, ಒಂದು ಸಾವು, ಮತ್ತೆರಡು ಕೌಟುಂಬಿಕ ದೌರ್ಜನ್ಯಗಳನ್ನೆಲ್ಲ ಹೆಣೆದು ಅಸಿತ ಅವರು ಒಂದು ಕುತೂಹಲಕಾರಿಯಾದ, ಸುಲಭವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಬರೆದಿದ್ದಾರೆ. ನಾನು ಕಾದಂಬರಿಯ ಎಳೆ ಇಲ್ಲಿ ವಿವರಿಸದೆ, ಅದನ್ನು ಓದಿದ ಮೇಲೆ ಅದರ ಗುಣಾತ್ಮಕ ಅಂಶಗಳ ಬಗ್ಗೆಯಷ್ಟೇ ಇಂಟರ್ನೆಟ್‌ನಲ್ಲಿ ನಾನು ಬರೆದ ಅನಿಸಿಕೆಗಳ ಕನ್ನಡ ಭಾಷಾಂತರ ಇಲ್ಲಿದೆ :

''ನಾನು ಅಸಿತರವರ ಲೇಖನವನ್ನು ಮೊದಲ ಬಾರಿಗೆ ಓದಿದ್ದು ಕಳೆದ ವರ್ಷ. ಆ ಲೇಖನ ಕನ್ನಡದಲ್ಲಿ, ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004ರ ಸ್ವರ್ಣಸೇತು ವಾರ್ಷಿಕ ಸಂಚಿಕೆಯಲ್ಲಿತ್ತು. ಅದು ಮೈತ್ರಿಯಲ್ಲಿ ಲೇಖಕಿಯ ಸ್ವಯಂಸೇವಾ ಕಾರ್ಯಗಳಿಗೆ ಸಂಬಂಧಪಟ್ಟಿದ್ದು. ಲೇಖನ ನನ್ನನ್ನು ಆಳವಾಗಿ ಮುಟ್ಟಿತು. ಅದರಲ್ಲಿದ್ದ ವಿಷಯ ಅಮೆರಿಕಾದಲ್ಲಿರುವ ಅನೇಕ ಭಾರತೀಯರಿಗೆ, ಲಿಂಗಭೇದವಿಲ್ಲದೆ, ಪ್ರಸ್ತುತವಾದದ್ದಾಗಿತ್ತು. ಹಾಗಾಗಿ, ಅಸಿತರವರು ಕಾದಂಬರಿ ಬರೆಯುತ್ತಿದ್ದಾರೆ ಎಂದು ತಿಳಿದಾಗ, ತುಂಬಾ ಕುತೂಹಲದಿಂದ, ಅದನ್ನು ಓದುವುದಕ್ಕಾಗಿ ಎದುರು ನೋಡುತ್ತಿದ್ದೆ.

ಅಮೆರಿಕಾದಲ್ಲಿರುವ ಪ್ರತಿಯೊಬ್ಬ ಭಾರತೀಯನೂ ಹಾಗೂ ವಿದೇಶದಲ್ಲಿ ತಮ್ಮ ಕುಟುಂಬದ ಯಾರಾದರೂ ವಾಸಿಸುತ್ತಿರುವ ಪ್ರತಿ ಭಾರತೀಯನೂ, ಈ ಕಾದಂಬರಿಯಲ್ಲಿ ಒಂದಲ್ಲ ಒಂದು ತರಹದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬಹುದು. ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ (ಹಾಗೆ ಇಲ್ಲದಿರಲಿ ಎಂದು ಪ್ರಾಮಾಣಿಕವಾಗಿ ಬಯಸುತ್ತೇನೆ), ಕಾದಂಬರಿಯಲ್ಲಿನ ಕೆಲವು ಭಾಗಗಳು, ಅಧ್ಯಾಯಗಳು ಅವರ ಸ್ವಂತ ಅನುಭವಗಳನ್ನು, ಇಲ್ಲವೇ ಅವರ ಮನೆಯವರ ಅನುಭವಗಳನ್ನು ಪ್ರತಿಫಲಿಸುತ್ತವೆ. ಕೆಲವರಿಗೆ, ಅವರು ತಿಳಿದಿಲ್ಲದ ಇಲ್ಲವೇ ಕುರುಡಾಗಿರಬಹುದಾದ ವಿಷಯಗಳ ಬಗ್ಗೆ ತಿಳಿಸಿಕೊಡಲೂಬಹುದು.

ಮಿಕ್ಕ ಓದುಗರಿಗೆ ಈ ಕಾದಂಬರಿ ಅಮೇರಿಕಾದಲ್ಲಿರುವ ಭಾರತೀಯರ ಜೀವನ ಮತ್ತು ಅವರ ವಿವಿಧ ಆಯಾಮಗಳ ಹಿನ್ನೆಲೆಯ ಬಗ್ಗೆ ಒಳನೋಟ ಕೊಡುತ್ತದೆ.

ಕಾದಂಬರಿಯಲ್ಲಿನ ಕತೆಯ ಬಹುಪಾಲು ಭಾಗ ಅಮೇರಿಕಾದಲ್ಲಿ ನಡೆದರೂ, ಲೇಖಕಿ ಭಾರತದ ಅತಿಸೂಕ್ಷ್ಮ ವಿಷಯಗಳಾದ ಅಸ್ಪೃಶ್ಯತೆ, ಜಾತಿ ಪದ್ದತಿ, ದೌರ್ಜನ್ಯ, ಮುಂತಾದವುಗಳ ಬಗೆಗೆ ದಿಟ್ಟವಾಗಿ, ಧೈರ್ಯದಿಂದ ಚರ್ಚಿಸುತ್ತಾರೆ. ಇದು ಭಾರತದ ಬಗೆಗೆ ಭಾರತೀಯರಲ್ಲದವರು ಹೊಂದಿರುವ, ಆದರೆ ಭಾರತೀಯರು ಉತ್ತರಿಸಲು ಕಷ್ಟ, ಮುಜುಗರ ಪಡುವ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

ಕಾದಂಬರಿಯ ಶೈಲಿ ಮತ್ತು ಕಥೆ ಹೇಳುವ ರೀತಿ, ವಿಶೇಷವಾಗಿ ವಾರಣಾಸಿಯ ಭಾಗಗಳು, ನನಗೆ ನೊಬೆಲ್‌ ಪುರಸ್ಕೃತ ವಿ.ಎಸ್‌. ನೈಪುಲ್‌ರ - A House for Mr. Biswas ಶೈಲಿಯನ್ನು ನೆನಪಿಸಿತು. ಅಸಿತರವರು, ಅವರ ಹೆತ್ತವರಿಂದ (ಅವರ ತಂದೆ ಕನ್ನಡದ ಒಬ್ಬ ಪ್ರಸಿದ್ದ ಲೇಖಕರು ಮತ್ತು ಅವರ ತಾಯಿ ಒಬ್ಬ ವೈದ್ಯೆಯಾಗಿದ್ದರು), ತಮ್ಮ ಓದಿನಿಂದ, ಸಂಚಾರ, ಮೈತ್ರಿಯಲ್ಲಿ ಕಾರ್ಯಕರ್ತೆ, ಮುಂತಾದವುಗಳಿಂದ ಅಪಾರ ಅನುಭವ ಹೊಂದಿದ್ದು, ಮತ್ತಷ್ಟು ಇಂತಹ ಗಂಭೀರ, ವಿಚಾರಪ್ರಚೋದಕ ಕಾದಂಬರಿಗಳನ್ನು ಅವರಿಂದ ಬಯಸುವುದು ಕಷ್ಟವೇನಲ್ಲ.""

ಈ ಕಾದಂಬರಿಯನ್ನು ಮುಂಬಯಿಯ ಫ್ರಾಗ್‌ ಬುಕ್ಸ್‌ ಅವರು ಪ್ರಕಾಶಿಸಿದ್ದು, ಅಮೆಜಾನ್‌.ಕಾಮ್‌ ಹಾಗೂ ಅಸಿತರವರ http://www.anekabooks.comನಲ್ಲಿ ಸಹ ಲಭ್ಯವಿದೆ. ಓದಿ ನೋಡಿ. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಲು, ಇನ್ನೊಂದು ಕೋನದಿಂದ ಗಮನಿಸಲು, ಈ ಓದು ಖಂಡಿತ ಸಹಾಯ ಮಾಡುತ್ತದೆ.

ಇತ್ತೀಚೆಗೆ ಅಸಿತರವರು ಬರೆದಿರುವ ಕೆಲವು ಲೇಖನಗಳು http://www.anekabooks.com/links.html1.html ಅಂತರ್ಜಾಲ ಪುಟದಲ್ಲಿ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X