ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನ : ದಾವಣಗೆರೆ ಲೇಖಕನಿಗೆ ಪ್ರಶಸ್ತಿ

By Staff
|
Google Oneindia Kannada News


ಕನ್ನಡ ಕಾದಂಬರಿ ಸ್ಪರ್ಧೆಯಲ್ಲಿ ‘ಭರದ್ವಾಜ’ ಕಾದಂಬರಿಗೆ ಪಾರಿತೋಷಕ!

ಬೆಂಗಳೂರು : ಉದಯೋನ್ಮುಖ ಕಾದಂಬರಿಕಾರ ದಾವಣಗೆರೆಯ ಸಂಪನ್ನ ವಿ.ಮುತಾಲಿಕ ಅವರು ಜಾಗತಿಕ ಕನ್ನಡಿಗರ ಮನ್ನಣೆಗೆ ಪಾತ್ರರಾಗಿದ್ದಾರೆ! ಅವರ ‘ಭರದ್ವಾಜ’ ಕಾದಂಬರಿ ಆ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

ಅಮೆರಿಕಾದ ವಾಷಿಂಗ್ಟನ್‌ ಡಿಸಿಯಲ್ಲಿ, ‘ಕಾವೇರಿ’ ಕನ್ನಡ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್‌ 1, 2 ಮತ್ತು 3, 2006ರಂದು ನಡೆಯಲಿರುವ ಅಕ್ಕ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡನಾಡಿನ ಉದಯೋನ್ಮುಖ ಕಾದಂಬರಿಕಾರರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮುತಾಲಿಕ ಅವರ ಕೃತಿಗೆ ಅತ್ಯುತ್ತಮ ಕಾದಂಬರಿ ಪ್ರಶಸ್ತಿ ದೊರೆತಿದೆ ಎಂದು ಸಮ್ಮೇಳನದ ಸ್ಮರಣ ಸಂಚಿಕೆ ಸಂಪಾದಕರ ಸಮಿತಿಯ ಶಿಕಾರಿಪುರ ಹರಿಹರೇಶ್ವರ ತಿಳಿಸಿದ್ದಾರೆ.

ನಾಡಿನ ಮೂಲೆ ಮೂಲೆಗಳಿಂದ ಕಾದಂಬರಿಕಾರರು, ಸ್ಪರ್ಧೆಗೆ ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅಮೆರಿಕಾದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ, ಮುತಾಲಿಕ ಅವರನ್ನು ಆಹ್ವಾನಿಸಿ, ಸನ್ಮಾನಿಸಲಾಗುತ್ತದೆ. ಅಲ್ಲದೇ ‘ಭರದ್ವಾಜ’ ಕಾದಂಬರಿಯನ್ನು ‘ಅಕ್ಕ’ ವಿಶ್ವಕನ್ನಡ ಸಮ್ಮೇಳನದ ಸಮಿತಿಯೇ ಪ್ರಕಟಿಸಿ, ಸಮ್ಮೇಳನದಲ್ಲಿ ವಿತರಿಸಲಿದೆ.

ಯಾರಿವರು -ಸಂಪನ್ನ ವಿ. ಮುತಾಲಿಕ? :

Sampanna V. Mutalikಚಿಕ್ಕಂದಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಪನ್ನ ವಿಜಯರಾವ್‌ ಮುತಾಲಿಕ್‌ ಅವರು ದಾವಣಗೆರೆಯಲ್ಲಿ ಇಂಜಿನಿಯರಿಂಗ್‌ ಓದುತ್ತಿರುವಾಗಲೇ ಕಾಲೇಜಿನ ಕೇಂದ್ರಬಿಂದುವಾಗಿದ್ದವರು. ಸಂಗೀತ, ನಾಟಕ, ಏಕಪಾತ್ರಾಭಿನಯ, ಪ್ರಹಸನ, ಚರ್ಚಾಸ್ಪರ್ಧೆ -ಹೀಗೆ ಹಲವಾರು ರಾಜ್ಯಮಟ್ಟದ ಲಲಿತಕಲೆಗಳ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿ ಹಲವಾರು ಬಹುಮಾನಗಳನ್ನು ಗೆದ್ದವರು. ಓದಿನಲ್ಲಿ ಸದಾ ಮುಂದಿದ್ದು, ಜೊತೆಗೇ ಸಾಂಸ್ಕೃತಿಕವಾಗಿಯೂ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು.

ಕರ್ನಾಟಕದ ಬಿಜಾಪುರದಲ್ಲಿ 1968ರಲ್ಲಿ ಜನಿಸಿದ ಲೇಖಕ ಸಂಪನ್ನ ವಿಜಯರಾವ್‌ ಮುತಾಲಿಕ (ತಂದೆ: ವಿಜಯರಾವ್‌, ತಾಯಿ: ಸರಯೂ) ಅವರು ವ್ಯಾಸಂಗ ಮಾಡಿ, ಪದವಿ ಗಳಿಸಿದ್ದು ದಾವಣಗೆರೆಯ ಬಿ.ಡಿ.ಟಿ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ. (ಮೆಕ್ಯಾನಿಕಲ್‌ ಇಂಜಿನಿಯರಿಂಗ್‌), ಎಂ.ಟೆಕ್‌ (ಉತ್ಪಾದನಾ ತಾಂತ್ರಿಕತೆ) ಮತ್ತು ಎಂ.ಬಿ.ಎ. (ಮಾರ್ಕೆಟಿಂಗ್‌)ಗಳಲ್ಲಿ.

ಸಂಪನ್ನ ಅವರು ಒಬ್ಬ ಕ್ರಿಯಾಶೀಲ ರ0ಗಕರ್ಮಿ. ಪ್ರೊ. ಚಂದಶೇಖರ ಪಾಟೀಲರು ಬರೆದ ‘ಕುಂಟಾ ಕುಂಟಾ ಕುರುವತ್ತಿ’ ನಾಟಕದ ನಿರ್ದೇಶನ ಮಾಡಿದ ಇವರು, ‘ನಾವ್‌ ಇರೋದ್‌ ಹೀಗೆ ಸ್ವಾಮಿ’ ಹಾಗೂ ‘ಇದೂ ಒಂದು ಸಮಸ್ಯೆಯೇ’ ಎಂಬ ನಾಟಕಗಳನ್ನೂ ರಚಿಸಿ, ನಿರ್ದೇಶನ ಮಾಡಿದ್ದಾರೆ. ‘ಅಭಿಯಂತರಂಗ’ ಎಂಬ ಹವ್ಯಾಸಿ ನಾಟಕಾಸಕ್ತರ ಸಂಸ್ಥೆಯಲ್ಲಿ ಮುಖ್ಯಪಾತ್ರ ವಹಿಸಿ ‘ತದ್ರೂಪಿ’, ‘ಅಂತಿಗೊನೆ’, ‘ಈ ಮುಖದವರು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಉತ್ತಮ ಕಂಠಸಿರಿಯ ಸಂಪನ್ನ ಸ್ನೇಹಿತರ ಬಳಗದಲ್ಲಿ ಜನಪದ ಗೀತೆಗಳನ್ನು ಹಾಡುವುದರಲ್ಲಿ ಹೆಸರುವಾಸಿ; ಬಿಜಾಪುರ ಶೈಲಿಯ ಇವರ ವಿಶಿಷ್ಟ ಕನ್ನಡವೂ ಇದಕ್ಕೆ ಸಹಕಾರಿಯಾಗಿದೆ. ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮಿಕ ಕ್ಷೇತ್ರದೆಡೆಗೆ ಒಲವು ತೋರಿದ ಸಂಪನ್ನ ಅವರು, ಈಗ ಭಾರತೀಯ ಪ್ರಾಚೀನ ಧರ್ಮಶಾಸ್ತ್ರಗಳ ಅಭ್ಯಾಸದಲ್ಲಿ ತೊಡಗಿದ್ದಾರೆ.

ದಾವಣಗೆರೆಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆ ‘ಚಿರಂತನ’ದ ಸಲಹೆಗಾರರಾಗಿ ಸಂಸ್ಥೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಸುಮಾರು 400 ವಿದ್ಯಾರ್ಥಿಗಳು ನೃತ್ಯ, ಸಂಗೀತ, ವಾದ್ಯ ಸಂಗೀತಗಳನ್ನೊಳಗೊಂಡಂತೆ 15 ಕಲಾಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿರುವ ಈ ಸಂಸ್ಥೆ ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳನ್ನು ದಾವಣಗೆರೆಗೆ ಕರೆಯಿಸಿದೆ. ಸಾಂಸ್ಕೃತಿಕವಾಗಿ ದಾವಣಗೆರೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿರುವ ‘ಚಿರಂತನ’ ಸಂಸ್ಥೆಯ ಪ್ರತಿಯಾಂದು ಹೆಜ್ಜೆಗಳ ಹಿಂದೆ ಸಂಪನ್ನ ಇದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊ0ಡಿರುವ ಸಂಪನ್ನ ಅವರ ಕತೆಗಳು (‘ಅವಕಾಶ’ ಕಥೆ ‘ತರಂಗ’ ವಾರಪತ್ರಿಕೆಯಲ್ಲಿ, ‘ಮೂರೂವರೆ ಪತ್ರಗಳು’ ಕಥೆ ದಿನಪತ್ರಿಕೆಗಳಲ್ಲಿ ಇತ್ಯಾದಿ), ಹಾಸ್ಯ ಕವನಗಳು ಮತ್ತು ಇತರ ಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ. ‘ಭರದ್ವಾಜ’ ಇವರ ಅಪ್ರಕಟಿತ ಚೊಚ್ಚಲ ಕಾದಂಬರಿ.

ಅಮೆರಿಕಾದಲ್ಲಿ ನಡೆಯುತ್ತಿರುವ ನಾಲ್ಕನೆಯ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನ-2006 ರ ಉದಯೋನ್ಮುಖ ಬರಹಗಾರರ ಕಾದಂಬರಿ ಸ್ಪರ್ಧೆಯಲ್ಲಿ ಸಂಪನ್ನ ಅವರ ಈ ‘ಭರದ್ವಾಜ’ ಕಾದಂಬರಿ ಅತ್ಯುತ್ತಮ ಕಾದಂಬರಿ ಎಂದು ಪ್ರಶಸ್ತಿ ಗಳಿಸಿದೆ.

ಸ0ಪನ್ನ ಅವರು ಪತ್ನಿ ಅನುರಾಧಾ ಮತ್ತು ಮಗ ಸುಘೋಷ್‌ ಅವರೊಂದಿಗೆ ದಾವಣಗೆರೆಯಲ್ಲಿ ವಾಸಿಸುತ್ತಾ, ಅಲ್ಲಿನ ಸ್ಯಾಮ್ಸನ್ಸ್‌ ಡಿಸ್ಟಿಲ್ಲರೀಸ್‌ ಕ0ಪನಿಯಲ್ಲಿ ವ್ಯವಸ್ಥಾಪಕರಾಗಿ ಈಗ ಕೆಲಸ ಮಾಡುತ್ತಿದ್ದಾರೆ.

ಸಂಪರ್ಕ ವಿಳಾಸ :

ಸಂಪನ್ನ ವಿ. ಮುತಾಲಿಕ,
ನಂ. ಎ/1, ಮೊದಲನೆ ಮುಖ್ಯ ರಸ್ತೆ,
ಮೊದಲ ತಿರುವು, ಮೊದಲನೆ ಬಸ್‌ ಸ್ಟಾಪ್‌ ಹತ್ತಿರ,
ವಿದ್ಯಾನಗರ, ದಾವಣಗೆರೆ-577 004;
ಫೋನ್‌: 98440-65105

(ದಟ್ಸ್‌ ಕನ್ನಡ ವಾರ್ತೆ)


ಪೂರಕ ಓದಿಗೆ-
ಎಸ್‌.ಪಿ.ಬಾಲಸುಬ್ರಹ್ಮಣ್ಯಂ - ವಿಶ್ವ ಕನ್ನಡ ಸಮ್ಮೇಳನದ ಪ್ರಮುಖ ಆಕರ್ಷಣೆ!
ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು
ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹತ್ತಾರು ವಿಶೇಷ... ನೂರಾರು ವೈವಿಧ್ಯ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X