ಮಕ್ಕಳಾದ ಮೇಲೆ ಗಂಡನ ಗೋಳು ಬರೀ ಓಳು

ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮನೆ ಸಾಲಲ್ಲ ಅಂತ ಗಂಡನ ಸೊಂಟ ತಿವಿಯಲು ಪ್ರಾರಂಭಿಸುತ್ತಾಳೆ ಹೆಂಡತಿ. ಹೆಂಡತಿ ಬಂದ ಮೇಲೆ ಅವಳ ಮಾತನ್ನೇ ಕೇಳುತ್ತ, ನಮ್ಮನ್ನೇ ಮರೆಯುತ್ತಿದ್ದಾನೆ ಎಂದು ಅಳಲು ತೋಡಿಕೊಳ್ಳುವ ಹೆತ್ತವರು. ಚಿಂತೆಯ ಚಿತೆ ಏರಿ ಕುಳಿತವನ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳಲು ಪ್ರಾರಂಭಿಸಿರುತ್ತದೆ. ಸ್ವರ್ಗದ ಬಾಗಿಲಲ್ಲೇ ನರಕವೂ ಇದೆ ಎಂಬುದು ತಿಳಿದಿರಲಿ.
ಮನೆ ಕೊಳ್ಳಲೊಂದು ಲೋನು, ಮಗಳು ಮದುವೆ ವಯಸ್ಸಿಗೆ ಬಂದಾಗ ಕೈಗೊಂದಿಷ್ಟಿರಲೆಂದು ಒಂದು ಇನ್ಶೂರನ್ಸು, ಮಗ ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಬೈಕಿಗೆ ಡಿಮ್ಯಾಂಡು, ಮದುವೆಯ ಇಪ್ಪತ್ತೈದನೇ ವರ್ಷಕ್ಕೆ ಹೆಂಡತಿಯಿಂದ ದುಬಾರಿ ನೆಕ್ಲೇಸಿನ ಆಗ್ರಹ. ಪೇಪರಿನಲ್ಲಿನ ಸಣ್ಣ ಅಕ್ಷರಗಳನ್ನು ಓದಲು ಕಷ್ಟಪಡುವ ಹಂತ ತಲುಪಿದಾಗ, ತಲೆ ಬೊಕ್ಕಾಗಿರುತ್ತದೆ, ಹಲ್ಲು ಸಣ್ಣಗೆ ಅಲ್ಲಾಡಲು ಆರಂಭಿಸಿರುತ್ತದೆ.
ಇದು ಯಾರೊಬ್ಬರ ಕಥೆಯೂ ಅಲ್ಲ. ಹೆಂಡತಿ ಮನೆ ಮಕ್ಕಳಾದ ಮೇಲೆ ಪ್ರತಿ ಗಂಡ ಎದುರಿಸಬೇಕಾದ ಸಂಕಷ್ಟಗಳಿವು ಎಂಬ ವ್ಯಥೆಯೂ ಅಲ್ಲ. ಈ ಜೀವನದ ಪರೀಕ್ಷೆಯಲ್ಲಿ ಕೆಲವರು ಶೇ.65ರಷ್ಟು ಅಂಕ ಪಡೆದು ಪಾಸಾಗುತ್ತಾರೆ, ಕೆಲವರು 35 ಅಂಕ ಪಡೆಯುವಲ್ಲಿ ಏದುಸಿರು ಬಿಡುತ್ತಿರುತ್ತಾರೆ. ಕಾಪಿ ಹೊಡೆದರೂ ಪಾಸ್ ಮತ್ತು ಫೇಲ್ ಒಟ್ಟೊಟ್ಟಿಗೆ ಆಗುವ ಪರೀಕ್ಷೆ ಇದೊಂದೇ ಇರಬೇಕು.












Click it and Unblock the Notifications