• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರಿಗೆ ಮೀಸಲಾತಿ ಯಾಕೆ ಬೇಕು?

By Shami
|
ಮಹಿಳೆಯರಿಗೆ ಈ ದೇಶ ಸಾಕು ಬೇಕಾದಷ್ಟು ಸಮಾನ ಅವಕಾಶಗಳನ್ನು ಸೃಷ್ಟಿಸಿದೆ. ಸ್ವಂತ ಪ್ರತಿಭೆಯ ಮೇಲೆ ಮುಂದೆ ಬರಲು ಅವರಿಗೆ ದಾರಿಗಳಿವೆ. ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯ ಏಳಿಗೆಗಾಗಿ ಪ್ರತ್ಯೇಕವಾಗಿ ಮತ್ತೆ ಮೀಸಲಾತಿ ಮಸೂದೆ ಅಗತ್ಯವಿಲ್ಲ ಎನ್ನುವುದು ಲೇಖಕರ ವಾದ- ಸಂಪಾದಕ.

* ಎನ್.ಜಿ. ಪ್ರಭುಪ್ರಸಾದ್, ಶೃಂಗೇರಿ

ಹಳೆಯ ನೀರು ಹರಿದುಹೋದಂತೆಲ್ಲಾ ಹೊಸ ನೀರು ರಭಸವಾಗಿ ಮುನ್ನುಗ್ಗುವುದು. ಹಾಗೆಯೇ ಇಂದಿನ ಯುಗದ ಉದಾರೀಕರಣ, ಗ್ಲೋಬಲೈಸೇಶನ್‌ಗಳ ಪರಿಣಾಮವಾಗಿ ನಮ್ಮ ಸಮಾಜದಲ್ಲಿ ಒಂದಷ್ಟು ಒಳ್ಳೆಯ ಸುಧಾರಣೆಗಳೂ ಮತ್ತಷ್ಟು ಕೆಟ್ಟ ಪರಿಣಾಮಗಳೂ ಆಗಿವೆಯೆಂಬುದನ್ನು ತಳ್ಳಿಹಾಕಲಸಾಧ್ಯ. ಇವುಗಳು ಪ್ರತಿಭೆಯಿರುವ, ಸಮಾಜದಲ್ಲಿ ಕೆಳಸ್ಥರದಲ್ಲಿರುವವರಿಗೂ [ಅಥವಾ ಅವಗಣನೆಗೆ ಒಳಗಾಗಿರುವವರು] ಸಹಾ ಪ್ರಬಲರಾಗುವ, ನೂತನ ಕ್ಷಿತಿಜಗಳಿಗೆ ಸೇರುವ ಕನಸು ಕಾಣುವ ಶಕ್ತಿಯನ್ನೂ, ಅವಕಾಶಗಳನ್ನೂ ಒದಗಿಸಿಕೊಟ್ಟಿವೆ.

ಹಾಗೆಯೇ ಇದು ಹಿಂದಿದ್ದ ಲಿಂಗ, ಜಾತಿ, ವರ್ಗ ಮೊದಲಾದ ಅಂಶಗಳ ಮೇಲೆ ನಿರ್ಧರಿತವಾಗುತ್ತಿದ್ದ ಅಸಮಾನತೆಯನ್ನು ಬಹುಮಟ್ಟಿಗೆ ತೊಡಗಿಸುವುದರಲ್ಲಿ ಸಹಾಯಕವಾಗಿದೆ. ಈಗಿನ ಕೆಲವು ದಶಕಗಳನ್ನು ಗಮನಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ ಪುರುಷರಿಗೆ ಸರಿಸಮವಾಗಿಯೂ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚಿನದಾಗಿರುವುದೂ ಸರ್ವವಿದಿತವಾಗಿದೆ.

ಹಿಂದೊಂದು ಕಾಲವಿತ್ತು. ಆಗ "ಹೆಣ್ಣನ್ನು ಹೆತ್ತರೆ ಖರ್ಚಿಗೆ ದಾರಿ" ಎನ್ನುತ್ತಿದ್ದರು. ಹೆಣ್ಣೊಬ್ಬಳಿಗೆ ಸ್ವತಂತ್ರ ವ್ಯಕ್ತಿತ್ವವನ್ನು ಹೊಂದುವುದೇ ಅಸಾಧ್ಯವೆನಿಸುವಂತಿತ್ತು. ಸಾಮಾಜಿಕ ಕಟ್ಟಳೆಗಳು ಪುರುಷನನ್ನು ಮೆರೆಸಿ ಸ್ತ್ರೀಯನ್ನು ಬದಿಗೊತ್ತುವಂತಿದ್ದವು. ಬಾಲ್ಯವಿವಾಹ, ಸತಿ-ಸಹಗಮನ, ದೇವದಾಸಿ ಪದ್ಧತಿಗಳು ಆಕೆಯ ಬಾಳನ್ನು ನರಕಸದೃಶವಾಗಿಸಿತ್ತು. ಆ ಕಾಲದಲ್ಲಿ ಮಹಿಳೆಯರನ್ನು ಸಬಲೆಯರನ್ನಾಗಿಸಲು ಅವರಿಗೆ ಮೀಸಲಾತಿ ಬೇಕೆಂದು ಕೂಗು ಕೇಳಿಬಂದಿದ್ದರೆ, ಅದು ಅತ್ಯಂತ ಸಮರ್ಪಕವೆನಿಸುತ್ತಿತ್ತು.

ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಹೋರಾಟವು ಸಮಂಜಸವಾಗಿರಲಾರದು. ಈ ನವಯುಗದಲ್ಲಿ ಪ್ರತಿಭೆಯಿದ್ದವರಿಗೆ ವಿಫುಲವಾದ ಅವಕಾಶಗಳಿವೆ; ಅದಕ್ಕೆ ಸ್ತ್ರೀ-ಪುರುಷರೆಂಬ ಬೇಧವಿಲ್ಲ. ಹೀಗಿಲ್ಲವಾದ ಪಕ್ಷದಲ್ಲಿ ಪೊಲೀಸ್ ಅಧಿಕಾರಿಣಿ ಕಿರಣ್ ಬೇಡಿ, ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್, ಅಧ್ಯಾತ್ಮ ಕ್ಷೇತ್ರದ "ಅಮ್ಮ" ಅಮೃತಾನಂದಮಯಿ ಮೊದಲಾದವರು ಸಾಧನೆಗಯ್ಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎದುರಾದ ಅಡೆತಡೆಗಳನ್ನೆದುರಿಸಿ ಉನ್ನತಿಗೇರಿದರು. ಈಗ ನಮ್ಮ ದೇಶದ ರಾಜಕೀಯದಲ್ಲಿ ಪ್ರಮುಖ ಮೂರು ಸ್ಥಾನಗಳನ್ನು [ರಾಷ್ಟ್ರಪತಿ, ಸಭಾಪತಿ ಹಾಗೂ ವಿರೋಧಪಕ್ಷದ ನಾಯಕಿ] ಮಹಿಳೆಯರೇ ಅಲಂಕರಿಸುವುದು ಗಮನಾರ್ಹ.

ಪರಿಸ್ಥಿತಿ ಹೀಗಿರುವಾಗ ಮಹಿಳೆಯರಿಗೆಂದೇ ಮೀಸಲಾತಿ ನೀಡಬೇಕಾದ ಅಗತ್ಯವಿಲ್ಲ. ಆದರೆ ನಿಜವಾಗಿಯೂ ಶೋಷಣೆಗೊಳಗಾದ, ಸಾಮಾಜಿಕ ಅಸಮಾನತೆ ಎದುರಿಸುತ್ತಿರುವ, ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸವಲತ್ತನ್ನೊದಗಿಸಿಕೊಡುವುದು ನಾಗರೀಕ ಸಮಾಜಕ್ಕೆ ಶೋಭೆ ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ತ್ರೀ-ಶಕ್ತಿ, ಇತರ ಅನೇಕ ಮಹಿಳಾ ಸ್ವಸಹಾಯ ಸಂಘಗಳು ಈ ನಿಟ್ಟಿನಲ್ಲಿ ಗಣನೀಯ ಸಾಧನೆಯನ್ನು ಮಾಡಿವೆ. ನಗರದಲ್ಲಿ ಸಹ ಅಶಕ್ತ ಮಹಿಳೆಯರಿಗೆ ರಕ್ಷಣಾಧಾಮಗಳು, ಮಹಿಳೆಯರಿಗೆ ವಿಶೇಷ ಕೈಗಾರಿಕಾ ನೀತಿಗಳೇ ಮೊದಲಾದ ಕ್ರಮಗಳು ಮಹಿಳೆಯರನ್ನು ಸಬಲೆಯರನ್ನಾಗಿಸಲು ಸಹಾಯಕವಾಗಿವೆ. ಹೀಗೆ ಸರ್ಕಾರ, ಸಮಾಜ, ಸೇವಾಸಂಸ್ಥೆಗಳು ಕೈಗೊಳ್ಳುತ್ತಿರುವ ಶ್ಲಾಘನೀಯ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ "ಮಹಿಳಾ ಮೀಸಲಾತಿ"ಯ ಅವಶ್ಯಕತೆಯೇ ಇಲ್ಲ.

ಒಂದು ಮಾತು : ಮಹಿಳಾ ಮೀಸಲಾತಿಯ ಹೆಸರಿನಲ್ಲಿ ನಿಜವಾದ ಪ್ರತಿಭೆಗಳನ್ನು ಮೂಲೆಗುಂಪಾಗಿಸುವುದು ಬೇಡ. ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ಬಹುತೇಕ ಕಡೆಗಳಲ್ಲಿ ಲಭಿಸಿದೆ; ಇನ್ನೂ ಲಭಿಸಿರದರ ಕಡೆಗಳಲ್ಲಿ, ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ಹೀಗೆ ಸರ್ವರಿಗೂ ಸಮಾನ ಗೌರವ, ಪ್ರತಿಭೆಗೆ ಮನ್ನಣೆ ನೀಡುವ ಸುಸಂಸ್ಕೃತ ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸುವ ಅವಕಾಶ ನಮ್ಮದಾಗಲಿ. ಆ ದಿನಗಳು ಬೇಗ ಬರಲಿ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗೋಣವೇ?

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more