• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಂಸ್ಕೃತದಲಿನ್ನೇನು?' ಎಂದ ಕವಿ ಮಹಲಿಂಗರಂಗ

By Prasad
|
ಮಹಲಿಂಗರಂಗ ಅಂದ್ರೆ ಯಾರು? ಕವಿಯಾಗಿದ್ದರೆ ಯಾವ ಶತಮಾನದವನು? ಯಾವ ಬಗೆಯ ಸಾಹಿತ್ಯ ಮಹಲಿಂಗರಂಗ ರಚಿಸಿದ್ದಾನೆ? ಇಲ್ಲಿಯವರೆಗೆ ಈ ಪ್ರಶಸ್ತಿ ಯಾರು ಯಾರಿಗೆ ಸಂದಿದೆ? ಮುಂತಾದ ಪ್ರಶ್ನೆಗಳು ನಮ್ಮ ಓದುಗರಿಗೆ ಸಹಜವಾಗಿ ಉದ್ಭವವಾಗಿದ್ದವು, ಪತ್ರಕರ್ತ ಆನಂದರಾಮ ಶಾಸ್ತ್ರೀ ಅವರು ಈ ಪ್ರಶಸ್ತಿಗೆ ಆಯ್ಕೆಯಾದಾಗ. ಶಾಸ್ತ್ರೀಯವರೇ ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಿದ್ದಾರೆ.

'ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲಿನ್ನೇನು?' ಹೀಗೆ ಕನ್ನಡನುಡಿಯ ಹಿರಿಮೆಯನ್ನು 17ನೆಯ ಶತಮಾನದಲ್ಲೇ ಸಾರಿದ ಮಹಾನ್ ಕವಿ ಮಹಲಿಂಗರಂಗ.

12ನೆಯ ಶತಮಾನದಿಂದ ಕನ್ನಡ ನೆಲದಲ್ಲಿ ವೀರಶೈವ ಪರಂಪರೆ ಮತ್ತು ಆ ಮತಧರ್ಮದ ಸಾಹಿತ್ಯ ಬೆಳಗತೊಡಗಿತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅದು ಇನ್ನಷ್ಟು ಶೋಭಾಯಮಾನವಾಯಿತು. ಅದೇ ವೇಳೆ 'ಕೈವಲ್ಯ ಸಾಹಿತ್ಯ'ವೆಂಬ ಸಾಹಿತ್ಯ ಪ್ರಕಾರವು ಆರಂಭವಾಯಿತು. ಅದ್ವೈತ ಸಿದ್ಧಾಂತದ ಬೆಳಕಿನಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ 'ಕೈವಲ್ಯ ಸಾಹಿತ್ಯ'ದ ಮುಖ್ಯಸ್ರೋತವಾಗಿತ್ತು. ಪರಮಾರ್ಥಸಾಧನೆಯ ಮಾರ್ಗದ ಶೋಧವೇ 'ಕೈವಲ್ಯ ಸಾಹಿತ್ಯ'ದ ಉದ್ದೇಶವಾಗಿತ್ತು. 'ಭಕ್ತಿಮಾರ್ಗ'ಕ್ಕಿಂತ ಭಿನ್ನವಾದ 'ಜ್ಞಾನಮಾರ್ಗ'ಕ್ಕೆ ಒತ್ತು ನೀಡಿದ ಸಾಹಿತ್ಯ ಈ 'ಕೈವಲ್ಯ ಸಾಹಿತ್ಯ'.

ವೀರಶೈವ ತತ್ತ್ವವನ್ನು ಅದ್ವೈತ ಸಿದ್ಧಾಂತದೊಡನೆ ಸಮನ್ವಯಗೊಳಿಸಿ ಅರ್ಥೈಸಲೆತ್ನಿಸಿದ ನಿಜಗುಣ ಶಿವಯೋಗಿಗಳು 15ನೆಯ ಶತಮಾನದಲ್ಲಿ 'ಕೈವಲ್ಯ ಸಾಹಿತ್ಯ'ಕ್ಕೆ ಶ್ರೇಷ್ಠ ಕೊಡುಗೆ ಸಲ್ಲಿಸಿದರು. ಈ ಸಾಹಿತ್ಯಪ್ರಕಾರದಲ್ಲಿ ಅನಂತರದ ಮಹತ್ತರ ಕೊಡುಗೆ 17ನೆಯ ಶತಮಾನದ ಕವಿ ಮಹಲಿಂಗರಂಗನದು. ನಿಜಜೀವನದ ಅನುಪಮ ಉಪಮೆಗಳಿಂದ ಕೂಡಿದ ಷಟ್ಪದಿಗಳ ಮೂಲಕ ಮಹಲಿಂಗರಂಗ ಕವಿಯು ತನ್ನ 'ಅನುಭವಾಮೃತ' ಕೃತಿಯಲ್ಲಿ ಆದಿಶಂಕರರ ಅದ್ವೈತ ತತ್ತ್ವವನ್ನು ಪ್ರಸ್ತುತಪಡಿಸಿರುವ ಬಗೆ ಅನನ್ಯವಾದುದಾಗಿದೆ. ಈ ಕೃತಿಯು ಕನ್ನಡದ ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳಬಹುದಾಗಿದೆ.

'ಮಹಲಿಂಗರಂಗ - ಒಂದು ಅಧ್ಯಯನ' ಮಹಾಪ್ರಬಂಧಕ್ಕಾಗಿ ಪ್ರೊ. ಗುರುಪಾದ ಘಿವಾರಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು 2009ರ ಜನವರಿಯಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ 'ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ'ಯನ್ನು 2002ನೇ ಇಸವಿಯಿಂದ ಪ್ರತಿವರ್ಷ ನೀಡುತ್ತಬಂದಿದೆ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮತ್ತು ಜಿಲ್ಲೆಯವರಾದ ಸಾಹಿತಿಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಇಂದು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇತರ ಅನೇಕ ಪ್ರಶಸ್ತಿಗಳಂತಲ್ಲದ ಈ ಪ್ರಶಸ್ತಿಗೆ ಅರ್ಹರನ್ನು ಸಾಹಿತ್ಯ ಪರಿಷತ್ತು ರಚಿಸುವ ಆಯ್ಕೆ ಸಮಿತಿಯು ನಿರ್ಧರಿಸುತ್ತದೆ. ಅನಂತರ ಪರಿಷತ್ತು ಸರ್ವಾನುಮತದಿಂದ ನಿರ್ಧಾರವನ್ನು ಸ್ವೀಕಾರ ಮಾಡುತ್ತದೆ. ಯಾವುದೇ ಅರ್ಜಿ, ಆಮಿಷ, ವಶೀಲಿಬಾಜಿಗಳಿಂದ ಹೊರತಾಗಿರುವ ಈ ಪ್ರಶಸ್ತಿಯು ಅಪ್ಪಟ ಗುಣಗ್ರಾಹಿಯಾಗಿದೆ. ವೃತ್ತಪತ್ರಿಕೆಗಳ ಸ್ಥಾನಿಕ ಆವೃತ್ತಿ ಮತ್ತು ಸ್ಥಳೀಯ ಪುಟಗಳೆಂಬ (ಅ)ವ್ಯವಸ್ಥೆಯಿಂದಾಗಿ ಈ ಪ್ರಶಸ್ತಿಗೆ ವ್ಯಾಪಕ ಪ್ರಚಾರ ಸಿಕ್ಕಿಲ್ಲ, ಅಷ್ಟೆ.

ಕಳೆದ ಏಳು ವರ್ಷಗಳಲ್ಲಿ ಕ್ರಮವಾಗಿ ಲಲಿತಮ್ಮ ಡಾ. ಚಂದ್ರಶೇಖರ್, ಮುದೇನೂರು ಸಂಗಣ್ಣ, ಬಿದರಹಳ್ಳಿ ನರಸಿಂಹಮೂರ್ತಿ, ಕುಂ.ಬಾ. ಸದಾಶಿವಪ್ಪ, ಬಿ.ವಿ. ವೀರಭದ್ರಪ್ಪ, ಶ್ರೀನಿವಾಸ ಸುತ್ರಾವೆ ಮತ್ತು ಟಿ. ಗಿರಿಜ ಇವರು ಗಳಿಸಿರುವ ಈ ಪ್ರಶಸ್ತಿಯು ಈ ಬಾರಿ (2009ನೇ ಸಾಲಿಗೆ) ಈ ಲೇಖಕನಿಗೆ ಸಂದಿದೆ.

'ದಟ್ಸ್ ಕನ್ನಡ'ದ ಓದುಗರು ಬಯಸಿದ್ದರಿಂದಾಗಿ ಇವಿಷ್ಟು ವಿವರಗಳು. ಅಭಿನಂದನೆ ತಿಳಿಸಿರುವ ಮಿತ್ರರೆಲ್ಲರಿಗೂ ಈ ಲೇಖಕನ ಧನ್ಯವಾದಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more