• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆ ಕಟ್ಟಳೆಗೆ ಕಟ್ಟುಬೀಳದ ಯುವಜನತೆ

By * ರೂಪ ಎಸ್., ಬೆಂಗಳೂರು
|
ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಒಂದು ಮದುವೆ, ಅಂದ ಮೇಲೆ ಅದು ಸರಿಯಾಗಿ ಆಗಬೇಡವೇ? ಹೌದು ಮದುವೆಯೆನ್ನುವದು ಒಂದು ಸಂಸ್ಕಾರ, ಅದೊಂದು ಶುಭಕಾರ್ಯ, ಎರಡು ಆತ್ಮಗಳ ಪವಿತ್ರ ಮಿಲನ. ಜೀವನದಲ್ಲಿ ಮದುವೆ ಎನ್ನುವುದು ಒಂದು ಮುಖ್ಯ ಘಟ್ಟ, ಹದಿನಾರು ಸಂಸ್ಕಾರಗಳಲ್ಲಿ ಒಂದು. ಎರಡು ಆತ್ಮಗಳನ್ನು ಹತ್ತಿರ ತಂದು ಜೀನವವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಒಂದು ಸಾಮಾಜಿಕ ಕಟ್ಟಳೆ. ಆದರೆ ಈ ಸಂಸ್ಕಾರದ ಆಚರಣೆಗೆ ಈ ಧಾರ್ಮಿಕ ವಿಧಿ ಪೂರೈಕೆಗೆ ಇಂದಿನ ಯುವಜನತೆ ಮೊದಲ ಪ್ರಾಶಸ್ತ್ಯ ಕೊಡುತ್ತಿಲ್ಲ. ಮದುವೆ ಭಾರತೀಯ ಶಿಕ್ಷಿತ ಹಾಗೂ ನಗರವಾಸಿ ಯುವಕ, ಯುವತಿಯರ ಬದುಕಿನ ಪ್ರಥಮ ಆದ್ಯತೆಯಾಗಿ ಉಳಿದಿಲ್ಲ. ಪ್ರಥಮ ಆದ್ಯತೆ ಏನಿದ್ದರೂ ಉದ್ಯೋಗಕ್ಕೆ ಮಾತ್ರ.

ಹುಡುಗಿಗೆ ಹದಿನೆಂಟಾದರೂ ಇನ್ನು ಮದುವೆಯಾಗಿಲ್ಲ ಎಂಬ ಅಂದಿನ ಮಾತುಗಳಿಗೆ ಇಂದು ಬೆಲೆಯಿಲ್ಲ. ತಮ್ಮ ಮದುವೆಯ ಸಮಯಕ್ಕೆ ಯುವಕರಿಗೆ ಇಪ್ಪತ್ತೊಂದು ವರ್ಷ ತುಂಬಿರಲೇಬೇಕು ಎನ್ನುತ್ತೆ ಕಾನೂನು. ವಯಸ್ಸಿನ ಮಾತು ಹಾಗಿರಲಿ ಮದುವೆಗಿಂತ ನಮ್ಮ ಬದುಕು, ಭವಿಷ್ಯ ಮುಖ್ಯ ಎನ್ನುವ ಯುವಜನೆತೆಯ ನಂಬಿಕೆ ಈಗ ಅಧಿಕವಾಗಿದೆ. 30 ಮೀರಿದರೂ ಮದುವೆಯ ಬಗ್ಗೆ ಚಿಂತಿಸದೆ ಉದ್ಯೋಗ ಬದುಕಿನ ಸ್ಥಿರತೆ ಸಾಮಜಿಕ ಸ್ಥಾನಮಾನ ಮುಂತಾದವುಗಳ ಬಗ್ಗೆ ಯೋಚಿಸುವ ಮನೋಭಾವ ಹೆಚ್ಚುತ್ತಿದೆ.

ಈಗಿನ ಕಾಲಮಾನ ಸಾಕಷ್ಟು ಬದಲಾವಣೆ ಕಂಡಿದೆ. ಜನಸಂಖ್ಯೆ ಹೆಚ್ಚಳ, ಸಂಪನ್ಮೂಲಗಳ ಕೊರತೆ ನಿರುದ್ಯೋಗದ ಸಮಸ್ಯೆಗಳನ್ನು ಸೃಷ್ಟಿಸಿದೆ. ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗುವ ಅವಶ್ಯಕತೆ ಇಂದು ಹೆಚ್ಚಿದೆ. ಓದಿದ ಮಾತ್ರಕ್ಕೆ ಉದ್ಯೋಗ ದೊರಕದೆ ಆರ್ಥಿಕ ಸಂಪಾದನೆಯಾಗದು, ಅಂತೆಯೇ ಮದುವೆ ಬಳಿಕ ಜೀವನ ನಿರ್ವಹಣೆ ಎಲ್ಲವೂ ಇಷ್ಟ ಸಾಧ್ಯವೇ? ಹೀಗಾಗಿ ಬಹುಪಾಲು ಯುವ ಜನತೆ ತಮ್ಮ ಆರ್ಥಿಕ ನೆಲೆಗಟ್ಟು ಭದ್ರವಾಗುವ ತನಕ ಮದುವೆಯನ್ನು ಮುಂದೂಡುತ್ತಿದ್ದಾರೆ.

ಮದುವೆಗೆ ಮುಂಚೆ ಮನೆಯಲ್ಲಿ ಸುಮ್ಮನೆ ಕುಳಿತಿರುವ ಯುವತಿಯರು ಕಾಣಸಿಗುವುದು ಬಲು ದುರ್ಲಭ. ಮದುವೆಗೆ ಮುಂಚೆ ಹುಡುಗಿ ಉದ್ಯೋಗದಲ್ಲಿದ್ದರೆ ಅವಳು ಹೆತ್ತವರಿಗೆ ಬಾರವಾಗುವುದಿಲ್ಲ, ಅವಳ ಸಂಪಾದನೆಯಿಂದ ಮನೆಗೂ ಸಹಾಯವಾಗುತ್ತದೆ, ಮುಂದಾಗಲಿರುವ ಮದುವೆಗಾಗಿ ಹಣ, ಒಡವೆ ಮಾಡಿಟ್ಟುಕೊಳ್ಳುವ ಕುರಿತು ಇಂದು ಜನತೆ ಚಿಂತಿಸುತ್ತಿದ್ದಾರೆ. ಹಿಂದೆ ಯುವಕರು ಹೇಳುತ್ತಿದ್ದಂತೆ ಮೊದಲು ಉದ್ಯೋಗ ನಂತರ ಮದುವೆ ಎಂಬ ಮಾತನ್ನು ಇಂದು ಯುವತಿಯರೂ ಹೇಳುತ್ತಿದ್ದಾರೆ. ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ.

ಆಧುನಿಕ ಕಾಲಕ್ಕೆ ತಕ್ಕಂತೆ ಯುವಕ ಯವತಿಯರ ಮನೋಭಾವವೂ ಬದಲಾಗಿರುವುದು ಮದುವೆಗಳನ್ನು ಮುಂದೂಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇಂದಿನ ತರುಣಿಯರು ಮದುವೆಯಾಗಿ ಮನೆಯಲ್ಲೇ ಉಳಿಯಲು ಬಯಸರು. ಮದುವೆಯಾದ ನಂತರವೂ ಗಂಡ-ಹೆಂಡತಿಯರಿಬ್ಬರು ಕೆಲಸ ಮಾಡಿದರಷ್ಟೇ ಜೀವನದ ರಥ ಸರಾಗವಾಗಿ ಮುಂದೆ ಸಾಗುತ್ತದೆ ಎಂಬುದು ಪ್ರತಿಯೊಬ್ಬರ ಅನುಭವದ ಮಾತಾಗಿದೆ.

ಕೃಷಿಯನ್ನು ನಂಬಿಕೊಂಡು ತಂದೆ ತಾಯಿಗಳೊಂದಿಗೆ ವಾಸವಾಗಿರುವ ಯುವಕರಿಗೆ ಮದುವೆಯ ಸಂದರ್ಭಗಳು ಒದಗಿಬರುವುದು ತಡವಾಗಿಯೇ. ಕಲಿಕೆ ಒಂದು ಹಂತಕ್ಕೆ ಬಂದ ಕೂಡಲೆ ಹಳ್ಳಿಯಲ್ಲಿಯೇ ಜೀವನ ಸವೆಸಲು ಯುವಕರು ಹಿಂಜರಿಯುತ್ತಿದ್ದಾರೆ. ಪಟ್ಟಣದ ಆಕರ್ಷಣೆ, ಉತ್ತಮ ಸಂಬಳದ ಕೆಲಸದ ಆಮಿಷ ಯುವಕ, ಯುವತಿಯನ್ನು ನಗರದೆಡೆಗೆ ಸೆಳೆಯುತ್ತಿದೆ. ಇದರೊಟ್ಟಿಗೆ ವಿವಾಹವಾಗದೆಯೇ ಜೋಡಿ ಜೀವನ ಸಾಗಿಸುವ ಸಂಪ್ರದಾಯಕ್ಕೆ ಸಮಾಜದಲ್ಲಿ ಮನ್ನಣೆ ದೊರೆಯುತ್ತಿದೆ. ಇಷ್ಟವಿರುವವರೆಗೆ ಒಟ್ಟಿಗೆ ಇದ್ದರಾಯಿತು, ಇಲ್ಲದಿದ್ದರೆ ನಾನೊಂದು ಮನೆ, ನೀನೊಂದು ಮನೆ. ವಿಚ್ಛೇದನದ ಗೊಡವೆಯೇ ಇಲ್ಲ!

ಆದರೆ, ಹಳ್ಳಿ ಹಳ್ಳಿಯೇ, ನಗರ ನಗರವೇ. ನಗರದ ಜೀವನದ ತಕ್ಕಂತೆ ದುಡಿಮೆಯೂ ಇರಬೇಕು. ಕೈತುಂಬ ಸಂಬಳ ಬಂದು ಜೀವನ ಒಂದು ಹಂತಕ್ಕೆ ಬರುವವರೆಗೆ ಮದುವೆಗಾಗಿ ಕಾಯಲೇಬೇಕು. ಅದಲ್ಲದೆ, ಮದುವೆ ವಯಸ್ಸು ಮೀರುತ್ತಿದ್ದರೂ ಯುವಜನತೆ ಮದುವೆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮದುವೆ ಎನ್ನುವುದು ಸುಂದರ ದಾಂಪತ್ಯಗೀತೆ ಅನ್ನುವುದಕ್ಕಿಂತ ಅದೊಂದು ಬಂಧನವೆಂಬಂತೆ ಚಿಂತಿಸಲಾಗುತ್ತಿದೆ. ಆಧುನಿಕ ಬದುಕಿನ ಕೆಲ ಕಹಿ ದಾಂಪತ್ಯ ಪ್ರಸಂಗಗಳು ಕೂಡ ಮದುವೆ ಮುಂದೆ ಹಾಕುವಂತೆ ಪ್ರೇರೇಪಿಸುತ್ತಿವೆ.

ಮೊದಲೆಲ್ಲ ವಿವಾಹದ ವಯಸ್ಸು ಬಂತೆಂದರೆ ಹೆತ್ತವರಿಗೆ ತಲೆಬಿಸಿ. ಸಾವಿರ ಸುಳ್ಳು ಹೇಳಿ ಮದುವೆ ಮಾಡಬೇಕಾದ ಅನಿವಾರ್ಯತೆ ಇತ್ತು. ಮಗಳ ಕನ್ಯಾ - ಸೆರೆ ಬಿಡಿಸಲು ಆಸ್ತಿ-ಪಾಸ್ತಿ ಮಾರುವ ಅಗತ್ಯತೆ ಅನಿವಾರ್ಯವಾಗಿತ್ತು. ಜೀವನ ನಿರ್ವಹಣೆಯನ್ನು ಬದಿಗೊತ್ತಿ ಕೇವಲ ಧಾರ್ಮಿಕ ವಿಧಿಯೊಂದರ ಆಚರಣೆಗೆ ಮಾಡಬೇಕಾದ ಖರ್ಚು, ಅದಕ್ಕಿಂತ ಹೆಚ್ಚಾದ ತೊಳಲಾಟ, ಪರದಾಟ, ಇಷ್ಟೆಲ್ಲವೂ ದಾಂಪತ್ಯ ಬದುಕಿಗೆ ಅಡ್ಡಿಯಾಗದಿರುವುದು ವೈಶಿಷ್ಟವೇ ಆದರೂ ಇಂದು ಕೈಗಾರೀಕರಣ ಆರ್ಥಿಕ ಮುನ್ನಡೆ, ಹಳೆಯ ನೈತಿಕ ಮೌಲ್ಯಗಳನ್ನು ಒರೆಗೆ ಹಚ್ಚಿ ನೋಡುವ ಆಧುನಿಕ ವಿಚಾರದಾರೆ, ತೀವ್ರವಾಗಿರುವ ಮಹಿಳಾ ವಿಮೋಚನಾ ಒತ್ತಾಸೆ, ಸಮಾನ ಮನಸ್ಸಿನ ಅಭಾವ, ಸಂಶಯ, ಪ್ರೇಮ, ವಂಚನೆ ಪ್ರಕರಣಗಳು ಇಂದಿನ ದಾಂಪತ್ಯ ಬದುಕನ್ನು ಕಳೆಗುಂದುವಂತೆ ಮಾಡಿವೆ.

ಇಂದು ಸಮಾನ ಮನಸ್ಸಿನ ಅಭಾವ ಆಧುನಿಕ ದಂಪತಿಗಳಲ್ಲಿ ಎದ್ದು ಕಾಣುವ ಪ್ರಧಾನ ಅಂಶವಾಗಿದೆ. ಇತ್ತೀಚೆಗೆ ಹೆಚ್ಚುತಿರುವ ವಿವಾಹ ವಿಚ್ಛೇದನ ಪ್ರಕರಣಗಳು ದಾಂಪತ್ಯ ಜೀವನದಲ್ಲಿರುವ ಬಿರುಕುಗಳನ್ನು ಎತ್ತಿ ತೋರಿಸುತ್ತದೆ. ಇಂದಿನ ಜಮಾನಾದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಲು ಘನವಾದ ಕಾರಣವೇ ಬೇಕಿಲ್ಲ. ಕಾರಣವೇ ಅಲ್ಲದ ಕಾರಣಗಳು ಕೂಡ ದಾಂಪತ್ಯಕ್ಕೆ ಕವಲು ದಾರಿ ತೋರಿಸುತ್ತಿವೆ.

ಒಟ್ಟಿನಲ್ಲಿ ಹೇಳುವುದಾದರೆ ಎರಡು ಆತ್ಮಗಳನ್ನು ಹತ್ತಿರ ತಂದು ಜೀವನವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಈ ಸಾಮಾಜಿಕ ಕಟ್ಟು ಕಟ್ಟಳೆಯಾದ ಮದುವೆಯನ್ನು ಮುಂದೂಡುವುದರಿಂದ ಮುಂದಿನ ಬದುಕಿನಲ್ಲಿ ಬಂದೆರಗುವ ನಾನಾ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮದುವೆಯಾದ ಮೇಲೂ ಸಾಮರಸ್ಯದಿಂದ ಜೀವನ ಸಾಗಿಸುವ ಬಗೆಯ ಬಗ್ಗೆ ಇಂದಿನ ಯುವಜನತೆ ಚಿಂತಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more