• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಲಲ್ಲಿ ಕೊಟ್ಟೆರೊಟ್ಟಿ, ಬೆಳಕಿನಲ್ಲಿ ಪಿಜ್ಜಾ ಬರ್ಗರ್

|
ಜಾಗತೀಕರಣದಿಂದ ಹಿಂದೂ ಹಬ್ಬಗಳು ಬಹುರಾಷ್ಟ್ರೀಯ ಕಂಪನಿಗಳ ಬ್ರಾಂಡ್ ಗಳಾಗಿ ಪರಿವರ್ತಿತವಾಗುತ್ತಿವೆ. ನಾವು ಗ್ರಾಹಕರಾಗುತ್ತಿದ್ದೇವೆ. ಕರಾವಳಿಯಲ್ಲಿ ಕೂಡ ಆಧುನಿಕತೆಯ ಅಲೆಗೆ ಹಳೆ ಸಂಪ್ರದಾಯ ಕೊಚ್ಚಿಕೊಂಡು ಹೋಗಿದೆ. ಬಿದಿರಿನಿಂದ ಆಕಾಶಬುಟ್ಟಿ ತಯಾರಿಸುವ ಸಂಭ್ರಮ, ಹಲಸಿನ ಎಲೆಯ ಕೊಟ್ಟೆರೊಟ್ಟಿ, ಬೆಲ್ಲ ಹಾಕಿದ ಕಾಯಿಹಾಲು ಮೆಲ್ಲುವ ಸುಯೋಗ ಕಾಲಕ್ರಮೇಣ ಮರೆಯಾಗುತ್ತಿದೆ. ಇಂದಿನ ಪೀಳಿಗೆಗೆ ಹಳೆಯ ಸಂಪ್ರದಾಯವನ್ನು ಪರಿಚಯಿಸುವ ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಹಿರಿಯರ ಮೇಲಿದೆ.

* ವಿನಾಯಕ ಎಲ್ ಪಟಗಾರ. ಬೆಟ್ಕುಳಿ, ಕುಮಟಾ

ಮತ್ತೆ ಬಂದಿದೆ ದೀಪಾವಳಿ. ಆರ್ಥಿಕ ಸಂಕಷ್ಟಗಳ ನಡುವೆಯೂ ಜನರ ದೀಪಾವಳಿ ಆಚರಣೆಗೆ ಏನೂ ತೊಂದರೆಯಿಲ್ಲ. ದೀಪಾವಳಿ ಆಚರಣೆ ಇಂದು ತನ್ನ ಸಂಪ್ರದಾಯಗಳನ್ನು ಮೀರಿ ಆಧುನಿಕತೆಗಳನ್ನು ಮೈಗೂಡಿಸಿಕೊಳ್ಳತೊಡಗಿದೆ. ಹಳೆ ಆಚರಣೆಗಳು ಆಧುನಿಕತೆಗಳನ್ನು ಮೈಗೂಡಿಸಿಕೊಂಡು ಹೊಸತಾಗಿದೆಯೋ, ಅಥವಾ ಹಳೆ ಸಂಪ್ರದಾಯಗಳು ಮರೆಯಾಗುತ್ತಿದೆಯೋ ಗೊತ್ತಾಗದ ಗೊಂದಲದಲ್ಲಿ ಇದ್ದೇವೆ.

ಜಾಗತೀಕರಣ ಪ್ರವೇಶಿಸದ ಸ್ಥಾನಗಳಿಲ್ಲ. ಹಬ್ಬಗಳೂ ಇದಕ್ಕೆ ಹೊರತಾಗಿಲ್ಲ. ಇಂದಿನ ಹಬ್ಬದ ಸಂಭ್ರಮಗಳು ಮನೆಗಳಿಗಿಂತ ಹೆಚ್ಚಾಗಿ ಶಾಪಿಂಗ್ ಮಾಲ್ ಗಳಲ್ಲೇ ಮುಗಿದುಹೋಗಿರುತ್ತವೆ. ದೀಪಾವಳಿ ಹಬ್ಬದ ಪ್ಯಾಕೇಜ್ ಕೊಡಿ ಎಂದು ಹಣ ಕೊಟ್ಟರೆ ಮುಗಿಯಿತು ಮನೆ ಬಾಗಿಲಿಗೆ ಕಟ್ಟುವ ಪ್ಲಾಸ್ಟಿಕ್ ತೋರಣದಿಂದ ಹಿಡಿದು ರೆಡಿಮೇಡ್ ಹೋಳಿಗೆಗಳೂ ಅಡುಗೆಮನೆ ತಲುಪಿರುತ್ತವೆ. ಹಬ್ಬಗಳ ಸಂಭ್ರಮ ಇರುವುದು ಅವುಗಳ ತಯಾರಿಯಲ್ಲಿ. ಆದರೆ ಇವತ್ತಿನ ಬ್ಯುಜಿ ಲೈಫ್ನಲ್ಲಿ ಆ ತಯಾರಿ ಎನ್ನುವುದೇ ಇಲ್ಲವಾಗಿದೆ. ಸಂಭ್ರಮ ಇನ್ನೆಲಿ?

ನಾವೂ ಚಿಕ್ಕವರಿರುವಾಗ ದೀಪಾವಳಿ ಹಬ್ಬಗಳ ಮೂನ್ಸೂಚನೆ ಹದಿನೈದು ದಿನಗಳ ಮೊದಲೇ ಸಿಕ್ಕುಹೋಗುತ್ತಿತ್ತು. ಅಜ್ಜನು ತೆಂಗಿನ ನಾರಿನಿಂದ ಹಗ್ಗ ನೇಯಲಿಕ್ಕೆ ಸುರು ಮಾಡುತ್ತಿದ್ದನು. ದನಗಳಿಗೆ ಹೊಸದಾಗಿ ದಾಂಬುಗಳನ್ನು ಮಾಡಲು ತೊಡಗುತ್ತಿದ್ದನು. ಆಕಾಶ ಗೂಡು ಮಾಡಲು ಬಿದಿರು ಗಳದಿಂದ ಬಿದಿರು ಕಡ್ಡಿ ಮಾಡುವುದು, ಅದರಿಂದ ಸುಂದರ ನಕ್ಷತ್ರಾಕಾರದ ರಚನೆ ಮಾಡುವುದು, ಅದಕ್ಕೆ ಬಣ್ಣದ ಕಾಗದವನ್ನು ಹಚ್ಚುವ ಒಳಗಡೆ ದೀಪ ಇಡಲು ಮಾಡುವ ವ್ಯವಸ್ಥೆ ಇವೆಲ್ಲವನ್ನೂ ನಾವು ನೋಡುತ್ತ, ಅವರಿಗೆ ಸಹಾಯ ಮಾಡುತ್ತ ಸಂಭ್ರಮಿಸುತ್ತಿದ್ದೆವು. ಹಿಂಡ್ಲಚಿಕಾಯಿಯ ಸರ ಮಾಡಿ ಬಚ್ಚಲಮನೆಯ ನೀರು ತುಂಬುವ ಹಂಡೆಯ ಕಂಠದ ಸುತ್ತ ಕಟ್ಟುತ್ತಿದ್ದುದು, ವಿವಿಧ ಜಾತಿಯ ಬೇರುಗಳನ್ನು ಹಾಕಿ ನೀರನ್ನು ಬಿಸಿಮಾಡುತ್ತಿದ್ದುದು, ಕೊಟ್ಟೆ ರೊಟ್ಟಿ ಮಾಡಲು ಹಲಸಿನ ಎಲೆ ತಂದು, ನಾಲ್ಕು ಎಲೆಗಳನ್ನು ಬಿದಿರು ಕಡ್ಡಿಗಳಿಂದ ಪೋಣಿಸಿ ಕೊಟ್ಟೆ ಮಾಡುತ್ತಿದ್ದ ಕೈಚಳಕ ಇಂದು ಕಾಣುವುದು ಅಪರೂಪವಾಗುತ್ತಿದೆ. ಮೊದಲೆಲ್ಲಾ ದೀಪಾವಳಿಗಳಲ್ಲಿ ಮಾಡುತ್ತಿದ್ದ ತಿನಿಸುಗಳು ಎಷ್ಟೊಂದು ಸರಳ ಆರೋಗ್ಯಕರವಾಗಿರುತ್ತಿದ್ದವು. ಹಲಸಿನ ಎಲೆಯಿಂದ ಮಾಡುತ್ತಿದ್ದ ಕೊಟ್ಟೆ ರೊಟ್ಟಿ , ಅರಸಿನ ಎಲೆಯಿಂದ ಮಾಡುತ್ತಿದ್ದ ಮೊಗ್ಗೆಕಾಯಿ ರೊಟ್ಟಿ , ಅದನ್ನು ನೆಚ್ಚಿಕೊಂಡು ತಿನ್ನಲು ಬೆಲ್ಲ ಹಾಕಿ ಮಾಡುತ್ತಿದ್ದ ಕಾಯಿ ಹಾಲು, ಶೆಟ್ಲಿ ಪುಡಿ, ಅನ್ನ ಸಾಂಬಾರು, ಇಷ್ಟೇ ಆಗಿರುತ್ತಿತ್ತು. ಒಟ್ಟಿನಲ್ಲಿ ಹಬ್ಬದ ಊಟವೆಂದರೆ ಒಂದು ತೇಗ ಬಂದರೆ ಕಡಿಮೆ ಎರಡು ತೇಗ ಬಂದರೆ ಹೆಚ್ಚು ಎನ್ನುವಷ್ಟರ ಮಟ್ಟಿಗೆ ಹಿತಮಿತವಾಗಿತ್ತು.

ಇಂದು ದೀಪಾವಳಿ ಆಚರಣೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಆಧುನಿಕ ಸೌಲಭ್ಯಗಳು, ಸಾಧನಗಳು, ಹಬ್ಬಗಳ ಆಚರಣೆಯಲ್ಲಿ ಹೊಸತನಗಳನ್ನು ರೂಢಿಸಿಕೊಳ್ಳಲು ಅನಿವಾರ್‍ಯತೆಯನ್ನು ಉಂಟು ಮಾಡಿವೆಎಂದರೆ ತಪ್ಪಾಗಲಾರದು. ಇವತ್ತು ಎಷ್ಟೋ ಮನೆಗಳಲ್ಲಿ ನೀರು ತುಂಬುವ ಹಂಡೆಗಳನ್ನು ಕಾಣುವುದೇ ಅಪರೂಪವಾಗಿದೆ. ಯಾವುದೋ ಟ್ಯಾಂಕಿನಿಂದ ಪೈಪುಗಳಲ್ಲಿ ನೀರು ಹಿಂದೆ ಮುಂದೆ ಸುತ್ತಿರಿಗಿ ಬಚ್ಚಲ ಮನೆಯ ನಲ್ಲಿಯಲ್ಲಿ ಬಿಸಿ ನೀರು ಬರುವುದು ಮಾತ್ರ ಕಾಣುತ್ತದೆ. ಇಂತಹ ಮನೆಗಳಲ್ಲಿ ನೀರು ತುಂಬುವ ದಿನವಾಗಲಿ, ಹಿಂಡ್ಲಚಿ ಸರ ಕಟ್ಟುವದಾಗಲಿ, ವಿವಿಧ ಜಾತಿಯ ಬೇರುಗಳನ್ನು ಹಾಕಿ ನೀರನ್ನು ಕಾಯಿಸಲು ಸಾಧ್ಯವೇ? ಹಾಗಾಗಿ ನೆಪ ಮಾತ್ರಕ್ಕೆ ಆಚರಣೆ ಮಾಡುತ್ತ ಕೊನೆಗೆ ಮರೆತೆಬಿಟ್ಟರೂ ಆಶ್ಚರ್ಯವಿಲ್ಲ. ರೆಡಿಮೆಡ್ ಇಡ್ಲಿ ಮಾಡುವ ಪಾತ್ರೆಗಳು ಬಂದಿರುವಾಗ ಇನ್ನು ಹಲಸಿನ ಎಲೆಯ ಕೊಟ್ಟೆ ಮಾಡುವ ತೊಂದರೆ ಮಹಿಳೆಯರು ತೆಗೆದುಕೊಳ್ಳುವದಿಲ್ಲ. ಹಲಸಿನ ಮರಗಳೇ ಕಡಿಮೆಯಾಗಿರುವಾಗ ಹಲಸಿನ ಎಲೆಗಳೂ ಸಿಗುವುದು ಕಷ್ಟ. ಸಿಕ್ಕಿದ ಎಲೆಗಳಿಂದ ಕೊಟ್ಟೆ ಮಾಡುವ ನೈಪುಣ್ಯತೆ ಇಂದಿನವರಲ್ಲಿ ಕಾಣುವುದು ಅಪರೂಪ ಎನ್ನಿ. ಇನ್ನು ಆಕಾಶಬುಟ್ಟಿಯ ಕತೆಯೇ ಬೇರೆಯಾಗಿದೆ. ಮೊದಲ್ಲೆಲ್ಲಾ ಆಕಾಶ ಬುಟ್ಟಿ ಮಾಡುವ ಸಂಭ್ರಮ ಒಂದೆಡೆಯಾದರೆ, ಅದರಲ್ಲಿ ಹಣತೆಯನ್ನಿಟ್ಟು ದೀಪ ಹಚ್ಚಿ ಮನೆ ಹತ್ತಿರ ಇರುವ ಮರದ ತುದಿಗೆ ಅದನ್ನು ದಾರದಿಂದ ತೂಗಿ ಬಿಡಲಾಗುವ ಕೈಚಳಕ ನೋಡುವುದೇ ಸಂತೋಷವಾಗಿತ್ತು. ನಮ್ಮಿಂದ ದೂರವಾಗಿರುವ ಹಿರಿಯರಿಗೆ ದಾರಿ ತೋರಿಸಲೆಂದು ಈ ದೀಪ ಕಟ್ಟಲಾಗುತ್ತಿತ್ತು. ಆದರೆ ಇವತ್ತು ಬಹುತೇಕ ಮನೆಗಳಲ್ಲಿ ಆಕಾಶಬುಟ್ಟಿ ಮಾಡುವ ಪದ್ದತಿ ಮರೆತುಹೋಗಿದೆ. ಅಂಗಡಿಗಳಲ್ಲಿ ಸಿಗುವ ನಕ್ಷತ್ರಗಳ ರಚನೆಯ ರೆಡಿಮೇಡ್ ಆಕಾಶಬುಟ್ಟಿಗಳನ್ನು ಹಬ್ಬದ ದಿನ ತಂದು ರಾತ್ರಿ ಮನೆ ಮುಂದಿನ ಗೊಡೆಯ ಮೊಳೆಗೆ ತೂಗಿ ಹಾಕಿ ಚಿಕ್ಕದಾದ ವಿದ್ಯುತ್ ಬಲ್ಬಿನ ವ್ಯವಸ್ಥೆ ಮಾಡಿದರೆ ಮುಗಿಯಿತು. ಪವರ್ ಕಟ್ ಆದರೆ ಹಿರಿಯರಿಗೆ ಬೆಳಕು ಕಂಡ ಹಾಗೇ!

ಇವತ್ತು ದೀಪಾವಳಿಯ ಹಳೇ ಸಂಪ್ರದಾಯಗಳು ಮರೆತು ಹೋಗಲು ಪ್ರಮುಖ ಕಾರಣ ದೃಶ್ಯ ಮಾಧ್ಯಮಗಳು. ಟಿ.ವಿಗಳಲ್ಲಿ ಬರುವ ಜಾಹೀರಾತುಗಳ ಪ್ರಭಾವ ನಮ್ಮ ಸಂಪ್ರದಾಯಗಳನ್ನು ಮುಸುಕಾಗುವಂತೆ ಮಾಡಿವೆ. ಉದಾಹಣೆಗೆ ದೀಪಾವಳಿ ಬಂತೆಂದರೆ ಸಾಕು ಮನೆಯವರೆಲ್ಲ ಪೆಪ್ಸಿ ಕುಡಿದು ಸಂತೋಷ ಪಡುವ ದೃಶ್ಯವನ್ನು ತೋರಿಸುತ್ತಾರೆ. ಇದನ್ನು ನೋಡಿದ ಮಕ್ಕಳಿಗೆ ದೀಪಾವಳಿ ಎಂದರೆ ಪೆಪ್ಸಿ ಕುಡಿದು ಸಂತೋಷ ಪಡುವುದು ಎಂದು ತಿಳಿದುಕೊಳ್ಳುವುದು ಸಾಮನ್ಯವಲ್ಲವೇ. ಅದೇ ರೀತಿ ತಿಂಡಿ ತಿನಸುಗಳಾದ ಪಿಜ್ಜಾ ,ಬರ್ಗರ್ , ಜಾಮೂನು, ಪೇಡಾಗಳ ವಿವಿಧ ಕಂಪನಿಗಳ ಆಕರ್ಷಕ ಜಾಹೀರಾತುಗಳು ದೀಪಾವಳಿ ಹಬ್ಬದ ಹೆಸರಿನಲ್ಲಿ ಬರುತ್ತವೆ. ಪರಿಣಾಮ ಅಡಿಗೆ ಮನೆಯಲ್ಲಿನ ಸಂಭ್ರಮ ಬೇಕರಿ ಅಂಗಡಿಗೆ ಶಿಫ್ಟ್. ಕೊಟ್ಟೆ ರೊಟ್ಟಿ ಬದಲಿಗೆ ಫಿಜ್ಜಾ ಬರ್ಗರ್ ಬಂತು. ಬೆಲ್ಲದ ಕಾಯಿ ಹಾಲಿನ ಬದಲಿಗೆ ಪೆಪ್ಸಿ ಕೋಲಾ ಬಂತು. ಹಬ್ಬದ ಬೆಳಿಗೆ ಸೇವಿಸುತ್ತಿದ್ದ ಬೆಲ್ಲ ಹಾಕಿ ಕಲಿಸಿದ ಅವಲಕ್ಕಿ ಜಾಗದಲ್ಲಿ ಬ್ರೆಡ್ ಜಾಮೂನೂ, ಪೇಡಾ ಬಂದು ಮುಟ್ಟಿದೆ.

ಇನ್ನು ದೀಪಾವಳಿಯಲ್ಲಿ ನಡೆಯುತ್ತಿದ್ದ ಸಾಂಸ್ಕ್ರತಿಕ ಚಟುವಟಿಕೆಗಳ ಕುರಿತು ಹೇಳಲೇಬೇಕು. ಮೊದಲೆಲ್ಲಾ ವಿವಿಧ ಬಗೆಯ ಗ್ರಾಮೀಣ ಕೀಡೆಗಳಿಂದ ದೀಪಾವಳಿ ರಂಗಾಗಿರುತ್ತಿತ್ತು. ವಾರಗಳಷ್ಟು ದಿನ ವಿವಿಧ ಚಟುವಟಿಕೆಗಳಿಂದ ಹಳ್ಳಿಗಳು ಲವಲವಿಕೆಯಿಂದ ಇರುತ್ತಿದ್ದವು. ಹೊಂಡೆಕಾಯಿ ಹೊಡೆ ಆಟ, ಇಡಕಾಯಿ ಆಟ ಮೊದಲಾದವುಗಳು ಈಗಲೂ ಕೆಲವೊಂದು ಹಳ್ಳಿಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಕಂಡು ಬರುತ್ತವೆ. ಇಂದಿನ ದಿನಗಳಲ್ಲಿ ಹಬ್ಬದ ರಜೆಗಳು ಅಂದರೆ ಟಿವಿ ಮುಂದೆ ಕುಳಿತು ಕಾಲ ಕಳೆಯುವುದರಲ್ಲೆ ಮುಗಿದುಹೋಗಿರುತ್ತದೆ. ಪರಿಣಾಮ ಗ್ರಾಮೀಣ ಚಟುವಟಿಕೆಗಳು ಮುಸುಕಾಗತೊಡಗಿವೆ. ಹಬ್ಬಗಳ ಆಚರಣೆಯಲ್ಲಿಯೂ ಕೃತಕತೆ ಹೆಚ್ಚಾಗತೊಡಗಿದೆ. ಸಹಜ ಸಂತೋಷ, ಮೊದಲಿನ ಹುರುಪುಗಳು ಇಲ್ಲದಾಗಿದೆ.

ಹಿಂದಿನ ದಿನಗಳಲ್ಲಿ ಜನರು ಹಬ್ಬದ ಆಚರಣೆಗೆ ತೋರುತ್ತಿದ್ದ ಉತ್ಸಾಹ, ಹುಮ್ಮಸ್ಸು ಇವತ್ತಿನ ದಿನಗಳಲ್ಲಿ ಕಂಡುಬರುತ್ತಿಲ್ಲ. ಕಾರಣಗಳು ಹಲವಾರು ಇರಬಹುದು. ಮುಖ್ಯವಾಗಿ ಮೊದಲೆಲ್ಲಾ ಹಬ್ಬದ ವಿಶೇಷಗಳು ಆ ಹಬ್ಬಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದವು. ಉದಾಹರಣೆಗೆ ಹೋಳಿಗೆ, ಕೊಟ್ಟೆರೊಟ್ಟಿ, ಮೊದಲಾದ ತಿಂಡಿಗಳು ಆ ಹಬ್ಬದ ಸಂದರ್ಭದಲ್ಲಿ ಮಾತ್ರ ಮಾಡಲ್ಪಡುತ್ತಿದ್ದವು. ಆದರೆ ಇವತ್ತು ವರ್ಷದ ಪೂರ್ತಿ ಬೇಕಾದ ತಿಂಡಿಗಳು ಸಿಗುವಂತಹ ಅಂಗಡಿಗಳು, ಸೌಲಭ್ಯಗಳು ಬಂದಿವೆ. ಹಾಗಾಗಿ ಜನಕ್ಕೆ ಹಬ್ಬದವರೆಗೆ ಕಾಯಬೇಕಾದ ಅವಶ್ಯಕತೆ ಇಲ್ಲವಾಗಿದೆ. ಅಮೇರಿಕದಲ್ಲಿರುವ ನಮ್ಮವರಿಗೆ ಕೊಟ್ಟಿರೊಟ್ಟಿ ಹಾಗೂ ಇಲ್ಲಿನವರಿಗೆ ಅಮೆರಿಕದ ಬರ್ಗರ್ ಪಿಜ್ಜಾ ತಿನ್ನುವ ಆಸೆ ಆದರೆ ಅವರಿದ್ದಲ್ಲಿಗೇ ಮುಟ್ಟಿಸುವಂತಹ ವ್ಯವಸ್ಥೆ ಇರುವಾಗ ಹಬ್ಬಕ್ಕಾಗಿ ಕಾಯುವ, ಬರುವ ಸಂಭ್ರಮ ಇನ್ನೆಲ್ಲಿ?

ಈಗಲೇ ನಾವು ಎಚ್ಚತ್ತುಕೊಂಡು ಹಿಂದಿನ ಸಂಪ್ರದಾಯಗಳನ್ನು ಉಳಿಸಿಕೊಂಡು ಹೊಸತನವನ್ನು ರೂಢಿಸಿಕೊಂಡು ಹಬ್ಬಗಳ ಆಚರಣೆ ಮಾಡಿದರೆ ಮುಂದಿನ ಪೀಳಿಗೆಗೆ ಹಬ್ಬಗಳ ಆಚರಣೆಗಳ ಬಗ್ಗೆ ಅರಿವಾದರೂ ಉಳಿದೀತು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಬ್ಬಗಳು ಬಹುರಾಷ್ಟ್ರೀಯ ಕಂಪನಿಗಳ ಬ್ರಾಂಡ್ ಗಳಾಗಿ ನಾವೂ ಅವರ ಉತ್ಪನ್ನಗಳನ್ನು ಬಳಸುವ ಗ್ರಾಹಕರಾಗಲಿಕ್ಕೆ ಮಾತ್ರ ಸೀಮಿತರಾಗುತ್ತೇವೆ. ಅಂದರೆ ನಾವೂ ಹಬ್ಬಗಳನ್ನು ಹೀಗೇ ಆಚರಿಸಬೇಕು ಎನ್ನುವದನ್ನು ಬಹುರಾಷ್ಟೀಯ ಕಂಪನಿಗಳು ಹೇಳಿಕೊಡುತ್ತವೆ. ನಮ್ಮ ಹಬ್ಬಗಳ ಆಚರಣೆಯು ಬಹುರಾಷ್ಟ್ರೀಯ ಕಂಪನಿಯ ನಿಯಂತ್ರಣಕ್ಕೆ ಸಿಲುಕಿದರೆ? ನಿರ್ಧಾರ ನಿಮಗೆ ಬಿಟ್ಟಿದ್ದು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more