ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣನ ಪಾದಾರವಿಂದಕ್ಕೆ ಅರ್ಪಣೆ

By Staff
|
Google Oneindia Kannada News

Baraha Vasu
ಒಂದು ಇಂಗ್ಲಿಷ್ ಪದಕ್ಕೆ ಸೂಕ್ತವಾದ ಸಮಾನಾರ್ಥ ಕನ್ನಡ ಪದವೇನು ಎಂಬ ಸಮಸ್ಯೆಗೆ ಪರಿಹಾರ ಸಿಕ್ಕಿತು. ಕನ್ನಡ ಕಿಂಕರರು ಕಲೆತು ಡಾ.ರಾಜ್ ಕುಮಾರ್ ಅವರಿಗೆ ಅರ್ಪಿಸುತ್ತಿರುವ ವಿಶಿಷ್ಟ ಕನ್ನಡಕುಲ ಪದಗೌರವ.

*ಶೇಷಾದ್ರಿವಾಸು ಚಂದ್ರಶೇಖರನ್, ನ್ಯೂಜರ್ಸಿ

ಈ ಅಂತರಜಾಲ ನಿಘಂಟು ತಂತ್ರಾಂಶವನ್ನು ನನ್ನ ನೆಚ್ಚಿನ ನಟ, ಗಾಯಕ, ವ್ಯಕ್ತಿ ಡಾ|| ರಾಜ್‌ಕುಮಾರ್ ಅವರಿಗೆ ಅಭಿಮಾನದಿಂದ ಅರ್ಪಿಸುತ್ತಿದ್ದೇನೆ. ಅವರನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಬೇಕೆಂಬ ಆಸೆ ಬಹಳ ಇತ್ತು. ಇಂದು ಅವರು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ನನ್ನಂತಹ ಲಕ್ಷಾಂತರ ಅಭಿಮಾನಿಗಳ ಹೃದಯಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಕೃತಜ್ಞತೆ :15 ಆಗಸ್ಟ್ 2009:ಇದೀಗ ಪ್ರೊ. ಡಿ. ಎನ್. ಶಂಕರ ಭಟ್ ಅವರ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ನಿಘಂಟನ್ನು ಈ ಅಂತರಜಾಲ ನಿಘಂಟು ತಂತ್ರಾಂಶದಲ್ಲಿ ಸೇರಿಸಲಾಗಿದೆ. ತಮ್ಮ ಪುಸ್ತಕವನ್ನು ಈ ಕಾರ್ಯದಲ್ಲಿ ಉಪಯೋಗಿಸಿಕೊಳ್ಳಲು ಅನುಮತಿಯಿತ್ತ ಶ್ರೀ ಶಂಕರ ಭಟ್ ಅವರಿಗೂ, ಈ ಕೆಲಸದಲ್ಲಿ ಸಹಕಾರ ನೀಡಿದ ಬನವಾಸಿ ಬಳಗದ ಗೆಳೆಯರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

24 ಏಪ್ರಿಲ್ 2007:ಇದೀಗ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಕನ್ನಡ-ಕನ್ನಡ ಕ್ಲಿಷ್ಟಪದ ಕೋಶವನ್ನು ಈ ಅಂತರಜಾಲ ನಿಘಂಟು ತಂತ್ರಾಂಶದಲ್ಲಿ ಸೇರಿಸಲಾಗಿದೆ. ಈ ಕಾರ್ಯಕ್ಕೆ ಅನುಮತಿಯಿತ್ತ ಶ್ರೀ ವೆಂಕಟಸುಬ್ಬಯ್ಯನವರಿಗೆ ಕೃತಜ್ಞತೆಗಳು. ಈ ನಿಘಂಟುವಿನ ಪ್ರಕಟಣೆಗೆ ಅನುಮತಿಯ ಜೊತೆಗೆ ಉದಾರಹೃದಯದಿಂದ ನಿಘಂಟುವಿನ ಸಾಫ್ಟ್‌ಕಾಪಿಯನ್ನು ನೀಡಿದ ಪ್ರಿಸಂ ಬುಕ್ಸ್ ನ ಶ್ರೀ ಪ್ರಾಣೇಶ ಸಿರಿವರ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
=

ಕನ್ನಡಿಗರೆಲ್ಲರಿಗೂ ಸುವರ್ಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕನ್ನಡದಲ್ಲಿ ಬರೆಯುವಾಗ ಒಂದು ಇಂಗ್ಲಿಷ್ ಪದಕ್ಕೆ ಸೂಕ್ತವಾದ ಸಮಾನಾರ್ಥ ಕನ್ನಡ ಪದವೇನು ಎಂಬ ಸಮಸ್ಯೆ ಸಾಮಾನ್ಯವಾಗಿ ಅಂತರ್ಜಾಲ ಕನ್ನಡಿಗರನ್ನು ಕಾಡುತ್ತಿರುತ್ತದೆ. ಮುದ್ರಿತ ಇಂಗ್ಲಿಷ್-ಕನ್ನಡ ನಿಘಂಟೊಂದನ್ನು ಕೈಗೆತ್ತಿಕೊಂಡು ಸೂಕ್ತಪದ ಅರಸುವ ಪರಿಶ್ರಮವನ್ನು ಅಂತರ್ಜಾಲಿಗರಿಂದ ನಿರೀಕ್ಷಿಸುವುದು ತುಂಬಾ ಜಾಸ್ತಿ ಎನ್ನಬಹುದೇನೋ! ಆದ್ದರಿಂದ ಅಂತರ್ಜಾಲ ಮಾಧ್ಯಮದ ಮೂಲಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ, ಮಿಂಚೆ ಕಳಿಸುವ, ಬ್ಲಾಗ್ ಮಾಡುವವರ ಅನುಕೂಲಕ್ಕಾಗಿ ಇಂಗ್ಲಿಷ್-ಕನ್ನಡ ನಿಘಂಟು ತಂತ್ರಾಂಶ ಒಂದನ್ನು ಮಾಡಬೇಕೆಂಬ ಯೋಜನೆ ಕೆಲವು ಕಾಲದಿಂದ ಇತ್ತು. ಈ ಕಾರ್ಯಕ್ಕೆ ಇದ್ದ ಅಡಚಣೆಗಳೆಂದರೆ, ಒಂದು ಮುದ್ರಿತ ನಿಘಂಟನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವ ಬಗ್ಗೆ ಪ್ರಕಾಶಕರಿಂದ ಅನುಮತಿ ಪಡೆದುಕೊಳ್ಳುವುದು; ಮತ್ತು ಅಪಾರವಾದ ಮಾಹಿತಿಯನ್ನು ಗಣಕದಲ್ಲಿ ಟೈಪ್ ಮಾಡಿಸುವುದು. ಇದು ಬಹಳ ನಿಧಾನದ ಕೆಲಸವಾದ್ದರಿಂದ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಗಿರಲಿಲ್ಲ.

ಈ ಅಕ್ಟೋಬರ್ ತಿಂಗಳಲ್ಲಿ ರಜದ ಮೇಲೆ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಈ ವಿಷಯವನ್ನು ನನ್ನ ತಂದೆ ಶ್ರಿ. ಕೆ.ಟಿ.ಚಂದ್ರಶೇಖರ್ ಅವರಿಗೆ ತಿಳಿಸಿದಾಗ ಅವರು ಈ ಕೆಲಸಕ್ಕೆ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು ಉತ್ತಮವಾದ ಆಯ್ಕೆ ಎಂದು ಸೂಚಿಸಿದರು. ಹೆಚ್ಚು ತಡಮಾಡದೆ ವೆಂಕಟಸುಬ್ಬಯ್ಯನವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನಂತರ ಅವರ ಮನೆಯಲ್ಲಿ ಭೇಟಿಮಾಡಿಸಿ ಪರಿಚಯ ಮಾಡಿಸಿದರು. ಶ್ರೀ ವೆಂಕಟಸುಬ್ಬಯ್ಯನವರು ಬಹಳ ಆಸಕ್ತಿಯಿಂದ ನಾವು ಮಾಡಬೇಕೆಂದಿರುವ ಕೆಲಸದ ಬಗ್ಗೆ ವಿಚಾರಿಸಿ, ಸಂತೋಷದಿಂದ ತಮ್ಮ ಒಪ್ಪಿಗೆಯನ್ನು ನೀಡಿ ಹಲವು ಸಲಹೆಗಳನ್ನೂ ನೀಡಿದರು. ಹಾಗೆಯೇ, ಈ ನಿಘಂಟುವಿನ ಪ್ರಕಾಶಕರಾದ ಪ್ರಿಸಂ ಬುಕ್ಸ್ ಸಂಸ್ಥೆಯಿಂದಲೂ ಸಹಾ ಅನುಮತಿಯನ್ನು ಪಡೆಯಲು ಸೂಚಿಸಿದರು. ಅಂತೆಯೇ ಪ್ರಿಸಂ ಕಚೇರಿಗೆ ಭೇಟಿಕೊಟ್ಟು ಮಾಲೀಕರಾದ ಶ್ರೀ ಪ್ರಾಣೇಶ್ ಸಿರಿವರ ಅವರನ್ನು ಕಂಡು ನಮ್ಮ ಉದ್ದೇಶವನ್ನು ತಿಳಿಸಿದಾಗ ಅವರು ಬಹಳ ಸಂತೋಷದಿಂದ ಸಂಪೂರ್ಣ ಅನುಮತಿಯನ್ನು ನೀಡಿದರು. ಅಷ್ಟೇ ಅಲ್ಲದೆ, ಸ್ವಯಂಪ್ರೇರಿತರಾಗಿ ನಿಘಂಟುವಿನ ಸಾಫ್ಟ್‌ಕಾಪಿ ಪೇಜ್‌ಮೇಕರ್ ಕಡತಗಳನ್ನು ಸಾಧ್ಯವಾದರೆ ಬಳಸಿಕೊಳ್ಳಿ ಎಂದು ನೀಡಿ ಉಪಕರಿಸಿದರು.

ಒಂದು ತಿಂಗಳ ಬೆಂಗಳೂರಿನ ರಜಾ ಕಳೆದು ನವಂಬರ್ 1 ರಂದು ಅಮೇರಿಕಾಗೆ ವಾಪಸ್ ಬಂದ ಮೇಲೆ ಪೇಜ್ ಮೇಕರ್ ಕಡತಗಳಿಂದ ಡೇಟಾಬೇಸ್‌ಗೆ ಮಾಹಿತಿಯನ್ನು ಕೊಂಡೊಯ್ಯುವ ಬಗ್ಗೆ ಸಣ್ಣ ಪ್ರೋಗ್ರಾಂ ಒಂದನ್ನು ಬರೆಯತೊಡಗಿದೆ. ಆ ಪ್ರಯತ್ನದ ಫಲವೇ ಈಗ ನಿಮ್ಮ ಮುಂದಿರುವ ಅಂತರಜಾಲ ನಿಘಂಟು. ಈ ತಂತ್ರಾಂಶ ಇಷ್ಟು ಕ್ಷಿಪ್ರವಾಗಿ ಮೂಡಿಬರಲು ಮುಖ್ಯಕಾರಣ ಆ ಕಡತಗಳು. ಅವು ಇರದಿದ್ದಲ್ಲಿ ಈ ತಂತ್ರಾಂಶ ಸಿದ್ಧವಾಗಲು 6 ತಿಂಗಳೋ, ವರ್ಷವೋ ಆಗುತ್ತಿತ್ತೇನೋ? ಪೇಜ್‌ಮೇಕರ್ ಕಡತಗಳಿಂದ ದತ್ತಸಂಚಯಕ್ಕೆ ಮಾಹಿತಿಯನ್ನು ವರ್ಗಾಯಿಸುವುದು ಒಂದು ಸಣ್ಣ ಸವಾಲು ಆಗಿತ್ತು. ಒಂದು ಸವಾಲು; ಅದನ್ನು ನಿಭಾಯಿಸಲು ಬೇಕಾದ ಉತ್ಸಾಹ; ಒಂದಿಷ್ಟು ಸಮಯ; ಇದಕ್ಕಿಂತಲೂ ಬೇರೇನು ಬೇಕು?

ಈ ಕಾರ್ಯದಲ್ಲಿ MySQL, PHP, Java ಹೀಗೆ ಒಂದಷ್ಟು ಹೊಸ ತಂತ್ರಜ್ಞಾನದ ಪರಿಚಯವಾಯಿತು. ಅಂತರಜಾಲದಲ್ಲಿ ಕನ್ನಡಕ್ಕೆ ಯೂನಿಕೋಡ್‌ನ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಆದ್ದರಿಂದ ಈ ನಿಘಂಟನ್ನು ಸಂಪೂರ್ಣವಾಗಿ ಯೂನಿಕೋಡ್ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಇಂಗ್ಲಿಷ್ ಅಥವಾ ಕನ್ನಡ ಪದಗಳನ್ನು ಕೊಟ್ಟು ಸಮಾನಾರ್ಥ ಪದಗಳನ್ನು ಹುಡುಕಬಹುದು. ಯೂನಿಕೋಡಿಗೆ ಮಾಹಿತಿಯನ್ನು ರೂಪಾಂತರಿಸುವಾಗ ಕೆಲವು ತಪ್ಪುಗಳು ನುಸುಳಿರಬಹುದು. ಅಂತಹ ತಪ್ಪುಗಳು ಕಂಡುಬಂದಲ್ಲಿ ತಿಳಿಸಬೇಕಾಗಿ ಓದುಗರಲ್ಲಿ ವಿನಂತಿ.

ತಮ್ಮ ನಿಘಂಟನ್ನು ಅಂತರಜಾಲದಲ್ಲಿ ಉಪಯೋಗಿಸಿಕೊಳ್ಳಲು ಅನುಮತಿ ಇತ್ತ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಮತ್ತು ಪ್ರಾಣೇಶ್ ಸಿರಿವರ ಅವರಿಗೆ ನನ್ನ ಕೃತಜ್ಞತೆಗಳು.

( 15 ನವೆಂಬರ್ 2006)
ಇಂಗ್ಲೀಷ್ -ಕನ್ನಡ ನಿಘಂಟು ಲಿಂಕ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X