ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಹಿ ವಾಸುವಿನ 'ನನ್ನ ದೇವಕಿ' ಬ್ಲಾಗು

By Staff
|
Google Oneindia Kannada News

Nanna devaki blog
ಜೊತೆ ಇದ್ದಾಗ ತಿಳಿಯದೆ , ದೂರಾದಾಗ ಅರಿತರೇ ಪ್ರೀತಿಯ ಆರ್ದ್ರತೆ ಹೆಚ್ಚಂತೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಚಾಟ್ ಲವ್ ಗಳ ಕಾಲದಾಟಿ ಈಗ ಬ್ಲಾಗ್ ಪ್ರೀತಿ ಶುರುವಾಗಿದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೋಗುಳ'ದಲ್ಲಿ ಈ ಬ್ಲಾಗ್ ಮೂಲಕ ಪ್ರೇಮ ನಿವೇದನೆ, ವೇದನೆ, ಆಲಾಪನೆ,ಯಾತನೆ, ಸಂಗಮ ಎಲ್ಲವನ್ನು ಬಳಸಿದ್ದು ಹೊಸತನ ಎನಿಸಿತು. ಧಾರಾವಾಹಿಗಷ್ಟೇ ಮೀಸಲಾಗಿರದೇ ನೈಜತೆಯ ಬ್ಲಾಗ್ ಪ್ರಪಂಚದಲ್ಲೂ ದೇವಕಿಗಾಗಿ ಹಂಬಲಿಸುತ್ತಿರುವ ವಾಸುವಿನ ಪ್ರಲಾಪ ಕಾಣಸಿಗುತ್ತಿದೆ.

ನನ್ನ ದೇವಕಿ ಬ್ಲಾಗ್ ಓದಲು ಕೂತರೆ ಈಗಷ್ಟೇ ಪ್ರೀತಿ ಶುರು ಮಾಡಿರುವವರು, ಪ್ರೇಮಲೋಕದಲ್ಲಿ ಬಲಿತವರು, ವಿರಹಿಗಳು ಇನ್ನಿತರ ಆಸಕ್ತರಿಗೆ ಭರಪೂರ ರಸದೂಟವಿದೆ. ಜೋಗುಳದ ಲಾಲಿಹಾಡಾದ ವಾಸು ದೇವಕಿಯ ಅನುರಾಗ ಬ್ಲಾಗ್ ಮಂಡಲದಲ್ಲಿ ಸದಾ ಗುನುಗುತ್ತಿರಲಿ.


'ದೇವರು ವರವನ್ನು ಕೊಟ್ಟು ಕಿತ್ಕೋತಾನ'ಎಂದು ಪ್ರಶ್ನಿಸುವ ವಾಸುವಿನ ಒಂದು ಸ್ವಗತ ಪ್ರಲಾಪನೆ ನಿಮ್ಮ ಮುಂದೆ. .. .

ಕೊನೆಗೂ ದೇವರು ಅನ್ನುವ ನಾಜೂಕಯ್ಯ ನಿನ್ನ ವಿಷಯದಲ್ಲಿ ನನ್ನ ಪ್ರೀತಿ ತುಂಬಿದ ನಂಬಿಕೆಗಳನ್ನ ಹುಸಿಮಾಡಿಬಿಟ್ಟ ದೇವಕಿ. ನನ್ನ ಬದುಕಿನ ಪ್ರತಿ ದಿನದ ಪ್ರತಿ ಕ್ಷಣಗಳಲ್ಲಿ ಕೂಡ ನಾನು ನಿನ್ನ ಕುರಿತಾಗಿ ಒಂದೊಂದು ಕನಸು ಕಟ್ಟುತ್ತಿದ್ದೆ. ಆದರೇ ಅದಷ್ಟೂ ಕನಸುಗಳಿಗೆ ಮಣ್ಣಿನ ಹೊದಿಕೆಯ ಹೊದ್ದಿಸಿ ಮಲಗಿಸಿಬಿಟ್ಟೆ ದೇವಕಿ ನೀನು. ನಿನ್ನ ಮೇಲಿನ ಮೊದಲ ಪ್ರೀತಿಯಿಂದಾನೆ ಕೇಳ್ತಾ ಇದ್ದೀನಿ ಜಗತ್ತಿನಲ್ಲಿರುವ ಎಲ್ಲಾ ನೋವುಗಳೂ ನನಗೊಬ್ಬನಿಗೇ ಯಾಕೆ ದೇವಕಿ? ಬದುಕಿನ ಕಡೆಯ ಕ್ಷಣಗಳವರೆಗೂ ಈ ನಿನ್ನ ವಾಸು ನೋವಿನ ಅರಮನೆಯ ರಾಜಕುಮಾರನಾಗಿಯೇ ಇರಬೇಕಾ?

ಎದೆಯ ಎಲ್ಲ ತರಂಗಗಳಲ್ಲಿಯೂ ಬದುಕಿನ ಚಿತ್ತಾರ ಮೂಡಿಸಿದವಳು ನೀನು. ಅದೇ ತರಂಗಗಳಿಗೆ ವಿದಾಯದ ಕಹಿಯನ್ನೇಕೆ ತುಂಬಿದೆ ದೇವಕಿ? ಎದೆಯೊಳಗಿನ ಆಪ್ತ ಗೀತೆಯಂತಿದ್ದೆ ಅಲ್ಲವೇ ನೀನು, ಕೊನೆಗೂ ನನ್ನ ಪಾಲಿನ ಕಾಮನಬಿಲ್ಲಾಗಿಬಿಟ್ಟೆಯಲ್ಲ ನೀನಿರುವ ದೂರವೆಷ್ಟು ದೇವಕಿ? ನೀನು ಘೋರಿ ಕಟ್ಟಿದ ಪ್ರತಿ ಕನಸಿಗೂ ಗೂಡು ಕಟ್ಟೋದು ಬಲ್ಲೆ ದೇವಕಿ ಅದು ನೀನೆ ನನಗೆ ಪ್ರೀತಿಯಿಂದ ಕಲಿಸಿದ ಪಾಠ. ಆದರೆ ನೀನಿಲ್ಲದೆ ನಾನು ಕಟ್ಟುವ ಗೂಡಿಗೆ ಹೆಚ್ಚಿನ ಆಯುಷ್ಯವಿಲ್ಲವೆಂದು ಮಾತ್ರ ಬಲ್ಲೆ ದೇವಕಿ.

ಬದುಕಿನ ಗೀತೆಯನ್ನ ನಿನ್ನ ಜೊತೆಯೇ ಹಾಡಬೇಕೆಂದು ಬೆಟ್ಟದಷ್ಟು ಕನಸ ಎದೆಯೊಳಗಿಟ್ಟುಕೊಂಡು ಕುಳಿತಿದ್ದ ಹುಡುಗ ನಾನು. ಗೀತೆಯ ಮೊದಲ ಸಾಲಿನಲ್ಲೇ ನಿನ್ನ ಜೊತೆಯಿಲ್ಲ..ಹಾಡುವುದಾದರೂ ಹೇಗೆ ದೇವಕಿ? ನಾನು ಹೋಗುವ ದಾರಿಯಲ್ಲಿ ನಿನ್ನ ಪುಟ್ಟ ಹೆಜ್ಜೆ ಜೊತೆಗಿರುತ್ತೆ ಅನ್ನುವ ನಂಬಿಕೆಯಲ್ಲಿ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದೆ..ಮೊದಲೆರೆಡು ಹೆಜ್ಜೆಯೇ ಮುಗಿದಿಲ್ಲ ಅದೆಲ್ಲಿಗೆ ನಿನ್ನ ಪಯಣ? ನನ್ನ ಹೆಜ್ಜೆಗಳೀಗ ಅನುಭವಿಸುತ್ತಿರುವ ತಬ್ಬಲಿತನಕ್ಕೆ ಹಾಡುವವರು ಯಾರು ದೇವಕಿ?

ಈ ಬದುಕಿನಲ್ಲಿರುವ ಎಲ್ಲಾ ನೋವುಗಳ ತೂಕ ಒಂದಾದರೆ ಕಾರಣವೇ ಇಲ್ಲದೆ ಮುನಿದು ಹೋದ ನೀನು ಮತ್ತೆ ನಿನ್ನ ತಿರಸ್ಕಾರದ ತೂಕವೇ ಇನ್ನೊಂದು. ಇಲ್ಲಿ ಬರೆದಿದ್ದೆಲ್ಲ ನಿನ್ನ ಮೇಲಿನ ಕೋಪದಿಂದಾಗಲೀ ನೋವಿನಿಂದಾಗಲಿ ಅಲ್ಲ ದೇವಕಿ. ಕೆಲವೊಂದು ಸಲ ಮುಂದಿರುವ ಬದುಕನ್ನ ನೆನೆಸಿಕೊಂಡರೇ ದಿಗಿಲುಗೊಳ್ಳುತ್ತೇನೆ. ತುಂಬಾ ಮನುಷ್ಯನಿಗೆ ತುಂಬಾ ನೋವಾದಾಗ, ಕಷ್ಟಗಳು ಬಂದಾಗ, ಇನ್ನು ಬದುಕು ಸಾಧ್ಯವೇ ಇಲ್ಲ ಅನ್ನುವಾಗ ಯಾವ ದೇವರು ನೆನಪಾಗೋದಿಲ್ಲ. ಯಾವುದಾರೊಂದು ಹೆಗಲು ನೆನಪಾಗುತ್ತೆ, ಬೆಚ್ಚನೆಯ ಎದೆ ಬೇಕು ಅನ್ನಿಸುತ್ತೆ, ಕಣ್ಣೊರೆಸುವ ಒಂದು ಕೈಯ್ಯನ್ನ ಜೀವ ಬೇಡುತ್ತೆ. ತುಂಬಾ ನೋವಿನಲ್ಲಿದ್ದೀನಿ, ನೋವಾಗುತ್ತಿದೆ. ದೇವರಂತೂ ನನ್ನ ಬದುಕಿನಲ್ಲಿ ಮುನಿದು ಹೋಗಾಗಿದೆ ಮತ್ತು ದೇವರಂತಿದ್ದ ನೀನು. ಇಬ್ಬರೂ ಕಾರಣ ಹೇಳದೇ ಹೋಗಿದ್ದೀರಿ. ಆದರೂ ಮನಸ್ಸು ಯಾವುದೇ ಪ್ರತಿಫಲಪೇಕ್ಷೆಯಿಲ್ಲದೆ ಸುಮ್ಮನೆ ನೆಚ್ಚಿನ ಕವಿ ಕುವೆಂಪು ಅವರ

ತನುವು ನಿನ್ನದು ಮನವು ನಿನ್ನದು
ನನ್ನ ಜೀವಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವು ನನ್ನದು...

ಮನಸ್ಸು ಮುದುರಿಕೊಂಡು ತನ್ನಷ್ಟಕ್ಕೆ ತಾನೆ ಹಾಡಿಕೊಳ್ಳುತ್ತಿದೆ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X