ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ

*ಸುಧೀಂದ್ರ ಎಸ್ ರಾವ್, ಬೆಂಗಳೂರು
ಟಿ ಶರ್ಟ್ ಸಾಹಿತ್ಯ ಇರುವ ಹಾಗೆ ಇದನ್ನು ನಾವು ಆಟೋ ಸಾಹಿತ್ಯ ಎಂದು ಕರೆಯೋಣ. ಯಾರಾದರೂ ಕನ್ನಡ ಅಧ್ಯಯನ ಕ್ಷೇತ್ರದಲ್ಲಿ ಪಳಗಿದವರು, ಸಮಾಜ ಶಾಸ್ತ್ರದಲ್ಲಿ ಕುತೂಹಲ ಉಳ್ಳವರು ಆಟೋ ಸಾಹಿತ್ಯ ಸಮೀಕ್ಷೆಯನ್ನು ಕೈಗೊಂಡು ಕನ್ನಡ ಸಮಾಜಕ್ಕೆ ಕನ್ನಡಿ ಹಿಡಿಯಲಿ ಎಂದು ಆಶಿಸೋಣ.
ಕೆಲ ಸ್ಯಾಂಪಲ್‌ಗಳನ್ನು ಗಮನಿಸಿ :
ಅವಳು ಕಂಡಳು ಸೋತೆ.. ಸಿಕ್ಕಳು ಸತ್ತೆ!!
ನನ್ನವಳು
ಮೋಸಗಾತಿ
ಕಣ್ಣಲ್ಲೇ ಕೊಲ್ಲಬೇಡ
ಯಜಮಾನ
ಚೂರಿ ಚಿಕ್ಕಣ್ಣ
ಪ್ರೀತ್ಸೇ
ಕೊಲ್ಲೇ ನನ್ನನ್ನು!
ನೀ ಮಾಯಗಾತಿ
ದೇವರು ಕೊಟ್ಟದ್ದು ಕೊನೆತನಕ
ನೀ ಮೋಸ ಹೋಗದಿರು ಎಂದೆಂದೂ
ಅಪ್ಪ ಅಮ್ಮನ ನೆನಪು
ಮೊನ್ನೆ ಹೀಗೆ ಬಸ್‌ನಲ್ಲಿ ಹೊರಟಾಗ, ಆಟೋದ ಹಿಂದೆ ಅಪ್ಪ ಅಮ್ಮನ ನೆನಪು ಎಂದು ಬರೆದಿದ್ದನ್ನು ಓದಿದೆ.ನಾವು ಹುಟ್ಟಿದ ಕೂಡಲೇ ಆ ತಾಯಿ ತಂದೆಗಳು ಅದೆಷ್ಟು ಸಂಭ್ರಮಪಟ್ಟಿರುತ್ತಾರಲ್ಲ? ಮಕ್ಕಳ ಆಟವನ್ನ, ಅವು ಬೊಚ್ಚು ಬಾಯಿ ಬಿಟ್ಟುಕೊಂಡು ಕೈ ಕಾಲು ಬಡಿಯುತ್ತ ತೊಟ್ಟಿಲಲ್ಲಿ ಕಿಲಕಿಲಗುಡುವುದನ್ನ ಕಂಡು ಅದೆಷ್ಟು ಆನಂದಪಟ್ಟಿರುತ್ತಾರೋ, ಆ ದೇವರೇ ಬಲ್ಲ, ಏಕೆಂದರೆ ಮಕ್ಕಳನ್ನು ದೇವರ ಪ್ರತಿರೂಪ ಎನ್ನುತ್ತಾರಲ್ಲ!
ಮಗು ಮೊದಲ ಬಾರಿ ಹೊಸ್ತಿಲು ದಾಟಿದಾಗ ಸಿಹಿ ಮಾಡಿ ಸಂತಸಪಡುತ್ತಾರೆ, ಮೊದಲ ಬಾರಿಗೆ ತೊದಲು ನುಡಿಯಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಮಾಮಾ, ಕಾಕು, ಕಾಕಾ ಎಂದಾಗ ಆಹಾ ಎಂಥಾ ಖುಷಿ. ಮಗು ಮೊದಲ ಬಾರಿಗೆ ಅಂಬೆಗಾಲಿಟ್ಟಾಗ ತಮ್ಮ ಕೊನೆಗಾಲಕ್ಕೆ ಊರುಗೋಲು ಸಿಕ್ಕಿತೇನೋ ಎಂಬಷ್ಟು ಹಿರಿಹಿರಿ ಹಿಗ್ಗಿರುತ್ತಾರೇನೋ.
ಮೊದಲ ದಿವಸ ಶಾಲೆಗೆ ಹೊರಟಾಗ, ಎಸ್.ಎಸ್.ಎಲ್.ಸಿ ಪಾಸಾಗಿ ಕಾಲೇಜು ಮೆಟ್ಟಿಲು ಹತ್ತಿದಾಗ, ಕೆಲಸ ಸಿಕ್ಕಾಗ, ಮದುವೆ ಗೊತ್ತಾದಾಗ, ಮದುವೆ ಆದಾಗ, ಮೊಮ್ಮಗಳೋ, ಮೊಮ್ಮಗನನ್ನೋ ಅವರ ಮಡಿಲಿಗಿರಿಸಿದಾಗ.. ಹೀಗೆ ಅದೆಷ್ಟೋ ಕ್ಷಣಗಳಲ್ಲಿ ಹೇಳದೇ ಕೇಳದೇ ಕಣ್ಣೀರಾಗಿರುತ್ತಾರೆ. ಆದರೆ ನಾವು.. ನಮ್ಮ ಕಾಲ ಮೇಲೆ ನಾವು ನಿಂತ ಕೂಡಲೇ, ನಮಗೆ ಮದುವೆ ಅಂತ ಒಂದು ಆದ ಕೂಡಲೇ ನಮ್ಮ ಬೇರುಗಳನ್ನೇ ನಾವು ಕಡೆಗಣಿಸಬಿಡುತ್ತೇವೆ. ಅವರು ಮಮತೆಯಿಂದ, ಕಾಳಜಿಯಿಂದ ಮಾತುಗಳನ್ನಾಡುತ್ತಿದ್ದರೆ ನಾವು ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹೊರಟುಬಿಡುತ್ತೇವೆ, ತಿರಸ್ಕರಿಸಿರುತ್ತೇವೆ, ತಾತ್ಸಾರದಿಂದ ನೋಡುತ್ತೇವೆ, ಮುಸ್ಸಂಜೆಗೆ ಊರುಗೋಲಾಗಬೇಕಾದವರು.?
ಹೆತ್ತವರು ಇಹಲೋಕ ತ್ಯಜಿಸಿದ ಮೇಲೆ ಈ ಎಲ್ಲಾ ನೆನಪುಗಳು ಕಣ್ಣಮುಂದೆ ತೇಲಿ ಹೋಗುತ್ತವೆ. ಅಮ್ಮಾ ಒಮ್ಮೆ ಕ್ಷಮಿಸಿಬಿಡು, ಅಪ್ಪಾ, ನಾನು ಹೀಗೆ ಮಾಡಬಾರದಿತ್ತು, ನಿಮ್ಮಗಳ ಮನಸು ನೋಯಿಸಬಾರದಿತ್ತು ಅಂತ ಒಂದು ಸಲ ಅವರ ಮಡಿಲಿನಲ್ಲಿ ತಲೆಯಿಟ್ಟು ಮಲಗಿ ಮಗುವಾಗಿಬಿಡಬೇಕೆಂದರೆ ಅವರು ಸಿಗುವುದೇ ಇಲ್ಲ.
ಆಟೋದ ಹಿಂದಿನ ಆ ಬರಹದ ಒಂದು ಸಾಲು ಎಷ್ಟೆಲ್ಲ ನೆನಪು ಮಾಡಿ ಕೊಟ್ಟಿತ್ತು. ಆಟೋದ ಹಿಂದಿನ ಜಾಗ ಅದೆಷ್ಟೋ ಕ್ರಿಯೇಟಿವ್, ಜಾಹೀರಾತು, ಯೋಚನೆಗೆ ತೊಡಗಿಸುವಂಥ ಇನ್ನೂ ಅನೇಕ ಬರಹಗಳಿಗೆ ವೇದಿಕೆಯಾಗಿದೆ ಎಂದರೂ ತಪ್ಪಾಗಲಾರದೇನೋ. ಆಟೋಗಳ ಹಿಂಬಾಗದಲ್ಲಿ ಇನ್ನೂ ಅದೆಷ್ಟೂ ಬರಹಗಳಿರುತ್ತವಲ್ಲ, ನಿವೂ ನಮ್ಮೊಂದಿಗೆ ಹಂಚ್ಕೊಳ್ಳಿ.












Click it and Unblock the Notifications