ನನಗೂ ಇಲಿಗೂ ಅಂಟಿದ ನಂಟು...

(ಮುಂದುವರೆದಿದೆ)

Sumangalaಸರಿ... ಮುಖ ತೊಳೆದು ಮೊದಲು ಸತ್ತ ಇಲಿಯನ್ನು ಹುಡುಕುವ ಅಂತ ಮಂಚದ ಕೆಳಗೆ, ಟೇಬಲ್‌ ಕೆಳಗೆ, ಶೆಲ್ಫ್‌ ಕೆಳಗೆ ಎಲ್ಲ ಕಡೆ ಹುಡುಕಿದ್ರೆ ಎಲ್ಲೂ ಸತ್ತ ಇಲಿಯ ಪತ್ತೆಯೇ ಇಲ್ಲ. ಹುಡುಕಿ ಹುಡುಕಿ ನಾನು ಎಷ್ಟು ಸುಸ್ತಾದೆ ಅಂದ್ರೆ ಬಿಜಾಪುರದ ಭಾಷೆಯಲ್ಲಿ ‘ನಾನೇ ಖರೇ ಖರೇ ಸಾಯೂ ಹೆಣವಾಗಿದ್ದೆ.’

ಮಗ ಬಂದವ ವಟವಟಗುಡುತ್ತ ಊಟಗೀಟ ಮುಗಿಸಿ ತನ್ನ ಮೂಗಿಗೆದುರಾಗಿಯೇ ಟೇಬಲ್‌ ಫ್ಯಾನನ್ನು ತಿರುಗಿಸಿಟ್ಟುಕೊಂಡು ಮಲಗಿ ನಿದ್ದೆ ಹೋದ. ಆ ದಿನ ವಾಸನೆ ಇದ್ದರೂ ಅಂತೂ ಇಲಿಗಳೆಲ್ಲ ಸತ್ತು ಹೋಗಿವೆ ಎಂಬ ನಿರಾಳತೆಯಲ್ಲಿ ಮಲಗಿದರೆ ರಾತ್ರಿ ಮತ್ತಷ್ಟು ಸದ್ದು.. ‘ನಮ್ಮನ್ನು ಹುಲುಮಾನವಳಾದ ನೀನು ಹೊರ ಹಾಕಲುಂಟೆ’ ಎಂಬಂತೆ... ನಾನು ಮುಸುಕು ಹೊದ್ದು ಮಲಗಿದೆ.

ಬೆಳಿಗ್ಗೆ ಏಳುವಷ್ಟರಲ್ಲಿ ಮನೆ ತುಂಬ ಇಲಿಯ ವಾಸನೆ ಹೇಗೆ ತುಂಬಿದೆ ಅಂದ್ರೆ ಶುದ್ಧಗಾಳಿಯ ನೆನಪೇ ನಮ್ಮ ಮನಸ್ಸಿನಿಂದ ಮಾಸಿಹೋಗುವ ಹಾಗೆ... ಅದಕ್ಕಿಂತ ಹೆಚ್ಚು ಹೊಟ್ಟೆ ತೊಳೆಸುವ ಹಾಗೆ. ಬೆಳಿಗ್ಗೆ ಬೆಳಿಗ್ಗೆ ಎಲ್ಲ ಕೆಲಸ ಬಿಟ್ಟು ಈ ಘನಘೋರ ವಾಸನೆಯ ಮೂಲವನ್ನು ಹುಡುಕತೊಡಗಿದೆ. ಅದು ಮಣ್ಣಿನ ಗೋಡೆಯಾಗಿದ್ದರಿಂದ ಹೊರಹೋಗಲು ಟೇಬಲ್‌ ಕೆಳಗೆ ಅದು ಒಂದು ಪುಟ್ಟ ಸುರಂಗದಾರಿ ಮಾಡಿಕೊಂಡಿದೆ (ಇಲಿಗಳ ಭಾಷೆಯಲ್ಲಿ ಹೆದ್ದಾರಿ!) ಅಂತ ಪತ್ತೆ ಹಚ್ಚಿದ್ದಾಯ್ತು. ಅಡಿಗೆ ಮನೆಯಲ್ಲಿ ವಾಸಕ್ಕೆ ಬಿಲವನ್ನು ಗುದ್ದು ತೋಡಿಕೊಂಡಿರುವುದಲ್ಲದೆ ಒಳಹೋಗಲು, ಹೊರಹೋಗಲು ಈ ಕಳ್ಳದಾರಿಯನ್ನು ನಿರ್ಮಿಸಿಕೊಂಡಿದೆ. ಹೊರಗೆ ಗಿಡಗಳು ಇದ್ದದ್ದರಿಂದ ಈ ಗೋಡೆ ತೂತಾಗಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಿಷ ನುಂಗಿದ ಇಲಿಯಾಂದು ಹೊರಹೋಗಲು ಪ್ರಯತ್ನಿಸುವಾಗ ಸುರಂಗಮಾರ್ಗದಲ್ಲಿ ಪ್ರಾಣಬಿಟ್ಟಿದೆ.. ಅಷ್ಟು ವಾಸನೆಯ ಮಧ್ಯೆಯೂ ಪಾಪ ಅನ್ನಿಸದೇ ಇರಲಿಲ್ಲ. ಆದರೂ ಪಾಪ ಎಂದುಕೊಂಡು ಸುಮ್ಮನಿರಲು ಸಾಧ್ಯವೇ ... ನಾವೂ ಬದುಕಬೇಕಲ್ಲ ಮಾರಾಯರೇ..

ತಟ್ಟನೆ ಉಪಾಯ ಹೊಳೆಯಿತು... ಎಲ್ಲೋ ಇಟ್ಟಿದ್ದ ಚೂರು ಸಿಮೆಂಟನ್ನು ಹುಡುಕಿ ತೆಗೆದು ನೀರಿನಲ್ಲಿ ಕಲೆಸಿ ಸುರಂಗದ ಒಳ ಮತ್ತು ಹೊರಬಾಯಿಗೆ ಉಂಡೆ ಉಂಡೆ ಮಾಡಿ ಮೆತ್ತಿದೆ. ಗಡಿಯ ಎರಡೂ ಭಾಗವನ್ನು ಮುಚ್ಚುವಂತೆ ಅಂತೂ ಎರಡೂ ಕಡೆಯ ಮಾರ್ಗವನ್ನು ಮುಚ್ಚಿದೆ. ಎಲ್ಲ ಕಿಟಕಿ ಬಾಗಿಲು ತೆರೆದಿಟ್ಟು ಮಗ ಏಳುವಷ್ಟರಲ್ಲಿ ವಾಸನೆಯ ತೀವ್ರತೆ ಕಡಿಮೆಯಾಯ್ತು.

ಸಂಜೆ ಕಾಲೇಜಿನಿಂದ ಬರುವಷ್ಟರಲ್ಲಿ ನನ್ನ ತಲೆಯಲ್ಲಿ ಹೊಸದೊಂದು ಯೋಜನೆ ಸಿದ್ಧವಾಗಿತ್ತು. ಅದು ಎಲ್ಲೆಲ್ಲಿ ಬಿಲವನ್ನು ಗುದ್ದು ಮಾಡಿಕೊಂಡಿದೆ ಎಂದು ನೋಡಿ ಆ ಗುದ್ದಿಗೆಲ್ಲ ಸಿಮೆಂಟ್‌ ಮೆತ್ತಿಬಿಡುವ ಅಂತ. ಇಂಥ ಯೋಚನೆಗಳು ಒಂಥರ ಗುಂಗಿ ಹುಳದ ಹಾಗೆ ಕೊರೆಯುತ್ತಲೇ ಇರುತ್ತೆ ನೋಡಿ... ಮುಖ ತೊಳೆದವಳೇ ಟೀ ಕುಡಿಯಲೂ ಪುರಸೊತ್ತು ಇಲ್ಲದವಳಂತೆ ಮೊದಲು ಸಿಮೆಂಟ್‌ ಕಲೆಸಿ ಅಡಿಗೆ ಮನೆಯಲ್ಲಿದ್ದ ಎರಡು ಮೂರು ಗುದ್ದಿಗೆ ತುಂಬಿಸಿ ಮುಚ್ಚಿದೆ. ಯುದ್ಧದಲ್ಲಿ ಗೆದ್ದವರಿಗೂ ಇಷ್ಟು ನಿರಾಳತೆಯಿರುವುದಿಲವೇನೋ.. ನನಗೆ ಅಂಥ ನಿರಾಳತೆ.

ಇದೆಲ್ಲ ಆಗಿ ತುಸು ದಿನ ಇಲಿಗಳ ಹಾವಳಿ ಇಲ್ಲದೆ ಸ್ವಲ್ಪ ಆರಾಮಾಗಿದ್ದೆ. ಆಮೇಲೆ ಮತ್ತೆ ಶುರುವಾಗಿಬಿಡಬೇಕೆ... ನೋಡಿದರೆ ‘ನಿಮ್ಮ ಸಿಮೆಂಟ್‌ ಯಾವ ಲೆಕ್ಕ’ ಎಂಬಂತೆ ಅದು ಮತ್ತದೇ ಜಾಗದಲ್ಲಿ ಗುದ್ದು ತೋಡಿ ಬಿಲ ಮಾಡಿಕೊಂಡಿತ್ತು. (ಅಂದ ಹಾಗೆ ಇಲಿ ಗುದ್ದು ತೋಡುವ ವಿಧಾನವನ್ನೇ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನೇಕೆ ಮಂಡಿಸಬಾರದು ಎಂಬ ಯೋಚನೆ ಆಗಿಂದಲೂ ನನ್ನ ತಲೆಯಲ್ಲಿದೆ!) ಜತೆಗೆ ನಾನು ಮುಚ್ಚಿದ ಸುರಂಗ ಮಾರ್ಗದ ಪಕ್ಕದಲ್ಲೇ ಇನ್ನೂ ಛಂದದ ರಾಜಮಾರ್ಗವನ್ನೇ ನಿರ್ಮಿಸಿದ್ದವು!

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+