ನನಗೂ ಇಲಿಗೂ ಅಂಟಿದ ನಂಟು...

A Rats Tale! - A light essay by Sumangala
ನನಗೂ ಅರ್ಥವಾಗದ ಗುಟ್ಟು ಎನ್ನಿ. ಬಾಲ್ಯದಲ್ಲಿ ಇಲಿಯನ್ನು ಅಷ್ಟಾಗಿ ನೋಡಿದ್ದ ನೆನಪೇ ನನಗಿಲ್ಲ. ಆಗ ನಮ್ಮನೆಯಲ್ಲಿ ಗಣಪತಿ ಇಡ್ತಾ ಇದ್ರು... ಚಿಕ್ಕವಳಿದ್ದಾಗ ಗಣಪತಿಯ ವಾಹನವಾಗಿ ಮಾತ್ರ ನೋಡಿದ್ದ ಈ ಇಲಿ ಮುಂದೊಮ್ಮೆ ನನ್ನನ್ನು ಇಷ್ಟೆಲ್ಲ ಗೋಳಾಡಿಸುತ್ತೆ ಅಂತ ಗೊತ್ತಾಗಿದ್ದರೆ ಆವಾಗ್ಲೇ ಇನ್ನೊಂದಿಷ್ಟು ತಣಗುಪ್ಪ ಹೊಡೆದೋ ಇನ್ನೊಂದೆರಡು ಕಟ್ಟು ದೂರ್ವೆಯನ್ನೋ ಸಮರ್ಪಿಸಿ ಗಣಪತಿಗೆ ಒಂದಿಷ್ಟು ಹರಕೆಯನ್ನಾದ್ರೂ ಹೊತ್ತುಕೊಳ್ಳುತ್ತಿದ್ದೆ ಅನ್ನಿ.

ಈಗ ನಾಲ್ಕಾರು ವರ್ಷದ ಕೆಳಗೆ ನಾವು ಬಿಜಾಪುರದಲ್ಲಿದ್ದಾಗ ಅದ್ಹೇಗೋ ಒಂದು ಇಲಿ ಕುಟುಂಬ ಸಮೇತ ಬಂದು ಸೇರಿಕೊಂಡುಬಿಡುವುದೇ... ನನಗೆ ಅದರ ಇರವು ಗೊತ್ತಾಗಿದ್ದೇ ಗೋಧಿಯ ಚೀಲದಲ್ಲಿ, ಜೋಳದ ಚೀಲದಲ್ಲಿ ತೂತಾದಾಗ. ಹೋಗಲಿ ತಮಗೆಷ್ಟು ಬೇಕೋ ಅಷ್ಟು ಜೋಳವನ್ನೋ ಗೋಧಿಯನ್ನೋ ತೆಗೆದುಕೊಂಡು ತಮ್ಮ ಬಿಲವೆಂಬ ಮನೆಗೆ ಹೋಗಿದ್ದರೆ ನಾನೂ ಸುಮ್ಮನಿರಬಹುದಿತ್ತು... ಅವು ಹಾಗೆ ಮಾಡಲಿಲ್ಲ. ಚೀಲದೊಳಗೆ ಸೇರಿಕೊಂಡು ತಿಂದು, ಹೊಟ್ಟನ್ನೆಲ್ಲ ಅಲ್ಲೇ ಉಗುಳಿ, ತಮ್ಮ ಹಿಕ್ಕೆಯನ್ನೂ ಅಲ್ಲೇ ಹಾಕಿ ನಂತರ ಏನೂ ನಡೆದೇ ಇಲ್ಲವೆಂಬಂತೆ ಬಿಲ ಸೇರಿಕೊಂಡರೆ ನಾನೂ ಅವುಗಳನ್ನು ಹೊರಹಾಕುವ ಯೋಚನೆ ಮಾಡಲೇ ಬೇಕು ತಾನೆ... ಅಷ್ಟೇ ಇಲ್ಲ... ಮಲಗಿ ದೀಪವಾರಿಸಿ ಇನ್ನೇನು ನನಗೆ ನಿದ್ದೆ ಹತ್ತಬೇಕು ಅಷ್ಟರಲ್ಲಿ ಈ ಇಲಿಯ ಕುಟುಂಬ ಊಟ, ಆಟ ವಿಹಾರಕ್ಕೆ ಎಂಬಂತೆ ಹೊರಡುತ್ತಿತ್ತು... ಜತೆಗೆ ಸದ್ದಿಲ್ಲದೆ ವಿಹಾರ ಮಾಡಿದರೆ ಅದು ವಿಹಾರವಾದೀತೆ.. ಊಹೂಂ.. ಪಾತ್ರೆಯನ್ನೋ ಯಾವುದೋ ಗ್ಲಾಸ್‌ನ್ನೋ ಮತ್ತೇನನ್ನೋ ಬೀಳಿಸಿ, ಅದು ಸದ್ದಾಗಿ, ನಾನು ಅಡಿಗೆ ಮನೆಗೆ ಹೋಗಿ ದೀಪ ಹಾಕಿ ನೋಡಿದರೆ ಈ ಶಿಸ್ತಿನ ಸಿಪಾಯಿಗಳು ಪಟಪಟನೆ ಮೂಲೆಗಳನ್ನು ಸೇರಿಕೊಂಡು ಅಂತರ್ಧಾನ! ನನಗೆ ಮತ್ತೆ ನಿದ್ದೆ ಹತ್ತುವಷ್ಟರಲ್ಲಿ ಇವುಗಳ ಸದ್ದು... ಸರಿ ಇಲಿ ಹೊರಹಾಕಲಿಕ್ಕೆ ಒಂದೊಂದೇ ಉಪಾಯ ಹೂಡ ತೊಡಗಿದೆ.

ಮೊದಲಿಗೆ ವಿಷವಿಡುವುದು ಅಂತ ತೀರ್ಮಾನಿಸಿದೆ. ಒಂದು ಶುಭ ಮುಹೂರ್ತದಲ್ಲಿ ವಿಷ ತಂದಿಟ್ಟೆ. ಪಕ್ಕದ ಮನೆಯವರು ಉಪದೇಶಿಸಿದ ಹಾಗೆ ಅವುಗಳಿಗಾಗಿಯೇ ರುಚಿಯಾಗಿ ಬೋಂಡ ತಯಾರಿಸಿ ಬೋಂಡದ ಒಳಗೆ ವಿಷವಿಟ್ಟು ಅವು ಓಡಾಡುವ ಜಾಗದಲ್ಲಿ ಮೂರು ನಾಲ್ಕು ಕಡೆ ಇಟ್ಟಿದ್ದಾಯ್ತು. 'ನೀರಿನ ಮ್ಯಾಗೆ ಛಲೋತ್ನಾಗಿ ಮುಚ್ರೀ.. ಅವೂ ಶಾಣ್ಯಾ ಆಗ್ಯಾವ್ರೀ.. ವಿಷ ತಿಂದಿಂದ ನೀರ ಎಲ್ಲರ ಅದಾವೇನು ಅಂತ ನೋಡ್ತಾವ್ರೀ... ನೀರು ಕುಡಿದ್ವಂದ್ರ ಮುಗಿತು... ನೀವು ವಿಷ ಹಾಕಿದ್ದು ಖರೇ ದಂಡಕ್ಕನ' ಅಂತ ನೆರೆಮನೆಯವರು ಎಚ್ಚರಿಸಿದ್ದರು... ಹೀಗಾಗಿ ರಾತ್ರಿ ಅದು ಹಿಂಗಾಲು ಮುಂಗಾಲಿನಿಂದಲೂ ತೆರೆಯದ ಹಾಗೆ ನೀರಿನ ಪಾತ್ರೆಗಳನ್ನು ಮುಚ್ಚಿದ್ದೆ. ಬೆಳಿಗ್ಗೆ ಒಂದು ದೊಡ್ಡ ಇಲಿ ಸತ್ತು ಬಿದ್ದಿದ್ದನ್ನು ನೋಡಿದಾಗ ನನಗೆ, ಮಗನಿಗೆ ಭಾರೀ ಖುಷಿ.

ಎರಡು ದಿನದ ನಂತರ ನಾನು ಕಾಲೇಜಿಂದ ಬರುವಷ್ಟರಲ್ಲಿ ಮಗರಾಯನ ಸವಾರಿ ಮನೆ ಹೊರಗಿನ ಕಟ್ಟೆ ಮೇಲೆ.. 'ಯಾಕೋ' ಅಂದ್ರೆ 'ಒಳಗ್ಹೋಗಿ ನೋಡು' ಅಂದ ಮುಗುಮ್ಮಾಗಿ... ಒಳಗೆ ಕಾಲಿಟ್ಟೊಡನೆ ನನಗೆ ಏನೂ ಹೊಳೆಯಲಿಲ್ಲ. ನನ್ನ ಹಿಂದೆಯೇ ಬಂದವ 'ನಿಂಗೇನೂ ಬರವಲ್ದೇನೂ' ಅಂದ.

'ಏನು ಬರಬೇಕೋ.. ನನಗೆ ಬಾತ್‌ರೂಂಗೆ ಹೋಗೂದಷ್ಟೇ ಬಂದದ ಈಗ...'

ನಾನು ಮುಗುಳ್ನಕ್ಕಷ್ಟೂ ಅವನ ಮುಖ ಇನ್ನಷ್ಟು ಗಂಟುಮೋರೆಯಾಗುತ್ತಿತ್ತು.

'ಏನಮ್ಮಾ ಇಷ್ಟು ವಾಸ್ನೆ ಬರ್ತಿದೆ.. ಏನೂ ಬರಂಗಿಲ್ಲ ಅಂತೀಯಲ್ಲ' ಅಂದ. ಗಾಢವಾಗಿ ಉಸಿರೆಳೆದುಕೊಂಡರೆ... ಹೌದು ಏನೋ ವಾಸನೆ.... ಎಲ್ಲೋ ಇಲಿ ಸತ್ತಿದೆ. 'ಅದೆಲ್ಲಿದೆ ಅಂತ ಹುಡುಕಿ, ಅದನ್ನ ಮೊದಲು ತೆಗಿಯಮ್ಮಾ.. ನಾ ಅಂತೂ ಅಲ್ಲೀವರೆಗೆ ಒಳಗೆ ಬಂದು ಹೋವರ್ಕ್‌ ಮಾಡಾಂವ ಅಲ್ಲ' ಅಂದವನೇ ಆಟಕ್ಕೆ ಹೋಗಲು ಸಜ್ಜಾದ. ಎಲ್ಲೋ ಆ ಇಲಿ, ಇವನೂ ಒಳಗೊಳಗೇ ಒಪ್ಪಂದವೇನಾದ್ರೂ ಮಾಡಿಕೊಂಡಿರಬಹುದೇ ಎಂಬ ಅನುಮಾನ ನನಗೆ!

(ಮುಂದಿನ ಪುಟಕ್ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+