ಪ್ರೀತ್ಸೋದ್ ತಪ್ಪಾ?
ಪ್ರೇಮ ಕುರುಡು ಅದಕ್ಕೆ ಕಣ್ಣಿಲ್ಲ ಎಂದು ಕೆಲವರು ಹೇಳುತ್ತಾರೆ. ಆಕರ್ಷಣೆಯೇ ಮುಖ್ಯವಲ್ಲ ಅಲ್ಲಿ ನೋಟಾತೀತವಾದ ಬೇರೆಯೇನೋ ಇದ್ದಿರಲೇಬೇಕು. ಯಾಕೆಂದರೆ, ಹಲವಾರು ಗಟ್ಟಿ ಪ್ರೇಮ ಪ್ರಕರಣಗಳು ಸುಂದರವಲ್ಲದ ಯುವಕ-ಯುವತಿಯರ ನಡುವೆಯೂ ಸಹ ನಿರಂತರವಾಗಿ ಸಾಗುತ್ತ ವೆ... ಪ್ರೇಮಕ್ಕೆ ಕಣ್ಣುಂಟು ಎಂದು ತಿಳಿಯಲು ಇಷ್ಟು ಸಾಕಲ್ಲವೇ...?(ಮುಂದುವರಿದುದು)
ಯಾವುದು ಪ್ರೀತಿ? : ಪ್ರೀತಿ ಕುರುಡು ಅದಕ್ಕೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಆಕರ್ಷಣೆಯೇ ಮುಖ್ಯವಲ್ಲ ಅಲ್ಲಿ ನೋಟಾತೀತವಾದ ಬೇರೆಯೇನೋ ಇದ್ದಿರಲೇಬೇಕು. ಯಾಕೆಂದರೆ, ಹಲವಾರು ಗಟ್ಟಿ ಪ್ರೇಮಗಳು ಸುಂದರವಾಗಿರದ ಯುವಕ-ಯುವತಿಯರ ನಡುವೆಯೂ ಸಹ ನಿರಂತರವಾಗಿ ಸಾಗುತ್ತ ನಮಗೆ ಸಾಕ್ಷಿಯಾಗಿವೆ.
ಹಾಗೆಯೇ, ಇನ್ನೊಂದು ರೀತಿಯ ಪ್ರೀತಿಯನ್ನು ನಮ್ಮ ಹುಡುಗರು ಯುವತಿಯರು ಮಾಡುತ್ತಾರೆ. ಪ್ರೀತಿಯನ್ನು ಒಪ್ಪದೆ ಇದ್ದಯುವತಿಗೆ ಬ್ಲಾಕ್ ಮೇಲ್ ತಂತ್ರಗಳಾದ ಆಸಿಡ್ ಹಾಕುವುದು. ತಾನು ಸಾಯುವ ಬೆದರಿಕೆ ಹಾಕುವುದು. ಅವಳನ್ನು ಕೊಲೆ ಮಾಡುವ ಬೆದರಿಕೆಯನ್ನು ಹಾಕುವುದು. ಈ ರೀತಿಯ ಒತ್ತಾಯದ ಪ್ರೇಮವನ್ನು ಏನೆಂದು ಕರೆಯಬೇಕೋ? ದೇವರೇ ಹೇಳಬೇಕು.
ಆದರೆ ಪ್ರೇಮಿಗಳಿಗೆ ಬಂದಂತಹ ಕಷ್ಟ -ನಷ್ಟಗಳು ಯಾರಿಗೂ ಬರಲಾರವೇನೋ ಎನ್ನುವ ಮಟ್ಟಕ್ಕೆ ಪ್ರೀತಿಯಿಂದ ಸಾಕುವ ಹೆತ್ತವರಿಂದ ಹಿಡಿದು, ಸುತ್ತಲ ಸಮಾಜದಿಂದಲೂ ನಾನಾ ರೀತಿಯ ಅವಮಾನಗಳನ್ನು ಅನುಭವಿಸಬೇಕಾಗುತ್ತದೆ.
ಅಂದರೆ ಈ ಪ್ರೀತಿ ಅಪರಾಧವಾ? ನಿಜವಾಗಿಯೂ ಅಲ್ಲ . ಆದರೆ ತನ್ನ ತಂದೆ ತಾಯಿಗಳು, ತನ್ನ ಹೆತ್ತ ಮಗನ ಅಥವಾ ಮಗಳ ಈ ರೀತಿಯ ಹೊರ ಸಂಬಂಧವನ್ನು ಗೊತ್ತಿಲ್ಲದ ಅಪರಚಿತರೊಂದಿಗಿನ ಸಲುಗೆಯನ್ನು ಸಹಿಸದಂತಾಗುತ್ತಾರೆ. ಮಕ್ಕಳ ಬಗ್ಗೆ ತಂದೆ-ತಾಯಿಯರು ಇಟ್ಟುಕೊಂಡ ನಿರೀಕ್ಷೆಗಳೆಲ್ಲ ತಲೆ ಕೆಳಗಾದಾಗ, ಮಕ್ಕಳ ಇಂತಹ ವರ್ತನೆ ಅಪರಾಧವಾಗಿ ಕಾಣಿಸುತ್ತದೆ.

ಪ್ರೀತ್ಸೋದು ತಪ್ಪಾ? : ಪ್ರೀತಿ ಮಾಡಿದವರೆಲ್ಲ ಕೆಟ್ಟು ಹೋಗುತ್ತಾರೆ, ಜೀವನದಲ್ಲಿ ಸಫಲರಾಗುವುದಿಲ್ಲ ಎಂಬ ಭ್ರಮೆಯಿಂದ ನಮ್ಮ ಹಿರಿಯರು ಹೊರಬರಬೇಕು. ನಿಜ, ವಯಸ್ಸಲ್ಲದ ವಯಸ್ಸಿನ ಹದಿಹರೆಯದವರು ಪ್ರೀತಿಯಲ್ಲಿ ಮಗ್ನರಾಗುವುದು ಸಹ ಉತ್ತಮವಲ್ಲ. ಅದಕ್ಕಾಗಿಯೇ ಅವರೂ ಸ್ವಲ್ಪ ಹೆದರಿಕೆಯಿಂದ ನೋಡುವುದು. ಅದರೆ ಇದು ಹೇಳಿ ಕೇಳಿ ಬರುತ್ತಾ ಎಂದು ಪ್ರೇಮಿಗಳು ಕೇಳಬಹುದು.
ಹಾಗೆಯೇ, ಪ್ರತಿ ಪ್ರೇಮಿಗಳು ಈ ಪ್ರೇಮ ಎಷ್ಟು ಪಕ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಕೆಲವೊಮ್ಮೆ ಕೇವಲ ಕ್ರಶ್‌ಗಳಾಗುವುದನ್ನೇ ಪ್ರೇಮ ಎಂದು ಬಗೆಯುವುದುಂಟು. ಕೆಲವು ದಿನಗಳ ನಂತರ ಪರಸ್ಪರರ ನಿಜವಾದ ಬಣ್ಣ ಬಯಲಾಗಿ, ದೂರವಾಗುವ ಸಂಭವವಿರುತ್ತದೆ. ಆಗ ಜೊತೆಗಾತಿಗೆ ಆಗುವ ಅವಮಾನವನ್ನು ತೆಗೆದುಕೊಳ್ಳುವವರಾರು? ಮತ್ತು ಹೆಣ್ಣಿನಿಂದ ಗಂಡಿಗೆ ಆಗುವ ನಿರಾಕರಣೆ-ನಿರ್ಲಕ್ಷ್ಯ, ಕಡೆತನಕ ನೋವಿನ ಹುಣ್ಣಾಗಿ ಕಾಡುತ್ತದೆ.
ಈ ಮೇಲಿನ ಘಟನೆಗಳ ಮುನ್ನೋಟವನ್ನು ನಮ್ಮ ಹೆತ್ತವರು ತಮ್ಮ ಅಗಾಧ ಅನುಭವಗಳಿಂದ ಕಂಡಿರುತ್ತಾರೆ. ಪ್ರೀತಿಗಿಂತ ನಮ್ಮ ಮುಂದಿರುವ ಜೀವನ ಮಿಗಿಲು. ಹಾಗಾಗಿ, ಪಕ್ವವಾದ ನಿಷ್ಕಲ್ಮಶ ಪ್ರೀತಿಯನ್ನು ತಮ್ಮ ತಮ್ಮಲ್ಲಿಯೇ ಓರೆಗೆ ಹಚ್ಚಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಬೇಕು ಅನ್ನಿಸುವುದಿಲ್ಲವೇ?
ಪ್ರೇಮಿಗಳಿಗಾಗಿ ದಿನ : ಪ್ರೇಮಿಗಳ ರಕ್ಷಣೆಗೆಂದು ವ್ಯಾಲೆಂಟೆನ್ ಎಂಬ ಪಾಶ್ಚಾತ್ಯ ಸಂತ ಪ್ರೇಮವನ್ನು ಸಾಕಾರ ಮಾಡಿಕೊಳ್ಳಲು ನೆರವಾಗುತ್ತಿದ್ದ. ಮತ್ತು ಆ ಪ್ರೇಮಿಗಳ ಮುಂದಿನ ಜೀವನವನ್ನು ನಡೆಸಲು ಅವರ ಅಗಾಧ ಕನಸು ನನಸು ಮಾಡಿಕೊಳ್ಳಲು ಸಹಾಯ ಮಾಡಿ ವಿಶ್ವ ಪುಟದಲ್ಲಿ ಅಮರನಾಗಿದ್ದಾನೆ. ಫೆಬ್ರವರಿ 14, ಪ್ರೇಮಿಗಳ ದಿನ. ಸಂತ ವ್ಯಾಲೆಂಟೈನನನ್ನು ಆ ದಿನ ಎಲ್ಲಾ ಪ್ರೇಮಿಗಳು ಸ್ಮರಿಸುತ್ತಾರೆ. ತಮ್ಮ ಪ್ರೇಮವನ್ನು ಹೊಸದಾಗಿ ಪ್ರಾರಂಭ ಮಾಡುತ್ತಾರೆ ಅಥವಾ ನವೀಕರಿಸಿಕೊಳ್ಳುತ್ತಾರೆ.
ಕೆಲವರು ತಮ್ಮ ಕಾಲೇಜು ಅಥವಾ ತಮ್ಮ ತಾರುಣ್ಯ ಜೀವನದಲ್ಲಿ ಪ್ರೀತಿ-ಪ್ರೇಮ ಎಂಬ ಸಹವಾಸದಿಂದ ಹೊರಗೆ ಉಳಿದು ಅದಕ್ಕೆ ಅಪರಿಚಿತರಾಗುವ ಸಂಭವವೂ ಇರುತ್ತದೆ. ಅದಕ್ಕೆ ಹಲವಾರು ಕಾರಣ ಇರಬಹುದು. ಆದರೆ ಆ ಒಂದು ಆಕರ್ಷಣೆಗೆ ಒಳಗಾಗುವ ಪುಳಕವನ್ನಂತೂ ಅನುಭವಿಸಿರುತ್ತಾರೆ. ಅದಕ್ಕೆ ಕಾರಣ ದೇಹದಲ್ಲಿ ಆಗುವ ಹಲವು ಬದಲಾವಣೆಗಳು. ಇದನ್ನು ತಾರುಣ್ಯಾವಸ್ಥೆಯ ಪರಕಾಷ್ಠೆಯ ಸಮಯವಾದ ಕಾಲೇಜು ದಿನಗಳಲ್ಲಿ ನೂರಕ್ಕೆ ತೊಂಬತ್ತ್ತೊಂಬತ್ತರಷ್ಟು ಯುವಕ ಯುವತಿಯರು ಅನುಭವಿಸಿರುತ್ತಾರೆ. ಕೆಲವರು ಅದನ್ನು ತಮಗೆ ದಕ್ಕಿಸಿಕೊಂಡು ಪ್ರೇಮಿಸಲಾರಂಭಿಸುತ್ತಾರೆ. ಇನ್ನೂ ಕೆಲವರು ಬೇಡಪ್ಪ ಎಂದು ತಮ್ಮಲ್ಲಿಯೇ ಖುಷಿ ಮತ್ತು ನಿರಾಶೆಯನ್ನು ಅನುಭವಿಸಿ ತಮ್ಮ ವಿದ್ಯಾಭ್ಯಾಸದಲ್ಲಿ ಮುಳುಗಿ ಮರೆಯಲಾರಂಭಿಸುತ್ತಾರೆ.
ಕೆಲವರು ಗೆಳೆಯ -ಗೆಳತಿಯರು' ಏನಮ್ಮ ನೀನು ಯಾರನ್ನೂ ಲೈನ್ ಹೊಡೆಯುತ್ತಿಲ್ವಾ ಏಕೆ? ’ ಎಂದು ಮನಕಲಕುವಂತೆ ನುಡಿಯುತ್ತಾರೆ. ಉತ್ತೇಜನಕ್ಕೊಳಗಾಗಿ ತೊಳಲಾಟ ಶುರುವಾಗುತ್ತದೆ. ಒಂದು ಕಡೆ ಮನೆಯ ಮಂದಿ ಮತ್ತು ತನ್ನ ಆಪ್ತ ಸ್ನೇಹಿತರ ಮಧ್ಯೆ ಪೂರ್ಣ ಜಿದ್ದಿಗೆ ಬಿದ್ದು ಸಂಕಷ್ಟಕ್ಕೆ ಇಡಾಗುತ್ತಾರೆ.
ಜೀವನದಲ್ಲಿ ಶಿಕ್ಷಣ ಪೂರೈಸಿ, ಸಾಧನೆಯನ್ನು ಮಾಡಿ ಒಂದು ನೆಲೆಯನ್ನು ಕಂಡುಕೊಂಡು, ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬ ಸಮಯದಲ್ಲಿ ಲವ್ ಮಾಡೋಣವಾ ಎನ್ನುತ್ತಾರೆ. ಯಾಕೆಂದರೆ ಮುಂದಿನ ತನ್ನ ಸಂಗಾತಿಯುನ್ನು ಜೀವನದ ಪಾರ್ಟ್ ನರಾಗಿ ಪಡೆಯಲೇಬೇಕಲ್ಲ. ಆದ್ದರಿಂದ ಪ್ರೀತಿಸಿ ಮದುವೆಯಾದರೆ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಅದನ್ನೇ ತನ್ನ ತಂದೆ ತಾಯಿ ಮತ್ತು ಹಿರಿಯರ ಮುಂದಿಟ್ಟು , ಅವರಿಂದ ಮದುವೆಗೆ ಗ್ರೀನ್ ಸಿಗ್ನಲ್ ಪಡೆಯಲು ಯೋಚಿಸುತ್ತಾರೆ.
ಮತ್ತೆ ಕೆಲವರು ಇದರ ಯಾವ ಸಾಹಸವೂ ಬೇಡ ಸುಮ್ಮನೆ ಮನೆಯವರು ಒಪ್ಪಿದ ಸಂಗಾತಿಯನ್ನು ಮದುವೆಯಾಗಿ ನಂತರ ಅವಳನ್ನೇ/ಅವನನ್ನೇ ಪ್ರೀತಿಸಲು ಪ್ರಾರಂಭಿಸಿ ಸುಖವಾಗಿರೋಣ ಎಂದುಕೊಂಡಿರುತ್ತಾರೆ. ಅಂತೂ ಯಾವಾಗಲಾದರೂ ಒಮ್ಮೆ ಇದರ ಅನುಭವವನ್ನು ಪಡೆದೇ ಪಡೆಯುತ್ತಾರೆ. ಪ್ರೀತಿ ಶಾಶ್ವತವಾದ ಸಂಬಂಧ. ಇದು ನಿರಂತರ...
ಇದನ್ನು ಮುಂದುವರೆಸಿಕೊಂಡು ಹೋಗಲೇಬೇಕೇನೋ ಎಂಬಂತೆ ಇತ್ತೀಚೆಗೆ ನಾನು ಒಂದು ನಿಯತಕಾಲಿಕೆಯಲ್ಲಿ ಓದಿದ ನೆನಪು. ಇಟಲಿಯ ಪ್ರಖ್ಯಾತ ವಿಶ್ವವಿದ್ಯಾಲಯ ಪ್ರೀತಿಯ-ಪ್ರೇಮದ ಉಪಯೋಗಗಳ ಬಗ್ಗೆ ಸಂಶೋಧನೆ ಮಾಡಿದೆ. ಇದರ ಫಲಿತಾಂಶವೇನು ಹೇಳುತ್ತದೆಂದರೆ, ಪ್ರೇಮಿಸುವ ಮತ್ತು ಪ್ರೀತಿಸುವ ಜನರಲ್ಲಿ ವಿಪುಲವಾಗಿ ಎನ್.ಜೆ.ಎಫ್(ನ್ಯೂರಾನ್ಸ್ ಗ್ರೋಥ್ ಫ್ಯಾಕ್ಟರ್ಸ್) ಹೆಚ್ಚು ಸಂಖ್ಯೆಯಲ್ಲಿ ಬೆಳೆಯುವುದು. ಅಲ್ಲದೆ ದೇಹ ಬೆಳವಣಿಗೆಯ ಮತ್ತು ದೇಹಾರೋಗ್ಯದ ಪ್ರೊಟೀನುಗಳು ಸಹ ಚೆನ್ನಾಗಿ ವೃದ್ಧಿಯಾಗುವ ಅಂಶ ಕಾಣಿಸಿದೆ. ಅದ್ದರಿಂದ ಇದು ನಮ್ಮ ಜೀವನದ ಟಾನಿಕ್ ಆಗಿದೆ.
ಮಾನವೀಯತೆಯ ದೃಷ್ಟಿಯಿಂದಲೂ ಸಹ ಮಾನವನ ಭಾವನೆಗಳ, ಸಂಬಂಧಗಳ ಉನ್ನತಿಗೆ ಮೂಲವಾದ ಪ್ರೀತಿ-ಪ್ರೇಮ ಬೇಕು. ಸಮಾನ ಅನುರಾಗದ ಬದುಕನ್ನು ಬದುಕುವುದು ಅವಶ್ಯಕ.
ಪ್ರೀತಿ ಉನ್ನತವಾದುದು. ಅದು ಇಡೀ ವಿಶ್ವದ ಚೈತನ್ಯ.'ಮಾನವ ಸಂಬಂಧಗಳ ವಿದ್ಯುತ್‌ಚ್ಛಕ್ತಿ...’












Click it and Unblock the Notifications