ಒಲವೆ ಜೀವನ ಸಾಕ್ಷಾತ್ಕಾರ...

  • ಡಿ.ಎಸ್‌.ಶ್ರೀನಿವಾಸ ಪ್ರಸಾದ್‌
What is Love?ಪ್ರೇಮ ಎಲ್ಲ ಕಾರಣಗಳಿಂದಲೂ ವಿಶಿಷ್ಟವಾದುದು. ಅಷ್ಟೇ ಅಲ್ಲ. ಪರ -ವಿರೋಧಗಳಿಗೂ ತುತ್ತಾಗಿರುವಂಥದ್ದು. ಬಹುತೇಕ ಯುವಕ, ಯುವತಿಯರ ಪಾಲಿಗೆ ಪ್ರೇಮವೆಂದರೆ ಮರಸುತ್ತುವ ಅಥವಾ ಗುಲಾಬಿ ನೀಡಿ ಐ ಲವ್‌ ಯೂ ಹೇಳುವುದಷ್ಟೆ ಆಗಿದೆ. ಪ್ರೇಮ ನಿಜವಾಗಿಯೂ ಮಧುರ. ಆದರೆ ಇಂದಿನ ಯುವಜನತೆ ಪ್ರೇಮವೆಂದರೆ ಚೆಲ್ಲಾಟ. ಆ ಕ್ಷಣಕ್ಕೆ ಬಿಸಿ ನೀಡುವುದೇ ಪ್ರೀತಿ ಎಂಬ ಭಾವನೆಯಿದೆ.

ಮೈಕಾವು ಆರಿದ ಮೇಲೆ ತಣ್ಣಗಾಗಿ ಬಿಡುವುದೇ ಪ್ರೇಮ. ದೇಹ ಸಮಾಗಮವೇ ಪ್ರೇಮದ ಪರಾಕಾಷ್ಠೆ ಎನ್ನುವುದು ದುರಂತವಾದರೆ, ಪ್ರೇಮವೆಂಬ ಹೆಸರೇ ಅಕ್ಷಮ್ಯವೆಂದು ಬಹುಪಾಲು ಹಿರಿಯರು ಅರ್ಥೈಸಿರುವುದು ವಿಷಾದನೀಯ. ಪ್ರೇಮವೆಂದರೆ ‘ಸ್ವೇಚ್ಛೆ’ ಎಂದು ಯುವಜನತೆ, ‘ಮೈಲಿಗೆ’ ಎಂದು ಹಿರಿಯರು ಭಾವಿಸಿದ ಕಾರಣ ಪ್ರೇಮದ ನಿಜ ಅರ್ಥ ಅಪಾರ್ಥಕ್ಕೀಡಾಗಿದೆ. ಪ್ರೇಮಕ್ಕೆ ಮೈಲುಗಳೂ ಇಲ್ಲ, ಮೈಲಿಗೆಯೂ ಇಲ್ಲ. ಅದಕ್ಕಿರುವ ಸರಹದ್ದು ಆಕಾಶ ಸ್ವರೂಪದ್ದು. ಪ್ರೇಮ ತನ್ನ ವಿಶಾಲಾರ್ಥದಲ್ಲಿ ಬೆಲೆಕಟ್ಟಲಾಗದ, ಕಟ್ಟಬಾರದ ಅತ್ಯಮೂಲ್ಯ ವಸ್ತು. ವರಕವಿ ಡಾ.ದ.ರಾ.ಬೇಂದ್ರೆಯವರೇ ಹೇಳಿರುವ ಹಾಗೆ-

ಒಲವೆಂಬ ಹೊತ್ತಗೆಯ
ಓದಬಯಸುತ ನೀನು
ಬೆಲೆಯೆಷ್ಟು ಎಂದು
ಕೇಳುವೆಯಾ ಹುಚ್ಚ
ಹಗಲಿರುಳು
ದುಡಿದರೂ ಹಲಜನುಮ
ಕಳೆದರೂ
ತೆರಲಾರೆ ನೀನದರ
ಅಂಚೆವೆಚ್ಚ....

ಹೀಗಿರುವ ಪ್ರೇಮ ಮತ್ತದರ ನೆಲೆಗಳೂ ವೈವಿಧ್ಯಮಯ. ವಿಶಿಷ್ಟ ಭಾಷೆ- ಭಾವದ ಪ್ರೇಮದ ಪರಿಭಾಷೆಯೂ ಭಿನ್ನ. ಆದರೆ ಒಂದೇ ವಾಹಿನಿಯಲ್ಲಿ ಮಿಂದು ಬಂದು ಸಂಗಮವಾಗುವಂತಹದ್ದು. ಪ್ರೇಮವು ತಾಯಿ-ಮಗುವಿನ ಸಂಬಂಧವನ್ನು ಹೇಳಬಲ್ಲದು. ಮಗು (ವತ್ಸ) ಮತ್ತು ತಾಯಿಯ ಪ್ರೀತಿಯೇ ‘ವಾತ್ಸಲ್ಯ’. ಪ್ರೀತಿ ಮತ್ತು ವಿಶ್ವಾಸದ ಕೊಡುಕೊಳ್ಳುವಿಕೆಯ ಭಾವ ಮೂಲವೇ ಮಮಕಾರ ಅಥವಾ ಬಂಧ. ಗಂಡ, ಹೆಂಡತಿ ಸಂಬಂಧ ಕೇವಲ ಇನ್ನೊಂದು ಹೊಸ ಸೃಷ್ಟಿಗೆ ಮಾತ್ರಮೀಸಲಾದ ದಾಂಪತ್ಯದ ಮಿಲನವಲ್ಲ. ಅದು ಜೀವನಪರ್ಯಂತ ಆಚಂದ್ರಾರ್ಕವಾಗಿ, ಅಜೇಯವಾಗಿ ಉಳಿಯುವ ಅವಿನಾಭಾವ ಅನುಬಂಧ. ಅದು ಸುಖ-ದುಃಖ, ಕಷ್ಟ-ನಷ್ಟಗಳ ಬಾಳ ಅಗ್ನಿದಿವ್ಯವನ್ನು ಎದುರಿಸಿ ನಿಲ್ಲುವ ಚಿತ್ತಸ್ಥೈರ್ಯದ ಸಮ್ಮಿಶ್ರರಸಪಾಕ.

ಹೀಗಾಗಿಯೇ ಅದು ಸಮತೂಕದ ಮನ-ಮನ ಮೈತ್ರಿಯ ಬುದ್ಧಿಭಾವಗಳ ವಿದ್ಯುದಾಲಿಂಗನವೂ ಹೌದು. ರಕ್ತಸಂಬಂಧ, ಬಂಧುತ್ವ ಹೀಗೆ ಎಲ್ಲ ಸ್ತರದ ನೆಂಟಸ್ತಿಕೆಗೂ ಒಲವಿನ ಹೆಸರಿದೆ. ಕಲ್ಪನೆಯಲ್ಲಷ್ಟೇ ಅಲ್ಲದೆ, ವಾಸ್ತವಿಕೆಯ ಗಟ್ಟಿ ತಳಹದಿಯ ಮೇಲೆ ನಿಲ್ಲುವ ಚೈತನ್ಯ ಶಕ್ತಿ ಪ್ರೇಮದ ಹೆಗ್ಗುರುತು. ಅದೊಂದು ಜೀವಸ್ಪಂದನ. ಜೀವನ್ಮುಕ್ತವಾಗಿಯೂ ನೆಲೆನಿಲ್ಲುವ ಪ್ರಾಣಸಂಜೀವಿನಿ.

ಆದರೆ ಫೆಬ್ರುವರಿ 14 ರಂದು ಸಾಂಕೇತಿಕವಾಗಿ ಆಚರಿಸುವ ಪ್ರೇಮಿಗಳ ದಿನವನ್ನು ಇತರ ದಿನಗಳಂತೆ ಆಚರಿಸುವುದಕ್ಕೆ ಕಡು ವಿರೋಧ ಕಂಡು ಬರುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಈ ಆಚರಣೆ ನಮಗೇಕೆ ಎಂಬ ವಾದ ಪ್ರೇಮದ ಭಾವಾರ್ಥವನ್ನು ತಿರುಚಿದೆ.

ಒಳ್ಳೆಯ ಅಂಶಗಳೆಲ್ಲಿದ್ದರೂ ಸ್ವಾಗತಿಸಬೇಕೆನ್ನುವ ಮಾತು ಋಗ್ವೇದದಲ್ಲಿಯೇ ಇದೆ. ಹಾಗಿರುವಾಗ ಇದು ಪಾಶ್ಚಾತ್ಯ-ಪೌರ್ವಾತ್ಯವೆಂದು ಆಚರಣೆಗಳನ್ನು ದೂರ ತಳ್ಳುವುದಕ್ಕಿಂತ ನಮ್ಮದೇ ಸಂಸ್ಕೃತಿಯ ಪರಿಮಿತಿಯಾಳಗೆ ಪ್ರೇಮಿಗಳ ದಿನ ಆಚರಿಸುವುದು ಒಳಿತೆನ್ನಬಹುದು.

‘ವೆಲೆಂಟೇನ್‌ ಡೇ ’ ಹೆಸರಿನಲ್ಲಿ ಪಬ್ಬು- ಕ್ಲಬ್ಬುಗಳಲ್ಲಿ ಮಧ್ಯರಾತ್ರಿ ಮೀರಿಯೂ ನಡೆಯುವ ಕುಣಿತ- ಕುಡಿತ, ವಿಕೃತ ಚೇಷ್ಟೆಗಳಿಗೆ ಕಡಿವಾಣ ಹಾಕಬೇಕು. ಸ್ವಾಸ್ಥ್ಯಸಮಾಜಕ್ಕೆ ಪೂರಕವಾಗಿ, ಅಶ್ಲೀಲತೆ ಅಬ್ಬರದಾರ್ಭಟಗಳಿಗೆ ನಿಲುಕದೆ, ಹಂಸಕ್ಷೀರ ನ್ಯಾಯದಂತೆ ಸಭ್ಯತೆಯ ಆವರಣದಲ್ಲೇ ಪ್ರೇಮ ಬೆಳಗಬಲ್ಲದು, ಉಳಿಯಬಲ್ಲದು.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+