ನಮ್ಮ ಮನೆಯಲ್ಲಿ ವಿಚಿತ್ರ ಪ್ರಾಣಿ!
- ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ.
[email protected]
ಮೊನ್ನೆ ಮುಂಜಾನೆ ಏಳು ಮೂವತ್ತು ಆಗಿರಬಹುದು. ತೆರೆದಿಟ್ಟ ತಲೆಬಾಗಿಲಿನಿಂದ ಒಂದು ವಿಚಿತ್ರ ಪ್ರಾಣಿ ನಮ್ಮ ಮನೆ ಪ್ರವೇಶ ಮಾಡಿತ್ತು! ನೋಡು ನೋಡುವಷ್ಟರಲ್ಲಿಯೇ ಬಾಗಿಲು ದಾಟಿ ವರಾಂಡದ ಮೂಲಕ ಓಡಿ ಹೋಯ್ತು! ಒಂದೇ ಕ್ಷಣದಲ್ಲಿ ಮಂಗ ಮಾಯವಾಯ್ತು!
‘ನಾನು ಒಂದು ವಿಚಿತ್ರ ಪ್ರಾಣಿ ನೋಡಿದೆ. ಅದಕ್ಕೆ ಪಕ್ಷಿಯಂತೆ ಉದ್ದನ್ನ ಕುತ್ತಗಿ ತಲೆ ಇತ್ತು. ಚೂಪದ ಕೊಕ್ಕು ಇತ್ತು. ಬಾಲ ಮೇಲಕ್ಕೆತ್ತಿ ಎರಡೇ ಕಾಲಲ್ಲಿ ಓಡಿ ಹೋಯ್ತು. ಒಂದು ಕೈ ವಕ್ರ ಆಗಿತ್ತು ಮತ್ತು ದೊಡ್ಡದಿತ್ತು. ಇನ್ನೊಂದು ಕೈ ಸಣ್ಣದಿತ್ತು. ರೆಕ್ಕೆ ಪುಕ್ಕ ಏನೂ ಇಲ್ಲದ ಈ ಪ್ರಾಣಿಗೆ ಕಡ್ಡಿ ಹುಳದ ಹೋಲಿಕೆ ಇತ್ತು...’ ಎಂದು ಒಂದೇ ಉಸಿರಲ್ಲಿ ಹೇಳಿದ್ದನ್ನ ಕೇಳಿ, ನನ್ನ ಮಗಳು ಸುಚೇತಾ ನನ್ನನ್ನ ನೋಡಿ ಮುಸಿಮುಸಿ ನಕ್ಕಳು.
ಸುಚೇತಾ ನಗುತ್ತಲೇ, ‘ನಮ್ಮ ಅಂಗಡಿ ಸರ್(ಜೀವ ಶಾಸ್ತ್ರ ಪ್ರಾಧ್ಯಾಪಕರು)ಹೇಳದ ಜೀವಿ ಈ ಭೂಮಿಯ ಮ್ಯಾಲ ಇರಾಕ ಸಾಧ್ಯವೇ ಇಲ್ಲ’ ಅಂತ ವಾದ ಮಾಡಿದಳು. ಸುಚೇತಾಳ ಮಾತಿಗೆ ದನಿಗೂಡಿಸಿದ ಆಕೆಯ ಗೆಳತಿ ಸುಜಾತಾ, ‘ಇಲ್ಲರಿ ಸರ್, ಇಷ್ಟ ಪರಿಚಯ ಇದ್ದ ಅಂಗಡಿ ಸರ್ ನಮಗ ಹೇಳತಿದ್ದಿಲ್ಲ ಏನರಿ, ನೀವು ನಮಗ ಬೇಕಂತನ ಸುಳ್ಳ ಹೇಳಾಕ ಹತ್ತೀರಿ’ ಅಂತ ಅನಬೇಕಾ!
ಅಷ್ಟೊತ್ತಿಗೆ ನಮ್ಮ ಬಾಯಿ ಕೇಳಿ ಅಡಿಗೆ ಮನೆಯಿಂದ ಅರ್ಧಾಂಗಿ ಗಿರಿಜಾ ಓಡಿ ಬಂದ್ಲು. ನಮ್ಮ ಮಾತ ಕೇಳಿ‘ ಅಯ್ಯ ನೀವೇನ್ ಹೇಳತೀರಿ ತಗಿರಿ, ಇಂಥಾ ಪ್ರಾಣಿ ಎಲ್ಲಿಯಾರ ಇರತೈತಾ ? ಇದ್ದರೂ ನಮ್ಮ ಖಾಸ್ಗತ ನಗರಕ್ಕ ಬರತೈತಾ? ಅದೂ ನಮ್ಮ ಮನಿ ಒಳಗ ಬಂದು ಓಡಿ ಹೋಗೇತಿ ಅಂತೀರಿ! ತೀರಾ ಈ ಪರಿ ಸುಳ್ಳು ಹೇಳೂದಾ? ಕೆಲಸಿಲ್ಲ ಬಗಸಿಲ್ಲ ಮುಂಜೇನ್ ಎದ್ದ ಕೂಡಲೆ ! ಓದ್ರಿ, ಓದ್ರಿ.. ಹುಡುಗೂರೆ ನೀವು , ಇವ್ರ ಮಾತ್ ಕೇಳಿದ್ರ ಕತ್ತಿಗೂ ಜ್ವರ ಬರತಾವು!’ ಎಂದು ಸಿಡಿಮಿಡಿ ಗುಟ್ಟುತ್ತಾ ಸುಚೇತಾ-ಸುಜಾತಾರನ್ನು ಒಳಗೆ ಕರೆದಳು.
ಆಗ ನನ್ನ ಪರಿಸ್ಥಿತಿ ಏನಾಗಿರಬೇಡ! ಇಂಗು ತಿಂದ ಮಂಗನಂತೆ ಸುಮ್ಮನಾದೆ! ಇದನ್ನು ಓದುವ ನೀವೂ ನನ್ನನ್ನು ಬಯ್ಯದೇ ಬಿಡುವುದಿಲ್ಲ! ತಲೆ ಕೆಟ್ಟವ ನಮ್ಮ ಸಮಯ ಹಾಳು ಮಾಡಿದ ಎನ್ನುತ್ತಿದ್ದಿರಿ -ನನ್ನ ಸಂಗಾತಿ ಕೋಡೆಕ್-10 ಕ್ಯಾಮೆರಾ ಅದನ್ನು ಸೆರೆ ಹಿಡಿಯದಿದ್ದರೆ!
ಅಂದು ವಿಚಿತ್ರ ಪ್ರಾಣಿ ಕಂಡ ತಕ್ಷಣ ನನ್ನ ತಲೆ ಚುರುಕಾಗಿತ್ತು. ಸುಪ್ತ ಪ್ರಜ್ಞೆ ನನಗೆ ಗೊತ್ತಿಲ್ಲದಂತೆ ಕ್ಲಿಕ್ ಮಾಡಿತ್ತು! ಇದೋ ಈ ಚಿತ್ರ ನೋಡಿ ಈಗಲಾದರೂ ನಿಮಗೆ ಖಾತ್ರಿಯಾಯಿತಲ್ಲ -ನಾನು ಹೇಳಿದ್ದು ಸತ್ಯ ಎಂದು!
ಓದುಗ ಮಹಾಶಯರೆ, ಗುಡ್ಡದ್ಲಿ ಬೆಳೆಯುವ ಹೆಸರೇ ಗೊತ್ತಿಲ್ಲದ ಕಂಟಿಯೊಂದರ ಎರಡು ಬೇರುಗಳಿವು! ಜೋಡಿಸಿಟ್ಟಾಗ ಹೀಗೆ ಕಾಣುತ್ತವೆ! ಇವಕ್ಕೆ ಫ್ರೆಂಚ್ ಪಾಲಿಶ್ ಹಚ್ಚಿದ್ದೊಂದನ್ನು ಬಿಟ್ಟರೆ ಬೇರೇನನ್ನೂ ಮಾಡಿಲ್ಲ. ಈಗಲೂ ಈ ಬೇರುಗಳು ನಮ್ಮ ಮನೆಯಲ್ಲಿವೆ. ಮನೆಗೆ ಬಂದ ಅತಿಥಿ ಅಭ್ಯಾಗತರ ಗಮನಸೆಳೆಯುತ್ತವೆ. ನೀವೂ ಒಮ್ಮೆ ನೋಡ ಬನ್ನಿ!











Click it and Unblock the Notifications