ಕೀಟನಾಶಕವೂ ಈಮೈಲ್ ಕಾಟನಾಶಕವೂ...
- ಡಾ। ಸಿದ್ದೇಶ್ವರ ಯಳಂದೂರು
‘ಹತ್ತಿಕಾಯಿ ಕೊರೆಯಪ್ಪ... ನೀ ಹ್ಯಾಗೆ ಸತ್ತೆಯಪ್ಪ ?’
‘ನಮ್ಮ ರೈತ ಮೆಟಾಸಿಡ್ ಸಿಂಪಡಿಸಿದ... ತಕ್ಷಣ ಸತ್ತೆ !! ನಿಂದೇನಾಯ್ತೋ?’
‘ನಮ್ಮ ರೈತ ಬೇರೆ ಕೀಟನಾಶಕ ಸಿಂಪಡಿಸಿದ... ಬದುಕಿದೆ!’
‘ಮತ್ಯಾಕೆ ಸತ್ತೆ ?’
‘ನಮ್ಮ ಹೊಲ ಹಾಳು ಮಾಡಿ ನಿಮ್ಮ ಹೊಲಕ್ಕೆ ಬಾಯಿ ಹಾಕಿದೆ... ಆವಾಗ ಸತ್ತೆ... ಹಿ ಹಿ ಹಿ...’
* * *
ಒಮ್ಮಿಂದೊಮ್ಮೆಲೇ ಆ ಹಳೇ ಜಾಹೀರಾತು, ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಬರುತ್ತಿದ್ದುದು, ಮೊನ್ನೆ ನೆನಪಾಯ್ತು . ಕಾರಣ? ನನ್ನ ವೃತ್ತಿ ಹೆಬ್ಬಾಳದ ಕೃಷಿವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಾಧ್ಯಾಪಕ ಎಂಬುದೇನೊ ಹೌದಾದರೂ ನಾನು ಕೀಟನಾಶಕಗಳ ಸಂಶೋಧನೆ ಮಾಡುವವನಲ್ಲ. ನಮ್ಮ ಕೈತೋಟದ ಹೂಹಣು ್ಣತರಕಾರಿಗಳನ್ನು ಕೊರೆಯಲು ಕೀಟಗಳೇನೂ ಬಂದದ್ದೂ ಇಲ್ಲ . ಆದರೆ ಅ ಕೀಟಗಳಿಗಿಂತಲೂ ಹೆಚ್ಚು ಉಪದ್ರವವೆನಿಸುತ್ತಿರುವ ಹೊಸದೊಂದು ಕಾಟ ಶುರುವಾಗಿತ್ತು ಇತ್ತೀಚೆಗೆ. ಏನು ಆ ಕಾಟ ಅಂತೀರಾ? ಹೇಳಿಬಿಡುತ್ತೇನೆ. ನಿಮ್ಮಲ್ಲೂ ಬಹಳಷ್ಟು ಮಂದಿ ಆ ಕಾಟವನ್ನು ಅನುಭವಿಸಿರಲೂಬಹುದು ಅಥವಾ ಈಗಲೂ ಅನುಭವಿಸುತ್ತ ಇರಬಹುದು.
ಮನೆಯಲ್ಲೊಂದು ಕಂಪ್ಯೂಟರ್ ಇಟ್ಟುಕೊಂಡಿದ್ದೇನೆ. ಇಂಟರ್‌ನೆಟ್ ಕನೆಕ್ಷನ್ನೂ ಇದೆ. ಮೊದಮೊದಲು ಏನು ಎಲ್ಲರಿಗೂ ಈಮೈಲ್ ಬರಿಯೋದು ಚಾಟಿಂಗ್ ಮಾಡೋದು ಎಲ್ಲದಕ್ಕೂ ಉಮೇದಿತ್ತು. ಕ್ರಮೇಣ ಶುರುವಾಯ್ತು ನೋಡಿ ಜಂಕ್ ಮೈಲ್ ಅಂತ ಕರೆಯಲ್ಪಡುವ ಅನುತ್ಪಾದಕ ಈಮೈಲ್‌ಗಳ ಕಾಟ. ಸುಡುಗಾಡು ಅದೆಲ್ಲಿಂದ ಟೈಮ್ ಸಿಗುತ್ತದೊ ಆ ಜಂಕಪ್ಪಗಳಿಗೆ. ದಿನಾ ಎಷ್ಟು ಕ್ಲೀನ್ ಮಾಡಿದ್ರೂ ಇನ್‌ಬಾಕ್ಸಿಗೆ ಬಂದುಬೀಳ್ತವೆ ಲೆಕ್ಕವಿಲ್ಲದಷ್ಟು. ಅವುಗಳಲ್ಲಿ ಜಾಹೀರಾತುಗಳು ಹಲವಾದರೆ ಇನ್ನು ಕೆಲವು ಜೀವಹೀರಾತುಗಳು. ಕೆಲವು ಅಶ್ಲೀಲವಾದರೆ ಇನ್ನು ಕೆಲವು ನೀಚಬುದ್ಧಿಯ ಸ್ವಯಂಘೋಷಿತ ಅಪಪ್ರಚಾರಗಳು. ಈಮೈಲ್ ಅಂದ್ರೆ ಗೊತ್ತೇ ಇದೆಯಲ್ಲ , ಇಲ್ಲಿ ಬೆಂಗಳೂರಿನಲ್ಲಿ ತೆಪ್ಪಗೆ ಇರುವ ನನಗೆ ಅಷ್ಟು ದೂರದ ಅಮೆರಿಕದಿಂದ ಸಹ ತಲೆಕೊರೆಯುವ ಈಮೈಲ್ ಬರ್ಬಾರ್ದೆಂದೇನೂ ಇಲ್ಲವಲ್ಲ.
ಆವಾಗ ನನ್ನ ಮಗ, ಕಂಪ್ಯೂಟರ್ ಇಂಜಿನಿಯರಾಗಿರುವವ, ಹೇಳಿದ್ದು - ಅಪ್ಪಾ ಆ ಕಾಟಕ್ಕೂ ಮೆಟಾಸಿಡ್‌ನಂಥದ್ದು ಇದೆ, ಕೀಟನಾಶಕವಲ್ಲ ಈಮೈಲ್ ಕಾಟನಾಶಕ.... ಒಮ್ಮೆ ಸಿಂಪಡಿಸಿ ನೋಡು ಎಂದು.
ಮೆಟಾಸಿಡ್, ಹತ್ತಿಕಾಯಿ ಕೊರೆಯುವ ಕೀಟಗಳನ್ನು ನಾಶಪಡಿಸಿದಂತೆ, ನನ್ನ ತಲೆ ಕೊರೆಯುವ ಈಮೈಲ್‌ಗಳನ್ನು ನಾಶಮಾಡಲು ಮಗ ತಿಳಿಸಿದ ಔಷಧಿ ಬಹಳ ಸುಲಭದ್ದೇ ಇದೆ. ಯಾಹೂ ಮತ್ತು ಹಾಟ್‌ಮೈಲ್ ಎರಡರಲ್ಲೂ ವಿಳಾಸಕ್ಕೆ ಅಡ್ಡಗೋಡೆ ನಿಲ್ಲಿಸಿಡಲಿಕ್ಕೆ ಅವಕಾಶವಿದೆ. ಯಾವ ಈಮೈಲ್ ವಿಳಾಸದಿಂದ ಅಥವಾ ಯಾವ ಡೊಮೈನ್‌ನ ವಿಳಾಸಗಳಿಂದ ಜಂಕ್‌ಮೈಲ್‌ಗಳು ಬರುತ್ತವೊ ಆ ವಿಳಾಸಗಳನ್ನೆಲ್ಲ ಕಪ್ಪುಪಟ್ಟಿಗೆ ಸೇರಿಸಿದರೆ ಆಯ್ತು.
ಮಗನಿಂದ ಅಲ್ಪಸ್ವಲ್ಪ ಸಹಾಯ ಪಡೆದು ಕೊನೆಗೂ ನನ್ನ ಈಮೈಲ್‌ಬಾಕ್ಸ್‌ಗೆ ಮೆಟಾಸಿಡ್ ಸಿಂಪಡಿಸಿಯೇ ಬಿಟ್ಟೆ!
ಈಮೈಲ್ ಕಾಟನಾಶಕವನ್ನು ಸಿಂಪಡಿಸಿದ ಮೇಲೆ ಈಗ ನನಗೆ ನಿಶ್ಚಿಂತೆಯಾಗಿದೆ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿರಲಿಕ್ಕೆ ಮನಸ್ಸು ಹಾಯಾಗಿದೆ. ಬೇಕಾದ ಸಭ್ಯ ವ್ಯಕ್ತಿಗಳ ಈಮೈಲ್ ಎಡ್ರೆಸ್‌ಗಳಿಂದಷ್ಟೆ ಬಂದ ಈಮೈಲ್‌ಗಳನ್ನು ಒಳಬಿಡುವ ತಡೆಗೋಡೆ ನಿಲ್ಲಿಸಿದ ಮೇಲೆ ನನ್ನ ಇನ್‌ಬಾಕ್ಸೂ ಸ್ವಚ್ಛವಾಗಿದೆ. ಅದಕ್ಕಿಂತ ಮೇಲಾಗಿ ನನ್ನ ಮನಸ್ಸೂ ನಿರಾಳವಾಗಿದೆ.
ನಾನು ಮೆಟಾಸಿಡ್ ಬಳಸಿದ್ದರಿಂದ ಬಚಾವಾದೆ. ನಿಮ್ಮ ಇನ್‌ಬಾಕ್ಸನ್ನೂ ಸಂರಕ್ಷಿಸಬೇಕಾದರೆ ನೀವೂ ಬಳಸಿ ಈಮೈಲ್‌ಕಾಟನಾಶಕವೆಂಬ ಮೆಟಾಸಿಡ್!
ಒಗ್ಗರಣೆ
ಮನೋಮಾಲಿನ್ಯ ನಿವಾರಣೆಗೆ ಇ-ಮೇಲ್ ವೇದಿಕೆ : ಟೆಕ್ಸಾಸ್ ಸಮೀಕ್ಷೆ












Click it and Unblock the Notifications