ನಿರುತ್ತರದಲ್ಲಿ ಪೂರ್ಣಚಂದ್ರ ತೇಜಸ್ವಿ ಜೊತೆ ಮಾತುಕತೆ !

Posted By:
Subscribe to Oneindia Kannada

*ಮಲ್ಲಿಕಾರ್ಜುನ ಡಿ.ಜಿ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಮೂರು ಕಿಲೋ ಮೀಟರ್‌ ದೂರದಲ್ಲಿನ ಕೈಮರದ ಹತ್ತಿರ ತೇಜಸ್ವಿಯವರ ತೋಟದ ಮನೆ. ನಾವು ಅಲ್ಲಿಗೆ ತಲುಪಿದಾಗ ಬೆಳಗ್ಗೆ 9 ಗಂಟೆ. ಗೇಟ್‌ಗೆ ಚೈನ್‌ ಬಿಗಿದಿತ್ತು . ಯಾರೂ ಕಾಣಿಸಲಿಲ್ಲ . ಚೈನು ಬಿಡಿಸಿ ಒಳಗೆ ಹೋದೆವು. ಅಕ್ಕಪಕ್ಕ ಬರೀ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರಗಿಡಗಳು. ಸ್ವಲ್ಪ ದೂರ ಹೋದ ನಂತರ ಮನೆಯ ಹೆಂಚು ಕಾಣಿಸಿತು. ಹಕ್ಕಿ ವೀಕ್ಷಣೆಗೆ, ಫೋಟೋಗ್ರಾಫಿಗೆ ತೇಜಸ್ವಿಯರ ಮನೆ ‘ನಿರುತ್ತರ’ ಹೇಳಿ ಮಾಡಿಸಿದಂತಿದೆ. ಮನೆಯ ಸುತ್ತ ನಾನಾ ಬಗೆಯ ಗಿಡ ಮರಗಳು. ಮನೆಯ ಮುಂದೆ ಹುಲ್ಲು ಹಾಸು, ಆಕರ್ಷಕ ಗಿಡ ವೈವಿಧ್ಯ, ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು .

ಬೆಲ್‌ ಮಾಡಿದೆವು. ತೇಜಸ್ವಿಯವರು ಬಂದರು. ಸ್ವಲ್ಪ ಮಡಿಸಿದ ಜೀನ್ಸ್‌ ಪ್ಯಾಂಟ್‌, ಕಾಟನ್‌ಶರ್ಟ್‌, ಬಿಳಿಗಡ್ಡ , ಕನ್ನಡಕ. ಒಳ ಕರೆದು ಕುಳಿತುಕೊಳ್ಳಿ ಅಂದರು. ಟೀಪಾಯ್‌ ಮೇಲೆ ನೂರಾರು ಪಕ್ಷಿಗಳು. ತೇಜಸ್ವಿ ಸಾವಿರಾರು ಪಕ್ಷಿಗಳ ಚಿತ್ರಗಳನ್ನು ತೆಗೆದಿದ್ದಾರೆ. ‘ಯಾವುದೇ ಪಕ್ಷಿಯ ಚಿತ್ರ ತೆಗೆಯಲಿಕ್ಕೆ ಮುಂಚೆ ತುಂಬಾ ಅಧ್ಯಯನ ಬೇಕಾಗುತ್ತದೆ. ಇವು ನನ್ನ 30ಕ್ಕೂ ವರ್ಷಗಳ ಅನುಭವ ಮತ್ತು ಪರಿಶ್ರಮದಿಂದ ತೆಗೆದ ಚಿತ್ರಗಳು’ ಅಂದರು.

ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್‌ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್‌ ಗೋಡೆಯ ಮೇಲಿತ್ತು . ‘ಐಯಾಮ್‌ ಎ ಪೇಂಟರ್‌. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿರುವೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯೂಸಿಷಿಯನ್‌. ಪಂಡಿತ್‌ ರವಿಶಂಕರರ ಬಳಿ ಸಿತಾರ್‌ ಕಲಿತಿರುವೆ’ ಅಂದರು.

ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದಾರೆ. ನನ್ನ ಜೊತೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್‌ ಹಾಕಿಸಿದರು. ಅವರ ಫೋಟೊ ತೆಗೆದಾಗ ‘ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನು ಕೂಡ ನಿಮ್ಮಂತೆಯೇ ಮನುಷ್ಯ’ ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲಾ ನೆನಪಿಸಿಕೊಂಡು ನಕ್ಕರು. ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, ‘ಚೀನಾ ದೇಶದವನು ತಿನ್ನುವುದೂ ಅನ್ನವೇ. ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆಂದರೆ ನಾವು ಏಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲವೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರ್ಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು’ ಅಂದರು.

ಅವರು ಭಾವಾನುವಾದ ಮಾಡಿರುವ ಕೆನೆತ್‌ ಆಂಡರ್ಸನ್‌, ಜಿಮ್‌ ಕಾರ್ಬೆಟರ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್‌ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದ್ದೆವು. ‘ಈ ಪುಸ್ತಕಗಳನ್ನೆಲ್ಲಾ ನಾವು ಹೈಸ್ಕೂಲ್‌ನಲ್ಲಿದ್ದಾಗಲೇ ಓದಿದ್ದೆವು. 40 ವರ್ಷಗಳ ನಂತರ ಅನುವಾದ ಮಾಡುತ್ತಿದ್ದೇನಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು . ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವುಗಳು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ’ ಎಂದರು ತೇಜಸ್ವಿ.

‘ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ’ ಎಂದು ಹೇಳಿದಾಗ ಅವರು ನಕ್ಕರು. ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ ಕಾದಂಬರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು? ’ ಎಂದರು.

‘ಸಣ್ಣವರಿದ್ದಾಗ ಎಷ್ಟೊಂದು ಗಲಾಟೆ, ತಂಟೆ ಮಾಡುತ್ತಿದ್ದೆವೆಂದರೆ, ನಮ್ಮನ್ನು ಇವರು ಶಾಲೆಗೆ ಹೋದರೆ ಸಾಕಪ್ಪ ಎಂದು ಶಾಲೆಗೆ ಅಟ್ಟುತ್ತಿದ್ದರು. ಶಾಲೆಗಾದರೋ ಒಂದು ಪುಸ್ತಕ ಹಿಡಿದು ಹೋಗುತ್ತಿದ್ದೆವು. ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ . ನಾವು ಗುರುಗಳ ಪಾಠಗಳ ಶೈಲಿಯಿಂದಲ್ಲ , ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೆವು’ ಎಂದರು.

ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಾಗ ತನ್ನದೇ ಸ್ವತಂತ್ರ ಹಾಗೂ ಪ್ರಶಾಂತ ಜೀವನವನ್ನು ಕಂಡುಕೊಂಡಿರುವ ಹಲವು ಪ್ರತಿಭೆಗಳ ಪೂರ್ಣಚಂದ್ರ ತೇಜಸ್ವಿ ನಮ್ಮನ್ನಾವರಿಸಿಕೊಂಡಿದ್ದರು.

(ವಿಜಯ ಕರ್ನಾಟಕ)

ತೇಜಸ್ವಿ ಇರೋದೇ ಹೀಗೆ...

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ