• search

ಗುಬ್ಬಿ ವೀರಣ್ಣನ ನೆನೆಯಣ್ಣ, ಮಾಸ್ಟರ್‌ ಹಿರಣ್ಣಯ್ಯನ ಬಣ್ಣದ ಬದುಕ ನೋಡಣ್ಣ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಇನ್ಫೋ ಇನ್‌ಸೈಟ್‌

    Master Hirannaiahಬೆಂಗಳೂರು : ನಗರದಲ್ಲಿ ರಂಗ ಕಹಳೆ ಜೋರಾಗಿ ಮೊಳಗುತ್ತಿರುವ ಈ ಹೊತ್ತಲ್ಲಿ ಹಿರಿಯ ಚೇತನ ಗುಬ್ಬಿ ವೀರಣ್ಣ ಹಾಗೂ ವಿಡಂಬನಾ ಪ್ರಭು ಮಾಸ್ಟರ್‌ ಹಿರಣ್ಣಯ್ಯನವರ ವೃತ್ತಿ ರಂಗಭೂಮಿ ದಿನಗಳನ್ನು ನೆನಪಿಸಿಕೊಳ್ಳುವ ವಾರ.

    ಗುಬ್ಬಿ ವೀರಣ್ಣ ನೆನಪು- ಮಾರ್ಚ್‌ 28 ಹಾಗೂ 29ರಂದು. ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ. ಇದು ಶಾಂಭವಿ ನೃತ್ಯ ಶಾಲೆ ಮತ್ತು ಭಾರತ ಯಾತ್ರಾ ಕೇಂದ್ರದ ಕೊಡುಗೆ.

    ಮಾಸ್ಟರ್‌ ಹಿರಣ್ಣಯ್ಯ ಬಣ್ಣದ ಬದುಕಿನ ಸುವರ್ಣ ಸಂಭ್ರಮ- ಮಾರ್ಚ್‌ 29ರಿಂದ ಏಪ್ರಿಲ್‌ 2ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

    ವೃತ್ತಿ ರಂಗಭೂಮಿಯ ದಿನಗಳನ್ನು ಮರುಕಳಿಸುವುದು ಈ ಎರಡೂ ಕಾರ್ಯಕ್ರಮಗಳ ವಿಶೇಷ. ಗುಬ್ಬಿ ವೀರಣ್ಣನವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಸದಾರಮೆ, ಕುರುಕ್ಷೇತ್ರ, ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದಿರುವ ಸಂಪೂರ್ಣ ರಾಮಾಯಣ ಹಾಗೂ ಲಂಕಾದಹನ ನಾಟಕದ ತುಣುಕುಗಳನ್ನು ನೋಡುವ ಅವಕಾಶ. ಬಿ.ವಿ.ವೈಕುಂಠರಾಜು, ಡಾ। ಕೆ. ಮರುಳ ಸಿದ್ಧಪ್ಪ ಮೊದಲಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಒರಿಸ್ಸಾ ಹಾಗೂ ಸಿಂಗಪೂರ್‌ನ ಒಂದೊಂದು ತಂಡಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ.

    ಮಾಸ್ಟರ್‌ ಹಿರಣ್ಣಯ್ಯ ಕುರಿತ ಕಾರ್ಯಕ್ರಮದಲ್ಲಿ ಖುದ್ದು ಹಿರಣ್ಣಯ್ಯ ಅರ್ಧ ತಾಸು ತಮ್ಮ ವಾಕ್ಚಾತುರ್ಯ ಮೆರೆಯಲಿದ್ದಾರೆ. ಲಂಚಾವತಾರ, ನಡುಬೀದಿ ನಾರಾಯಣ ಮತ್ತು ಮಕ್ಮಲ್‌ ಟೋಪಿ ನಾಟಕಗಳು 3 ದಿನಗಳಲ್ಲಿ ಪ್ರದರ್ಶಿತವಾಗಲಿವೆ. ವ್ಯಕ್ತಿ- ಅಭಿವ್ಯಕ್ತಿ ಎಂಬ ಚಿತ್ರಗಳ ಪ್ರದರ್ಶನವೂ ಉಂಟು. ಹಿರಣ್ಣಯ್ಯ- ಅಂದಿನಿಂದ ಇಂದಿನವರೆಗೆ ಎಂಬ ಅವಲೋಕನ ರೀತಿಯ ಅಪರೂಪದ ಕಾರ್ಯಕ್ರಮವಿದು.

    ಗುಬ್ಬಿ ವೀರಣ್ಣ ನಿಮಗೆ ಗೊತ್ತೆ?

    Gubbi Veerannaನಾಟಕದ ಬಯಲೇ ಪಾಠಶಾಲೆ. ಬಟ್ಟೆ ಮಡಿಸಿಡುವುದರಿಂದ ಹಿಡಿದು, ಚಿಮಣಿ ದೀಪಗಳ ಗಾಜುಗಳನ್ನು ಒರೆಸುವ ಕಾಯಕ. ದಿನೇದಿನೇ ಹಾರ್ಮೋನಿಯಂ, ತಬಲಾ ಕರಗತ. ಪಾತ್ರಧಾರಿ ಕೈಕೊಟ್ಟಾಗ ಸಿಕ್ಕ ಅವಕಾಶ ಸದಾರಮೆ ನಾಟಕದ ಕಳ್ಳನ ಪಾತ್ರ. ಹೊಟ್ಟೆಹುಣ್ಣಾಗುವಂತೆ ನಕ್ಕ ಪ್ರೇಕ್ಷಕ ವೀರಣ್ಣನವರಿಗೆ ಕೊಟ್ಟ ಕಮಿಡಿಯನ್‌ ಪಟ್ಟ.

    ಡೋಲ, ಚಿಲ್ಲಾಳ, ಸತ್ಯರಥ, ರೋಹಿತಾಶ್ವ... ಯಾವುದೇ ಪಾತ್ರಕ್ಕೂ ಸೈ. ಲಂಗೋಟಿ ತೊಟ್ಟು ವೇದಿಕೆ ಹತ್ತುವ ಎದೆಗಾರಿಕೆ. ಮುಂದೆ ನಾಟಕವೇ ಜೀವನ. ಎಲ್ಲವೂ ವೇದಿಕೆಯಲ್ಲೇ. ಅದರಲ್ಲೇ ಹೊಸ ಹೊಳಹುಗಳ ಬಿಂಬ. ಡಾ। ರಾಜ್‌ಕುಮಾರ್‌ ಅಂಥ ಅನೇಕ ಕಲಾವಿದರಿಗೆ ಅದು ಗರಡಿ. ಗುಬ್ಬಿ ಕಂಪನಿ ಕರ್ನಾಟಕದ ಮನೆಮಾತು. ಅಲ್ಲೆಲ್ಲಾ ವೀರಣ್ಣನವರ ಸೆಳಕು. ವೀರಣ್ಣನವರ ಗರಡಿಗೇ ಒಂದು ಅನನ್ಯತೆ.

    ರಂಗಭೂಮಿಯ ಅನುಭವ ಮೂಕಿ ಚಿತ್ರಗಳೆಡೆಗೂ ಹರಿಯಿತು. ಕಳ್ಳರ ಕೂಟ, ಹರಿಮಾಯೆ, His Love Affair, Son of Life ಗುಬ್ಬಿ ವೀರಣ್ಣನವರು ತಯಾರಿಸಿದ ಮೂಕಿ ಚಿತ್ರಗಳು. His Love Affair ನಿರ್ದೇಶಿಸಿದ್ದು ಬೆಲ್ಜಿಯಂನ ಹೆಸರಾಂತ ನಿರ್ದೇಶಕ ಆಲ್‌ಗುಡ್‌. ಸುಭದ್ರ, ಬೇಡರ ಕಣ್ಣಪ್ಪ, ಹೇಮರೆಡ್ಡಿ ಮಲ್ಲಮ್ಮ, ಜೀವನ ನಾಟಕ, ಗುಣಸಾಗರಿ ಚಿತ್ರಗಳನ್ನು ತೆರೆಗೆ ಕೊಟ್ಟ ವೀರಣ್ಣನವರು ಕನ್ನಡ ಸಿನಿಮಾ ಉದ್ದಿಮೆಗೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟರು.

    ಸದಾ ನಗೆಯ ಬುಗ್ಗೆಯಂತಿದ್ದ ವೀರಣ್ಣನವರನ್ನು ದುರ್ಯೋಧನನ ಪಾತ್ರದಲ್ಲಿ ಕಂಡವರೂ ನಗುತ್ತಿದ್ದರಂತೆ. 1972ರಲ್ಲಿ ಹೃದಯಾಘಾತವಾದಾಗ ಕೂಡ ಅದೇ ಹಾಸ್ಯ. ನನಗೆ ಟಿಕೇಟ್‌ ಸಿಕ್ಕಿದೆ. ಕೆಲಸ ಮುಗಿದಿದೆ. ಇನ್ನಷ್ಟು ದಿನ ಬದುಕಿ ನೀವು ಒಳ್ಳೆ ಕೆಲಸ ಮಾಡಿ ಅಂತ ಹಾಸಿಗೆ ಮೇಲೆ ನಗುತ್ತಲೇ ಡಿವಿಜಿಯವರಿಗೆ ಹೇಳಿದ ಮಹಾನುಭಾವ ವೀರಣ್ಣ !

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more